»   » 'ರಾಕ್ ಸ್ಟಾರ್' ರೂಪೇಶ್ ಶೆಟ್ಟಿ ಎಕ್ಸ್ ಕ್ಲೂಸಿವ್ ಸಂದರ್ಶನ

'ರಾಕ್ ಸ್ಟಾರ್' ರೂಪೇಶ್ ಶೆಟ್ಟಿ ಎಕ್ಸ್ ಕ್ಲೂಸಿವ್ ಸಂದರ್ಶನ

Posted By: ಲೆನಾರ್ಡ್ ಫೆರ್ನಾಂಡಿಸ್
Subscribe to Filmibeat Kannada

ಪ್ರತಿಭೆಯನ್ನೇ ನಂಬಿಕೊಂಡು ಗಾಡ್ ಫಾದರ್ ಇಲ್ಲದೆ ಕೋಸ್ಟಲ್ ವುಡ್ ನಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸುತ್ತಿರುವ ತುಳುನಾಡಿನ ಬಹುಮುಖ ಪ್ರತಿಭೆಯೇ ರೂಪೇಶ್ ಶೆಟ್ಟಿ.

ಸ್ಥಳೀಯ ಟಿವಿ ಚಾನೆಲ್ ನಲ್ಲಿ ನಿರೂಪಕನಾಗಿ, FM ನಲ್ಲಿ RJ ಆಗಿ, ಚಲನಚಿತ್ರ ನಟನಾಗಿ ಮಂಗಳೂರಿನಲ್ಲಿ 'ರಾಕ್ ಸ್ಟಾರ್' ಎಂದೇ ಖ್ಯಾತಿ ಪಡೆದಿರುವ ರೂಪೇಶ್ ಶೆಟ್ಟಿ 'ಫಿಲ್ಮಿಬೀಟ್ ಕನ್ನಡ'ಕ್ಕಾಗಿ ನೀಡಿರುವ ಸಂದರ್ಶನ ಇದು....

ನೀವು ಮೂಲತಃ ಮಂಗಳೂರಿನವರೇ? ನಿಮ್ಮ ಕಿರು ಪರಿಚಯ?

- ನಾನು ಹುಟ್ಟಿದ್ದು ಕಾಸರಗೋಡಿನಲ್ಲಿ. ನಂತರ ಬೆಳೆದದ್ದು ಮಂಗಳೂರಿನಲ್ಲೆಯೇ. ಏಳು ಚಲನಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ಐದು ಚಲನಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದೇನೆ. ನಾಲ್ಕು ವರ್ಷ RJ ಯಾಗಿ ಹಾಗೂ ಮಂಗಳೂರಿನ ನಮ್ಮ ಟಿವಿ ಚಾನೆಲ್ ನಲ್ಲಿ ಎಂಟು ವರ್ಷಗಳಿಂದ ನಿರೂಪಕನಾಗಿದ್ದೇನೆ.

ಸಿನೆಮಾ ಅಂದ್ರೆ ?

- ಸಂಪೂರ್ಣ ಡೆಡಿಕೇಷನ್ ಹಾಗೂ ಕಮಿಟ್ಮೆಂಟ್ ಇದ್ದರೆ ಸಿನೆಮಾ ಮಾಡುವುದಕ್ಕೆ ಸಾಧ್ಯ. ನಾವು ಕುಳಿತು ಯೋಚಿಸಿದಷ್ಟು ಸುಲಾಭವಲ್ಲ. ಅದೊಂದು ಸವಾಲ್! ಪ್ರತಿ ಸಿನೆಮಾದಲ್ಲೂ ಬೇರೆ ಬೇರೆ ರೀತಿಯ ಸವಾಲ್ ಗಳಿರುತ್ತವೆ. ಇವೆಲ್ಲವನ್ನು ಎದುರಿಸುವುದೇ ನಟನ ಕರ್ತವ್ಯ.

ಸಿನೆಮಾ ರಂಗಕ್ಕೆ ಎಂಟ್ರಿ ಹೇಗೆ.? ಯಾವ ಸಿನೆಮಾ ಮೂಲಕ.? ಈ ವರೆಗೆ ನಟಿಸಿದ ಸಿನೆಮಾಗಳ ಬಗ್ಗೆ?

- ಮೂರು ವರ್ಷಗಳ ಹಿಂದೆ 'ದಿಬ್ಬಣ' ಎನ್ನುವ ತುಳು ಚಲನಚಿತ್ರದಲ್ಲಿ ಹಾಸ್ಯ ದಿಂದ ಕೂಡಿದ ಪೋಷಕ ನಟನಾಗಿ ಎಂಟ್ರಿ ಕೊಟ್ಟೆ. ನಂತರ 'ಡೇಂಜರ್ ಝೋನ್' ಎನ್ನುವ ಕನ್ನಡ ಚಲನಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದೆ. ಆದರೆ ನಾನು ನಂತರ ನಟಸಿದ 'ಐಸ್ ಕ್ರೀಮ್' ಚಲನಚಿತ್ರ ಮೊದಲು ಬಿಡುಗಡೆಯಾಯಿತು. 'ಸ್ಮೈಲ್ ಪ್ಲೀಸ್' ಕನ್ನಡ ಚಲನ ಚಿತ್ರದಲ್ಲಿ ನಲ್ಲಿ ಸೆಕೆಂಡ್ ಹೀರೋ ಅಗಿ, ನಂತರ 'ಗೋಲ್ಮಾಲ್ ಬ್ರದರ್ಸ್', 'ಕೋಸ್ಟಲ್ ವುಡ್'ನ ಮೊದಲ ಕೊಂಕಣಿ - ತುಳು ಮಿಶ್ರಿತ 'ಅಶೆಂ ಜಾಲೆಂ ಕಶೆ' ಹೀಗೆ ಏಳು ಚಲನಚಿತ್ರಗಳನ್ನು ಮೂರು ಭಾಷೆಯಲ್ಲಿ ನಟಿಸಿದ್ದೇನೆ.

ನಿಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದೀರಾ.?

- ಖಂಡಿತಾವಾಗಿಯೂ ಇದ್ದೀನಿ.. ಸದಾ ಇರುತ್ತೇನೆ. ಅದ್ರಲ್ಲೂ ಸಾಮಾಜಿಕ ಜಾಲತಾಣ ಮೂಲಕ ಹೆಚ್ಚಾಗಿ ಇದ್ದೀನಿ. ಅವರು ಕೇಳುವ ಬರೆಯುವ ಸಂದೇಶಗಳಿಗೆ ಯಾವಾಗಲು ಪ್ರತಿಕ್ರಿಯೆ ನೀಡುತ್ತೇನೆ. ಅವರೇ ನನಗೆ ನಿಜವಾದ ಶಕ್ತಿ, ಪ್ರೋತ್ಸಾಹ ನೀಡುವವರು ಅಲ್ಲವೇ.!

ನೀವು ಗುರು ಎಂದು ಕರೆಯುವವರ ಬಗ್ಗೆ?

- ನನಗೆ ಹಲವಾರು ಗುರುಗಳಿದ್ದಾರೆ. ಒಂದೋ ಎರಡೋ ಹೆಸರು ಹೇಳಲು ಆಗುವುದಿಲ್ಲ. ಪ್ರತಿ ಹಂತದಲ್ಲಿ ತಿದ್ದುವವರನ್ನು ನನ್ನ ಗುರುವೆನ್ನುವೆ. ಅದು ಜೀವನ ಪಾಠವಾಗಿರಬಹುದು ಅಥವಾ ಸಿನೆಮಾವೇ ಇರಬಹುದು. ಆದರೆ ನನ್ನ ಮೊದಲ ಗುರು ನನ್ನ ತಂದೆ. ಅವರು ಯಕ್ಷಗಾನ ಕಲಾವಿದರಾಗಿದ್ದವರು. ಆದ್ದರಿಂದ ಈ ಕಲೆಯ ಆಸಕ್ತಿ ರಕ್ತಗತವಾಗಿ ಬಂದಿದೆ. ನಂತರ ನನಗೆ ಶಾಲೆಯಲ್ಲಿ ಮೋನೋ ನಟನೆ ಕಲಿಸಿಕೊಟ್ಟು ರಾಜ್ಯ ಪ್ರಶಸ್ತಿ ಸಿಗುವಂತೆ ಮಾಡಿದ ಶಿಕ್ಷಕ ಗೋಪಾಲಕೃಷ್ಣ ರವರನ್ನು ನೆನಪಿಸಲೇಬೇಕು.

ಮನೆಯಲ್ಲಿ ಸಹಕಾರ ಹೇಗಿದೆ?

- ಎಲ್ಲಾ ರೀತಿಯಾಲ್ಲೂ.. ಪ್ರತಿ ಹಂತದಲ್ಲೂ ಸಹಕಾರ ಇದೆ. ಇದನ್ನೆ ಮಾಡು ಅಥವಾ ಅದನ್ನೇ ಮಾಡು ಎನ್ನುವ ಒತ್ತಡ ಇಲ್ಲ. ಇದರಿಂದ ಸಂಪೂರ್ಣವಾಗಿ ನನ್ನನ್ನು ತೊಡಗಿಸಿಕೊಂಡು ಮುಂದುವರಿಯಲು ಸಹಾಯವಾಗುತ್ತದೆ.

ನಿಮ್ಮ ನೆಚ್ಚಿನ ನಟ ನಟಿಯರು ಯಾರು?

- ಕನ್ನಡದಲ್ಲಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ದರ್ಶನ್ ಇಷ್ಟ. ಉಳಿದಂತೆ ಅಕ್ಷಯ್ ಕುಮಾರ್ ಹಾಗೂ ರಜನಿಕಾಂತ್... ಇವರ ಯಾವುದೇ ಸಿನೆಮಾದ ಮೊದಲ ಶೋ ಮಿಸ್ ಮಾಡುವುದಿಲ್ಲ. ದೀಪಿಕಾ ಪಡುಕೋಣೆ ರವರ ನಟನೆ ಇಷ್ಟ.

ಮುಂದಿನ ಸಿನೆಮಾ?

- 'ನಿಶ್ಯಬ್ಧ-2' ಕನ್ನಡ ಸಿನೆಮಾ ನಾನು ತುಂಬಾನೆ ನಿರೀಕ್ಷೆಯನ್ನು ಇಟ್ಟು ಕೊಂಡಿರುವ ಚಲನಚಿತ್ರ.

ಆಭಿಮಾನಿಗಳಿಗೆ ನಿಮ್ಮ ಮಾತು ?

- ನಾನು ಅಭಿಮಾನಿ ಎನ್ನುವುದಕ್ಕಿಂತ ಅವರನ್ನು ನನ್ನ ಹಿತಚಿಂತಕರು, ಮಾರ್ಗದರ್ಶಕರು ಎಂದು ಹೇಳಲು ಇಷ್ಟ ಪಡುತ್ತೇನೆ. ಇಷ್ಟು ಬೇಗನೆ ಏಳು ಸಿನೆಮಾಗಳಲ್ಲಿ ನಟಿಸುವೆನು ಎಂದು ಯಾವತ್ತೂ ಯೋಚಿಸಿಯೇ ಇರಲಿಲ್ಲ! ಎಲ್ಲಾ ಸಿನೆಮಾಗಳಲ್ಲೂ ನನ್ನಿಂದಾದ ಉತ್ತಮವನ್ನೇ ಕೊಡುತ್ತಿದ್ದೇನೆ. ನಿಮ್ಮ ಪ್ರೀತಿ ಆಶೀರ್ವಾದ ಸದಾ ಇರಲಿ. ಧನ್ಯವಾದಗಳು.

English summary
Here is an Interview with RJ, Actor, 'Rock Star' Roopesh Shetty

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada