»   » ಪಬ್ಲಿಕ್ ಮ್ಯೂಸಿಕ್ ಕುರಿತು ಲಹರಿ ವೇಲು ಸಂದರ್ಶನ

ಪಬ್ಲಿಕ್ ಮ್ಯೂಸಿಕ್ ಕುರಿತು ಲಹರಿ ವೇಲು ಸಂದರ್ಶನ

Posted By: ರಾಜೇಂದ್ರ ಚಿಂತಾಮಣಿ
Subscribe to Filmibeat Kannada

ಕರ್ನಾಟಕ ರಾಜ್ಯದ ನಾಲ್ಕನೇ ಮ್ಯೂಸಿಕ್ ಚಾನೆಲ್ ಆಗಿ 'ಪಬ್ಲಿಕ್ ಮ್ಯೂಸಿಕ್' ನಿಮ್ಮ ಮನೆಮನೆಗಳನ್ನ ತಲುಪಲು ಸಿದ್ಧವಾಗಿದೆ. ಪಬ್ಲಿಕ್ ಮ್ಯೂಸಿಕ್ ಕನ್ನಡಿಗರ ಮ್ಯೂಸಿಕ್ ಚಾನೆಲ್ ಅನ್ನೋದು ವಿಶೇಷ. ಇದೇ ಸೆ.28ಕ್ಕೆ ರಾಜ್ಯದಾದ್ಯಂತ ಸಂಗೀತ ಪ್ರೇಮಿಗಳ ಮನತಣಿಸೋಕೆ ರೆಡಿಯಾಗಿದೆ. ಈ ಹಿನ್ನೆಲೆಯಲ್ಲಿ ವಾಹಿನಿಯ ಸೂತ್ರಧಾರರಲ್ಲಿ ಒಬ್ಬರಾದ ಲಹರಿ ವೇಲು ಅವರನ್ನು ಮಾತಿಗೆಳೆದಾಗ ಅವರು 'ಪಬ್ಲಿಕ್ ಮ್ಯೂಸಿಕ್'ನ ಸ್ವರೂಪ, ಮಾರುಕಟ್ಟೆ, ಭಿನ್ನತೆಗಳನ್ನು ತೆರೆದಿಟ್ಟರು. ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

*ಪಬ್ಲಿಕ್ ಮ್ಯೂಸಿಕ್ ಚಾನಲ್ ಹುಟ್ಟಿದ್ದು ಹೇಗೆ?
ಒಂದು ವರ್ಷದ ಹಿಂದೆಯೇ ಸಂಗೀತದ ಮಾಧುರ್ಯ ತೋರಿಸುವ, ಈ ರೀತಿಯ ಚಾನಲ್ ಮಾಡಬೇಕೆಂಬ ಆಲೋಚನೆ ಇತ್ತು. ಆದರೆ ಯಾವ ರೀತಿ ಮಾಡಬೇಕು, ಏನು ಮಾಡಬೇಕು ಎಂಬುದು ಗೊತ್ತಿರಲಿಲ್ಲ.


ಲಹರಿ ಸಂಸ್ಥೆಯಲ್ಲಿರುವ ಹಾಡುಗಳ ಸಂಗ್ರಹ ಎಲ್ಲರಿಗೂ ಗೊತ್ತಿರುವುದೇ. ಈ ಸಂಗೀತ ಕ್ಷೇತ್ರದಲ್ಲಿ ನಮಗೆ ಕಳೆದ ಮೂವತ್ತೈದು ವರ್ಷಗಳಿಂದ ಸಾಕಷ್ಟು ಅನುಭವವೂ ಇದೆ. ನಮ್ಮ ಜೀವನವನ್ನು ಇಲ್ಲಿಗೆ ತ್ಯಾಗ ಮಾಡಿದ್ದೇವೆ. ರಂಗಣ್ಣ ಅವರು ಪತ್ರಿಕೋದ್ಯಮಕ್ಕೆ ಹೇಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೋ ಹಾಗೆಯೇ ನಾವು ಸಂಗೀತಕ್ಕೆ ಇಟ್ಟಿದ್ದೇವೆ. ಇದೇನಾಯಿತು ಎಂದರೆ ಎರಡು ನದಿಗಳ ಸಂಗಮದಂತೆ ಆಯಿತು.

ರಂಗಣ್ಣ ಅವರಿಗೆ ಸಂಗೀತದಲ್ಲೂ ಜ್ಞಾನವಿದೆ. ನಮ್ಮಲ್ಲಿ 1.75 ಲಕ್ಷ ಹಾಡುಗಳ ಸಂಗ್ರಹವಿದೆ. ಎಲ್ಲಾ ಪ್ರಕಾರದ ಹಾಡುಗಳಿವೆ. ಚಿತ್ರಗೀತೆ, ರಂಗಗೀತೆ, ಭಾವಗೀತೆ, ಯಕ್ಷಗಾನ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಹೀಗೆ ನಾನಾ ನಮೂನೆಯ ಹಾಡುಗಳ ಸಂಗ್ರಹ ನಮ್ಮಲ್ಲಿದೆ. ಒಂದು ರೀತಿಯಲ್ಲಿ ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ನಮ್ಮಲ್ಲಿ ಎಲ್ಲಾ ಪ್ರಕಾರದ ಸಂಗೀತ ಸಂಗ್ರಹ ಇದೆ.

ಎಲ್ಲಾ ಖ್ಯಾತ ಗಾಯಕ/ಗಾಯಕಿಯರು, ಸಾಹಿತಿಗಳೊಂದಿಗೆ ನಮ್ಮ ಸಂಸ್ಥೆಗೆ ಒಡನಾಡ ಬಹಳ ಚೆನ್ನಾಗಿದೆ. ಎ ಆರ್ ರೆಹಮಾನ್ ಅವರನ್ನು ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ್ದು ಲಹರಿ ಸಂಸ್ಥೆ. ಹಂಸಲೇಖ ಅವರನ್ನು ಪ್ರೇಮಲೋಕ ಮೂಲಕ, ಗುರುಕಿರಣ್ ಅವರನ್ನು ಎ ಚಿತ್ರದ ಮೂಲಕ ಮೊದಲ ಬಾರಿಗೆ ಪರಿಚಯಿಸಿದ್ದು ಲಹರಿ ಸಂಸ್ಥೆ. ಇಷ್ಟು ದಿನ ಆಡಿಯೋ ಮಾತ್ರ ಇತ್ತು. ಇದೇ ರೀತಿ ವಿಶುಯಲ್ ಯಾಕೆ ಮಾಡಬಾರದು ಎನ್ನಿಸಿತು.*ಉಳಿದ ಚಾನಲ್ ಗಳಿಗಿಂತ ಪಬ್ಲಿಕ್ ಮ್ಯೂಸಿಕ್ ಹೇಗೆ ಭಿನ್ನ?
ಉದಯೋನ್ಮುಖ ಗಾಯಕ/ಗಾಯಕಿ, ಸಂಗೀತ ನಿರ್ದೇಶಕರಿಗೆ ಅವಕಾಶ ನೀಡಲು ಸದಾ ಮುಂದಿರುತ್ತೇವೆ. ಈ ಕ್ಷೇತ್ರದಲ್ಲಿ ನಮಗೆ ಅಪಾರ ಅನುಭವ ಇರುವ ಕಾರಣ ಇದು ಸಾಧ್ಯವಾಗುತ್ತಿದೆ. ಬೆಳಗ್ಗೆ ಭಕ್ತಿಗೀತೆಗಳನ್ನು ಆರಂಭಿಸುವುದರೊಂದಿಗೆ ಆರಂಭವಾಗಿ ಬಳಿಕ ಜನರ ಮನಃಸ್ಥಿತಿಗೆ ಅನುಗುಣವಾಗಿ ಸಂಗೀತವನ್ನು ನೀಡುತ್ತೇವೆ.

ಭಾವಗೀತೆ, ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಹೀಗೆ ಸಾಗುತ್ತಾ ಸೂರ್ಯ ಸ್ವಲ್ಪ ಮೇಲೇರುತ್ತಿದ್ದಂತೆ ಚಲನಚಿತ್ರಗೀತೆ, ಸ್ವಲ್ಪ ಕೆಳಮುಖವಾಗುತ್ತಿದ್ದಂತೆ ಟಾಪ್ ಮ್ಯೂಸಿಕ್ ಕೊಡುತ್ತೇವೆ. ಈ ರೀತಿ ಬಹಳಷ್ಟು ಆಲೋಚನೆಗಳನ್ನು ಇಟ್ಟುಕೊಂಡಿದ್ದೇವೆ. ಇದೊಂದು ಸಾಧಾರಣ ಸಂಗೀತ ಚಾನಲ್ ಅಂತೂ ಅಲ್ಲ.

ನಮ್ಮ ಕರ್ನಾಟಕ ಸಂಗೀತ ಪ್ರಿಯರಿಗೆ, ಕನ್ನಡ ಜನತೆಗೆ ಪಬ್ಲಿಕ್ ಟಿವಿಯಂತೆ ಪಬ್ಲಿಕ್ ಮ್ಯೂಸಿಕನ್ನೂ ಕೊಡುತ್ತೇವೆ ಎಂಬ ವಿಶ್ವಾಸ ನಮ್ಮದು. ಜನಕ್ಕೆ ನಮ್ಮಲ್ಲಿರುವ ಸಂಗೀತಭಂಡಾರವನ್ನು ಕೊಡಬೇಕು. ಅದನ್ನು ಹೇಗೆ ಕೊಡಬೇಕು ಎಂಬುದನ್ನು ಇಡೀ ಟೀಂ ಕೂತು ವರ್ಕ್ ಮಾಡಿದ್ದೇವೆ.

ಇನ್ನೊಂದು ಮುಖ್ಯ ಸಂಗತಿ ಎಂದರೆ ಈ ನಮ್ಮ ಸಂಗೀತ ವಾಹಿನಿ ಯುವ ಜನತೆಗೆ ಒಳ್ಳೆ ವೇದಿಕೆ ಒದಗಿಸಲಿದೆ. ಬೆಂಗಳೂರಿನಲ್ಲಿ ಎಷ್ಟೋ ಬ್ಯಾಂಡ್ ಗಳಿವೆ. ಅವರಿಗೆಲ್ಲಾ ವೇದಿಕೆ ಕಲ್ಪಿಸಲಿದ್ದೇವೆ. ಎಲೆಮರೆಯಕಾಯಿಗಳಂತಿರುವ ಸಂಗೀತ ಕಲಾವಿದರನ್ನು ಪರಿಚಯಿಸಲಿದ್ದೇವೆ. ಕಲೆಗೆ ನಾವು ಬಹಳ ಬೆಲೆ ಕೊಡ್ತೀವಿ, ಕೊಡುತ್ತಿದ್ದೇವೆ ಮುಂದೆಯೂ ಕೊಡುತ್ತೇವೆ.

ಎಲ್ಲೋ ಒಂದು ಕುಗ್ರಾಮದಲ್ಲಿರುವ ಅದ್ಭುತ ಗಾಯಕ/ಗಾಯಕಿಯರಿಗೂ ಅವಕಾಶ ಕೊಡುತ್ತೇವೆ. ಅವರು ನೋಡಲು ಚೆನ್ನಾಗಿದ್ದಾರಾ, ದುಡ್ಡು ಇದೆಯಾ ಎಂಬುದು ನಮಗೆ ಮುಖ್ಯ ಅಲ್ಲ. ಅವರ ಕಂಠಕ್ಕೆ ಇಲ್ಲಿ ಬೆಲೆ ಸಿಗುತ್ತದೆ. ವೇದಿಕೆ ಸಿಗದವರಿಗೆ, ಹೊಸಬರಿಗೆ, ಹಳಬರಿಗೆ ಇದು ಹೊಸ ವೇದಿಕೆಯಾಗಲಿದೆ.


*ಪಬ್ಲಿಕ್ ಮ್ಯೂಸಿಕ್ ಚಾನಲ್ ಹಿಂದಿರುವ ವ್ಯಕ್ತಿ ಶಕ್ತಿ ಯಾರು?
ಪಬ್ಲಿಕ್ ಮ್ಯೂಸಿಕ್ ಚಾನಲ್ ಹಿಂದಿರುವ ಶಕ್ತಿ ಅಂದರೆ ನಮ್ಮ ಎಚ್ ಆರ್ ರಂಗನಾಥ್ ಸಾಹೇಬರು. ಪಬ್ಲಿಕ್ ಟಿವಿಯನ್ನು ಅವರು ಮಗುವಿನಂತೆ ಬೆಳೆಸಿದರು. ಪಬ್ಲಿಕ್ ಟಿವಿ ಜನಮನ ಗೆಲ್ಲಲು ಕಾರಣ ಇಷ್ಟೇ... ನಾವು ಪಬ್ಲಿಕ್ ಗೆ ಸ್ಪಂದಿಸುತ್ತಿದ್ದೀವಿ, ಜನ ನಮಗೆ ಸ್ಪಂದಿಸುತ್ತಿದ್ದಾರೆ. ಜನರಿಂದ ಜನರಿಗಾಗಿ ಜನಗರಿಗೋಸ್ಕರ ಇರುವಂತಹ ಚಾನಲ್.

ಇಲ್ಲಿ ಮುಖ್ಯವಾಗಿ ಸರಳತೆಯೇ ನಮ್ಮ ಧ್ಯೇಯ. ನಮ್ಮಲ್ಲಿ ಆಡಂಬರ ಇಲ್ಲ. ಎಲ್ಲವೂ ಸ್ಪಷ್ಟ, ತೆರೆದಿಟ್ಟ ಪುಸ್ತಕವಿದ್ದಂತೆ. ಎರಡು ವರ್ಷಗಳಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ್ದೇವೆ ಎಂದರೆ ಇಲ್ಲಿ ಎಥಿಕ್ಸ್, ಪ್ರಿನ್ಸಿಪಲ್ಸ್ ಹಾಗೂ ನಾರ್ಮ್ಸ್ ಇವೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸುತ್ತಿರುವುದು. ಇಲ್ಲಿರುವ ಸಿಬ್ಬಂದಿ ಇದು ನಮ್ಮ ಮನೆ, ಇಲ್ಲಿ 24 ಗಂಟೆ ಕೆಲಸ ಮಾಡಬೇಕು ಎಂದೇ ದುಡಿಯುತ್ತಿದ್ದಾರೆ.

ರಂಗಣ್ಣ ಅವರು ಬೆಳಗ್ಗೆ 6-30ಕ್ಕೆ ಬಂದರೆ ಮನೆಗೆ ಹೋಗುವುದು ರಾತ್ರಿ 11ಕ್ಕೆ. ಆ ರೀತಿ ಕೆಲಸ ಮಾಡುವವರನ್ನು ನನ್ನ ಜೀವನದಲ್ಲಿ ಇದುವರೆಗೂ ನೋಡಿಲ್ಲ. ಇದನ್ನು ವರ್ಕೋಹಾಲಿಕ್ ಎಂದೋ ಅಥವಾ ಅಲ್ಟಿಮೇಟ್ ಡಿಟರ್ಮಿನೇಷನ್ ಎಂದು ಹೇಳುವುದು ಕಷ್ಟ.

ಟೈಟಾನಿಕ್ ಹಡಗನ್ನು ಕಟ್ಟುವುದು ಎಷ್ಟು ಕಷ್ಟವೋ ಅದೇ ರೀತಿ ಅವರೇ ಅದಕ್ಕೆ ಕ್ಯಾಪ್ಟನ್ ಆಗಿ ಮುನ್ನಡೆಸುವುದು ನಿಜಕ್ಕೂ ಸವಾಲಿನ ಕೆಲಸ. ಜೊತೆಗೆ ಹರೀಶ್ ನಾಗರಾಜು ಅವರು ಸಂಗೀತದ ಹಿನ್ನೆಲೆಯಿಂದ ಬಂದಂತಹವರು. ಅವರನ್ನು ನಾನು ಇಪ್ಪತ್ತು ವರ್ಷಗಳಿಂದ ನೋಡುತ್ತಿದ್ದೇನೆ. ನಾವೆಲ್ಲಾ ಸೇರಿ ಈ ಚಾನಲ್ ಕಟ್ಟಿದ್ದೇವೆ.

Lahari Audio company

*ಕನ್ನಡದ ಸಂಗೀತ ಮಾರುಕಟ್ಟೆ ಹೇಗಿದೆ? ಭವಿಷ್ಯ ಆಶಾದಾಯಕವಾಗಿದೆ ಅನ್ನಿಸುತ್ತಾ?
ಕನ್ನಡದ ಮಾರುಕಟ್ಟೆ ಆಶಾದಾಯಕವಾಗಿದೆ. ನಾವು ಆಶಾವಾದಿಗಳೇ. ಹಾಗೆ ಇದ್ದದ್ದಕ್ಕೆ ನಾವು ಇಷ್ಟು ಬೆಳೆದಿರುವುದು. ನಮಗೆ ಸಂಗೀತ, ಸಾಹಿತ್ಯ ಎಂದರೆ ಉಚ್ವಾಸ ನಿಶ್ವಾಸ ಇದ್ದಂತೆ. ಇವೆರಡಕ್ಕೆ ಪ್ರಾಣ ಕೊಡ್ತೀವಿ.

ಸಂಗೀತಕ್ಕೆ ಸಾವಿಲ್ಲ, ಅದನ್ನು ಸಾಯಿಸಬೇಡಿ. ಸಾಹಿತ್ಯಕ್ಕೂ ಸಾವಿಲ್ಲ ಅದನ್ನೂ ಸಾಯಿಸಬೇಡಿ. ಇದು ಖಾರವಾದ ಮಾತಾದರೂ ಹೇಳಲೇಬೇಕಾಗಿದೆ. ಏಕೆಂದರೆ ಯಾ ಹೊತ್ತು ಮಾಧುರ್ಯ ಇರುವುದಿಲ್ಲವೋ ಜನ ಕೇಳಲ್ಲ. ಯಾ ಹೊತ್ತು ಒಂದು ಹದವಾದ, ಇಂಪಾದ ಸಾಹಿತ್ಯ ಸಂಗೀತ ಅವರೆಡೂ ಇಲ್ಲದಿದ್ದರೆ ಜನ ಅದನ್ನು ರಿಜೆಕ್ಟ್ ಮಾಡ್ತಾರೆ.

ಕೆಲವು ಸಾಹಿತಿಗಳು, ಆ ರೀತಿಯ ಹಾಡುಗಳ ಅವಶ್ಯಕತೆ ಇಲ್ಲ, ಯಾರೂ ಕೇಳಲ್ಲ. ಯಾವುದೋ ಒಂದು ವರ್ಗದ ಕೇಳಬಹುದು ಎಂದೋ, ಆ ಒಂದು ವರ್ಗಕ್ಕಾಗಿ ಸಾಹಿತ್ಯವನ್ನು ಕೊಲೆ ಮಾಡುತ್ತಿದ್ದಾರೆ. ಆ ರೀತಿಯ ಹಾಡುಗಳು ಕಡಿಮೆಯಾದರೆ ನಮ್ಮ ಸಾಹಿತ್ಯ, ಸಂಗೀತ ಲೋಕ ಖಂಡಿತ ಸಂಪದ್ಭರಿತವಾಗಿದೆ. ಪೈರಸಿಗೆ ಕಳಪೆ ಸಾಹಿತ್ಯ, ಸಂಗೀತಕ್ಕೆ ಕಡಿವಾಣ ಹಾಕಬೇಕು. ಈ ರೀತಿಯ ಸಮಸ್ಯೆಗಳು ಬಿಟ್ಟರೆ ಕನ್ನಡದ ಮಾರುಕಟ್ಟೆ ಉತ್ತಮವಾಗಿದೆ.

ಜೊತೆಗೆ ಸಂಗೀತ ನಿರ್ದೇಶಕರು, ನಿರ್ಮಾಪಕರಿಗೆ ಒಳ್ಳೆಯ ಅಭಿರುಚಿ ಇರಬೇಕು. ಆ ಅಭಿರುಚಿ ಇಲ್ಲದಿದ್ದರೆ ಸಿನಿಮಾ ಮಾಡಲು ಬರಬಾರದು. ಅವರ ಬಳಿ ದುಡ್ಡು ಇದ್ದರೆ ಫಾರ್ಮ್ ಹೌಸ್ ಕಟ್ಟಿಕೊಳ್ಳಲಿ. ಅದು ಬಿಟ್ಟು ಅಭಿರುಚಿ ಇಲ್ಲದವರೆಲ್ಲಾ ಸಿನಿಮಾ ಮಾಡಲು ಬಂದರೆ ಇದೇ ರೀತಿ ಆಗುತ್ತದೆ. ಉಡಾಫೆಗೆ ಹಾಡು ಬರೆಯಬಾರದು. ಅಪ್ಪಾ ಲೂಸಾ ಅಮ್ಮ ಲೂಸಾ ಎಂಬ ಸಾಹಿತ್ಯ ಬಂದರೆ ನಾವೂ ಲೂಸ್ ಗಳಾಗುತ್ತವೆ.

ನೀನಡೆದ ದಾರಿಯಲ್ಲಿ...ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ ಎಂಬಂತಹ ಹಾಡುಗಳನ್ನು ನಾವೂ ಈ ಹೊತ್ತಿಗೂ ಇಷ್ಟಪಡ್ತೀವಿ ಎಂದರೆ ಅದಕ್ಕೆ ಕಾರಣ ಸಾಹಿತ್ಯ ಮತ್ತು ಸಂಗೀತ. ವರ್ಷಕ್ಕೆ ಹತ್ತೇ ಹಾಡುಗಳು ಬರೆಯಲಿ ಸಾಕು ಅವು ಸೂಪರ್ ಹಿಟ್ ಆಗುವಂತಿರಬೇಕು. ಅದು ಬಿಟ್ಟು ನೂರು ಡಬ್ಬ ಹಾಡುಗಳನ್ನು ಮಾಡುವುದರಲ್ಲಿ ಅರ್ಥವಿಲ್ಲ.


*ಮ್ಯೂಸಿಕ್ ಚಾನಲ್ ಆಡಳಿತ ಮಂಡಳಿಯಲ್ಲಿ ಯಾರೆಲ್ಲಾ ಇದ್ದಾರೆ?
ಅಣ್ಣ ಜಿ.ಮನೋಹರನ್ ನಾಯ್ಡು ಹಾಗೂ ರಾಕ್ ಲೈನ್ ವೆಂಕಟೇಶ್ ಅವರು ಪಬ್ಲಿಕ್ ಮ್ಯೂಸಿಕ್ ವಾಹಿನಿ ನಿರ್ದೇಶಕರು. ಎಚ್.ಆರ್.ರಂಗನಾಥ್ ಅವರು ಪಬ್ಲಿಕ್ ಟಿವಿ ಹಾಗೂ ಪಬ್ಲಿಕ್ ಮ್ಯೂಸಿಕ್ ಮುಖ್ಯಸ್ಥರಾಗಿ ಇರುತ್ತಾರೆ.


*ಕಿರುತೆರೆ ವೀಕ್ಷಕರು ಪಬ್ಲಿಕ್ ಮ್ಯೂಸಿಕ್ ನಿಂದ ಏನೆಲ್ಲಾ ನಿರೀಕ್ಷಿಸಬಹುದು?
ಸಂಗೀತ ಎಂಬುದು ಪಾಸಿಟೀವ್ ಎನರ್ಜಿ ಇದ್ದಂತೆ. ಸುಮ್ಮನೆ ಲೂಪ್ ನಲ್ಲಿ ಹಾಡುಗಳನ್ನು ಹಾಕಿ ಅದರ ಪಾಡಿಗೆ ಅದು ಹಾಡಲು ಬಿಡುವುದಲ್ಲ. ನಮ್ಮ ಚಾನಲ್ ನಲ್ಲಿ ತೆಲುಗು, ಹಿಂದಿ ಹಾಡುಗಳು ಬರುತ್ತವೆ. ಏಕೆಂದರೆ ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿ. ಇಲ್ಲಿ ಎಲ್ಲಾ ಸಂಸ್ಕೃತಿಗಳ ಸಂಗಮ ಇದೆ. ಹಾಗಾಗಿ ಇಲ್ಲಿ ದಕ್ಷಿಣ ಭಾರತದ ಎಲ್ಲಾ ಭಾಷೆಯ ಹಾಡುಗಳನ್ನೂ ಕೇಳಬಹುದು. ಆದರೆ ಪ್ರಮುಖ ಆದ್ಯತೆ ಮಾತ್ರ ಕನ್ನಡಕ್ಕೆ.

ಹಿಂದಿ, ತೆಲುಗು ಭಾಷಿಕರು ಕನ್ನಡದ ಪಬ್ಲಿಕ್ ಮ್ಯೂಸಿಕ್ ವಾಹಿನಿ ನೋಡಬೇಕು ಎಂಬುದು ನಮ್ಮ ಆಶಯ. ಕನ್ನಡೇತರರಿಗೂ ರಂಗಗೀತೆಗಳು, ದಾಸರ ಪದಗಳು, ವಚನಗಳು, ಷರೀಪರ ಪದಗಳು ಹೀಗೆ ನಮ್ಮ ಸಂಸ್ಕೃತಿ ಸಂಪ್ರದಾಯ, ಸಂಸ್ಕಾರವನ್ನು ಪರಿಚಯಿಸುತ್ತೇವೆ. ಒಂದು ಹದಿನೈದು ಇಪ್ಪತ್ತು ದಿನಗಳಲ್ಲಿ ಯೂಟ್ಯೂಬ್ ನಲ್ಲೂ ಬಿಡುಗಡೆ ಮಾಡುತ್ತೇವೆ.


*ಪೈರಸಿಯನ್ನು ತಡೆಯಲು ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೀರಿ?
ಪೈರಸಿ ಎಂಬ ಪೆಡಂಭೂತದ ಜೊತೆಗೆ ಕಳೆದ ನಲವತ್ತು ನಲವತ್ತೈದು ವರ್ಷಗಳಿಂದ ಹೋರಾಡುತ್ತಾ ಬಂದಿದ್ದೇವೆ. ಪೈರಸಿ ತಡೆಗಟ್ಟುವ ಕಾನೂನುಗಳು ಬಹಳ ಕಠಿಣವಾಗಿವೆ. ಪೊಲೀಸರು ನಮ್ಮೊಂದಿಗೆ ಬಹಳ ಸೌಹಾರ್ದಯುತವಾಗಿ ಸ್ಪಂದಿಸುತ್ತಿದ್ದಾರೆ. ದೊಡ್ಡದೊಡ್ಡ ಅಪರಾಧಗಳಂತೆ ಇದೂ ಒಂದು ಎಂಬ ಭಾವನೆ ಪೈರಸಿ ಮಾಡುವುವರಲ್ಲೂ ಬರುವಂತೆ ಮಾಡಬೇಕು. ಆಗ ಅಷ್ಟೋ ಇಷ್ಟೋ ಕಡಿವಾಣ ಹಾಕಿದಂತಾಗುತ್ತದೆ.

English summary
Filmibeat's candid chat with Lahari Audio company director Velu (Lahari Velu) in connection with Public Music Channel launch. The channel will be launched on 28th September 2014.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada