For Quick Alerts
  ALLOW NOTIFICATIONS  
  For Daily Alerts

  ತುಳಿತಕ್ಕೊಳಗಾದ ಸಮಾಜದ ಹುಡುಗನ ಸಂಘರ್ಷವೇ 'ಲವ್ ಸ್ಟೋರಿ': ಶೇಖರ್ ಕಮ್ಮುಲ

  By ರವೀಂದ್ರ ಕೊಟಕಿ
  |

  ತೆಲುಗಿನ ನಿರ್ದೇಶಕ ಶೇಖರ್ ಕಮ್ಮುಲ ಬೆಳೆದು ಬಂದ ರೀತಿ ಅದ್ಭುತ. ಎಲ್ಲರೂ ಒಂದು ಮಾದರಿಯ ಸಿನಿಮಾಗಳನ್ನು ಮಾಡುತ್ತಿರುವಾಗ ಭಿನ್ನವಾದ, ಸಮಾಜಕ್ಕೆ ಹತ್ತಿರವಾದ, ಮನಸ್ಸಿಗೆ ಹಿತ ಅನುಭೂತಿ ನೀಡುವ ಸಿನಿಮಾಗಳನ್ನು ಮಾಡಿ ತಮಗಾಗಿಯೇ ದೊಡ್ಡ ಮಟ್ಟದ ಪ್ರೇಕ್ಷಕ ವರ್ಗ ಸೃಷ್ಟಿಸಿಕೊಂಡವರು ಕಮ್ಮುಲ.

  ಹೊಸಬರೊಟ್ಟಿಗೆ ಸಿನಿಮಾಗಳನ್ನು ಮಾಡಿ ದೊಡ್ಡ-ದೊಡ್ಡ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕಮ್ಮುಲ ಈಗ ನಾಗ ಚೈತನ್ಯ, ತಮಿಳಿನ ಧನುಷ್ ಅಂಥಹಾ ದೊಡ್ಡ ಸೂಪರ್ ಸ್ಟಾರ್‌ಗಳೊಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ.

  ಯಾವುದೇ 'ಇಸಂಗಳ' ಗೊಡವೆಗೆ ಹೋಗದೆ ಭಾವನೆಗಳುಳ್ಳ ಸಿನಿಮಾ ಮಾಡುತ್ತಿದ್ದ ಶೇಖರ್ ಕಮ್ಮುಲ ಮೊದಲ ಬಾರಿಗೆ ತುಸು ಗಂಭೀರವಾದ ಕತೆಯನ್ನು 'ಲವ್ ಸ್ಟೋರಿ' ಸಿನಿಮಾ ಮೂಲಕ ಆಯ್ದುಕೊಂಡಿದ್ದಾರೆ. ಜಾತಿ ಸಂಘರ್ಷದ ಕತೆಯುಳ್ಳ 'ಲವ್ ಸ್ಟೋರಿ' ಸಿನಿಮಾವು ಸೆಪ್ಟೆಂಬರ್ 24ರಂದು ಬಿಡುಗಡೆ ಆಗುತ್ತಿದ್ದು, ತಮ್ಮ ಸಿನಿಮಾದ ಬಗ್ಗೆ ಶೇಖರ್ ಕಮ್ಮುಲ ಆಡಿರುವ ಮಾತುಗಳು ಇಲ್ಲಿವೆ.

  ಲವ್ ಸ್ಟೋರಿ ನಿಮ್ಮ ಹಿಂದಿನ ಚಿತ್ರಗಳಿಗಿಂತ ಹೇಗೆ ನವೀನವಾಗಿದೆ?

  ಲವ್ ಸ್ಟೋರಿ ನಿಮ್ಮ ಹಿಂದಿನ ಚಿತ್ರಗಳಿಗಿಂತ ಹೇಗೆ ನವೀನವಾಗಿದೆ?

  ಹಿಂದೆ ನಾನು ಮಾಡಿದ 'ಆನಂದ್', 'ಗೋದಾವರಿ' ಚಿತ್ರಗಳನ್ನು ತೆಗೆದುಕೊಂಡರೆ, ಅಥವಾ ಇತ್ತೀಚಿನ 'ಫಿದಾ' ತೆಗೆದುಕೊಂಡರು ಇಲ್ಲೆಲ್ಲ ಪ್ರೇಮಕಥೆಯ ಜೊತೆಗೆ ಒಂದು ನವಿರಾದ ಹಾಸ್ಯವೂ ಬೆರೆತಿತ್ತು ಹೀಗಾಗಿ ಇವನ್ನೆಲ್ಲ rom-com ಚಿತ್ರಗಳು ಅಂತ ನೀವು ಪರಿಗಣಿಸಬಹುದು. ಇಲ್ಲೆಲ್ಲಾ ಮನಸ್ತಾಪಗಳು, ಸಣ್ಣ ಪುಟ್ಟ ನೋವು ಯಾತನೆಗಳು ಎಲ್ಲವನ್ನೂ ನಾವು ಹೇಗೆ ನಿಜಜೀವನದಲ್ಲಿ ಎದುರಿಸುತ್ತೇವೆ ಮತ್ತು ಅದರಿಂದ ಹೇಗೆ ಹೊರಬರುತ್ತವೆ ಎಂದು ಹೇಳುವ ಪ್ರಯತ್ನವಾಗಿತ್ತು. ಆದರೆ 'ಲವ್ ಸ್ಟೋರಿ'ಗೆ ಬಂದರೆ ಇಲ್ಲಿ ಜೀವನದ ಸಂಘರ್ಷವಿದೆ. ತೆಲಂಗಾಣದ ಸಣ್ಣ ಪಟ್ಟಣದಿಂದ ತುಳಿತಕ್ಕೊಳಗಾದ ಸಮಾಜದ ಹುಡುಗನೊಬ್ಬ ಬದುಕು ಅರಸಿ ಹೈದರಾಬಾದ್ ಸೇರುತ್ತಾನೆ ಅದೇ ರೀತಿ ಮತ್ತೊಂದು ಸಣ್ಣ ಹಳ್ಳಿಯ ಇಲ್ಲಿಗೆ ಕೂಡ ಬದುಕಿಗಾಗಿ ನಗರಕ್ಕೆ ಬರುತ್ತಾಳೆ. ಇಲ್ಲಿ ಬದುಕಿನ ಪ್ರಶ್ನೆ ಇದೆ, ಜೊತೆಗೊಂದು ಪ್ರೀತಿಯ ಕಥೆ ಇದೆ. ಇದರ ಮಧ್ಯೆ ಸಮಾಜ ನಿಂತಿದೆ. ಇದೆಲ್ಲದರ ಜೊತೆಗೆ ಜೀವನದ ಸಂಗೀತವು ಬೆರೆತಿದೆ. ಇದು ನಾನು ಮೊದಲ ಬಾರಿಗೆ ಮಾಡುತ್ತಿರುವ ಪೂರ್ಣಪ್ರಮಾಣದ ಪ್ರೇಮಕಥೆ. ಹಿಂದಿನ rom-com ಗಳಿಗಿಂತ ಇದು ಭಿನ್ನವಾದ ಮ್ಯೂಸಿಕಲ್ ಲವ್ ಸ್ಟೋರಿ ಅಂತ ಹೇಳೋದಕ್ಕೆ ನನಗೆ ಸಂತೋಷವೆನಿಸುತ್ತದೆ. ಇದು ಸಣ್ಣಪುಟ್ಟ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾದ ಚಿತ್ರವಲ್ಲ, ಬದಲಾಗಿ ಒಂದು ದೊಡ್ಡ ಸಂಘರ್ಷವಿದೆ. ಈ ಸಂಘರ್ಷದಲ್ಲಿ ಹದವಾಗಿ ಸಂಗೀತವೂ ಸೇರಿ 'ಲವ್ ಸ್ಟೋರಿ' ಸಿದ್ಧವಾಗಿದೆ.

  ತುಂಬಾ ಸೀರಿಯಸ್ಸಾದ ಕಂಟೆಂಟ್ ಅನ್ಸುತ್ತೆ, ಚಿತ್ರದಲ್ಲಿ ಎಂಟರ್ಟೈನ್ಮೆಂಟ್ ಮಿಸ್ ಆಗಲ್ವಾ?

  ತುಂಬಾ ಸೀರಿಯಸ್ಸಾದ ಕಂಟೆಂಟ್ ಅನ್ಸುತ್ತೆ, ಚಿತ್ರದಲ್ಲಿ ಎಂಟರ್ಟೈನ್ಮೆಂಟ್ ಮಿಸ್ ಆಗಲ್ವಾ?

  ನನ್ನ ಹಿಂದಿನ ಚಿತ್ರಗಳಲ್ಲಿ ಎಂಟರ್ಟೈನ್ಮೆಂಟ್‌ಗೆ ಹೆಚ್ಚಿನ ಸ್ಕೋಪ್ ಇತ್ತು. ಇಲ್ಲೂ ಕೂಡ ಅವರು ನಗರ ಸೇರುವ ಜರ್ನಿಯಲ್ಲಿ ಒಂದಷ್ಟು ಎಂಟರ್ಟೈನ್ಮೆಂಟ್ ಸಿಗುತ್ತೆ. ಆದರೆ ಇದು ಹೆಚ್ಚಿನ ಜಾತಿ- ವರ್ಗ ಸಂಘರ್ಷಕ್ಕೆ ಇಂದಿನ ಆಧುನಿಕ ಸಮಾಜವನ್ನು ಜೋಡಿಸಿ ತೆಗೆದಿರುವುದರಿಂದ ಮೈನ್ ಫೋಕಸ್ ಪೂರ್ತಿಯಾಗಿ ವ್ಯವಸ್ಥೆಯಾಗಿದೆ. ಹಿಂದೆ ನಾನು 'ಲೀಡರ್ 'ಅಂತ ಚಿತ್ರ ತೆಗೆಯಬೇಕಾದರೆ ರಾಜಕೀಯದ ಸಂಘರ್ಷದಲ್ಲಿ ಜಾತಿಯ ಪ್ರಭಾವವನ್ನು ಪ್ರಶ್ನಿಸುವ ಪ್ರಯತ್ನ ಮಾಡಿದ್ದೆ. ಅದು ಸಣ್ಣ ಮಟ್ಟಿಗೆ ಮಾತ್ರ, ಆದರೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರ ತೆಗೆದಿರುವುದು. ಹೀಗಾಗಿ ಎಂಟರ್ಟೈನ್ಮೆಂಟ್‌ಗಿಂತ ಹೆಚ್ಚಾಗಿ ಜೀವನ ಸಂಘರ್ಷಗಳೇ ಪ್ರಧಾನ ವಸ್ತುವಾಗಿರುತ್ತದೆ.

  ಜಾತಿಯ ವಿಷಯದಲ್ಲಿ ಬದಲಾಗುತ್ತಿರುವ ಸಮಾಜದಲ್ಲಿ ಈ ಕತೆ ಎಷ್ಟು ಪ್ರಸ್ತುತವೆ?

  ಜಾತಿಯ ವಿಷಯದಲ್ಲಿ ಬದಲಾಗುತ್ತಿರುವ ಸಮಾಜದಲ್ಲಿ ಈ ಕತೆ ಎಷ್ಟು ಪ್ರಸ್ತುತವೆ?

  ನೋಡಿ ಸಮಾಜ ಸಾಕಷ್ಟು ಬದಲಾಗಿದೆ. ನೀವು ಹೇಳಿದಂತೆ ಅಂತರ್ಜಾತಿ ವಿವಾಹಗಳು ನಡೆಯುತ್ತಿವೆ. ಆದರೆ ಇದೇ ಸಂದರ್ಭದಲ್ಲಿ ಮರ್ಯಾದ ಹತ್ಯೆಗಳು ಕೂಡ ನಡೆಯುತ್ತಿದೆ ಅಲ್ಲವೇ? ಅಂದಮೇಲೆ ಸಮಾಜ ಹೇಗೆ ಪೂರ್ತಿಯಾಗಿ ಬದಲಾಗಿದೆ? ತುಳಿತಕ್ಕೊಳಗಾದ ಹುಡುಗನ ಪ್ರೀತಿಯನ್ನು ಅಷ್ಟು ಸುಲಭವಾಗಿ ಸಮಾಜ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇದೆಯೇ? ಪ್ರೀತಿ ಅಂತ ಬಂದಾಗ ಸಮಾಜ ನೋಡುವ, ಪ್ರಶ್ನಿಸುವ ಒಪ್ಪಿಕೊಳ್ಳುವ ಎಲ್ಲಾ ಅಂಶಗಳನ್ನುಒಟ್ಟುಗೂಡಿಸಿ ನೋಡಿದಾಗ ಹುಟ್ಟಿದ್ದೆ ಲವ್ ಸ್ಟೋರಿ. ಜಾತಿ ಎಂಬುದು ಪ್ರಧಾನವಾಗಿ ಇರುವವರೆಗೂ ಇಂತಹ ಕಥೆಗಳು ಬರುತ್ತಲೇ ಇರುತ್ತವೆ. ನಮ್ಮಲ್ಲಿ ಅನೇಕ ಸಂಘರ್ಷಗಳಿಗೆ ಮೂಲಕಾರಣವೇ ಜಾತಿಯೆಂಬುದು ಮರೆಯಬಾರದು. ಸಿನಿಮಾದಲ್ಲಿ ಜಾತಿ ಎಂಬುದು ಪ್ರಧಾನವಾಗಿದ್ದರೂ ಇದರೊಟ್ಟಿಗೆ ಜೆಂಡರ್ ಇಕ್ವಾಲಿಟಿ ಬಗ್ಗೆ ಕೂಡ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇವೆ. ಇದರ ಮೇಲೆ ಹೆಚ್ಚಿಗೆ ಹೇಳುವುದು ಬೇಡ. ಉಳಿದಿದ್ದು ನೀವು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು.

  ನಿಮ್ಮ ಸಿನಿಮಾದಲ್ಲಿನ ಸಂಘರ್ಷಗಳು ಕೊನೆಗೆ ಸುಖಾಂತ್ಯವಾಗುತ್ತವೆ ಏಕೆ?

  ನಿಮ್ಮ ಸಿನಿಮಾದಲ್ಲಿನ ಸಂಘರ್ಷಗಳು ಕೊನೆಗೆ ಸುಖಾಂತ್ಯವಾಗುತ್ತವೆ ಏಕೆ?

  ಹೌದು ನನ್ನ ಹಿಂದಿನ ಕಥೆಗಳನ್ನು ಗಮನಿಸಿದರೆ, ಅಲ್ಲಿ ವರ್ಗಸಂಘರ್ಷ ಕಾಣುವುದಿಲ್ಲ ಎರಡು ಮನಸ್ತತ್ವಗಳ ನಡುವಿನ ಸಂಘರ್ಷ ಕಾಣುತ್ತೆ. ಅದಕ್ಕೆ ಕಾರಣವಾಗುವುದು ಹಣ, ಉದ್ಯೋಗ, ವಿದ್ಯೆ-ಸಂಪಾದನೆ ಇಂತಹವು. ಆದರೆ ಅಲ್ಲಿ ಭಿನ್ನಾಭಿಪ್ರಾಯಗಳು ದೂರವಾದಾಗ ಕತೆ ಸುಖಾಂತ್ಯವಾಗುತ್ತದೆ. ಆದರೆ ಇಲ್ಲಿ ವಿದ್ಯೆ ಉದ್ಯೋಗ ಸಂಪಾದನೆಗಿಂತ ಮುಖ್ಯವಾಗಿ ವರ್ಗ ಸಂಘರ್ಷವಿದೆ. ಯಾವುದೇ ಖಾಯಿಲೆಗೆ ಮದ್ದು ಕೊಡಬಹುದು. ಆದರೆ ಜಾತಿಯ ಖಾಯಿಲೆ ಅಂಟಿಕೊಂಡರೆ ಯಾವ ಮದ್ದು ಕೊಡುವುದು?

  ನಾಗಚೈತನ್ಯ ಸಾಯಿಪಲ್ಲವಿ ಅವರನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು?

  ನಾಗಚೈತನ್ಯ ಸಾಯಿಪಲ್ಲವಿ ಅವರನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು?

  ನನ್ನ ಹಿಂದಿನ ಚಿತ್ರ ಫಿದಾದಲ್ಲಿ ಸಾಯಿಪಲ್ಲವಿ ನಾಯಕಿಯಾಗಿ ನಟಿಸಿದ್ದಳು. ಆಕೆ ಒಳ್ಳೆ ನೃತ್ಯಗಾತಿ ಜೊತೆಗೆ ಅಭಿನೇತ್ರಿ ಕೂಡ. ಚಿತ್ರದಲ್ಲಿ ನೃತ್ಯ ಮತ್ತು ಅಭಿನಯ ಎರಡು ಒಟ್ಟೊಟ್ಟಿಗೆ ಸಾಗುತ್ತದೆ. ಹೀಗಾಗಿ ಸಾಯಿ ಪಲ್ಲವಿ ನನ್ನ ಮೊದಲನೇ ಆಯ್ಕೆಯಾಗಿದ್ದಳು. ನಾಗಚೈತನ್ಯ ರೇವಂತ್ ಪಾತ್ರಕ್ಕೆ ಸರಿಯಾದ ಆಯ್ಕೆ ಅಂತ ಭಾವಿಸಿ ಆಯ್ಕೆ ಮಾಡಲಾಯಿತು. ಇವರಿಬ್ಬರ ಜೋಡಿ ಈಗ ನಿಜಕ್ಕೂ ಕೂಡ ಲವ್ ಸ್ಟೋರಿಗೆ ಅತ್ಯುತ್ತಮ ಆಯ್ಕೆ ಅಂತ ಜನ ಅಭಿಪ್ರಾಯ ಪಡುವಷ್ಟರ ಮಟ್ಟಿಗೆ ಸರಿ ಹೊಂದಿದ್ದಾರೆ.

  ಶೇಖರ್ ಕಮ್ಮುಲ ಚಿತ್ರಗಳು ನಿಜಜೀವನಕ್ಕೆ ಹತ್ತಿರವೆನ್ನಿಸಲು ಕಾರಣವೇನು?

  ಶೇಖರ್ ಕಮ್ಮುಲ ಚಿತ್ರಗಳು ನಿಜಜೀವನಕ್ಕೆ ಹತ್ತಿರವೆನ್ನಿಸಲು ಕಾರಣವೇನು?

  ನನ್ನ ಯಾವುದೇ ಚಿತ್ರದಲ್ಲೂ ದೊಡ್ಡ ಹೀರೋಯಿಸಂ, ವಿಲನೀಸಂ, ಗ್ಲಾಮರಸ್ ಹೀರೋಯಿನ್‌ಗಳು, ರಕ್ತಪಾತ ಬಡೆದಾಟ, ಅದ್ದೂರಿ ವೆಚ್ಚದ ಡ್ರೀಮ್ ಸಾಂಗುಗಳು, ಸೈಡ್ ಟ್ರ್ಯಾಕ್ ನಲ್ಲಿ ನಡೆಯುವ ಕಾಮಿಡಿ ಇದ್ಯಾವುದೂ ಇರುವುದಿಲ್ಲ. ನಾನು ಆಯ್ಕೆಮಾಡಿಕೊಳ್ಳುವ ಕಥೆಗಳು ತುಂಬಾ ಸರಳವಾಗಿರುತ್ತದೆ. ಜೊತೆಗೆ ಅದು ಸಮಾಜದಿಂದಲೇ ಬಂದಿರುತ್ತದೆ. ವ್ಯಕ್ತಿಗಳು ಅವರ ಮನಸ್ತತ್ವಗಳು ನನ್ನ ಎಲ್ಲಾ ಕಥೆಗಳ ಪ್ರಧಾನ ವಸ್ತುವಾಗಿರುತ್ತದೆ. ಸರಳವಾದ ಕಥೆ, ಇಂಪಾದ ಸಂಗೀತ ಇದರ ಮಧ್ಯೆ ಜೀವನದ ಒಂದು ಪಯಣವನ್ನು ನಾನು ಪ್ರಧಾನವಾಗಿ ತೋರಿಸುತ್ತೇನೆ. ಇದಕ್ಕಿಂತ ಹೆಚ್ಚಿಗೆ ಬೇರೇನೂ ನಾನು ಮಾಡಲು ಇಚ್ಛಿಸುವುದಿಲ್ಲ. ಮುಂದೆ ಕೂಡ ನಾನು ಮಾನವೀಯ ಸಂಬಂಧಗಳನ್ನು ಪ್ರಧಾನವಾಗಿಟ್ಟುಕೊಂಡು ಸಿನಿಮಾಗಳನ್ನು ಮಾಡುತ್ತೇನೆ.

  English summary
  'Love Story' Telugu movie director Sekhar Kammula's interview. He said this is not just a rom-com movie. It has strong story subject.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X