For Quick Alerts
ALLOW NOTIFICATIONS  
For Daily Alerts

ಬದುಕೇ 'ರಂಗಪಯಣ' ಎನ್ನುತ್ತಾರೆ ನಯನಾ

|

ಇತ್ತೀಚೆಗೆ 'ಸಮಯದ ಹಿಂದೆ ಸವಾರಿ' ಎನ್ನುವ ಚಿತ್ರವೊಂದು ತೆರೆಕಂಡಿತ್ತು. ಖ್ಯಾತ ಬರಹಗಾರ ಜೋಗಿಯವರ 'ನದಿಯ ನೆನಪಿನ ಹಂಗು' ಎನ್ನುವ ಕಾದಂಬರಿಯನ್ನು ಆಧಾರಿಸಿ ತಯಾರಾದ ಈ ಚಿತ್ರ ಅದಕ್ಕೂ‌ ಮೊದಲು ನಾಟಕವಾಗಿಯೇ ಜನಪ್ರಿಯವಾಗಿತ್ತು. ಈ ನಾಟಕ ಮತ್ತು ಸಿನಿಮಾಗಳಿಗೆ ನಿರ್ದೇಶಕರಾಗಿದ್ದವರು ರಾಜ್ ಗುರು ಹೊಸಕೋಟೆ.

ಇವರು 'ಜೋಗಿ' ಸಿನಿಮಾದ ಚಾಚಾ ಖ್ಯಾತಿಯ ಗುರುರಾಜ್ ಹೊಸಕೋಟೆಯವರ ಪುತ್ರ. ಇಂತಿಪ್ಪ ರಾಜ್ ಗುರು ಹೊಸಕೋಟೆಯವರ ಪತ್ನಿಯೇ ಈ ಸಂದರ್ಶನದ ಕಥಾ ನಾಯಕಿ. ನಯನಾ ಸೂಡ ಅವರ ಪರಿಚಯಕ್ಕೆ ಪ್ರಸ್ತುತ ರಂಗಭೂಮಿಯಲ್ಲಿ ಜನಪ್ರಿಯವಾಗಿರುವ 'ಗುಲಾಬಿ ಗ್ಯಾಂಗು' ಎನ್ನುವ ನಾಟಕದ ಹೆಸರೇ ಸಾಕು. ಇವರು ಸ್ವತಃ ಕಟ್ಟಿರುವ 'ರಂಗಪಯಣ' ತಂಡಕ್ಕೆ ದಶಕ ತುಂಬಿದೆ. ಗಾಂಧಿನಗರದ ಗಮನ ಸೆಳೆಯುತ್ತಿರುವ ಈ ಮಹಾನಟಿ ಜತೆಗಿನ ವಿಶೇಷ ಮಾತುಕತೆ ಇದು.

ನಿಮ್ಮ ರಂಗಪಯಣ ಶುರುವಾಗಿದ್ದು ಎಲ್ಲಿಂದ?

ನಿಮ್ಮ ರಂಗಪಯಣ ಶುರುವಾಗಿದ್ದು ಎಲ್ಲಿಂದ?

ತಾಯಿ ಉಡುಪಿ ಸಮೀಪದ ಹೆಬ್ರಿಯವರು. ತಂದೆತಾಯಿ ಸೇರಿ ಶಿವಮೊಗ್ಗದಲ್ಲಿ ಹೋಟೆಲ್ ನಡೆಸುತ್ತಿದ್ದರು. ನನಗೆ ಶಾಲಾ ದಿನಗಳಿಂದಲೇ ವೇದಿಕೆ ಹತ್ತಿ ನೃತ್ಯ, ನಾಟಕಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ ಇತ್ತು. ಒಂದು ರೀತಿಯಲ್ಲಿ ರಂಗ ಪಯಣ ಅಲ್ಲಿಂದಲೇ ಆರಂಭವಾಯಿತು ಎನ್ನಬಹುದು. ಸ್ಕೂಲು, ಕಾಲೇಜು ಎಲ್ಲ ಬೆಂಗಳೂರಲ್ಲೇ ನಡೆಯಿತು.

ಹಾಗಾದರೆ ನೀವು ಕುಂದಾಪುರ ಭಾಷಾ ದಿನಾಚರಣೆಯ ಬಗ್ಗೆ ಕೂಡ ಎರಡು ಮಾತನಾಡಲೇಬೇಕು?

ಹಾಗಾದರೆ ನೀವು ಕುಂದಾಪುರ ಭಾಷಾ ದಿನಾಚರಣೆಯ ಬಗ್ಗೆ ಕೂಡ ಎರಡು ಮಾತನಾಡಲೇಬೇಕು?

ಕುಂದಾಪುರ ಭಾಷೆ ದಿನಾಚರಣೆ ಮಾಡುತ್ತಿರುವ ಬಗ್ಗೆ ಖುಷಿ ಇದೆ. ಭಾಷೆಗೆ ಇರುವ ವ್ಯಾಪ್ತಿ ಹೆಚ್ಚು. ಮಾತೃಭಾಷೆಯ ವಿಚಾರ ಬಂದಾಗ ಎಲ್ಲರೂ ಒಂದಾಗುತ್ತಾರೆ. ಆದರೆ ನನ್ನ ಅಮ್ಮ, ಅಜ್ಜಿ, ಅಣ್ಣ ಎಲ್ಲರ ಭಾಷೆ ತುಳು.! ಆದರೆ ನಾನು ಬೆಂಗಳೂರು ಕನ್ನಡದಲ್ಲಷ್ಟೇ ಪರಿಣಿತೆ. ಆದರೆ ಕುಂದಗನ್ನಡದ ಮೇಲೆ ಒಲವು ಇರುವುದರಿಂದಲೇ 'ಗುಲಾಬಿ ಗ್ಯಾಂಗು- 2' ರಲ್ಲಿ ಕುಂದಾಪುರದ ವ್ಯಕ್ತಿಯ ಪಾತ್ರ ಸೇರಿಸಿದ್ದೇವೆ. ನಾವು ಮಾಡಿದ ಸಿನಿಮಾ ಕೂಡ ಕುಂದಾಪುರದಲ್ಲಿ ಚಿತ್ರೀಕರಣ ನಡೆಸಲಾಗಿತ್ತು.

ಸಿನಿಮಾಗಿಂತ ರಂಗಭೂಮಿಯನ್ನೇ ಇಷ್ಟ ಪಡುವ ನೀವು ಸಿನಿಮಾದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ತೋರಲು ಕಾರಣವೇನು?

ಸಿನಿಮಾಗಿಂತ ರಂಗಭೂಮಿಯನ್ನೇ ಇಷ್ಟ ಪಡುವ ನೀವು ಸಿನಿಮಾದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ತೋರಲು ಕಾರಣವೇನು?

ಸಮಯದ ಹಿಂದೆ ಸವಾರಿ ಎನ್ನುವುದು ನಾವೇ ನಾಟಕವಾಗಿ ಮಾಡಿದ್ದ ಕಾರಣ ಅದನ್ನು ಸಿನಿಮಾ ಮಾಡುವಾಗ ಅದರಲ್ಲಿ ನಾನು ಭಾಗಿಯಾದೆ. ಅದರ ಹೊರತಾಗಿ ಸಿನಿಮಾದಲ್ಲಿ ಮಾಡಬೇಕು ಎನ್ನುವ ಆಕಾಂಕ್ಷೆ ನಮ್ಮ ತಂಡದ ಯುವ ಕಲಾವಿದರಿಗೂ ಇತ್ತು. ರಾಜ್ ಗುರು ಅವರಂತೂ ತಂದೆಯ ನೆರಳಲ್ಲಿ ಸಿನಿಮಾ ಸಂಪರ್ಕ ಇರಿಸಿಕೊಂಡೇ ಬಂದಿರುವ ಕಾರಣ, ನಾವೇ ಸಿನಿಮಾ‌ ಮಾಡಲು ಅದರಲ್ಲಿ ಪಾಲ್ಗೊಳ್ಳಲು ಮುಂದಾದೆವು. ಆದರೆ ವೈಯಕ್ತಿಕವಾಗಿ ನನಗೆ ರಂಗಭೂಮಿ ಮೇಲಿನ‌ ನಟನೆಯೇ ತೃಪ್ತಿ ತಂದಿದೆ.

ರಾಜ್ ಗುರು ಅವರ ಜತೆಗಿನ ನಿಮ್ಮ ಪ್ರೇಮ ವಿವಾಹ ಹೇಗಾಯಿತು?

ರಾಜ್ ಗುರು ಅವರ ಜತೆಗಿನ ನಿಮ್ಮ ಪ್ರೇಮ ವಿವಾಹ ಹೇಗಾಯಿತು?

ಅವರು ನನಗೆ ಕಾಲೇಜು ದಿನಗಳಲ್ಲೇ ಪರಿಚಿತರು. ಕಾಲೇಜ್ ಬಳಿಕ ಅವರು 'ಸಾತ್ವಿಕ' ಎಂಬ ರಂಗತಂಡ ಕಟ್ಟಿದರೆ ನಾನು 'ರಂಗಪಯಣ' ತಂಡ ಕಟ್ಟಿದೆ. ನನಗೊಂದು ತಂಡ ಇದ್ದರೂ ಬೇರೆ ತಂಡದ ಜತೆ ಸೇರಿ ನಟಿಸುತ್ತಿದ್ದ ನಾನು ಒಮ್ಮೆ ಸಾತ್ವಿಕದಲ್ಲಿಯೂ ಭಾಗಿಯಾದೆ. ಆ ಸ್ನೇಹ, ಸಲುಗೆ ಪ್ರೇಮವಾಯಿತು. ಐದು ವರ್ಷಗಳ ಹಿಂದೆ 'ಮಂತ್ರ ಮಾಂಗಲ್ಯ' ಮೂಲಕ ವಿವಾಹವಾದೆವು. ಈಗಲೂ ನಮ್ಮ ಎರಡು ತಂಡಗಳು ಸಕ್ರಿಯವಾಗಿವೆ. ನಾಟಕಗಳು ಬೇರೆ ಬೇರೆಯಾಗಿ ನಿರ್ಮಾಣಗೊಂಡರೂ ಕಲಾವಿದರು ಒಂದಾಗಿ ಪಾಲ್ಗೊಳ್ಳುತ್ತೇವೆ.

ಇದುವರೆಗಿನ ರಂಗ ಪಯಣದಲ್ಲಿ ಮರೆಯಲಾಗದಂಥ ಸಂದರ್ಭ ಯಾವುದು?

ಇದುವರೆಗಿನ ರಂಗ ಪಯಣದಲ್ಲಿ ಮರೆಯಲಾಗದಂಥ ಸಂದರ್ಭ ಯಾವುದು?

ರಂಗಪಯಣ ತಂಡವನ್ನು ಕಟ್ಟಿದ್ದಲ್ಲಿಂದ ಹಿಡಿದು ಇದೀಗ ದಶಕ ತುಂಬಿರುವವರೆಗೆ ಪ್ರತಿಯೊಂದು ಕೂಡ ಮರೆಯಲಾಗದ ಘಟನೆಗಳೇ. 'ಚಂದ್ರಗಿರಿಯ ತೀರದಲ್ಲಿ' ನಾಟಕದ ಮೊದಲ ಪ್ರದರ್ಶನ ಕಲಾಗ್ರಾಮದಲ್ಲಿ ನೀಡಿದಾಗ ಶೋಗೆ ಸೀಟ್ ಎಷ್ಟಿತ್ತೋ ಅದರ ದುಪ್ಪಟ್ಟು ಜನ ಸೇರಿದ್ದರು. ಐವತ್ತು ರೂಪಾಯಿ ಟಿಕೆಟ್ ಗೆ ಸಾವಿರ ಕೊಡುವುದಾಗಿಯೂ ಹೇಳಿದವರಿದ್ದರು. ಕೂರಲು ಜಾಗ ಇಲ್ಲ ಎಂದಾದಾಗ "ಇನ್ನೊಂದು ಶೋ ಮಾಡಿ, ನಾವು ಹೊರಗೆ ಕಾಯುತ್ತೇವೆ" ಎಂದಿದ್ದರು! ಆದರೆ ಗುಲಾಬಿ ಗ್ಯಾಂಗ್ ನ ಪ್ರತಿ ಶೋಗಳ ಕೊನೆಗೂ ಸಿಗುವ ಪ್ರೇಕ್ಷಕರ ಪ್ರತಿಕ್ರಿಯೆ ಇದೆಯಲ್ಲ? ಅದು ಮಾತ್ರ ಈ ದಶಕದ ಪಯಣದಲ್ಲಿ ಮರೆಯಲಾಗದಂಥದ್ದು.

'ಗುಲಾಬಿ ಗ್ಯಾಂಗು' ಎರಡನೇ ಭಾಗವಾಗಿ ಮುಂದುವರಿದಿರುವುದರ ವಿಶೇಷತೆ ಏನು?

'ಗುಲಾಬಿ ಗ್ಯಾಂಗು' ಎರಡನೇ ಭಾಗವಾಗಿ ಮುಂದುವರಿದಿರುವುದರ ವಿಶೇಷತೆ ಏನು?

ನಿಮಗೆ ತಿಳಿದಿರುವ ಹಾಗೆ 'ಗುಲಾಬಿ ಗ್ಯಾಂಗು' ನೈಜ ಘಟನೆಯಾಧಾರಿತ ನಾಟಕ. ಉತ್ತರ ಪ್ರದೇಶದ ಅನಕ್ಷರಸ್ಥ ಮಹಿಳೆ ಸಂಪತ್ ಪಾಲ್ ಎಂಬಾಕೆ ತನ್ನ ಕುಡುಕ ಗಂಡನ ದೌರ್ಜನ್ಯದ ವಿರುದ್ಧ ತಿರುಗಿ ನಿಲ್ಲುವುದಷ್ಟೇ ಅಲ್ಲ, ಮಹಿಳಾ ದೌರ್ಜನ್ಯದ ವಿರುದ್ಧ ಮಹಿಳೆಯರನ್ನೇ ಸೇರಿಸಿ ಗುಲಾಬಿ ಗ್ಯಾಂಗ್ ಎನ್ನುವ ತಂಡ ಕಟ್ಟಿ ಹೋರಾಟ ಶುರು ಮಾಡುತ್ತಾಳೆ. ಆ ಮಹಿಳೆಯನ್ನು ನೇರವಾಗಿ ಸಂಪರ್ಕಿಸಿ, ಎಂಟು ದಿನಗಳ ಕಾಲ ಅವರ ಕತೆ ಕೇಳಿ ಬಳಿಕ ನನ್ನ ಸಹೋದರ ಪ್ರವೀಣ್ ಸೂಡ ಅವರೇ ಈ ರಂಗರೂಪಕ ಸಿದ್ಧ ಪಡಿಸಿದ್ದಾರೆ. ಗುಲಾಬಿ ಗ್ಯಾಂಗು ನಾಟಕದಲ್ಲಿ ಬಳಸಿಕೊಳ್ಳಲಾಗದ ಆಕೆಯ ಇನ್ನೊಂದಷ್ಟು ಹೋರಾಟದ ಸನ್ನಿವೇಶಗಳನ್ನು ಭಾಗ ಎರಡರಲ್ಲಿ ನೀಡಲಾಗಿದೆ. ರಾಜ್ ಗುರು ಹೊಸಕೋಟೆಯವರು ಇದರ ನಿರ್ದೇಶಕರು.

ನಿಮ್ಮ ಮುಂದಿನ ಕನಸು ಏನು?

ನಿಮ್ಮ ಮುಂದಿನ ಕನಸು ಏನು?

ರಂಗಭೂಮಿ ಆಸಕ್ತಿ ಉಳಿದಿರುವ ತನಕ ಬೇರೆ ದೊಡ್ಡ ಗುರಿಗಳನ್ನು ಹಾಕಿಕೊಳ್ಳುವ ಅಗತ್ಯ ಬಂದಿಲ್ಲ. ಆದರೆ ಮಹಿಳಾ ಪ್ರಧಾನ ನಾಟಕಗಳಿಗೆ ಸಿಗುತ್ತಿರುವ ಬೆಂಬಲವನ್ನು ಕಂಡಾಗ ಮಹಿಳೆಯರ ಸ್ಫೂರ್ತಿಗಾಗಿ ಇನ್ನಷ್ಟು ಮಾಡಬೇಕು ಎನ್ನುವ ಉಮೇದು ಮೂಡಿದೆ. ನನಗೆ ಗಂಡ ಸೇರಿದಂತೆ ಈಗ ಅಮ್ಮ, ಅಜ್ಜಿ, ಇಬ್ಬರು ಅಣ್ಣಂದಿರು ಹೀಗೆ ಎಲ್ಲರ ತುಂಬು ಬೆಂಬಲವಿದೆ. ಪ್ರೋತ್ಸಾಹ ಸಿಗದಿರುವ ಮನೆಯ ಮಹಿಳೆಯರಿಗೆ ನಾಟಕಗಳ ಮೂಲಕ ಪ್ರೋತ್ಸಾಹ ನೀಡಬೇಕು ಎನಿಸಿದೆ. ಇದರ ಈಗಾಗಲೇ ಹಲವಾರು ಸರ್ಕಾರಿ ಶಾಲೆಗಳಿಗೆ ಹೋಗಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಡ್ಯಾನ್ಸ್ ಹೇಳಿಕೊಟ್ಟಿದ್ದೇನೆ. ಕಲಿಕೆಯ ವಿಚಾರಕ್ಕೆ ಬಂದರೆ ಮಹಿಳೆ ಅಥವಾ ರಂಗಭೂಮಿಯ ವಿಷಯ ಇಟ್ಟುಕೊಂಡು ಪಿಎಚ್ಡಿ ಮಾಡುವ ಯೋಜನೆಯಲ್ಲಿದ್ದೇನೆ. ಅಧ್ಯಯನ, ನಾಟಕ, ನೃತ್ಯಗಳನ್ನು ದಾಟಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಮಹಿಳಾ ಪ್ರೇಕ್ಷಕರನ್ನು ತಲುಪಲಿಕ್ಕಾಗಿ ಸಿನಿಮಾ ಮಾಡುವ ಆಕಾಂಕ್ಷೆ ಇದೆ. ಮುಂದೆ ಅದು ಸಾತ್ವಿಕದ ಮೂಲಕವೇ ನನಸಾಗುವ ನಿರೀಕ್ಷೆ ಇದೆ.

English summary
The interview of Nayana Suda The Founder Of theatre group 'Ranga payana's completion of a decade

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more