For Quick Alerts
ALLOW NOTIFICATIONS  
For Daily Alerts

ಎಸ್ ಪಿ ಬಾಲು ಜನಪ್ರಿಯತೆಯಲ್ಲಿದೆ ಸರಳತೆಯ ಪಾಲು

|

ಇತ್ತೀಚೆಗಷ್ಟೇ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ತಮ್ಮ 73ನೇ ವರ್ಷಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ನಮ್ಮ ಕನ್ನಡ ಚಿತ್ರರಂಗದ ಒಂದಷ್ಟು ಪ್ರಮುಖರು ಫಿಲ್ಮಿಬೀಟ್ ಜೊತೆಗೆ ಅವರನ್ನು ನೆನಪಿಸಿಕೊಂಡರು. ಆ ನೆನಪುಗಳ ಜತೆಗೆ ಎಸ್ ಪಿಬಿಯವರ ಬಗ್ಗೆ ಕನ್ನಡಿಗರು ಗಮನಿಸಿರದ ಒಂದಷ್ಟು ವಿಶೇಷ ಮಾಹಿತಿಗಳು ಇಲ್ಲಿವೆ. ಬಾಲಸುಬ್ರಹ್ಮಣ್ಯಂ ಅವರು ಒಬ್ಬ ಗಾಯಕ ಎನ್ನುವ ಕಾರಣದಿಂದ ಪ್ರಖ್ಯಾತರಾಗಿರುವುದು ಎಷ್ಟು ನಿಜವೋ, ಅವರ ಸರಳ ವಿರಳ ಸ್ವಭಾವವೂ ಕೂಡ ಅವರನ್ನು ಜನಪ್ರಿಯಗೊಳಿಸಿರುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಸತ್ಯ. ಬಹುಶಃ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡ ಸಿನಿಮಾ ಸಂಗೀತ ಲೋಕಕ್ಕೆ ಪ್ರವೇಶ ನೀಡುವವರೆಗೆ ಭಾವಗಾಯಕರ ಅಭಾವವಿತ್ತು ಎನ್ನಬಹುದು.

ಕನ್ನಡ ಸಿನಿಮಾ ಗೀತೆಗಳ ಮೂಲಕ ಜನಪ್ರಿಯರಾಗಿದ್ದವರು ಎಂದರೆ ಪಿ.ಬಿ ಶ್ರೀನಿವಾಸ್ ಅವರು. ಅವರ ಗಂಭೀರ ಕಂಠ ಭಕ್ತಿ, ಶ್ರದ್ಧೆ ಜೊತೆಗೆ ಪ್ರೇಮಗೀತೆಗಳಿಗೂ ಅಪ್ಯಾಯಮಾನವಾಗಿತ್ತು. ಆದರೆ ಒಬ್ಬ ಕಲಾವಿದ ಯಾವುದೆಲ್ಲ ಭಾವಗಳಲ್ಲಿ ನಟಿಸಬಲ್ಲನೋ, ಆ ಎಲ್ಲ ಭಾವಗಳನ್ನು ಗೀತೆಯಲ್ಲಿಯೇ ಸೆರೆಹಿಡಿಯಬಲ್ಲ ಗಾಯಕರಾಗಿ ಗುರುತಿಸಿಕೊಂಡವರು ಎಸ್.ಪಿ.ಬಿ. ಹಾಗಾಗಿ ಅವರು ಸಂತಸದ ಹಾಡು ಹಾಡಿದರೆ ಶಬರಿಬ ಶಬರಿಬ ಎಂದು ಆಲಾಪಿಸಿ ಶ್ರೋತೃ ಕೈಕಾಲುಗಳ ಮೂಲಕ ತಾಳ ಹಾಕುವಂತೆ ಮಾಡಬಲ್ಲರು.

ಕನ್ನಡದ ಮೇಲೆ ಎಸ್.ಪಿ.ಬಿ ಇಟ್ಟಿರುವ ಗೌರವಕ್ಕೆ ಇದೊಂದು ಘಟನೆ ಸಾಕ್ಷಿ

ನೋವಿನ ಹಾಡಾದರೆ ಹಾಡಲ್ಲೇ ಅಳುವ ಮಾತ್ರವಲ್ಲ, ಕೆಮ್ಮುತ್ತಲೇ ಆಕರ್ಷಕವಾಗಿ ಹಾಡಬಹುದು ಎಂದು ತೋರಿಸಿಕೊಟ್ಟವರು ಎಸ್ ಪಿ ಬಾಲಸುಬ್ರಹ್ಮಣ್ಯಂ ಎನ್ನಬಹುದು. ತಂದೆ ಹರಿಕತೆ ಹೇಳಬಲ್ಲವರಾಗಿದ್ದರು. ಆದರೆ ಪುತ್ರ ಇಷ್ಟು ದೊಡ್ಡಮಟ್ಟದ ಗಾಯಕನಾಗಬಹುದು ಎನ್ನುವ ಕಲ್ಪನೆ ಯಾರಿಗೂ ಇರಲಿಲ್ಲ. ಬಾಲಸುಬ್ರಹ್ಮಣ್ಯಂ ಅವರು ಆರಂಭ ಕಾಲದಲ್ಲಿ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಎಸ್ ಜಾನಕಿಯವರು ತೀರ್ಪುಗಾರರಾಗಿ ಬಂದಿದ್ದರಂತೆ. ಮುಂದೆ ಅದೇ ಎಸ್ ಜಾನಕಿಯೊಂದಿಗೆ ಸೇರಿ ಜನಪ್ರಿಯ ಡ್ಯುಯೆಟ್ ಹಾಡುಗಳ ಜೋಡಿಯಾಗಿ ಗುರುತಿಸಿಕೊಂಡಿದ್ದು ವಿಶೇಷ.

ಹಾಡಿನ ಜೊತೆಗೆ ಮಿಮಿಕ್ರಿ!

ಹಾಡಿನ ಜೊತೆಗೆ ಮಿಮಿಕ್ರಿ!

ಬಾಲಸುಬ್ರಹ್ಮಣ್ಯಂ ಅವರು ಚೆನ್ನಾಗಿ ಮಿಮಿಕ್ರಿ ಮಾಡಬಲ್ಲರು. ಇಂದು ಅವರ ಹಾಗೆ ಹಾಡಲು ಬಯಸುವ, ಅನುಕರಿಸುವ ಎಷ್ಟೋ ಗಾಯಕರಿದ್ದಾರೆ. ಅವರಿಗೆಲ್ಲ ಬಾಲು ಹೇಳುವ ಕಿವಿ ಮಾತು ಒಂದೇ, "ಆರಂಭದ ಗುರುತಿಸುವಿಕೆಗಾಗಿ ಆ ರೀತಿಯ ಪ್ರಯತ್ನ ತಪ್ಪೇನೂ ಅಲ್ಲ; ಆದರೆ ಮುಂದೆ ನಿಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡರೆ ಮಾತ್ರ ಸಂಗೀತ ಕ್ಷೇತ್ರದಲ್ಲಿ ಪ್ರತ್ಯೇಕ ಸ್ಥಾನದಿಂದ ಗುರುತಿಸಲು ಸಾಧ್ಯ" ಎನ್ನುತ್ತಾರೆ. ಬಹುಶಃ ಈ ಸಲಹೆಯನ್ನು ಅವರು ಸ್ವತಃ ಅನುಸರಿಸಿದ್ದಾರೆ ಎನ್ನುವುದನ್ನು ಅವರ ಆರಂಭ ಕಾಲದ ಹಾಡುಗಳನ್ನು ಗಮನಿಸಿದರೆ ತಿಳಿಯಬಹುದು.

ಪಿಬಿ ಶ್ರೀನಿವಾಸ್ ಅವರ ಅನುಕರಣೆ

ಪಿಬಿ ಶ್ರೀನಿವಾಸ್ ಅವರ ಅನುಕರಣೆ

ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಸಂತೋಷ.. ಅಹ.. ಓಹೋ.. ಎನ್ನುವ ಹಾಡನ್ನು ಗಮನಿಸಿದರೆ ಎಸ್ ಪಿ ಬಿಯವರು ಪಿಬಿ ಶ್ರೀನಿವಾಸ್ ಅವರ ಅನುಕರಣೆ ಮಾಡಿರುವುದು ಗೊತ್ತಾಗುತ್ತದೆ! ಮಾತ್ರವಲ್ಲ, ಎಂ ಎಸ್ ವಿಶ್ವನಾಥನ್, ಸಿ ಅಶ್ವಥ್ ಮೊದಲಾದ ದಿಗ್ಗಜರ ಸಂಗೀತದಲ್ಲಿ ಹಾಡಬೇಕಾದರೆ ಅವರೇ ಸ್ವತಃ ಹಾಡಿರುವ ಗೀತೆಯನ್ನು ಅನುಸರಿಸುವ ನಿಟ್ಟಿನಲ್ಲಿ ಎಸ್ ಪಿಯ ಶೈಲಿ ಸಂಪೂರ್ಣವಾಗಿ ಅವರನ್ನೇ ಹೋಲುವುದನ್ನು ಗಮನಿಸಬಹುದಾಗಿದೆ! ಈ ಮಿಮಿಕ್ರಿಯ ಕಲೆ ಎಸ್ ಪಿಬಿಯವರಿಗೆ ಬಾಲ್ಯದಿಂದಲೇ ಸಿದ್ಧಿಸಿದೆ ಎನ್ನಬಹುದು. ಅವರು ಸಹಜವಾಗಿ ಇನ್ನೊಬ್ಬರೊಂದಿಗೆ ಮಾತನಾಡುವಾಗ ಕೂಡ ತಮ್ಮೊಂದಿಗೆ ಈ ಹಿಂದೆ ಮಾತನಾಡಿದವರ ಬಗ್ಗೆ ಉಲ್ಲೇಖಿಸುತ್ತಾ, ಅವರ ಧ್ವನಿಯನ್ನೇ ಅನುಕರಿಸಿ ‘ಹೀಗೆ ಹೇಳಿದರು' ಎಂದು ಮಾತನಾಡುವ ರೂಢಿ ಬೆಳೆಸಿಕೊಂಡಿದ್ದರು! ಇಂದಿಗೂ ಅವರಲ್ಲಿ ಆ ಗುಣವನ್ನು ಕಾಣಬಹುದು!

ಸಂಗೀತ ದಿಗ್ಗಜರ ಕಾಳಗ: ಪ್ರತಿಷ್ಠೆಯೋ ಅಥವಾ ವ್ಯವಹಾರವೋ!

ತಾಳಿಕಟ್ಟುವ ಶುಭವೇಳೆ...

ತಾಳಿಕಟ್ಟುವ ಶುಭವೇಳೆ...

ಆರಂಭ ಕಾಲದ ಹಾಡುಗಳಲ್ಲಿ ಸೀಟಿ ಹೊಡೆಯುವ ಮೊದಲಾದ ಸಂದರ್ಭಗಳಿದ್ದರೆ ಅದನ್ನು ತಾವೇ ಮಾಡುವುದಾಗಿ ವಹಿಸಿಕೊಳ್ಳುತ್ತಿದ್ದರಂತೆ. ಆದರೆ ಆಗ ಹಾಡುಗಳ ನಡುವೆ ಸೀಟಿ ಹೊಡೆಯುವ ಕೆಲಸವನ್ನೇ ಮಾಡುತ್ತಿದ್ದಂಥ ಕಲಾವಿದರಿಗೆ ಸಂಭಾವನೆ ನಷ್ಟವಾಗುತ್ತಿರುವುದರ ಅರಿವಾಗಿ ಹಾಗೆ ಮಾಡುವುದರಿಂದ ಹಿಂದೆ ಸರಿದಂಥ ಉದಾಹರಣೆಯೂ ಇದೆಯಂತೆ. ಉದಾಹರಣೆಗೆ "ತಾಳಿಕಟ್ಟುವ ಶುಭವೇಳೆ..'' ಹಾಡಿನಲ್ಲಿ ಬರುವ ಜಿಂಕೆ ಮಂತ್ರ ಹೇಳುವ ಮೊದಲಾದ ಕಂಠವನ್ನು ಕನ್ನಡದಲ್ಲಿ ಎಸ್ಪಿಬಿಯವರೇ ನಿರ್ವಹಿಸಿದ್ದರೆ ಮೂಲ ತಮಿಳಲ್ಲಿ ಅಲ್ಲಿನ ಮಿಮಿಕ್ರಿ ಕಲಾವಿದರಿಗೆ ಅವಕಾಶ ನೀಡಲಾಗಿತ್ತು. ಹಾಗಿದ್ದರೂ ಕನ್ನಡದಲ್ಲಿ ಎಸ್ ಪಿ ಮಾಡಿದಂಥ ಮಿಮಿಕ್ರಿಯೇ ಆಕರ್ಷಕವಾಗಿದೆ ಎನ್ನುವುದು ಗಮನಾರ್ಹ!

ಸಂಗೀತ ಕ್ಷೇತ್ರದ ದಿಗ್ಗಜನಿಗೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ರಿಂದ ಪಾದಪೂಜೆ

ಕಲಾವಿದರ ಕಂಠವನ್ನು ಹೋಲುವಂತೆ ಭ್ರಮೆ!

ಕಲಾವಿದರ ಕಂಠವನ್ನು ಹೋಲುವಂತೆ ಭ್ರಮೆ!

ಬಾಲಸಬ್ರಹ್ಮಣ್ಯಂ ಅವರ ಕಂಠ ಎಂದರೆ ಇಂದು ಅವರು ಯಾವ ಭಾಷೆಯಲ್ಲಿ ಹಾಡಿದ್ದರೂ, ಯಾರು ಬೇಕಾದರೂ ಗುರುತಿಸಬಲ್ಲ ರೀತಿಯಲ್ಲಿದೆ. ಆದರೆ ಆಯಾ ಭಾಷೆಯ ಚಿತ್ರಗಳಲ್ಲಿ ಅವರ ಹಾಡುಗಳನ್ನು ಗಮನಿಸುವಾಗ, ಆಯಾ ಕಲಾವಿದರಿಗೆ ತಕ್ಕಂತೆ ಅವರು ತಮ್ಮ ಕಂಠವನ್ನು ಬದಲಾಯಿಸಿದ್ದಾರೆ ಎನ್ನುವಂತೆ ಭ್ರಮೆ ಮೂಡಿಸುತ್ತಾರೆ! ಉದಾಹರಣೆಗೆ ತಮಿಳಲ್ಲಿ ರಜನಿ ಮತ್ತು ಕಮಲ್ ಎಂಬ ತಾರೆಯರಿಗೆ ಎಸ್ ಪಿಬಿಯವರ ಕಂಠ ತುಂಬ ಹೊಂದುತ್ತದೆ ಎಂದುಕೊಳ್ಳುವವರಿದ್ದಾರೆ. ಕನ್ನಡದಲ್ಲಂತೂ ಅಂಬರೀಶ್, ವಿಷ್ಣುವರ್ಧನ್, ಶಂಕರನಾಗ್, ರವಿಚಂದ್ರನ್ ಎಲ್ಲರಿಗೂ ಬಾಲುವಿನ ಕಂಠ ಹೊಂದಾಣಿಕೆಯಾಗುತ್ತದೆ!

ಎಂಜಿನಿಯರ್ ಆಗ್ಬೇಕಿದ್ದ ಎಸ್.ಪಿ.ಬಿಗೆ ಅದೃಷ್ಟ ಖುಲಾಯಿಸಿದ ಸತ್ಯಕಥೆ

ಅಂಬಿ-ವಿಷ್ಣು-ಶಂಕರ್ ನಾಗ್ ಫೀಲ್ ಕೊಡ್ತಿದ್ರು

ಅಂಬಿ-ವಿಷ್ಣು-ಶಂಕರ್ ನಾಗ್ ಫೀಲ್ ಕೊಡ್ತಿದ್ರು

ಮಂಡ್ಯದ ಗಂಡು ಹಾಡನ್ನು ಅಂಬಿಯೇ ಹಾಡಿದಂಥ ಫೀಲ್ ನೀಡುವಲ್ಲಿ ಎಸ್ಪಿ ಗೆಲ್ಲುತ್ತಾರೆ. ಅದೇ ವೇಳೆ ಎಷ್ಟೋ ಹೈ ಪಿಚ್ ಹಾಡುಗಳಲ್ಲಿ ವಿಷ್ಣವರ್ಧನ್ ಅಭಿಮಾನಿಗಳು ಅವರ ಧ್ವನಿಯಲ್ಲಿ ವಿಷ್ಣುವನ್ನೇ ಕಾಣುತ್ತಾರೆ (ಕರ್ನಾಟಕದ ಇತಿಹಾಸದಲೀ.. ಗೀತೆಯಿಂದ ಹಿಡಿದು ಆಪ್ತರಕ್ಷಕದ ಗರನೆ ಗರ ಗರನೇ.. ತನಕದ ಸಾಕಷ್ಟು ಹಾಡುಗಳನ್ನು ನೆನಪಿಸಿಕೊಳ್ಳಬಹುದು.) ಇನ್ನು ಶಂಕರ್ ನಾಗ್ ಅವರ ಜನಪ್ರಿಯ ಗೀತೆಗಳಾದ ಗೀತಾಂಜಲೀ.., ಕಾಡು ನೋಡ ಹೋದೆ, ನಲಿವಾ ಗುಲಾಬಿ ಹೂವೇ.. ಹಾಡುಗಳಲ್ಲಿ ಶಂಕರನಾಗ್ ಕಂಠವನ್ನು ಕಂಡವರು ಬಹಳ ಮಂದಿ. ಇದು ಸಾಮಾನ್ಯ ಸಿನಿಪ್ರೇಕ್ಷಕರ ಭ್ರಮೆಯಲ್ಲ. ತೆಲುಗು ಕಾದಂಬರಿಯೊಂದರಲ್ಲಿ ಖ್ಯಾತ ಲೇಖಕ ಯಂಡಮೂರಿ ವಿರೇಂದ್ರನಾಥ್ ಅವರು ನ್ಯಾಯಾಲಯದ ಸನ್ನಿವೇಶದಲ್ಲಿ ಒಬ್ಬರ ಕಂಠವನ್ನು ಮಿಮಿಕ್ರಿ ಮಾಡಬಲ್ಲರೆನ್ನುವುದಕ್ಕೆ ನ್ಯಾಯಾಧೀಶರಿಗೆ ಉದಾಹರಣೆ ನೀಡುತ್ತಾ, ಎನ್ ಟಿ ಆರ್ ಕಂಠವನ್ನೇ ಹೋಲುವಂತೆ ಎಸ್ಪಿಬಿ ಹಾಡಿರುವ ಗೀತೆಯ ರೆಕಾರ್ಡರ್ ಒಂದನ್ನು ಸಾಕ್ಷಿ ನೀಡುವ ಸಂದರ್ಭ ಬರೆದಿದ್ದಾರೆ. ಇವೆಲ್ಲವೂ ಈ ಬಹುಮುಖ ಪ್ರತಿಭೆಯ ಗಾಯಕನ ಮಿಮಿಕ್ರಿ ಪ್ರತಿಭೆಯನ್ನು ಎತ್ತಿ ಹಿಡಿಯುವಂಥ ಸಂದರ್ಭಗಳಾಗಿವೆ.

ಎಸ್.ಪಿ.ಬಿ ಮಾಡಿರುವ ದಾಖಲೆಗಳು ಅಬ್ಬಬ್ಬಾ.! ಒಂದಾ..ಎರಡಾ.!!?

ಬಾಲು ಕೋಪ ಬಂದರೆ ಏನು ಮಾಡುತ್ತಾರೆ ಗೊತ್ತೇ?

ಬಾಲು ಕೋಪ ಬಂದರೆ ಏನು ಮಾಡುತ್ತಾರೆ ಗೊತ್ತೇ?

ಇಂದು ಹಿಂದಿನಂತೆ ಹಾಡುಗಳು ಹೆಚ್ಚು ಕಾಲ ಯಾರ ನೆನಪಲ್ಲಿಯೂ ಉಳಿಯುತ್ತಿಲ್ಲ. ಅದಕ್ಕೆ ಬಾಲು ಅವರು ಸಂಗೀತ ನಿರ್ದೇಶಕರನ್ನು ಮಾತ್ರ ಹೊಣೆ ಮಾಡುವುದಿಲ್ಲ. ಚಿತ್ರದ ನಿರ್ದೇಶಕರು ಕೂಡ ಅದಕ್ಕೆ ಜವಾಬ್ದಾರರು ಎನ್ನುತ್ತಾರೆ. ಯಾಕೆಂದರೆ ಅವರ ಪ್ರಕಾರ ಸಂದರ್ಭಕ್ಕೆ ಅನುಸಾರವಾಗಿ ಹಾಡುಗಳು ಬಂದಾಗ ಅವುಗಳು ಹೆಚ್ಚುಕಾಲ ನೆನಪಲ್ಲಿ ಉಳಿಯುತ್ತವೆ. ಸಿನಿಮಾದ ಕತೆಯ ಸಂದರ್ಭಗಳನ್ನು ಚರ್ಚಿಸಿ ಅದಕ್ಕೆ ತಕ್ಕಂತೆ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದರೆ ಆಗ ಸಿನಿಮಾ ನೋಡದವರಿಗೂ ಆ ಸಂದರ್ಭದ ಅರಿವಾಗುತ್ತದೆ. ಹಾಗೆ ಸಂದರ್ಭಕ್ಕೆ ತಕ್ಕಂತೆ ಸಂಗೀತ ಬಯಸುವ ನಿರ್ದೇಶಕರಲ್ಲಿ ಕೆ ಬಾಲಚಂದರ್ ಪ್ರಮುಖರಾಗಿದ್ದರು. ಆದರೆ ಈಗ ಅಂಥ ನಿರ್ದೇಶಕರೇ ಇಲ್ಲ.

ಎಸ್ ಪಿ ಬಿ ಈ ವಿಷ್ಯದಲ್ಲಿ ಬೇಸರವಿದೆ

ಎಸ್ ಪಿ ಬಿ ಈ ವಿಷ್ಯದಲ್ಲಿ ಬೇಸರವಿದೆ

ಉದಾಹರಣೆಗೆ ಒಂದು ಐಟಂ ಸಾಂಗ್, ಒಂದು ಡ್ಯುಯೆಟ್, ಹುಡುಗಿಗೊಂದು ಪ್ಯಾತೋ, ಮತ್ತು ಒಂದು ಕುಡುಕರ ಹಾಡು ಎಂದು ರೆಡಿಯಾಗುವವರೇ ಹೆಚ್ಚು. ಎಲ್ಲ ಸಿನಿಮಾಗಳಲ್ಲಿ ಇದೇ ಕತೆಯಾದರೆ ಹಾಡುಗಳು ನೆನಪಲ್ಲಿ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ ಎಸ್ ಪಿ ಬಿ. ಅಂದಹಾಗೆ ಇಂಥ ಪರಿಸ್ಥಿತಿಯ ಬಗ್ಗೆ ಬಾಲು ಅವರಿಗೆ ಬೇಸರವಿದೆ. ಆದರೆ ತಮ್ಮ ಕೋಪ, ತಾಪಗಳನ್ನು ಯಾವತ್ತಿಗೂ ಹೊರಗೆ ತೋರಿಸದೆ ವಿನಮ್ರವಾಗಿಯೇ ಗಮನ ಸೆಳೆದ ಕೀರ್ತಿ ಇವರದು. ಆದರೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೂ ಕೋಪ ಬರುವ ಸಂದರ್ಭಗಳಿವೆ. ಅದನ್ನು ಅವರು ಹೇಗೆ ವ್ಯಕ್ತಪಡಿಸುತ್ತಾರೆ ಎನ್ನುವುದನ್ನು ಅವರದೇ ಮಾತುಗಳಲ್ಲಿ ನೋಡಿ.

ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಕೈ ಕೊಟ್ಟ ಹುಡುಗಿ ಯಾರು?

ಪದೇ ಪದೇ ತಿದ್ದುವುದು ಸಹಿಸಲ್ಲ

ಪದೇ ಪದೇ ತಿದ್ದುವುದು ಸಹಿಸಲ್ಲ

ಕೆಲವು ಸಂಗೀತ ನಿರ್ದೇಶಕರಿಗೆ ಸಂಗೀತ ಸಂಯೋಜನೆಯ ಬಗ್ಗೆ ಸರಿಯಾದ ಅರಿವು ಇರುವುದಿಲ್ಲ. ಆದರೆ ಸಮಾಜದಲ್ಲಿ ಅವರನ್ನು ಸಂಗೀತ ನಿರ್ದೇಶಕರು ಎಂದು ಗುರುತಿಸಿಕೊಂಡು ಆಗಿರುತ್ತದೆ! ಅವರು ಸಂಗೀತ ಜ್ಞಾನವುಳ್ಳವರನ್ನು ಜೊತೆಗೆ ಇರಿಸಿಕೊಂಡು ಆ ಕೆಲಸ ಮಾಡುತ್ತಾರೆ. ಅಂಥವರು ನನ್ನಲ್ಲಿ ಅದನ್ನು ಒಪ್ಪಿಕೊಳ್ಳುತ್ತಾರೆ. ಏನೋ ಟ್ಯೂನ್ ಹಾಕಿದ್ದೇನೆ. ನೀವೇ ಸ್ವಲ್ಪ ನೋಡಿಕೊಂಡು ಹಾಡಿ ಎಂದು ಹೇಳುತ್ತಾರೆ. ಆಗ ನಾನು ನನ್ನಿಂದಾಗುವಷ್ಟು ಇಂಪ್ರವೈಸೇಶನ್ ಮಾಡುತ್ತೇನೆ. ಅದನ್ನು ಅವರು ಪ್ರಶಂಸಿಸುತ್ತಾರೆ ಕೂಡ. ಅವರ ಬಗ್ಗೆ ನನಗೆ ತಕರಾರಿಲ್ಲ. ಆದರೆ ಇನ್ನು ಕೆಲವರು ತಮ್ಮ ಸಹಾಯಕರ ಎದುರಲ್ಲಿ ತಾನು ಎಸ್ ಪಿ ಬಿಯನ್ನೇ ತಿದ್ದಿದ್ದೇನೆ ಎಂದು ತೋರಿಸಿಕೊಡಲಿಕ್ಕಾಗಿ ಪದೇ ಪದೇ ಕರೆಕ್ಷನ್ ಹೇಳುತ್ತಾರೆ. ಟ್ಯೂನ್ ಹೇಗೆ ಎಂದು ನಿರ್ಧಿಷ್ಟವಾಗಿ ತಿಳಿಯದವರು ಕೂಡ ನನ್ನಿಂದ ಕರೆಕ್ಷನ್ ಬಯಸುವುದಾಗಿ ಹೇಳುತ್ತಾರೆ. ಅದನ್ನು ಕೂಡ ನಾನು ಸಹಿಸುತ್ತೇನೆ. ಆದರೆ ಅದೇ ಪದೇ ಪದೇ ಅರ್ಥವಿಲ್ಲದೆ ಆವರ್ತಿಸಿದರೆ ಸರ್ ಈ ಹಾಡು ಹಾಡುವಷ್ಟು ಜ್ಞಾನ ನನಗಿಲ್ಲ, ಜತೆಗೆ ಗಂಟಲು ನೋವು ಕೂಡ ಇದೆ. ದಯವಿಟ್ಟು ನೀವು ಬೇರೆ ಗಾಯಕರಿಂದ ಹಾಡಿಸಿ ಎಂದು ನಾನು ನನ್ನ ಬ್ಯಾಗ್ ರೆಡಿ ಮಾಡಿಕೊಂಡು ಹೊರಟೇ ಬಿಡುತ್ತೇನೆ! ಎಂದು ತಮಗೆ ಅಪರೂಪಕ್ಕೆ ಬರುವ ಕೋಪದ ಬಗ್ಗೆ ವಿವರಿಸುತ್ತಾರೆ ಬಾಲಸುಬ್ರಹ್ಮಣ್ಯಂ.

ಎಸ್ ಪಿಯವರು ಡಿ ಎಸ್ ಪಿಯಾಗಲಿ ಎಂದ ರಮೇಶ್ ಅರವಿಂದ್!

ಎಸ್ ಪಿಯವರು ಡಿ ಎಸ್ ಪಿಯಾಗಲಿ ಎಂದ ರಮೇಶ್ ಅರವಿಂದ್!

ಎಸ್ ಪಿಬಿಯವರ ವಿವಿಧ ಭಾಷೆಗಳ ಹಲವಾರು ಉತ್ತಮ ಹಾಡುಗಳಿಗೆ ಪರದೆಯ ಮೇಲೆ ಜೀವ ತುಂಬಿದ ನಟ ರಮೇಶ್ ಅರವಿಂದ್. ಜತೆಗೆ ವಾಹಿನಿಯೊಂದರಲ್ಲಿ ಎಸ್ ಪಿ ಬಿಯವರ ಸಾಧನೆಯ ಕುರಿತಾದ ಸಂಪೂರ್ಣ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟ ಅನುಭವ ಇರುವವರು. ಫಿಲ್ಮಿಬೀಟ್ ಅವರಲ್ಲಿ ಬಾಲಸುಬ್ರಹ್ಮಣ್ಯಂ ಕುರಿತಾದ ಒಂದು ಮಾತು ಹೇಳುವಂತೆ ಕೇಳಿಕೊಂಡಾಗ ಅವರು ಹೇಳಿದ್ದೇ ಈ ವಾಕ್ಯ! ಅಂದಹಾಗೆ ಎಸ್ ಪಿ ಎನ್ನುವುದು ಪೊಲೀಸ್ ಇಲಾಖೆಯಲ್ಲಿರುವ ಒಂದು ಹುದ್ದೆ ಎನ್ನುವುದು ಎಲ್ಲರಿಗೂ ಗೊತ್ತು. ಇನ್ನು ಅದೇ ಹುದ್ದೆ ಡಿ ಎಸ್ ಪಿ ಆಗುವುದೆಂದರೆ ಡಿಪ್ರಮೋಟ್ ಆದಂತೆ ತಾನೇ? ಆದರೆ ಇಲ್ಲಿ ಡಿಪ್ರಮೋಟ್ ಆಗುವುದಿಲ್ಲ ಎನ್ನುತ್ತಾರೆ ರಮೇಶ್. ಯಾಕೆಂದರೆ ಅವರ ಪ್ರಕಾರ ಡಿಎಸ್ ಪಿ ಆಗುವುದೆಂದರೆ ದಾದಾ ಸಾಹೇಬ್ ಫಾಲ್ಕೆ ಪಡೆಯುವುದು ಎಂದು ಅರ್ಥವಂತೆ! ಹೌದು, ಗಾಯಕ, ಸಂಗೀತ ನಿರ್ದೇಶಕ, ನಟ, ನಿರ್ಮಾಪಕ ಹೀಗೆ ಎಲ್ಲವೂ ಆಗಿರುವ ಬಾಲಸುಬ್ರಹ್ಮಣ್ಯಂ ಅವರು ಎಲ್ಲ ರೀತಿಯಿಂದಲೂ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರಕ್ಕೆ ಯೋಗ್ಯರು ಎನ್ನುವುದರಲ್ಲಿ ಎರಡು ಮಾತಿಲ್ಲ.

ವಿನಯ ಪ್ರಸಾದ್ ಸಿಗಲಿಲ್ಲ!!

ವಿನಯ ಪ್ರಸಾದ್ ಸಿಗಲಿಲ್ಲ!!

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಮೂಲತಃ ಆಂಧ್ರದವರಾದರೂ ಅವರನ್ನು ಕನ್ನಡಿಗರಾಗಿಯೇ ಕಂಡವರು ನಾವು. ತಾವು ಕೂಡ ಕನ್ನಡದ ಆಸ್ವಾದಕರನ್ನು ಹೆಚ್ಚು ಮೆಚ್ಚುವುದಾಗಿ ಬಾಲು ಅವರು ತುಂಬ ಸಲ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅವರ ವಿವಾಹವೂ ಕೂಡ ಕರ್ನಾಟಕದ ಹುಡುಗಿಯ ಜತೆಯಲ್ಲೇ ನಡೆದಿತ್ತು ಎನ್ನುವುದು ವಿಶೇಷ. ಇಷ್ಟೆಲ್ಲ ಆತ್ಮೀಯತೆ ಇರಬೇಕಾದರೆ ಕನ್ನಡದ ತಾರೆಗಳ ಜತೆಗೂ ಆತ್ಮೀಯ ಸಂಬಂಧ ಇದ್ದೇ ಇತ್ತು. ವಿಷ್ಣುವರ್ಧನ್, ಅಂಬರೀಶ್ ಮೊದಲಾದವರು ತಮ್ಮ ಜನ್ಮದಿನದಂದು ಆಂಧ್ರಕ್ಕೇ ಬಂದು ಶುಭ ಕೋರುತ್ತಿದ್ದುದನ್ನು ಕೂಡ ಬಾಲಸುಬ್ರಹ್ಮಣ್ಯಂ ನೆನಪಿಸಿಕೊಳ್ಳುತ್ತಾರೆ. ಹಾಗೆ ಆತ್ಮೀಯ ಸಂಬಂಧ ಹೊಂದಿದ್ದವರಲ್ಲಿ ಆರಂಭ ಕಾಲದ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದ ವಿನಯಾ ಪ್ರಸಾದ್ ಕೂಡ ಒಬ್ಬರು. ಅವರು ಸಿನಿಮಾಗಳಲ್ಲಿಯೂ ಜತೆಯಾಗಿ ಅಭಿನಯಿಸಿದ್ದಾರೆ.

ಅದೊಂದು ಕಷ್ಟಕರ ಪರಿಸ್ಥಿತಿಯಲ್ಲೂ ಕೆಲಸ ಮಾಡಿದ್ರು

ಅದೊಂದು ಕಷ್ಟಕರ ಪರಿಸ್ಥಿತಿಯಲ್ಲೂ ಕೆಲಸ ಮಾಡಿದ್ರು

ಎಸ್ ಪಿ ಯವರ ಬಗ್ಗೆ ಮಾತನಾಡುವಂತೆ ವಿನಯಾ ಪ್ರಸಾದ್ ಅವರನ್ನು ಸಂಪರ್ಕಿಸಿದಾಗ ಅವರು ಯಾವುದೋ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಹಾಗಾಗಿ ಅವರ ಪತಿ ಜ್ಯೋತಿ ಪ್ರಕಾಶ್ ಅವರೊಂದಿಗೆ ಮಾತನಾಡಿದಾಗ ಒಂದು ಹೊಸ ವಿಷಯ ತಿಳಿಯಿತು. ಜ್ಯೋತಿ ಪ್ರಕಾಶ್ ಅವರು ಕೂಡ ಆಂಧ್ರದವರಾಗಿರುವ ಕಾರಣ ಎಸ್ ಪಿಬಿ ಎಂದರೆ ಕೌಟುಂಬಿಕವಾಗಿಯೇ ಆತ್ಮೀಯತೆ ಹೊಂದಿದ್ದರಂತೆ. ದಶಕದ ಹಿಂದೆ ತಾವು ಆಡಿಯೋ ಆಲ್ಬಮ್ ಒಂದನ್ನು ಹೊರತಂದಾಗ ಅದರಲ್ಲಿ ಒಂದು ಹಾಡನ್ನು ಎಸ್ಪಿ ಬಿಯವರೇ ಹಾಡಿದ್ದರಂತೆ. ಒಟ್ಟು 13 ಹಾಡುಗಳನ್ನು ತಾವೇ ರಾಗ ಸಂಯೋಜಿಸಿ ಬರೆದಿದ್ದು ಒಂದು ಹಾಡನ್ನು ವಿನಯ ಪ್ರಸಾದ್ ಅವರಿಂದಲೂ ಹಾಡಿಸಿದ್ದರಂತೆ. ಎಸ್ ಬಿಯವರನ್ನು ತಾವು ಸಂಪರ್ಕಕಿಸಿದಾಗ ಆಪರೇಶನ್ ಮಾಡಿಸಿಕೊಂಡು ಆಸ್ಪತ್ರೆಯಲ್ಲಿದ್ದರು. ಅದೇ ವೇಳೆ ಅವರಿಗೆ ಪದ್ಮ ಪ್ರಶಸ್ತಿ ಕೂಡ ಬಂದಿತ್ತು. ಆದರೆ ಅದು ಯಾವುದನ್ನು ಗಮನಿಸದೇ ಡಿಸ್ಚಾರ್ಜ್ ಆದೊಡನೆ ಅವರು ಕೊಟ್ಟ ಮಾತಿನಂತೆ ನನ್ನ ಆಲ್ಬಮ್ ಗೀತೆ ಹಾಡಿಕೊಟ್ಟಿದ್ದರು ಎಂದು ಕೃತಜ್ಞತೆಯಿಂದ ನೆನಪಿಸಿಕೊಂಡರು ಜ್ಯೋತಿ ಪ್ರಕಾಶ್. ಮೊದಲೇ ಹೇಳಿದಂತೆ ಎಸ್ ಪಿ ಬಿ ಎಂದರೆ ಗಾಯಕ ಮಾತ್ರವಲ್ಲ, ಸರಳತೆ ಸಜ್ಜನಿಕೆಯ ಪ್ರತಿರೂಪ.

ಇನ್ನಷ್ಟು ಜನ್ಮದಿನಗಳನ್ನು ಆಚರಿಸೋಣ

ಇನ್ನಷ್ಟು ಜನ್ಮದಿನಗಳನ್ನು ಆಚರಿಸೋಣ

ಹಾಗಾಗಿಯೇ ಹಲವಾರು ಬಾರಿ ತಾವು ಹಾಡಬೇಕಾಗಿದ್ದ ಟ್ರ್ಯಾಕ್ ಕೇಳಿ ಆ ಗೀತೆಯನ್ನು ಹಾಡಿದ ಮೂಲ ಗಾಯಕನ ಕಂಠದಲ್ಲೇ ಆ ಹಾಡು ಇರಲಿ ಎಂದು ಹೇಳಿ ಸಂಗೀತ ನಿರ್ದೇಶಕರನ್ನು ಒಪ್ಪಿಸಿ ಹೊಸ ಗಾಯಕರಿಗೆ ಅವಕಾಶ ಮಾಡಿಕೊಟ್ಟಂಥ ಹೃದಯವಂತ. ಗಾಯಕರನ್ನು ಮಾತ್ರವಲ್ಲ ನಟರನ್ನು ಕೂಡ ಹುರಿದುಂಬಿಸುತ್ತಿದ್ದರು ಎನ್ನುವುದಕ್ಕೆ ತಮಿಳಿನ ಅಲ್ಟಿಮೇಟ್ ಸ್ಟಾರ್ ಅಜಿತ್ ಅವರಿಗೆ ಪ್ರಥಮ ಸಿನಿಮಾ ಅವಕಾಶ ದೊರಕಿಸಿಕೊಟ್ಟು ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿರುವುದೇ ಉದಾಹರಣೆ. ಕನ್ನಡಿಗರ ಪಾಲಿನ ಪ್ರೀತಿಯ ಗಾಯಕ ಎಸ್ ಪಿಬಿಯವರು ಇನ್ನಷ್ಟು ಜನ್ಮದಿನಗಳನ್ನು ಇದೇ ರೀತಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿಯೇ ಕಳೆಯುವಂತಾಗಲಿ ಎಂದು ಹಾರೈಸೋಣ.

English summary
Indian legendary play back singer SP Balasubramanya celebretes his 74th birthday on june 4th. This special we are presenting one beautiful story about Spb. Sp balasubrahmanyam is not only singer he is all rounder. read more...

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more