»   »  ಹೆಡ್‌ಲೈನ್‌ನಲ್ಲೇ ಚಿತ್ರ ಹಣಿಯಬೇಡಿ: ಭಾರ್ಗವ

ಹೆಡ್‌ಲೈನ್‌ನಲ್ಲೇ ಚಿತ್ರ ಹಣಿಯಬೇಡಿ: ಭಾರ್ಗವ

Posted By: *ಜಯಂತಿ
Subscribe to Filmibeat Kannada

ಹೆಡ್‌ಲೈನ್‌ನಲ್ಲೇ ಚಿತ್ರವನ್ನು ಹಣಿಯಬೇಡಿ. ಸಿನಿಮಾದಲ್ಲಿ ಚೆನ್ನಾಗಿಲ್ಲ ಅಂತ ಏನು ಅನ್ನಿಸುವುದೋ ಅದನ್ನೆಲ್ಲಾ ಕೊನೆಯಲ್ಲಿ ಬರೆಯಿರಿ. ಒಳ್ಳೆಯ ಮಾತುಗಳು ಮೊದಲು ಬರಲಿ. ಚಿತ್ರಗಳಿಗೆ ಜನ ಬರುವಂತಾಗಬೇಕಾದರೆ ವಿಮರ್ಶೆಗಳು ಇನ್ನೂ ಸಾಫ್ಟ್ ಆಗಬೇಕು... ಹೀಗೆ ಅಪ್ಪಣೆ ಕೊಡಿಸಿದ್ದು ಹಿರಿಯ ನಿರ್ದೇಶಕ ಭಾರ್ಗವ.

"ಮಳೆಬಿಲ್ಲೇ" ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಲು ಬಂದಿದ್ದ ಅವರು ನೇರವಾಗಿ ಪತ್ರಕರ್ತನೊಬ್ಬನ ಜೊತೆ ನಡೆಸಿದ ವಾಗ್ವಾದವನ್ನು ವೇದಿಕೆ ಮೇಲೂ ಮುಂದುವರಿಸಿದರು. ಸತ್ಯವೆಂದರೆ, ಇತ್ತೀಚಿನ ಅನೇಕ ಕೆಟ್ಟ ಚಿತ್ರಗಳನ್ನು ಅವರು ನೋಡಿರಲಿಲ್ಲ. "ಪುಟ್ಟಣ್ಣ ಕಣಗಾಲ್ ಕೂಡ ಹೆಡ್‌ಲೈನ್‌ನಲ್ಲೇ ಸಿನಿಮಾ ಚೆನ್ನಾಗಿಲ್ಲ ಎಂದು ಬರೆಯಬೇಡಿ" ಅಂತ ವಿನಂತಿಸಿಕೊಳ್ಳುತ್ತಿದ್ದರಂತೆ. ಅದನ್ನು ಹೇಳಿದ್ದೂ ಭಾರ್ಗವ ಅವರೇ!

ಭಾರ್ಗವ ಮಾತು ಮುಗಿದ ಮೇಲೆ ಸಮಾರಂಭದ ಮುಖ್ಯ ಉದ್ದೇಶ ಕುರಿತು ಮಾತುಗಳು ಹೊಮ್ಮಿದವು. ಪತ್ರಕರ್ತ ಎ.ಎಸ್.ಮೂರ್ತಿ, "ಅಷ್ಟೊಂದು ಕೆಟ್ಟ ಚಿತ್ರಗಳು ಬಂದರೆ ಇನ್ನೆಷ್ಟು ಸಾಫ್ಟ್ ಆಗೋಕೆ ಸಾಧ್ಯ?" ಎಂಬುದನ್ನು ಸುತ್ತಿ ಬಳಸಿ ಹೇಳಿದರು. "ಮಳೆಬಿಲ್ಲೇ" ನಿರ್ದೇಶಕ ಮಹೇಶ್ ಸುಖಧರೆ ಈ ಮಾತುಗಳನ್ನು ಸುಮ್ಮನೆ ಕೇಳಿಸಿಕೊಂಡು ಮಾತನ್ನು ಹಳಿಗೆ ಮರಳಿಸಿದರು.

ದೊಡ್ಡ ಅಪಘಾತದಿಂದ ಚೇತರಿಸಿಕೊಂಡು ಮಹೇಶ್ ಸುಖಧರೆ ದೀರ್ಘ ಕಾಲದ ನಂತರ ಮಾಡಿರುವ ಸಿನಿಮಾ ಮಳೆಬಿಲ್ಲೇ. ಆಸ್ಪತ್ರೆಯ ಹಾಸಿಗೆ ಮೇಲೆ ಇರುವಾಗಲೂ ಅವರು ಸಿನಿಮಾ ಬಗ್ಗೆ ಯೋಚಿಸುತ್ತಾರೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಮಣಿಕಾಂತ್ ಕದ್ರಿ ರಾಗ ಸಂಯೋಜನೆ ಮಾಡಿರುವ ಎರಡು ಹಾಡುಗಳನ್ನು ಅವರು ತೋರಿಸಿದರು. "ಚಂದಮಾಮ ಚಂದಮಾಮ" ಎಂಬ ಹಾಡು ನೋಡಲು, ಕೇಳಲು ಸೊಗಸಾಗಿದೆ. ಹಿನ್ನೆಲೆ ಸಂಗೀತದಲ್ಲಿ ತಮ್ಮ ತಂದೆಯ ಸ್ಯಾಕ್ಸಫೋನ್ ವಾದನವನ್ನು ಇದೇ ಮೊದಲ ಸಲ ಬಳಸಿರುವುದನ್ನು ಮಣಿಕಾಂತ್ ಹೆಮ್ಮೆಯಿಂದ ಹೇಳಿಕೊಂಡರು.

ಬಿಳಿ ಬಟ್ಟೆ ತೊಟ್ಟಿದ್ದ ನಾಯಕಿ ಪ್ರಜ್ಞಾ ತೆರೆಮೇಲೆ ತಮ್ಮನ್ನು ತಾವೇ ನೋಡಿಕೊಂಡು ಪುಳಕಿತರಾದರು. ಕ್ಯಾಮೆರಾ ಕಣ್ಣುಗಳು ಸದ್ದುಮಾಡತೊಡಗಿದಷ್ಟೂ ಭಾವಭಂಗಿ ಬದಲಿಸುತ್ತಾ ಕೆನ್ನೆ ಮೇಲೆ ಗುಳಿ ಮೂಡಿಸಿಕೊಂಡು ನಕ್ಕರು.

ಅಂದಹಾಗೆ, ಮಣಿಕಾಂತ್ ಕದ್ರಿ ಕೈಲೀಗ ಪುನೀತ್ ಚಿತ್ರಕ್ಕೆ ಸಂಗೀತ ಕೊಡುವ ಜವಾಬ್ದಾರಿ ಇದೆ. ಜೇಕಬ್ ವರ್ಗೀಸ್ ನಿರ್ದೇಶಿಸಲಿರುವ "ಪೃಥ್ವಿ" ಹೆಸರಿನ ಈ ಚಿತ್ರಕ್ಕೆ ಸೂರಪ್ಪ ಬಾಬು ನಿರ್ಮಾಪಕರು. ಮಣಿಕಾಂತ್ ಸಂತೋಷ ನೋಡಲು ಅವರೂ ಸಮಾರಂಭದಲ್ಲಿ ಹಾಜರಿದ್ದದ್ದು ವಿಶೇಷ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada