»   » ಮಳೆಯಲಿ ಜೊತೆಯಲಿ ಹಾಡು ಸೂಪರ್ ಗುರು!

ಮಳೆಯಲಿ ಜೊತೆಯಲಿ ಹಾಡು ಸೂಪರ್ ಗುರು!

Posted By: *ನಿಸ್ಮಿತಾ
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಸ್ವಂತ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ 'ಮಳೆಯಲಿ ಜೊತೆಯಲಿ' ಚಿತ್ರದಲ್ಲಿ ಹರಿಕೃಷ್ಣ ಮತ್ತೆ ಸುಮಧುರವಾದ ಸಂಗೀತ ನೀಡಿ ತಮ್ಮ ಛಾಪು ತೋರಿಸಿದ್ದಾರೆ. ಜಯಂತ್ ಕಾಯ್ಕಿಣಿ ಮತ್ತು ಕವಿರಾಜ್ ಉತ್ತಮವಾದ ಸಾಹಿತ್ಯ ನೀಡುವ ಮೂಲಕ ಹಾಡಿನ ತೂಕವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಚಿತ್ರದ ಹೆಚ್ಚಿನ ಹಾಡುಗಳನ್ನು ಹಾಡಿಸಲು ಸಂಗೀತ ನಿರ್ದೇಶಕರು ಮತ್ತೆ ಬಾಲಿವುಡ್ ಗಾಯಕ/ಗಾಯಕಿಯರ ಮೊರೆ ಹೋಗಿರುವುದು ಎದ್ದು ಕಾಣುತ್ತದೆ.

'ಹಾಳಾದ್ ಹಾಳಾದ್ ಹಾರ್ಟಲಿ...' ಕವಿರಾಜ್ ಸಾಹಿತ್ಯವಿರುವ ಹಾಡನ್ನು ಗಣೇಶ್ ಅವರೇ ಹಾಡಿದ್ದಾರೆ. ಮುಂಗಾರುಮಳೆ ಚಿತ್ರದ ಜನಪ್ರಿಯ ಡೈಲಾಗ್ ಮೂಲಕ ಶುರುವಾಗುವ ಈ ಹಾಡು ಗಣೇಶ್ ಅಭಿಮಾನಿಗಳನ್ನು ಭ್ರಮನಿರಸನಗೊಳಿಸುವುದಿಲ್ಲ. 'ನೀ ಸನಿಹಕೆ ಬಂದರೆ...' ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ನೀಡಿದ್ದಾರೆ. ಸೋನು ನಿಗಂ ಧ್ವನಿಯಲ್ಲಿ ಬಂದಿರುವ ಹಾಡು ಸುಮಧುರವಾಗಿದ್ದು ಮತ್ತೊಮ್ಮೆ ಕೇಳುವಂತಿದೆ.

'ಶುರುವಾಗಿದೇ...' ಶಾನ್ ಮತ್ತು ಶ್ರೇಯಾ ಘೋಷಾಲ್ ಹಾಡಿರುವ ಹಾಡು ಕಿವಿಗೆ ಇಂಪಾಗಿದ್ದು ಕವಿರಾಜ್ ಸಾಹಿತ್ಯ ಪರ್ವಾಗಿಲ್ಲ. 'ಮಳೆಯಲಿ ಜೊತೆಯಲಿ...' ಹಾಡನ್ನು ವಾಣಿ ಹರಿಕೃಷ್ಣ ಹಾಡಿದ್ದಾರೆ ಮತ್ತು ಕಾಯ್ಕಿಣಿ ಸಾಹಿತ್ಯ ಮೆಚ್ಚುವಂತಿದೆ. 'ಏನು ಹೇಳಬೇಕು...' ಸೋನು ನಿಗಂ ಹಾಡಿರುವ ಈ ಗೀತೆ ಸೋನು ಟ್ರೇಡ್ ಮಾರ್ಕ್ ಹಾಡಿನಂತಿದೆ. ಇಲ್ಲೂ ಕಾಯ್ಕಿಣಿ ಸಾಹಿತ್ಯ ಗಮನ ಸೆಳೆಯುತ್ತದೆ.

'ಮಳೆಯಲಿ ಜೊತೆಯಲಿ...' ಮತ್ತೆ ಸೋನು ಕಂಠಸಿರಿಯಲ್ಲಿ ಬಂದಿದ್ದು ಲೈಟ್ ಸಂಗೀತದ ಮೂಲಕ ಬಂದಿರುವ ಹಾಡಿಗೆ ಕಾಯ್ಕಿಣಿ ಉತ್ತಮ ಸಾಹಿತ್ಯ ನೀಡಿದ್ದಾರೆ. 'ಯಾರೇ ನಿನ್ನ ಮಮ್ಮಿ...' ಹಾಡನ್ನು ಟಿಪ್ಪು ಮತ್ತು ಪ್ರಿಯಾ ಹಿಮೇಶ್ ಹಾಡಿದ್ದಾರೆ. ಕವಿರಾಜ್ ಸಾಹಿತ್ಯ ನೀಡಿರುವ ಹಾಡಿಗೆ ಸಂಗೀತ ನಿರ್ದೇಶಕರು ಮೆಲೋಡಿಯಸ್ ಟಚ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವಿ ಹರಿಕೃಷ್ಣ ಸಂಗೀತ ತಾಳಮೇಳ ತಪ್ಪಿಲ್ಲ. ಪ್ರೀತಂ ಗುಬ್ಬಿ ನಿರ್ದೇಶಿಸಿರುವ ಈ ಚಿತ್ರವನ್ನು ಶಿಲ್ಪಾ ಗಣೇಶ್ ನಿರ್ಮಿಸಿದ್ದಾರೆ. ಧ್ವನಿಸುರುಳಿ ಕೊಳ್ಳುವುದರಿಂದ ಜೇಬಿಗೇನು ಮೋಸವಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada