»   » ಅಮೆರಿಕಕ್ಕೆ ಲಗ್ಗೆ ಇಟ್ಟ ಕನ್ನಡ ಪ್ರತಿಭೆ ಸೌಮ್ಯ

ಅಮೆರಿಕಕ್ಕೆ ಲಗ್ಗೆ ಇಟ್ಟ ಕನ್ನಡ ಪ್ರತಿಭೆ ಸೌಮ್ಯ

Posted By:
Subscribe to Filmibeat Kannada

ಹಿರಿಯ ಗಾಯಕಿ ಬಿ.ಕೆ ಸುಮಿತ್ರಾ ಅವರ ಪುತ್ರಿ ಸೌಮ್ಯ ರಾವ್ ಅವರು ಉತ್ತರ ಅಮೆರಿಕದ ಏಜೆನ್ಸಿಯೊಂದಿಗೆ ಸಹಿ ಹಾಕುವ ಮೂಲಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸ್ವರ ಮಾಧುರ್ಯ ಹರಿಸಲು ಸಜ್ಜಾಗಿದ್ದಾರೆ. ದಕ್ಷಿಣ ಏಷ್ಯದ ಗಾನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ, ಅಮೆರಿಕದಲ್ಲಿ ಸೂಕ್ತ ವೇದಿಕೆ ಕಲ್ಪಿಸುವ ಕಾಯಕದಲ್ಲಿ ಇ ಇ ಜಿ ಸಂಸ್ಥೆ ತೊಡಗಿಸಿಕೊಂಡಿದೆ.

ತಮ್ಮ ವಿಶಿಷ್ಟ ಬಗೆಯ ಗಾಯನ ಶೈಲಿಯಿಂದ ಬಾಲಿವುಡ್ ನಲ್ಲಿ ಸೌಮ್ಯ ಬೇಡಿಕೆಯ ಗಾಯಕಿಯಾಗಿದ್ದರೂ, ಮೊಟ್ಟಮೊದಲು ಬೆಳಕಿಗೆ ಬಂದಿದ್ದು ತೆಲುಗು ಹಾಡೊಂದರ ಮೂಲಕ ಎಂದರೆ ಆಶ್ಚರ್ಯವಾಗಬಹುದು. ನಾಗಾರ್ಜುನ , ತಬೂ ಅಭಿನಯದ ನಿನ್ನೆ ಪೆಳ್ಳಾಡತಾ ಚಿತ್ರದ 'ಗ್ರೀಕೂ ವೀರುಡು'(ಕನ್ನಡದಲ್ಲಿ ರಾಜಾ ರಾಜಾ ಹಾಡು, ಚಿತ್ರ : ಪ್ರೀತ್ಸೋದ್ ತಪ್ಪಾ) ಹಾಡು ಅದ್ಭುತ ಯಶಸ್ಸು ತಂದು ಕೊಟ್ಟಿತು. 7 ವರ್ಷಕ್ಕೆ ಅಮ್ಮನೊಡನೆ ವೇದಿಕೆ ಹಂಚಿಕೊಂಡು ಗಾನಲೋಕದಲ್ಲಿ ಜೀವನ ಆರಂಭಿಸಿದ ಸೌಮ್ಯ ಎಲ್ಲ ಬಗೆಯ ಹಾಡುಗಳನ್ನು ಹಾಡುವ ಪರಿಣತಿ ಪಡೆದಿದ್ದಾರೆ.

ತಮ್ಮ ಗಾನ ಪ್ರತಿಭೆಯ ಮೂಲಕ ಎ ಆರ್ ರೆಹಮಾನ್, ಸಂದೀಪ್ ಚೌಟ, ಇಳಯರಾಜ, ದೇವಾ, ವಿದ್ಯಾಸಾಗರ್, ಹ್ಯಾರಿಸ್ ಜಯರಾಜ್, ಹಂಸಲೇಖ ಸೇರಿದಂತೆ ಪ್ರಮುಖ ಸಂಗೀತ ನಿರ್ದೇಶಕ ಮನ ಗೆದ್ದಿದ್ದಾರೆ. ಬಾಲಿವುಡ್ ಗೆ ಕಾಲಿಟ್ಟ ಸೌಮ್ಯ , ಹಿಂದುರುಗಿ ನೋಡಿದ್ದೇ ಇಲ್ಲ. ಜಂಗಲ್ , ಧಮ್, ಸಮಯ್, ಬಂಟಿ ಔರ್ ಬಬ್ಲಿ, ಫ್ಯಾಮಿಲಿ, ಕ್ರೇಜಿ4, ವೆಲ್ ಕಮ್ ಸೇರಿದಂತೆ ಹತ್ತು ಹಲವು ಚಿತ್ರಗಳಲ್ಲಿ ಹಾಡಿದ್ದಾರೆ.

ಸೋನುನಿಗಮ್ ತಂಡದಲ್ಲಿ ಖಾಯಂ ಗಾಯಕಿಯಾಗಿ ಲೈವ್ ಮ್ಯೂಸಿಕ್ ಕಾರ್ಯಕ್ರಮಗಳನ್ನು ಕೊಡುತ್ತಾ ಬಂದ ಸೌಮ್ಯ ಅವರಿಗೆ, ಅಮೆರಿಕದಲ್ಲಿ ಅವಕಾಶ ಸಿಗಲು ಪ್ರತಿಭೆಯ ಜೊತೆಗೆ ಸೋನು ನಿಗಂ ಅವರು ಕಾರಣ ಎನ್ನಬಹುದು. ಇದನ್ನು ಮನಃಪೂರ್ವಕವಾಗಿ ಸೌಮ್ಯ ಕೂಡಒಪ್ಪುತ್ತಾರೆ. ಸಂಗೀತ ಕ್ಷೇತ್ರದಲ್ಲಿ ತಮ್ಮ ಬೆಳವಣಿಗೆಗೆ ಹಿರಿಯ ಗಾಯಕರಾಗಿ ಸೋನು ನಿಗಂ ಬಹಳಷ್ಟು ಕಲಿಸಿಕೊಟ್ಟಿದ್ದಾರೆ. ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತದ ಫ್ಯೂಷನ್ ಸಂಗೀತಕ್ಕೆ ನನ್ನನ್ನು ಆರಿಸಲು ಸೋನು ಅವರೇ ಕಾರಣ ಎನ್ನುತ್ತಾರೆ ಸೌಮ್ಯ.ಮುಂಬರುವ ದಿನಗಳಲ್ಲಿ ಅಮೆರಿಕದ ನಿರ್ಮಾಪಕರಿಗಾಗಿ ಫ್ಯೂಷನ್ ಗೀತೆಗಳು, ಆಂಗ್ಲ ಸಾಹಿತ್ಯ ರಚಿಸಿ ಹಾಡುವ ಅವಕಾಶ ಲಭಿಸಲಿದ್ದು, ಸೌಮ್ಯ ಅವರ ಪ್ರತಿಭೆಯನ್ನು ಒರೆಗೆ ಹಚ್ಚುವ ಸಮಯ ಬಂದಿದೆ ಎನ್ನಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada