»   » ಕನ್ನಡಕ್ಕೆ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ

ಕನ್ನಡಕ್ಕೆ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ

Posted By:
Subscribe to Filmibeat Kannada

ಖ್ಯಾತ ಹಿನ್ನೆಲೆ ಗಾಯಕಿ ಮೆಲೊಡಿ ಕ್ವೀನ್ ಆಶಾ ಭೋಂಸ್ಲೆ ಎರಡನೇ ಬಾರಿಗೆ ಕನ್ನಡದಲ್ಲಿ ಹಾಡಿದ್ದಾರೆ. ಆಶಾರನ್ನು ಕನ್ನಡಕ್ಕೆ ಮತ್ತೆ ಕರೆತಂದ ಶ್ರೇಯಸ್ಸು ಸಂಗೀತ ನಿರ್ದೇಶಕ ವೀರ ಸಮರ್ಥ್ ಅವರಿಗೆ ಸಲ್ಲುತ್ತದೆ. ಜೊತೆಗಾರನಿಲ್ಲ ಜೊತೆಯಾರು ಇಲ್ಲ ಜೊತೆಗಾರ ನಿನಗೆ ನಾ ಕಾದಿರುವೆ...ಎಂಬ ಹಾಡು ಆಶಾ ಅವರ ಸುಮಧುರ ಕಂಠದಿಂದ ಹೊರಬಂದಿದೆ. 1973ರಲ್ಲಿ ಬಿಡುಗಡೆಯಾಗಿದ್ದ ರಾಜ್ ಮತ್ತು ಭಾರತಿ ಅಭಿನಯದ ಚಿತ್ರ ದೂರದ ಬೆಟ್ಟದಲ್ಲಿ ಮೊದಲ ಬಾರಿಗೆ ಹಾಡಿದ್ದರು.

ರಾಘವೇಂದ್ರ ಕಾಮತ್ ಬರೆದಿರುವ ಈ ಹಾಡನ್ನು ಮುಂಬೈನ ಸ್ಪೆಕ್ಟ್ರಲ್ ಹಾರ್ಮೊನಿ ಸ್ಟುಡಿಯೋದಲ್ಲಿ ಧ್ವನಿ ಮುದ್ರಿಸಿಕೊಳ್ಳಲಾಯಿತು. ಈ ಹಾಡನ್ನು ಎರಡುವರೆ ಗಂಟೆಗಳ ಕಾಲ ಆಶಾ ಅವರು ಹಾಡಿದರು ಎಂದು ವೀರ ಸಮರ್ಥ್ ತಿಳಿಸಿದ್ದಾರೆ.

ಇದೊಂದು ಕ್ಲಬ್ ಡ್ಯಾನ್ಸ್ ಹಾಡಾಗಿದ್ದು ಈ ಹಾಡನ್ನು ಯಾವ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ವೀರ ಸಮರ್ಥ್ ಗುಟ್ಟಾಗಿ ಇಟ್ಟಿದ್ದಾರೆ. ಪ್ರಸ್ತುತ ಬಸವಾ ರೆಡ್ಡಿ ನಿರ್ಮಿಸುತ್ತಿರುವ 'ಮಂದಹಾಸ'ಚಿತ್ರಕ್ಕೆ ವೀರ ಸಮರ್ಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಈ ಕ್ಲಬ್ ಡಾನ್ಸ್ ಹಾಡಿಗಾಗಿ ಸೂಕ್ತ ಕ್ಲಬ್ ಡಾನ್ಸರ್ ಅವರನ್ನು ಹುಡುಕುತ್ತಿರುವುದಾಗಿ ಮೂಲಗಳು ತಿಳಿಸಿವೆ. ಈ ಹಿಂದೆ ಲತಾ ಮಂಗೇಷ್ಕರ್ ಅವರು ಸಂಗೊಳ್ಳಿ ರಾಯಣ್ಣ ಚಿತ್ರಕ್ಕಾಗಿ ಬೆಳ್ಳನೆ ಬೆಳಕಾಯಿತು...ಹಾಡನ್ನು ಹಾಡಿದ್ದರು.

(ಸ್ಪಷ್ಟನೆ : ದೂರದ ಬೆಟ್ಟ ಚಿತ್ರದಲ್ಲಿ ಆಶಾ ಭೋಂಸ್ಲೆ ಮೊದಲ ಬಾರಿ ಹಾಡಿದ ಸಂಗತಿಯನ್ನು ನಮ್ಮ ಗಮನಕ್ಕೆ ತಂದ ಓದುಗರಿಗೆ ಧನ್ಯವಾದಗಳು. ಲೇಖನದಲ್ಲಿ ತಿದ್ದುಪಡಿ ಮಾಡಲಾಗಿದೆ.)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada