»   »  'ಯಾರೆ ನೀ ದೇವತೆ'ಸಿಡಿ ಬಿಡುಗಡೆ ಮಾಡಿದ ಎಚ್ಡಿಕೆ

'ಯಾರೆ ನೀ ದೇವತೆ'ಸಿಡಿ ಬಿಡುಗಡೆ ಮಾಡಿದ ಎಚ್ಡಿಕೆ

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ ಅವರು 'ಯಾರೆ ನೀ ದೇವತೆ' ಚಿತ್ರದ ಧ್ವನಿಸುರುಳಿಯನ್ನು ಗುರುವಾರ(ನ.6) ಬೆಲ್ ಹೋಟೆಲ್ ನಲ್ಲಿ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಅವರು ಔಪಚಾರಿಕವಾಗಿ 'ಯಾರೆ ನೀ ದೇವತೆ' ಸಿಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಕುಮಾರ್ ಎಂಬುವವರ ಚೊಚ್ಚಲ ಪ್ರಯತ್ನದ ಫಲವೇ ಯಾರೇ ನೀ ದೇವತೆ. ಚಿತ್ರದ ನಿರ್ಮಾಪಕರಷ್ಟೇ ಅಲ್ಲ ನಾಯಕ ನಟ ಅವರೇ. ಹೊಸ ಪರಿಚಯ ಸಂಗೀತಾ ಚಿತ್ರದ ನಾಯಕಿ. 'ಚಂಡ' ಚಿತ್ರದಲ್ಲಿ ಚನ್ನ ಎಂಬ ಸಣ್ಣ ರೌಡಿ ಪಾತ್ರ ಮಾಡಿದ ಅನುಭವ ಕುಮಾರ್ ಅವರಿಗಿದೆ. ಚಿತ್ರವನ್ನು ನಾಗೇಂದ್ರ ಅರಸ್ ನಿರ್ದೇಶಿಸುತ್ತಿದ್ದಾರೆ.

'ಹಾರ್ಟ್ ಬೀಟ್ಸ್' ಮತ್ತು 'ರಾಖಿ' ಚಿತ್ರಗಳು ಈಗಾಗಲೇ ನಾಗೇಂದ್ರ ಅರಸ್ ನಿರ್ದೇಶನದ ಚಿತ್ರಗಳು. ಚಿತ್ರದ ಸಾಹಸ ಪ್ರಧಾನ ದೃಶ್ಯಗಳನ್ನು ಕನಕಪುರದ ರಾಮದೇವ ಬೆಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಹಿಂದಿಯ 'ಶೋಲೆ' ಚಿತ್ರವನ್ನು ಇಂತಹ ಅಪಾಯಕಾರಿ ಸ್ಥಳದಲ್ಲಿ ಚಿತ್ರೀಕರಿಸಿಲ್ಲ. ಸಸ್ಪೆನ್ಸ್ ಅಂಶಗಳೊಂದಿಗೆ ಹಾಸ್ಯಕ್ಕೂ ಪ್ರಾಧಾನ್ಯತೆ ನೀಡಲಾಗಿದೆ ಎಂದು ನಾಗೇಂದ್ರ ಅರಸ್ ತಿಳಿಸಿದರು.

ಈಗಾಗಲೇ 35 ದಿನಗಳ ಚಿತ್ರೀಕರಣ ಮುಗಿದಿದೆ. ಹಾಡು ಮತ್ತು ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿ ಇದ್ದು ಕಾಸರಗೋಡು ಮತ್ತು ಫಿಲ್ಮ್ ಸಿಟಿಯಲ್ಲಿ ಉಳಿದ ಭಾಗವನ್ನು ಚಿತ್ರೀಕರಿಸಲಾಗುತ್ತದೆ ಎಂದು ಅರಸ್ ವಿವರ ನೀಡಿದರು. ಚಿತ್ರಕ್ಕೆ ವೆಂಕಟ್ ನಾರಾಯಣ್ ಅವರ ಸಂಗೀತ ಇದೆ.

ನಾಗೇಂದ್ರ ಅರಸ್ ಅವರೊಂದಿಗೆ ಗಿರಿ ದಿನೇಶ್ ಅವರ ಹಾಸ್ಯ ಚಿತ್ರಕ್ಕಿದೆ. ಕತೆ, ಚಿತ್ರಕತೆ, ಸಂಕಲನದ ಜತೆಗೆ ನಿರ್ದೇಶನದ ಜವಾಬ್ದಾರಿ ನಾಗೇಂದ್ರ ಅರಸ್ ಅವರದು. ಸರಳ, ಸುಂದರ,ಸದಭಿರುಚಿಯ ಚಿತ್ರ ಇದಾಗಿದ್ದು ನವೆಂಬರ್ ಕೊನೆಗೆ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ನಿರ್ಮಾಪಕರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada