»   »  ಕನ್ನಡದಲ್ಲಿ ಹೊಸ ಆಡಿಯೋ ಕಂಪನಿ ಉದಯ

ಕನ್ನಡದಲ್ಲಿ ಹೊಸ ಆಡಿಯೋ ಕಂಪನಿ ಉದಯ

Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಧ್ವನಿಸುರುಳಿ ಕಂಪನಿಗಳು ಸಾಕಷ್ಟಿವೆ. ಆದರೂ ಪೈರಸಿ ಹಾವಳಿಯನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಾಗಿಲ್ಲ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಕ್ಯಾಸೆಟ್-ಸಿಡಿಗಳನ್ನು ಮಾರುಕಟ್ಟೆಗೆ ತರುವ ಪ್ರಯತ್ನ ಸತತವಾಗಿ ನಡೆಯುತ್ತಲೇ ಇದೆ. ಈ ಉದ್ದೇಶವನ್ನು ಪೂರೈಸುವ ದೃಷ್ಟಿಯಿಂದ ಹಾಗೂ ಪೈರಸಿಯನ್ನು ಸಂಪೂರ್ಣವಾಗಿ ಮಟ್ಟಹಾಕುವ ಉದ್ದೇಶದಿಂದಲೇ ಮತ್ತೊಂದು ಕ್ಯಾಸೆಟ್ ಕಂಪನಿ ಉದಯಿಸಿದೆ.

15 ವರ್ಷಗಳಿಂದ ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ, ಗುರುತಿಸಿಕೊಂಡಿದ್ದ ಸಹಾಯ್‌ರಾಜ್ ಈ ಸಾಹಸಕ್ಕೆ ಕೈಹಾಕಿ, ಆಡಿಯೋ-9 ಕಂಪನಿ ಸ್ಥಾಪಿಸಿದ್ದಾರೆ. ಕಳೆದ ಶುಕ್ರವಾರ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಈ ಸಂಸ್ಥೆಯಲ್ಲಿ ಜ್ಯೋತಿ ಬೆಳಗುವುದರ ಮೂಲಕ ಕೆ.ಆರ್.ಪುರಂನ ಶಾಸಕರಾದ ಕೋಟೆ ನಂದೀಶ್ ರೆಡ್ಡಿ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ 'ನನ್ನವನು' ಮತ್ತು 'ಅ' ಚಿತ್ರಗಳ ಧ್ವನಿಸುರುಳಿಗಳ ಬಿಡುಗಡೆ ಕೂಡ ನಡೆಯಿತು.

ಸೂಪರ್‌ಸ್ಟಾರ್ ಉಪೇಂದ್ರ ಅವರು 'ನನ್ನವನು' ಚಿತ್ರದ ಸಿ.ಡಿ.ಗಳನ್ನು, ಕೋಟೆ ನಂದೀಶ್ ರೆಡ್ಡಿಯವರು ಕ್ಯಾಸೆಟ್‌ಗಳನ್ನು ಬಿಡುಗಡೆ ಮಾಡಿದರು. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯ್ ರಾಜ್ ಈ ಸಂಸ್ಥೆಯ ಮೂಲಕ ಚಲನಚಿತ್ರಗಳಲ್ಲದೇ ಜಾನಪದ ಗೀತೆಗಳು, ರಂಗಗೀತೆಗಳು, ಹಸೆಮಣೆ ಹಾಡುಗಳು, ಭಾವಗೀತೆಗಳನ್ನು ಆಡಿಯೋ-9 ಮೂಲಕ ಹೊರತರಲಿದ್ದಾರೆ. ತಮ್ಮ ಕಂಪನಿ ಚಲನಚಿತ್ರ ಗೀತೆಗಳಿಗಷ್ಟೇ ಮೀಸಲಾಗಬಾರದು ಎಂಬುದು ಅವರ ಉದ್ದೇಶ.

''ಸಹಾಯ್‌ರಾಜ್ ಬಹಳ ದಿನಗಳಿಂದ ನನ್ನ ಸ್ನೇಹಿತ. 9ಚಿತ್ರರಂಗಕ್ಕೆ ಲಕ್ಕಿ ನಂಬರ್. ಇವರಿಗೂ ಲಕ್ಕಿ ಆಗಲಿ. ನಾಯಕ ಪ್ರಜ್ವಲ್ ಅಪ್ಪನನ್ನು ಮೀರಿಸುವಂತಾಗಲಿ. ಆಡಿಯೋ-9 ಕನ್ನಡ ಚಿತ್ರೋದ್ಯಮಕ್ಕೆ ಸಹಾಯವಾಣಿಯಾಗಲಿ'' ಎಂದು ಉಪೇಂದ್ರ ಹಾರೈಸಿದರು. ಸಹಾಯ್‌ರಾಜ್ ಚಿತ್ರರಂಗದಲ್ಲಿಯೇ ಅಲ್ಲದೇ, ಬಿ.ಜೆ.ಪಿ.ಯಲ್ಲಿಯೂ ಉತ್ತಮ ಕಾರ್ಯಕರ್ತನಾಗಿ ದುಡಿಯುತ್ತಿದ್ದಾರೆ. ಅವರು ಸ್ಥಾಪಿಸಿದ ಆಡಿಯೋ-9 ಅವರಿಗೆ ದೊಡ್ಡ ಹೆಸರು ತಂದುಕೊಡಲಿ ಎಂದು ಶಾಸಕ ನಂದೀಶ್ ರೆಡ್ಡಿ ಶುಭ ಹಾರೈಸಿದರು.

ನಿರ್ಮಾಪಕ ತುಳಸಿ ಗೋಪಾಲ್, ನಿರ್ದೇಶಕ ಶ್ರೀನಿವಾಸ ರಾಜು, ನಟ ದೇವರಾಜ್, ನಿರ್ಮಾಪಕ ರಾಮು ಸಮಾರಂಭದಲ್ಲಿ ಹಾಜರಿದ್ದರು. ನಂತರ 'ಅ' ಚಿತ್ರದ ಸಿ.ಡಿ.ಗಳನ್ನು ಸಚಿವೆ ಶೋಭಾ ಕರಂದ್ಲಾಜೆ ಬಿಡುಗಡೆ ಗೊಳಿಸಿದರೆ, ಬಾದಾಮಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಕ್ಯಾಸೆಟ್ ಬಿಡುಗಡೆ ಮಾಡಿದರು. ಚಿತ್ರ ನಿರ್ಮಾಣದ ಹಿಂದಿರುವವರ ನೋವು ನಮಗೆ ಗೊತ್ತಾಗಲ್ಲ. ಹೊಸದಾಗಿ ಬಂದವರ ಕಾತುರತೆ, ತುಡಿತ ಅವರಿಗೇ ಗೊತ್ತು. ಕಳೆದ ವರ್ಷದಿಂದ ಚಿತ್ರರಂಗ ಹಿಂದೆಂದೂ ಕಂಡರಿಯದ ಸೋಲನ್ನು ಅನುಭವಿಸುತ್ತಿದೆ. ಸರ್ಕಾರ ಚಿತ್ರರಂಗದ ಸಮಸ್ಯೆಗಳನ್ನು ಬಗೆಯರಿಸುವಲ್ಲಿ ಪ್ರಯತ್ನಿಸುತ್ತಿದೆ. ಡಾ.ರಾಜ್ ಅವರು ಎಂದೂ ಸಮಾಜಕ್ಕೆ ಕೆಟ್ಟ ಸಂದೇಶ ಕೊಡುವ ಚಿತ್ರಗಳಲ್ಲಿ ಅಭಿನಯಿಸಿದವರಲ್ಲ. ಅವರು ಅಭಿನಿಯಿಸಿದಂಥಾ ಚಿತ್ರಗಳು ಕನ್ನಡದಲ್ಲಿ ಇನ್ನೂ ಹೆಚ್ಚು ನಿರ್ಮಾಣವಾಗಬೇಕು. ಚಲನಚಿತ್ರಗಳನ್ನು ನೋಡಿಯೇ ನಮ್ಮ ಮಕ್ಕಳು, ಯುವಕರು ಪ್ರಭಾವಿತರಾಗುತ್ತಾರೆ ಎಂದು ಪಟ್ಟಣಶೆಟ್ಟಿ ನುಡಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಧ್ವನಿಸುರುಳಿಯಾಗಿ ರಜನಿಕಾಂತ್ ಕನ್ನಡ ಕೃತಿ!
ಶತಕ ಬಾರಿಸಿದ ಅಂಬಾರಿ; ರು.5 ಕೋಟಿ ಲಾಭ!
ಸದ್ಯಕ್ಕೆ ಬೀಸೋದೊಣ್ಣೆಯಿಂದ ಪಾರಾದ ಶ್ರುತಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada