For Quick Alerts
  ALLOW NOTIFICATIONS  
  For Daily Alerts

  ಸೈಕೋ ಚಿತ್ರದ ಗುಂಗುಡುವ ಹಾಡುಗಳ ಮಾಯಗಾರ

  By Staff
  |

  ನಿನ್ನ ಪೂಜೆಗೆ ಬಂದೆ ಮಹದೇಶ್ವರ..ನಮ್ಮ ಕರುಣದಿ ಕಾಯೋ ಏ ಶಂಕರಾ... ಈ ಹಾಡನ್ನು ಗುನುಗದ ಯುವಜನತೆ ಈಗ ಬೆಂಗಳೂರಿನಲ್ಲಿ ಸಿಗುವುದೇ ಕಷ್ಟ. ಈ ಹಾಡು ಯಾವ ಕ್ಯಾಟಗರಿಗೆ ಸೇರುತ್ತೇ ಎಂದು ನಿರ್ಣಯಿಸಿ ಹೇಳುವುದೂ ಎಷ್ಟು ಕಷ್ಟವೋ, ಇದರ ಹಾಡುಗಾರನನ್ನು ಏಕೆ ಜನ ಮೆಚ್ಚುತ್ತಿದ್ದಾರೆ ಎಂದರೆ ಸರಿಯುತ್ತರ ಮಹದೇಶ್ವರನಿಗೂ ತಿಳಿದಿಲ್ಲ. ಹೌದು.. ಚಿತ್ರಸಾಹಿತಿ, ಸಂಗೀತಗಾರ ಅಪ್ಪಟ ಕನ್ನಡಿಗ ರಘು ದೀಕ್ಷಿತ್ ಯೋಜನೆಗಳೇ ಹಾಗೆ.

  *ಮಹೇಶ್ ಮಲ್ನಾಡ್

  ಸೈಕೋ ಚಿತ್ರದ ಹಾಡಿನ ಮೂಲಕ ಕನ್ನಡಿಗರ ಮನೆಮಾತಾಗಿರುವ ಈತನಿಗೆ. ಸಂಗೀತವೆಂದರೆ ಒಂದು ಬಗೆಯ ಹುಚ್ಚು. ಕಲಿತಿದ್ದು ಮೈಕ್ರೊಬಯಾಲಜಿ ಅದೂ ಚಿನ್ನದ ಪದಕ ಪಡೆದ ಗೌರವ. ಭರತನಾಟ್ಯದಲ್ಲಿ ವಿದ್ವತ್ ಪದವಿ. ಮೈಸೂರಿನಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದು ಉದ್ಯೋಗ ಅರಸುತ್ತಾ ಇದ್ದ ಈ ಸ್ವತಂತ್ರ ಜೀವಿಗೆ, ಹೊಸ ಬಗೆಯ ಕಲ್ಪನೆ ಮೂಡಿದ್ದೇ ತಡ. ಸ್ವಂತ ಪರಿಶ್ರಮದಿಂದ ಗಿಟಾರ್ ನುಡಿಸಲು ಕಲಿತು, ಸಂಗೀತದಲ್ಲಿ ಶಾಸ್ತ್ರೀಯ, ಜನಪದ, ಪಾಶ್ಚಾತ್ಯ ಎಂದು ಭೇದ ತೋರಿಸದೆ, ಎಲ್ಲಾ ಬಗೆಯ ಸಂಗೀತವನ್ನು , ಸಾಹಿತ್ಯವನ್ನು ಮುಕ್ತವಾಗಿ ಜನತೆಗೆ ನೀಡುವ ಆಲೋಚನೆ ಮಾಡಿ ಹುಟ್ಟು ಹಾಕಿದ ತಂಡವೇ 'ಅಂತರಾಗ್ನಿ' ಇವರ ಹೃದಯದ ಒಳಗಿನ ಸಂಗೀತದ ಜ್ವಾಲೆ.

  ಸಂಗೀತ ಮತ್ತು ಸ್ವತಂತ್ರತೆ:
  ಅಂತರಾಗ್ನಿ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಾ ಜನಮನ್ನಣೆ ಗಳಿಸಿದರು. ಬ್ರಯಾನ್ ಆಡಮ್ಸ್ , ಯುವದಸರಾ ಮೇಳ, ಖ್ಯಾತ ಐಐಟಿ, ಐಐಎಂ ಗಳಲ್ಲಿ ಸಂಗೀತದ ರಸದೌತಣ ನೀಡಿರುವ ಇವರ ತಂಡ, ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮದಲ್ಲಿ , ಯುರೋಪಿನ ಖ್ಯಾತ ರೇಡಿಯೊ rbtf fM 21ನಲ್ಲಿ ಸಂಗೀತದ ಇಂಪನ್ನು ನೀಡಿದೆ. ಸುಮಾರು 8 ವರ್ಷಗಳಿಂದ 250ಕ್ಕೂ ಅಧಿಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ ಹಿರಿಮೆ ಹೊಂದಿದ್ದಾರೆ. Indo World Folk Rock. ಎಂಬ ವಿನೂತನ ಶೈಲಿಯ ಗಾಯನಕ್ಕೆ ಹೆಸರುವಾಸಿಯಾದ ರಘು ಅವರು, ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ, ಅರೇಬಿಕ್ ಸಂಗೀತದ ಹಲವು ಮಜಲುಗಳನ್ನು ಸಂಮಿಶ್ರಣ ಮಾಡಿ ಹೊಸ ಬಗೆಯಲ್ಲಿ ಜನರಿಗೆ ಮುದ ನೀಡುತ್ತಿದ್ದಾರೆ. ಇವರು ಬರೆದು , ಸಂಗೀತ ಸಂಯೋಜನೆ ಮಾಡಿರುವ ಹಾಡುಗಳಲ್ಲಿ ಸೂಫಿ, ಜನಪದ ಹಾಗೂ ಶಾಸ್ತ್ರೀಯ ರಾಗಗಳ ಮಿಶ್ರಣವನ್ನು ಕೇಳಬಹುದು.

  ವಸುದೈವ ಕುಟುಂಬಕಂ
  ಇವರ ತಂಡದಲ್ಲಿ ಈಗ ರಘು ಅಲ್ಲದೆ , ವಿಜಯ್ ಜೋಸೆಫ್ (ಗಿಟಾರ್), ಡರ್ಬುಕಾ ಶಿವಾ(ಡ್ರಮ್ಮರ್), ಜಿತಿನ್ ದಾಸ್ (ಪಿಟೀಲು), ಗೌರವ್ ವಾಜ್(ಗಿಟಾರ್) ಸಾಥ್ ನೀಡುತ್ತಿದ್ದಾರೆ. ವಿಶೇಷವೆಂದರೆ ಇವರೆಲ್ಲದೂ ರಘುವಿನಂತೆ ಸ್ವಂತ ಶ್ರಮದಿಂದ ಸಂಗೀತ ಕಲಿತು, ಹೊಸತನದ ಹುಡುಕಾಟದಲ್ಲಿರುವವರು. ಬೇರೆ ಬೇರೆ ಮತಗಳಿಗೆ ಸೇರಿದ, ದೇಶದ ವಿವಿಧೆಡೆಗಳಿಂದ ಬಂದ, ವಿಭಿನ್ನ ಸಂಸ್ಕೃತಿಯುಳ್ಳ ಯುವಕರು ಒಂದೆಡೆ ಸೇರಿ ಸಂಗೀತದ ಮೂಲಕ ಸ್ವತಂತ್ರತೆಯ ಕದ ತಟ್ಟುತ್ತಿರುವವರು. ಈ ಮುಂಚೆ ಬ್ರೂಸ್ ಲೀ ಮಣಿ, ಜೂಡ್ ಡೇವಿಡ್, ಅನಿರ್ಬನ್ ಚಕ್ರವರ್ತಿ, ಸಂದೀಪ್ ವಶಿಷ್ಠ, ರಹೂಲ್ ಪಂಪೊಳ್ಳಿ ತಂಡದಲ್ಲಿ ಕ್ರಿಯಾಶೀಲರಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ, ಈಗ ಇವರ ತಂಡವನ್ನು ತೊರೆದಿದ್ದಾರೆ. ಸಂಗೀತದಲ್ಲಿ ಆಸಕ್ತಿಯಿರುವ ಯಾರಾದರೂ ಸರಿ ಅಂತರಾಗ್ನಿ ತಂಡವನ್ನು ಸೇರಲು ಅಡ್ಡಿಯಿಲ್ಲ. ಗುತ್ತಿಗೆ ಆಧಾರದ ಮೇಲೆ ಕೈ ಇಷ್ಟು ಹಣ ಕೂಡ ಸಿಗುತ್ತದೆ. ಆಸಕ್ತರು ರಘುವಿಗೆ ಒಂದು ಇಮೇಲ್ ಕಳಿಸಿ

  ಡಿಸ್ಕೋಗ್ರಾಫಿ
  ಮೈಸೂರು ಸೆ ಆಯಿ(ಹಿಂದಿ), ಗುಡುಗುಡಿಯ ಸೇದಿ ನೋಡೊ(ಕನ್ನಡ) ನೋ ಮ್ಯಾನ್ ಎವರ್ ಲವ್ ಯೂ, ಲೈಕ್ ಐ ಡು (ಹಿಂದಿ/ಆಂಗ್ಲ), ಹೇ ಭಗವಾನ್ (ಹಿಂದಿ), ಅಂತರಾಗ್ನಿ(ಹಿಂದಿ) , ಸೋರುತ್ತಿಹುದು ಮನೆಯ ಮಾಳಿಗಿ(ಕನ್ನಡ), ಇನ್ ಮುಂಬಯಿ ವೈಟಿಂಗ್ ಫಾರ್ ಮಿರಾಕಲ್ (ಹಿಂದಿ/ಆಂಗ್ಲ) ಗೀತೆಗಳಲ್ಲಿ ಜನಪದ, ರಾಕ್ ಶೈಲಿ, ಸಂತ ಶಿಶುನಾಳ ಷರೀಫರ ಜನಪ್ರಿಯ ಗೀತೆಗಳನ್ನು ಕೇಳಬಹುದು. ಇತ್ತೀಚೆಗೆ ಬಿಡುಗಡೆಯಾದ ರಘು ಅವರ ಪ್ರಥಮ ಧ್ವನಿಸುರಳಿಯನ್ನು ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕರಾದ ವಿಶಾಲ್ ಶೇಖರ್, ಕೇಳಿ ಮೆಚ್ಚುಗೆ ಸೂಚಿಸಿದ್ದಾರೆ.

  ಕೊನೆಯದಾಗಿ: ಕನ್ನಡ ಸಂಗೀತರಂಗದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ ಎಂಬುದಕ್ಕೆ ಸಾಕ್ಷಿಯಂತಿರುವ ರಘು ಅವರು ನಮ್ಮ ಗಾಂಧಿನಗರದ ಮಂದಿಯ ಕಣ್ಣಿಗೆ ಬಿದ್ದಿದ್ದು, ಸೈಕೋ ಚಿತ್ರದ ಮೂಲಕ. ಈ ಚಿತ್ರದ ನಾಯಕ, ನಾಯಕಿ ಯಾರು ಎಂದು ಇದುವರೆವಿಗೂ ಬಹಿರಂಗಗೊಂಡಿಲ್ಲ. ಆದರೆ ಚಿತ್ರ ಬಿಡುಗಡೆಗೆ ಮುನ್ನ ಅದರ ಜನಪ್ರಿಯತೆಗೆ ಕಾರಣವೆಂದರೆ ರಘು ದೀಕ್ಷಿತ್ ಅವರ ಸಾಹಿತ್ಯ, ಸಂಗೀತ. ಗಾಯನ. ಮಹಾದೇಶ್ವರನ ಹಾಡಲ್ಲದೆ, ಬೆಳದಿಂಗಳಂತೆ..ಮುಸ್ಸಂಜೆ ರಂಗಲ್ಲಿ, ಈ ತನುವು ನಿನ್ನದೇ... ನಮ್ಮ ನಾಡು ಕರುನಾಡು .. ಹಾಡುಗಳು ವೈವಿಧ್ಯತೆಯಿಂದ, ಸರಳ ಸಾಹಿತ್ಯದಿಂದ ಜನಮನ ಸೂರೆಗೊಂಡಿದೆ. ಈ ಚಿತ್ರದಲ್ಲಿ ಹಾಡಲು ಯುವಪ್ರತಿಭೆಗಳಾದ ಹರಿಚರಣ್ ಹಾಗೂ ಸೈಂಧವಿ ಅವರಿಗೂ ಅವಕಾಶ ನೀಡಿ ರಘು ಪ್ರೋತ್ಸಾಹ ನೀಡಿದ್ದಾರೆ. ಒಟ್ಟಿನಲ್ಲಿ ಬೆಂಗ್ಳೂರ್ ಭಾಷೆಯಲ್ಲಿ ಹೇಳೋದಾದರೆ ರಘು ಸಿಂಪ್ಲಿ ರಾಕ್ಸ್ ಮ್ಯಾನ್ ...

  ಕನ್ನಡ ಚಿತ್ರರಂಗದಾಗ ಹೊಸತನದ ಗಾಳಿ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X