»   »  ಎದೆ ತುಂಬಿ ಹಾಡಿದರೆ ಐಪಿಆರ್ ಎಸ್ ದಂಡ!

ಎದೆ ತುಂಬಿ ಹಾಡಿದರೆ ಐಪಿಆರ್ ಎಸ್ ದಂಡ!

Posted By:
Subscribe to Filmibeat Kannada

ಗೌರಿ, ಗಣೇಶ ಹಬ್ಬಕ್ಕೆ ಎಲ್ಲೆಂದರಲ್ಲಿ ವಾದ್ಯಗೋಷ್ಠಿ ನಡೆಸುವಂತಿಲ್ಲ. ಕೇವಲ ಗಣೇಶ ಹಬ್ಬಅಲ್ಲ, ಯಾವುದೇ ಸಂದರ್ಭದಲ್ಲಿ ಆಡಿಯೋ ನಿಯಮಗಳನ್ನು ಉಲ್ಲಂಘಿಸಿ ಹಾಡುಗಳನ್ನು ಬಳಸಿಕೊಂಡರೆ ಅಪರಾಧವಾಗುತ್ತದೆ. ಬೇಕಾಬಿಟ್ಟಿ ವಾದ್ಯಗೋಷ್ಠಿ ನಡೆಸಿದರೆ ಭಾರತೀಯ ಪ್ರದರ್ಶನ ಹಕ್ಕುಗಳ ಮಂಡಳಿಯ(Indian Performing Rights Society-ಐಪಿಆರ್ಎಸ್) ಕೆಂಗಣ್ಣಿಗೂ ಗುರಿಯಾಗಬೇಕಾಗುತ್ತದೆ.

ಆಡಿಯೋ ಹಕ್ಕುಗಳನ್ನು ಬೇಕಾಬಿಟ್ಟಿ ಬಳಸಿದವರ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಲು ಮಂಡಳಿ ಟೊಂಕ ಕಟ್ಟಿ ನಿಂತಿದೆ. ಇದು ಕೇವಲ ವಾದ್ಯಗೋಷ್ಠಿಗಳಿಗಷ್ಟೇ ಅಲ್ಲ ಟಿವಿ ವಾಹಿನಿಗಳಿಗೂ ಅನ್ವಯಿಸಲಿದೆ. ಹುಶಾರ್ ಎಂದು ಎಚ್ಚರಿಸುತ್ತಿದೆ ಐಪಿಆರ್ ಎಸ್. ಈ ಸಂಬಂಧ ದೈನಿಕ ಪತ್ರಿಕೆ ಮಿರರ್ ಮಾಹಿತಿಪೂರ್ಣಲೇಖನ ಪ್ರಕಟಿಸಿದೆ.

ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುತ್ತ್ತಿರುವ ಟಿವಿ ವಾಹಿನಿಗಳಿಗೂ ಬೆಂಗಳೂರಿನ ಆಡಿಯೋ ಕಂಪನಿಗಳು ಈಗಾಗಲೇ ಪತ್ರ ಬರೆಯಲಾಗಿದೆ. ತಮ್ಮ ಆಡಿಯೋ ಹಕ್ಕುಗಳನ್ನು ಯರ್ರಾ ಬಿರ್ರಿಯಾಗಿ ರಿಯಾಲಿಟಿ ಶೋಗಳಲ್ಲಿ ಬಳಸಿಕೊಳ್ಳುವಂತಿಲ್ಲ. ಒಂದು ವೇಳೆ ಬಳಸಿಕೊಂಡರೆ ದಂಡ ಕಟ್ಟ ಬೇಕಾಗುತ್ತದೆ. ಆಡಿಯೋ ಕಂಪನಿಗಳಿಗೆ ರು.250 ಕೋಟಿಯಷ್ಟು ದಂಡದ ಹಣ ಬಾಕಿ ರೂಪದಲ್ಲಿ ಬರಬೇಕಾಗಿದೆಯಂತೆ.

ರಿಯಾಲಿಟಿ ಶೋಗಳು,ಸ್ಟೇಜ್ ಶೋಗಳು ಮತ್ತು ಪ್ರತಿಭಾನ್ವೇಷಣೆ ಕಾರ್ಯಕ್ರಮಗಳಲ್ಲಿ ಬಳಸುವ ಹಾಡುಗಳಿಗೂ ಟಿವಿ ವಾಹಿನಿಗಳು ಹಣ ಪಾವತಿಸಬೇಕಾಗುತ್ತದೆ. ''ಟಿವಿ ವಾಹಿನಿಗಳ ಟಿಆರ್ ಪಿ ರೇಟಿಂಗ್ ಕೇವಲ ರಿಯಾಲಿಟಿ ಶೋಗಳು ಮತ್ತು ಸಿನಿಮಾಗಳನ್ನು ಅವಲಂಬಿಸಿದೆ. ಸಿನಿಮಾ ಹಕ್ಕುಗಳನ್ನು ಖರೀದಿಸಲು ಕೋಟಿಗಟ್ಟಲೆ ಹಣವನ್ನು ಸುರಿಯಲಾಗುತ್ತದೆ. ಆದರೆ ರಿಯಾಲಿಟಿ ಶೋಗಳಲ್ಲಿ ಬಳಕೆಯಾಗುವ ಬೌದ್ಧಿಕ ಆಸ್ತಿಗೆ ಕವಡೆ ಕಿಮ್ಮತ್ತಿಲ್ಲದಂತಾಗಿದೆ'' ಎನ್ನುತ್ತಾರೆ ಲಹರಿ ಕಂಪನಿಯ ಮಾಲೀಕ ವೇಲು .

ದಕ್ಷಿಣದ ಯಾವುದೇ ಟಿವಿ ವಾಹಿನಿಯೂ ಐಪಿಆರ್ ಎಸ್ ಗಾಗಲಿ ಅಥವಾ ನಮ್ಮ ಪತ್ರಕ್ಕಾಗಲಿ ಕಿಂಚಿತ್ತೂ ಬೆಲೆ ಕೊಡುತ್ತಿಲ್ಲ. ಟಿವಿ ವಾಹಿನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಬೌದ್ಧಿಕ ಹಕ್ಕುಗಳ ರೂಪದಲ್ಲೇ ನಮ್ಮ ಆಡಿಯೋ ಕಂಪನಿಗೆ ರು.70 ಕೋಟಿ ಹಣ ಬರಬೇಕು ಎಂಬುದು ವೇಲು ಅವರ ವಿವರಣೆ.

ಎಲ್ಲವನ್ನು ನಕಲು ಮಾಡಲಾಗುತ್ತಿದೆ.ಟಿವಿ ವಾಹಿನಿಗಳ ರೂಪದಲ್ಲಿ ಪೈರಸಿ ಎಂಬುದು ಪೆಡಂಭೂತವಾಗಿ ಕಾಡುತ್ತಿದೆ. ನೇರ ಪ್ರಸಾರಗಳಿಂದ ಮತ್ತು ಪ್ರಸಾರವಾಗುವ ಹಾಡುಗಳಿಂದ ವಿದೇಶಗಳಲ್ಲಿ ಆಡಿಯೋ ಕಂಪನಿಗಳು ಆದಾಯವನ್ನು ಗಳಿಸುತ್ತವೆ. ಆದರೆ ನಮ್ಮಲ್ಲಿ ನಯಾ ಪೈಸೆ ಗಿಟ್ಟುತ್ತಿಲ್ಲ. ಶೀಘ್ರದಲ್ಲೇ ಟಿವಿ ವಾಹಿನಿಗಳ ವಿರುದ್ಧ ಕ್ರಮಕೈಗೊಳ್ಳದಿದ್ದರೆ ನಷ್ಟ ಕಟ್ಟಿಟ್ಟ ಬುತ್ತಿ. ಎಲ್ಲ ಆಡಿಯೋ ಕಂಪನಿಗಳು ಮುಚ್ಚಬೇಕಾಗುತ್ತದೆ ಎನ್ನುತ್ತಾರೆ ಆನಂದ್ ಆಡಿಯೋದ ಮೋಹನ್ ಛಾಬ್ರಿಯಾ.

ದಕ್ಷಿಣ ಭಾರತದಲ್ಲಿ ಮಾತ್ರ ಈ ರೀತಿಯ ಸಮಸ್ಯೆ ಇದೆ. ಟಿ ಸೀರೀಸ್ ನಂತಹ ಕಂಪನಿಗೆ ಟಿವಿ ವಾಹಿನಿಗಳಿಂದ ವಾರ್ಷಿಕ ರು.450 ಕೋಟಿ ಹಣ ಹರಿದು ಬರುತ್ತದೆ. ಆದರೆ ನಮಗೆ ಮಾತ್ರಶೂನ್ಯ ಸಂಪಾದನೆ ಎನ್ನುತ್ತಾರೆ ಲಹರಿ ವೇಲು.ಟಿವಿ ವಾಹಿನಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಈ ವಿಚಾರದಲ್ಲಿ ಟಿವಿ ವಾಹಿನಿಗಳು ಜಾಣ ಕುರುಡನ್ನು ಪ್ರದರ್ಶಿಸುತ್ತಿವೆ. ಐಪಿಆರ್ ಎಸ್ ನವರು ಈಗಾಗಲೇ ಎಲ್ಲಾ ಟಿವಿ ವಾಹಿನಿಗಳು ಹಾಗೂ ನಿರ್ಮಾಣ ಸಂಸ್ಥೆಗಳನ್ನು ಭೇಟಿ ಮಾಡಿ ವಿಷಯವನ್ನು ಮನದಟ್ಟು ಮಾಡಿದ್ದಾರೆ. ಆದರೆ ಟಿವಿ ವಾಹಿನಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಟಿವಿಗಳು ಪ್ರಸಾರ ಮಾಡುವ ರಿಯಾಲಿಟಿ ಶೋನ ಕಂತೊಂದಕ್ಕೆ ರು.2.5 ಲಕ್ಷ ಪಾವತಿಸಿ ಎಂಬುದು ಆಡಿಯೋ ಕಂಪನಿಗಳ ವಾದ. ಆದರೆ ಅವರು ನಮಗೆ ಏನನ್ನೂ ಕೊಡುತ್ತಿಲ್ಲ. ನಮ್ಮನ್ನು ನಷ್ಟಕ್ಕೆ ದೂಡುತ್ತಿದ್ದಾರೆ ಎನ್ನುತ್ತಾರೆ ಲಹರಿ ವೇಲು.

ಒಂದು ವಾರದೊಳಗೆ ವಾದ್ಯಗೋಷ್ಠಿಗಳಿಗೆ ಇಂತಿಷ್ಟು ಎಂದು ರಾಯಧನ ನಿಗದಿಪಡಿಸಲು ಐಪಿಆರ್ ಎಸ್ ನಿರ್ಧರಿಸಿದೆ. ವಾದ್ಯಗೋಷ್ಠಿಗಳು ಪಾವತಿಸುವ ನಿಗದಿತ ರಾಯಧನವನ್ನು ಐಪಿಆರ್ ಎಸ್ ತನ್ನಲ್ಲಿ ನೋಂದಣಿಯಾದ ಆಡಿಯೋ ಕಂಪನಿಗಳಿಗೆ ಪಾವತಿಸುತ್ತದೆ. ಸ್ವತಂತ್ರವಾಗಿ ಟಿವಿ ವಾಹಿನಿಗಳು ಮತ್ತು ವಾದ್ಯಗೋಷ್ಠಿಗಳ ಮೇಲೆ ಸದಾ ಕಣ್ಣಿಡುವುದು ಆಡಿಯೋ ಕಂಪನಿಗಳಿಗೆ ಕಷ್ಟಸಾಧ್ಯ ಕೆಲಸ. ಹಾಗಾಗಿ ಐಪಿಆರ್ಎಸ್ ಅನ್ನು ಅವು ನೆಚ್ಚಿಕೊಂಡಿವೆ.

ಸಂಗೀತ ನಿರ್ದೇಶಕ ಗುರುಕಿರಣ್ ಅವರ ವಾದ್ಯಗೋಷ್ಠಿ ಬೆಂಗಳೂರಿನಲ್ಲೇ ಅತ್ಯಂತ ದುಬಾರಿ. ಆದರೆ, ಐಪಿಆರ್ ಎಸ್ ಬಗ್ಗೆ ಗುರುಕಿರಣ್ ಗೆ ಎಳ್ಳಷ್ಟು "ಈ ಸಂಬಂಧ ನನಗೇನು ಗೊತ್ತಿಲ್ಲ. ಅವರು ಏನು ಕ್ರಮಕೈಗೊಳ್ಳಲಿದ್ದಾರೆ ಎಂಬ ಬಗ್ಗೆಯೂ ನನಗೆ ಮಾಹಿತಿ ಇಲ್ಲ" ಎನ್ನುತ್ತಾರೆ ಗುರುಕಿರಣ್.

ಯಾರು ಐಪಿಆರ್ಎಸ್ ಗೆ ಹಣ ಕಟ್ಟಬೇಕಾಗುತ್ತದೆ?

ಸ್ಟಾರ್ ಸಿಂಗರ್(ಸುವರ್ಣ), ಗೀತಾಂಜಲಿ (ಕಸ್ತೂರಿ), ಎದೆ ತುಂಬಿ ಹಾಡುವೆನು (ಈಟಿವಿ ಕನ್ನಡ), ಗುಣಗಾನ(ಜೀ ಕನ್ನಡ), ಕುಣಿಯೋಣ ಬಾರಾ (ಜೀ ಕನ್ನಡ), ಸರಿಗಮಪ(ಜೀ ಕನ್ನಡ), ಹಾಕು ಹೆಜ್ಜೆ ಹಾಕು (ಈಟಿವಿ ಕನ್ನಡ), ಸೈ (ಸುವರ್ಣ ವಾಹಿನಿ) ಇವಿಷ್ಟು ಕಾರ್ಯಕ್ರಮಗಳು ಆಡಿಯೋ ಕಂಪನಿಗಳಿಗೆ ಹಣ ಕಟ್ಟಬೇಕಾಗುತ್ತದೆ.

ಗುರುಕಿರಣ್ ಆರ್ಕೆಸ್ಟ್ರಾ ಶೋ ಒಂದಕ್ಕೆ ರು.2 ಲಕ್ಷ ನಿಗದಿಪಡಿಸುತ್ತದೆ. ರಾಜೇಶ್ ಕೃಷ್ಣನ್ ಶೋ ಒಂದಕ್ಕೆ ರು.2 ಲಕ್ಷ, ರಾಜೇಶ್ ರಾಮನಾಥ್ ಅರ್ಕೆಸ್ಟ್ರಾ ರು.1 ರಿಂದ 1.50 ಲಕ್ಷದಷ್ಟು ಶುಲ್ಕ ವಿಧಿಸುತ್ತದೆ. ಇನ್ನು ಸಿ ಅಶ್ವಥ್ ತಂಡ ಪ್ರದರ್ಶನ ಒಂದಕ್ಕೆ ರು.1 ಲಕ್ಷ ನಿಗದಿಪಡಿಸುತ್ತದೆ. ಈಗ ಇವರೆಲ್ಲಾ ಐಪಿಆರ್ ಎಸ್ ನಿಗದಿಪಡಿಸುವ ಹಣವನ್ನು ಕಡ್ಡಾಯವಾಗಿ ಪಾವತಿಸಲೇ ಬೇಕಾಗುತ್ತದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada