For Quick Alerts
  ALLOW NOTIFICATIONS  
  For Daily Alerts

  ಸಂಗೀತಾ ಕಲಾ ಪ್ರಶಸ್ತಿ ವಿಜೇತರ ಪರಿಚಯ

  By Staff
  |
  ನಂದಿತ - 2008 ನೇ ಸಾಲಿನ ನೆಚ್ಚಿನ ಗಾಯಕಿ

  ಮನಸು ರಂಗಾಗಿದೆ ಇಂದು ಅಂತ 'ಸ್ಲಂ ಬಾಲ' ಚಿತ್ರದಲ್ಲಿ ಇಂಪಾಗಿ ಹಾಡಿ ಎಲ್ಲರ ಮನ ತಣಿಸಿದ, ಕನ್ನಡ ನಾಡಿನ ಹೆಮ್ಮೆಯ ಕುವರಿ ನಂದಿತ.... ಯುವಪೀಳಿಗೆಯ ಹಿನ್ನೆಲೆ ಗಾಯಕಿಯರಲ್ಲಿ ಇವರ ಸಾಧನೆ ಶ್ಲಾಘನೀಯವಾದದ್ದು. ಇಲ್ಲಿಯವರೆಗೂ ಸುಮಾರು ಸಾವಿರಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ದನಿಯಾಗಿರುವ ನಂದಿತ ಹಲವಾರು ಭಾಷೆಗಳಲ್ಲಿ ಯಶಸ್ವಿ ಗಾಯಕಿಯಾಗಿದ್ದಾರೆ. ಮಹತ್ವಾಕಾಂಕ್ಷಿಯಾಗಿರುವ ಇವರು ಕೇವಲ ಸಂಗೀತದ ಮೇಲಿನ ಪ್ರೀತಿಗೆ ತಮ್ಮ ಗರಿಷ್ಠ ಸಂಬಳದ ಸಾಫ್ಟ್‌ವೇರ್ ಉದ್ಯೋಗವನ್ನೂ ತೊರೆದು ಈಗ ಸಂಪೂರ್ಣವಾಗಿ ಸಂಗೀತ ಸರಸ್ವತಿಯ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  ನಂದಿತರ ಸಾಧನೆ ಕೇವಲ ಚಿತ್ರಗಳಿಗೆ ಮಾತ್ರ ಸೀಮಿತವಾಗಿರದೆ, ಸುಮಾರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು, ಎಂಟುನೂರಕ್ಕೂ ಹೆಚ್ಚು ಆಲ್ಬ್‌ಮ್‌ಗಳಿಗಾಗಿ ಹಾಡಿದ್ದಾರೆ. ಚಿತ್ರಸಂಗೀತ ಲೋಕದಲ್ಲಿ ಇವರ ಪಯಣ 'ಹಬ್ಬ' ಚಿತ್ರದ ಮೂಲಕ 2000ದಲ್ಲಿ ಪ್ರಾರಂಭವಾಯಿತು. ಜೊತೆಗೆ ಕನ್ನಡ ಚಿತ್ರರಂಗದ ಯಶಸ್ವಿ ಚಿತ್ರಗಳಾದ ಯಜಮಾನ, ಸೂರ್ಯವಂಶ, ನನ್ನ ಪ್ರೀತಿಯ ಹುಡುಗಿ, ಶ್ರೀಮಂಜುನಾಥ ಮತ್ತು ಕಲಾತ್ಮಕ ಚಿತ್ರ ಮತದಾನದಲ್ಲೂ ಹಾಡಿ ಸೈ ಎನಿಸಿಕೊಂಡು 2003ನೇ ಇಸವಿಯಲ್ಲಿ "ಗಂಧದ ಗೊಂಬೆ" ಹಾಡಿಗೆ ಕರ್ನಾಟಕ ಸರ್ಕಾರದಿಂದ ವರ್ಷದ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಕೂಡ ಪಡೆದಿದ್ದಾರೆ. ಇವರ 2008ನೇ ಸಾಲಿನ ಪ್ರಮುಖ ಹಾಡುಗಳೆಂದರೆ - ಇಂತಿ ನಿನ್ನ ಪ್ರೀತಿಯ - ಹೂ ಕನಸ ಜೋಕಾಲಿ; ಸ್ಲಂ ಬಾಲ - ಅಲೆ ಅಲೆಯೂ; ಸ್ಲಂ ಬಾಲ - ಮನಸು ರಂಗಾಗಿದೆ; ಪಟ್ರೆ ಲವ್ಸ್ ಪದ್ಮ - ಹೇ ಹುಡುಗಿ; ನನ್ನುಸಿರೇ - ಹೆಸರಿನ ಮೇಲೂ ಪ್ರೀತಿ; ಪಿ.ಯೂ.ಸಿ. - ಸುಮ್ಮನೆ ಸುಮ್ಮನೆ
  ***

  ರಘು ದಿಕ್ಷೀತ್ - 2008ನೇ ಸಾಲಿನ ನೆಚ್ಚಿನ ಗಾಯಕ
  ಇತ್ತೀಚಿನ ದಿನಗಳಲ್ಲಿ ತಮ್ಮ ಹೊಸ ಅಲೆಯ ಸಂಗೀತ, ಗಾಯನ ಹಾಗೂ ವೇಷಭೂಷಣದಿಂದ ಕನ್ನಡ ಸಂಗೀತ ಪ್ರಪಂಚದಲ್ಲಿ ಹೊಸ ಕಂಪನವನ್ನ ಮೂಡಿಸಿದ ಏಕೈಕ ಬಹುಮುಖ ಪ್ರತಿಭೆ ರಘು ದಿಕ್ಷೀತ್. ಗಿಟಾರಿಸ್ಟ್, ಗಾಯಕ, ಸಂಗೀತ ಸಂಯೋಜಕ, ಗೀತರಚನಕಾರ ಹಾಗೂ ಸಂಗೀತಜ್ಞ ಆಗಿರುವ, ರಘು ದಿಕ್ಷೀತ್ ಯಾವುದೇ ಗುರುಗಳ ಮಾರ್ಗದರ್ಶನವಿಲ್ಲದೆ ಕೇವಲ ತಮ್ಮ ಸ್ವಪ್ರಯತ್ನ ಹಾಗೂ ಸಂಗೀತದ ಮೇಲಿರುವ ಒಲವು ಇಂದು ಇವರನ್ನು 'ಸಂಗೀತ ಲೋಕದ ಏಕಲವ್ಯ' ನನ್ನಾಗಿ ಮಾಡಿದೆ. 'ಅಂತರಾಗ್ನಿ' ಜೊತೆ ಶುರುವಾದ ಇವರ ಪಯಣ, ಈಗ ರಘು ದಿಕ್ಷೀತ್ ಪ್ರಾಜೆಕ್ಟ್ ತಂಡದ ಮೂಲಕ ದೇಶ ವಿದೇಶಗಳಲ್ಲಿ 250ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟು ಪ್ರಸಿದ್ಧವಾಗಿದ್ದಾರೆ.

  ಇತ್ತೀಚೆಗೆ ಬಿಡುಗಡೆಯಾದ ಸೈಕೊ ಚಿತ್ರದ 'ನಿನ್ನ ಪೂಜೆಗೆ ಬಂದೇ ಮಹಾದೇಶ್ವರ' ಈ ವರ್ಷದ ಸೂಪರ್ ಹಿಟ್ ಹಾಡುಗಳಲ್ಲಿ ಒಂದಾಗಿದ್ದು, ಇದರ ಮೂಲಕ ಕನ್ನಡ ಚಿತ್ರರಂಗದ ಸಂಗೀತಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯವನ್ನೇ ಬರೆದಿದ್ದಾರೆ.
  ***

  ಕವಿರಾಜ್ - 2008ನೇ ಸಾಲಿನ ನೆಚ್ಚಿನ ಸಾಹಿತಿ
  ಒಂದೆ ಒಂದು ಸಾರಿ ಕಣ್ಮುಂದೆ ಬಾರೆ.... ಮುಂಗಾರು ಮಳೆ ಚಿತ್ರದ ಈ ಹಾಡಿನ ಸಾಲುಗಳು ಎಲ್ಲರಿಗೂ ಬಾಯಿಪಾಠ ಆಗಿಬಿಟ್ಟಿದೆ. ಹುಡುಗರಿಗೆ ಇದನ್ನ ಹಾಡೋದು ಎಷ್ಟು ಇಷ್ಟನೋ, ಹುಡುಗಿಯರಿಗೆ ಈ ಸಾಲುಗಳನ್ನು ಕೇಳಿ ಮೈಮರೆಯೋದು ಅಷ್ಟೇ ಇಷ್ಟ. ಕನ್ನಡ ಚಲನಚಿತ್ರ ಗೀತೆಗಳ ಕೇಳುಗರಿಗೆ ಇಂತಹ ವೈವಿಧ್ಯಮಯ ಹಾಡುಗಳನ್ನು ಕೊಟ್ಟ ಕವಿರಾಜ್ ಅವರ ಹೆಸರು ಯಾರಿಗೆ ಪರಿಚಯ ಇಲ್ಲ ಹೇಳಿ? ನಮ್ಮ ನಿಮ್ಮೆಲ್ಲರ ಚಿರಪರಿಚಿತ ಕವಿರಾಜ್‌ರವರು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದು, ಮಲೆನಾಡಿನ ಮಲ್ಲಿಗೆಯ ಹಾಗೆ ಅತ್ಯುತ್ತಮ ಸಾಹಿತ್ಯ ರಚನೆಕಾರ ಎನಿಸಿಕೊಂಡಿದ್ದಾರೆ. ಇವರ ಕರೆಂಟ್ ಸ್ಕೋರ್ 250 ಚಲನಚಿತ್ರಗಳು.

  ಇವರ 2008ನೇ ಸಾಲಿನ ಪ್ರಮುಖ ಹಾಡುಗಳೆಂದರೆ- ಅರಮನೆ - 'ಪತ್ರ ಬರೆಯಲಾ,' ಬುದ್ಧಿವಂತ - 'ಹರೆನಂದ', ಬಿಂದಾಸ್ - 'ಗುಬ್ಬಚ್ಚಿ ಗೂಡಿನಲಿ', ಗಜ - 'ಬಂಗಾರಿ ಯಾರೇ ನೀ ಬುಲ್ ಬುಲ್', ನಂದ ಲವ್ಸ್ ನಂದಿತ - 'ಪಚ್ಚೆ ಗಿಳಿ ಹೆಣ್ಣೆ,' ನೀನ್ಯಾರೆ - 'ಈ ತುಡಿತ', ಮಕರಂದ, ಜೊತೆಗೆ 'ಸಂಗಮ', 'ಜಾಲಿಡೇಸ್' ಚಿತ್ರಗಳಿಗೆ ಸಂಪೂರ್ಣ ಸಾಹಿತ್ಯ ಇವರದೆ.
  ***

  ಜಿಂಕೆಮರಿನ - 2008ನೇ ಸಾಲಿನ ನೆಚ್ಚಿನ ಹಾಡು
  ಸೂಪರ್ ಹಿಟ್ಸ್ 93.5 ಎಸ್.ಎಫ್.ಎಮ್‌ನಲ್ಲಿ 2008 ರಲ್ಲಿ ಅತೀ ಹೆಚ್ಚು ಕೋರಿಕೆ ಪಡೆದ ಹಾಡು ನಂದ ಲವ್ಸ್ ನಂದಿತ ಚಿತ್ರದ ಜಿಂಕೆಮರಿನ. ಯೋಗೇಶ್ ಹಾಗೂ ಶ್ವೇತ ಅಲಿಯಾಸ್ ನಂದಿತರ ಮೇಲೆ ಚಿತ್ರೀಕರಣಗೊಂಡು, ಎಮಿಲ್‌ರ ಸಂಗೀತ ಸಂಯೋಜನೆಯನ್ನು ಒಳಗೊಂಡಿರುವ ಈ ಹಾಡು ಎಲ್ಲ ವಯೋಮಾನದ ಕೇಳುಗರನ್ನು ಮನೊರಂಜಿಸಿದೆ. ಇದಕ್ಕೆ ಸಾಹಿತ್ಯ ರಚನೆ ಆನಂದ್ ರಾಮ್‌ರವರದ್ದು ಹಾಗೂ ಅಂತರ್ಜಾಲದಲ್ಲೂ ಸುಮಾರು ಲಕ್ಷಕ್ಕೂ ಹೆಚ್ಚು ಮನವರಿಕೆ ಪಡೆದ ಹಾಡು ಇದು.

  ಈ ಗೀತೆಯನ್ನು ಯಾವ ಹೊರ ದೇಶಕ್ಕೂ ಹೋಗದೆ, ಅದ್ಭುತವಾದ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಿಸಲಾಗಿದೆ. ಜೊತೆಗೆ ಸಂಕಲನದಲ್ಲಿ, ಸಂಗೀತ ಸಂಯೋಜನೆಯಲ್ಲಿ ಉಪಯೋಗಿಸಲ್ಪಟ್ಟ ಎಫೆಕ್ಟ್ಸ್ ಹಾಗೂ ಯೋಗೇಶ್ ರವರ ನೃತ್ಯ ಎಲ್ಲವು ಒಂದಕ್ಕೊಂದು ಹೇಳಿಮಾಡಿಸಿದಂತಿದೆ.
  ***

  ವಿ. ಹರಿಕೃಷ್ಣ - 2008ನೇ ಸಾಲಿನ ನೆಚ್ಚಿನ ಸಂಗೀತ ನಿರ್ದೇಶಕ
  ಕನ್ನಡ ಚಿತ್ರರಂಗದಲ್ಲಿ ಸುಮಾರು 16 ವರ್ಷಗಳಿಂದ ಸಂಗೀತ ಸಂಯೋಜನೆಯಲ್ಲಿ ತೊಡಗಿರುವ ಹರಿಕೃಷ್ಣರವರು ಚಿತ್ರರಂಗದ ಎಲ್ಲಾ ಹಿರಿಯ ಸಂಗೀತ ಸಂಯೋಜಕರೊಂದಿಗೆ, ಸಹಾಯಕ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿ ಚಿತ್ರಸಂಗೀತಾಭಿಮಾನಿಗಳ ಅಭಿರುಚಿಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

  ಜೊತೆ ಜೊತೆಯಲ್ಲಿ ಚಿತ್ರಕ್ಕೆ ನೀಡಿದ ಸೂಪರ್ ಹಿಟ್ ಸಂಗೀತ, ಇಂದಿಗೂ ಎಲ್ಲರ ಮನಸ್ಸಿನಲ್ಲಿ ಇನ್ನು ನವಿರಾಗಿದೆ. ತದನಂತರ ಗಾಳಿಪಾಟ, ಗಜ, ನವಗ್ರಹ, ಪಯಣ ಮುಂತಾದ ಅನೇಕ ಚಿತ್ರಗಳಿಗೆ ತಮ್ಮ ಸಂಗೀತ ಸಂಯೋಜನೆಯನ್ನು ನೀಡಿ, ಚಿತ್ರ ಸಂಗೀತಾಭಿಮಾನಿಗಳಿಂದ ಭೇಷ್ ಅನಿಸಿಕೊಂಡಿದ್ದಾರೆ.

  ಇವರು 2008ರಲ್ಲಿ ಸಂಗೀತ ಸಂಯೋಜನೆಮಾಡಿದ ಚಿತ್ರಗಳು - ನವಗ್ರಹ, ಪಯಣ, ಗಾಳಿಪಟ, ಗಜ, ಇಂದ್ರ, ಅರ್ಜುನ, ಪರಮೇಶ ಪಾನ್ ವಾಲಾ
  *****

  ವಿ.ಮನೋಹರ್ - 2008ನೇ ಸಾಲಿನ ವಿಶೇಷ ಕಲಾ ಪ್ರಶಸ್ತಿ ವಿಜೇತ
  ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ವಿಟ್ಲದವರಾದ ವಿ. ಮನೋಹರ್‌ರವರು ಕಳೆದ 12 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅಷ್ಟೇ ಅಲ್ಲದೆ ಇವರು ಒಬ್ಬ ಉತ್ತಮ ವ್ಯಂಗ್ಯ ಚಿತ್ರಕಲಾಕಾರ ಕೂಡ ಆಗಿದ್ದಾರೆ.

  ಜಗ್ಗೇಶ್ ನಾಯಕನಾಗಿ, ಉಪೇಂದ್ರರವರು ನಿರ್ದೇಶನದ 'ತರ್ಲೆ ನನ್ ಮಗ' ಚಿತ್ರದಿಂದ ತಮ್ಮ ವೃತ್ತಿ ಜೀವನ ಆರಂಭಿಸಿರುವ ಮನೋಹರ್, ಈವರೆಗೂ 100ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದು 'ನೀನ್ಯಾರೆ' ಇವರ ಸಂಗೀತ ಸಂಯೋಜನೆಯ 100 ನೇ ಚಲನಚಿತ್ರ.

  ಹಾಗೆಯೇ ಜನುಮದ ಜೋಡಿ, ಓ ಮಲ್ಲಿಗೆ, ಜೋಡಿ ಹಕ್ಕಿ, ಲಾಲೀ, ಅನುರಾಗ ಸಂಗಮ, ಮುನ್ನುಡಿ, ಮಠ, ದುನಿಯಾ ಮುಂತಾದ ಚಿತ್ರಗಳು ಇವರ ಯಶಸ್ಸಿಗೆ ಇನ್ನೊಂದು ಗರಿ ಮೂಡಿಸಿದ ಚಿತ್ರಗಳು. ಜನುಮದ ಜೋಡಿ, ಜೋಡಿ ಹಕ್ಕಿ, ಚಿಗುರಿದ ಕನಸು ಹ್ಯಾಟ್ರಿಕ ಹೀರೊ ಶಿವರಾಜ್ ಕುಮಾರ್ ಅಭಿನಯಾದ ಈ ಚಿತ್ರಗಳು ವಿ.ಮನೋಹರ್‌ ರವರಿಗೆ ಪ್ರಶಸ್ತಿಗಳ ಮೇಲೆ ಪ್ರಶಸ್ತಿ ತಂದು ಕೊಟ್ಟಿವೆ.

  2008ರಲ್ಲಿ ನೀನ್ಯಾರೆ, ಜನುಮದ ಗೆಳತಿ, ಮಿಂಚಿನ ಓಟ, ಮೆರವಣಿಗೆ ಚಿತ್ರಕ್ಕೆ ಸಂಗೀತವನ್ನು ನೀಡಿ, ಹೃದಯಗಳ ವಿಷಯ, ನೀ ಟಾಟಾ ನಾ ಬಿರ್ಲಾ, ಸತ್ಯ ಇನ್ ಲವ್ ಹಾಗು ಮಾದೇಶ ಚಿತ್ರಗಳಿಗೆ ಗೀತ ರಚನೆಯನ್ನು ಮಾಡಿದ್ದಾರೆ.

  *****

  ರಾಜೇಶ್ ರಾಮನಾಥ್ - 2008ನೇ ಸಾಲಿನ ವಿಶೇಷ ಕಲಾ ಪ್ರಶಸ್ತಿ ವಿಜೇತ
  ಪ್ರೇಮಿಗಾಗಿ ನಾ' ಚಿತ್ರವು ರಾಜೇಶ್ ರಾಮನಾಥ್‌ರ ಸಂಗೀತ ನಿರ್ದೇಶನದ 100 ನೇ ಚಿತ್ರವಾಗಿದ್ದು, ತನ್ನ ಕಳೆದ 13 ವರ್ಷಗಳ ಚಿತ್ರ ಜಗತ್ತಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ರಾಜೇಶ್ ರಾಮನಾಥ್‌ರವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿರುವರು.
  ಇವರು ಸಂಗೀತ ನಿರ್ದೇಶನಕನಾಗಿ 1994ರಲ್ಲಿ 'ಶುಭಲಗ್ನದಿಂದ ಉತ್ತಮ ಸಂಗೀತ ನಿರ್ದೇಶನಕನಾಗಿ ಗುರುತಿಸಿಕೊಂಡಿರುವ ಇವರು ಆದಿತ್ಯ, ಐಶ್ವರ್ಯ ಮುಂತಾದ ಸಿನಿಮಾಗಳಿಗೆ ನೀಡಿದ ಸಂಗೀತ ಅವಿಸ್ಮರಣಿಯ. ಕಳೆದ 13 ವರ್ಷಗಳಿಂದ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಇವರು ಬ್ಲಾಕ್ ಆಂಡ್ ವೈಟ್ ಚಿತ್ರದ ಮೂಲಕ ತಮ್ಮ ನಟನಾ ಕೌಶಲ್ಯವನ್ನು ಓರೆಗೆ ಹಚ್ಚುವ ಒಂದು ಉತ್ತಮ ಪ್ರಯತ್ನ ಮಾಡಿದ್ದಾರೆ. ಇವರು ಕಳೆದ 13 ವರ್ಷಗಳಲ್ಲಿ 100ಕ್ಕಿಂತಲೂ ಹೆಚ್ಚು ಚಲನಚಿತ್ರಗಳಲ್ಲಿ ಹೊಸ ಆಯಾಮದ ಸಂಗೀತ ನಿರ್ದೇಶಿಸಿರುತ್ತಾರೆ. ತಮ್ಮ 100ನೇ ಚಿತ್ರ ಪ್ರೇಮಿಗಾಗಿ ನಾ' ಚಿತ್ರದಲ್ಲಿ ಸುಪ್ರಸಿದ್ಧ ಹಾಡುಗಾರರಾದ ಏಸುದಾಸ್, ಬಾಲಸುಬ್ರಮಣ್ಯಂ, ಜಾನಕಿ, ಚಿತ್ರ, ಶ್ರೇಯಾ ಘೋಶಾಲ್, ಉದಿತ್ ನಾರಾಯಣ್‌ರವರಿಂದ ಆರು ಹಾಡುಗಳನ್ನು ಹಾಡಿಸಿದ ಶ್ರೇಯಸ್ಸು ಇವರದು. 2008 ರಲ್ಲಿ ಇವರು, ವಾರಸ್ದಾರ ಹಾಗು ಪ್ರೇಮಿಗಾಗಿ ನಾ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.
  ****
  ಸಾಧುಕೋಕಿಲ - 2008ನೇ ಸಾಲಿನ ವಿಶೇಷ ಕಲಾ ಪ್ರಶಸ್ತಿ ವಿಜೇತ
  ಸಾಧುಕೋಕಿಲ ಎಂದರೆ ನಮಗೆ ಮೊದಲು ಮನಸ್ಸಿನಲ್ಲಿ ಬರುವುದು ಅವರ ಹಾಸ್ಯ ನಟನೆ. ಕನ್ನಡ ಚಿತ್ರರಂಗ ಕಂಡ ಕೆಲವೇ ಕೆಲವು ಅದ್ಭುತವಾದ ಹಾಸ್ಯ ನಟರಲ್ಲಿ ಇವರೂ ಒಬ್ಬರು.

  ನಟನೆ ಜೊತೆಗೆ ಒಬ್ಬ ಒಳ್ಳೆಯ ಸಂಗೀತ ಸಂಯೋಜಕರು ಆಗಿರುವ ಇವರು, ರಕ್ತ ಕಣ್ಣೀರು, ಇಂತಿ ನಿನ್ನ ಪ್ರೀತಿಯ ಮುಂತಾದ ಚಿತ್ರಗಳಿಗೆ ಸುಮಧುರವಾದ ಗೀತ ಸಂಯೋಜನೆಯನ್ನು ನೀಡಿದ್ದಾರೆ. ಕನ್ನಡ ಚಿತ್ರಸಂಗೀತೋದ್ಯಮದ ಅತ್ಯುತ್ತಮ ತಂತ್ರಜ್ಞ ಎಂದು ಹೆಸರು ಮಾಡಿದ್ದಾರೆ. ಪ್ರಸಕ್ತ ಸಾಲಿನ ರಾಜ್ಯ ಪ್ರಶಸ್ತಿಯನ್ನೂ ಕೂಡ ಪಡೆದ್ದಿದ್ದಾರೆ.

  ಇವರ 2008ನೇ ಸಾಲಿನ ಚಿತ್ರಗಳೆಂದರೆ ಇಂತಿ ನಿನ್ನ ಪ್ರೀತಿಯ, ಕೋಡಗನ ಕೋಳಿ ನುಂಗಿತ್ತಾ, ಗಂಗೆ ಬಾರೆ ತುಂಗೆ ಬಾರೆ.
  ****

  ಹಂಸಲೇಖ - 2008ನೇ ಸಾಲಿನ ವಿಶೇಷ ಕಲಾ ಪ್ರಶಸ್ತಿ ವಿಜೇತ
  ಕನ್ನಡ ಚಿತ್ರಲೋಕದಲ್ಲಿ ಸಂಗೀತವೆಂದರೆ, ಎಲ್ಲರ ಮನಸ್ಸಿಗೆ ಮೊದಲು ಬರುವುದು ಹಂಸಲೇಖ. ಇವರ ವಿಶೇಷತೆ ಏನೆಂದರೆ ಸುಮಾರು ಎರಡು ದಶಕಗಳಿಂದ ಚಿತ್ರಲೋಕದಲ್ಲಿದ್ದರೂ, ಇವರ ಸಂಗೀತದ ಮಾಧುರ್ಯ ಹೊಸ ಸಂಗೀತ ನಿರ್ದೇಶಕರ ನಡುವೆಯೂ ವಿಶೇಷ ಸೆಳೆತವನ್ನು ಹೊಂದಿದೆ.

  ಇವರು ಮೂಲತಹ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನವರು. ಹಂಸಲೇಖರ ಸಂಗೀತ ಹಿಂದುಸ್ತಾನಿ, ಕರ್ನಾಟಕ ಹಾಗು ಪಾಶ್ಚಾತ್ಯ ಸಂಗೀತಗಳ ಅದ್ಭುತ ಸಂಯೋಜನೆಯಾಗಿದ್ದು, ಇದು ಅವರದೇ ಆದ ವಿಭಿನ್ನ ಶೈಲಿಯನ್ನು ನಿರೂಪಿಸುತ್ತದೆ.

  80ರ ದಶಕದ ಉತ್ತರಾರ್ಧದಲ್ಲಿ ಪ್ರೇಮಲೋಕ ಚಿತ್ರದ ಮೂಲಕ ಕನ್ನಡ ಚಿತ್ರಸಂಗೀತ ಪ್ರಪಂಚದಲ್ಲಿ ಗುರುತಿಸಿಕೊಂಡ ದಿಗ್ಗಜ ಹಂಸಲೇಖ. ಯಶಸ್ವಿ ಸಂಗೀತ ನಿರ್ದೇಶಕ ಹಾಗು ಗೀತರಚನೆಕಾರರಾದ ಇವರು, ಮುನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತವನ್ನು ಸಂಯೋಜಿಸಿ, ಗೀತರಚನೆಯನ್ನು ಕೂಡ ಮಾಡಿದ್ದಾರೆ. 2006ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಇವರು ಕನ್ನಡ ಮಾತ್ರವಲ್ಲದೆ ತಮಿಳು ಹಾಗು ತೆಲುಗು ಚಿತ್ರಗಳಿಗೂ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಇವರು 2008ರಲ್ಲಿ ಸಂಗಾತಿ, ಹೊಂಗನಸು, ಬಂಧು ಬಳಗ, ಯುಗ ಯುಗಗಳೆ ಸಾಗಲಿ, ನವಶಕ್ತಿ ವೈಭವ ಚಿತ್ರಗಳಿಗೆ ಸಂಗೀತವನ್ನು ನೀಡಿ, ಜಿಂದಗಿ, ಪ್ರೀತಿ ನೀ ಹೀಗೇಕೆ ಮತ್ತು ಪಿ.ಯು.ಸಿ. ಚಿತ್ರಗಳಿಗೆ ಸಾಹಿತ್ಯ ನೀಡಿದ್ದಾರೆ.

  ****

  ಗುರುಕಿರಣ್ - 2008ನೇ ಸಾಲಿನ ಸಂಗೀತ ಸಾಮ್ರಾಟ್
  ಕನ್ನಡ ಚಲನಚಿತ್ರ ಸಂಗೀತ ಸಾಮ್ರಾಜ್ಯದ ಅನಭಿಷಕ್ತ ದೊರೆಯಾಗಿ ಮೂಡಿಬಂದಿರುವ ಗುರುಕಿರಣ್, ತಮ್ಮ ಹೆಸರಿನಿಂದಲೇ ಸರ್ವತ್ರ ಗುರುತಿಸಲ್ಪಡುವವರು. ಉಪೇಂದ್ರ ನಿರ್ದೇಶಿಸಿ ಅಭಿನಯಿಸಿದ 'ಎ'ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಗುರುಕಿರಣ್ ನಂತರ ಉಪೇಂದ್ರ, ಕರಿಯ ಚಿತ್ರದ 'ಕೆಂಚಲೋ ಮಂಚಾಲೋ' ಮತ್ತು 'ಜೋಗಿ' ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ. 2004 ರಲ್ಲಿ ಆಪ್ತಮಿತ್ರದ ಶಾಸ್ರ್ತಿಯ ಸಂಗೀತ, 2005 ರಲ್ಲಿ ಜೋಗಿಯ ಹಾಡುಗಳು ಚಿತ್ರಜಗತ್ತಿನ ಸಂಗೀತ ಅಭಿಮಾನಿಗಳ ಹೃದಯವನ್ನೇ ತಟ್ಟಿವೆ. ಸಂದರ್ಭಕ್ಕೆ ಅನುಗುಣವಾಗಿ ಸಂಗೀತ ಸಂಯೋಜಿಸಿ, ನಿರ್ದೇಶಿಸಿ, ಆಯೋಜಿಸಿ, ಆಳವಡಿಸುವ ಒಂದು ವಿಶಿಷ್ಟಗುಣ ಇವರಲ್ಲಿದೆ.

  2008ರ ಸಾಲಿನ ಕಲಾ ಪ್ರಶಸ್ತಿಯಲ್ಲಿ, ನೆಚ್ಚಿನ ಗಾಯಕಿ ಪ್ರಶಸ್ತಿಗೆ ಬಿಟ್ಟು ಉಳಿದ ಎಲ್ಲಾ ವಿಭಾಗಕ್ಕೂ ಕೇಳುಗರಿಂದ ಆರಿಸಲ್ಪಟ್ಟ ಏಕೈಕ ವ್ಯಕ್ತಿಯೆಂದರೆ ಗುರುಕಿರಣ್. ಇವರು 2008ರಲ್ಲಿ ಸಂಗೀತ ನೀಡಿದ ಚಿತ್ರಗಳು- ಬಿಂದಾಸ್, ಅರಮನೆ, ಸತ್ಯ ಇನ್ ಲವ್, ನೀ ಟಾಟಾ ನಾ ಬಿರ್ಲಾ, ಬೆಳದಿಂಗಳಾಗಿ ಬಾ.
  ಪೂರಕ ಓದಿಗೆ: ನೆಚ್ಚಿನ ಸಂಗೀತ ಪ್ರತಿಭೆಗಳನ್ನು ನೀವೆ ಆಯ್ಕೆ ಮಾಡಿ! || ಎಸ್ ಎಫ್ ಎಂ ಸಂಗೀತ ಕಲಾ ಪ್ರಶಸ್ತಿ ಸಮಾರಂಭ
  ಗ್ಯಾಲರಿ : ಎಸ್ ಫ್ ಎಂ ಕಲಾ ಪ್ರಶಸ್ತಿ ಪಡೆದವರ ಕಲರವ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X