»   » 'ಕಾಫಿ ಶಾಪ್' ಧ್ವನಿಸುರುಳಿ ಮಾರುಕಟ್ಟೆಗೆ

'ಕಾಫಿ ಶಾಪ್' ಧ್ವನಿಸುರುಳಿ ಮಾರುಕಟ್ಟೆಗೆ

Posted By:
Subscribe to Filmibeat Kannada

ಗೀತಾ ಕೃಷ್ಣ ನಿರ್ದೇಶನದ 'ಕಾಫಿ ಶಾಪ್' ಚಿತ್ರದ ಧ್ವನಿಸುರುಳಿ ಮತ್ತು ಚಿತ್ರ ಟ್ರೈಲರ್ ಗಳನ್ನು ವಿಂಡ್ಸರ್ ಮ್ಯಾನರ್ ಪಂಚತಾರಾ ಹೋಟೆಲ್ ನಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು. 'ಅಂದುಕೊಂಡ ಹಾಗೆ ಇಲ್ಲ ಖಂಡಿತ ಖುಷಿ ಕೊಡುತ್ತೆ' ಎಂಬುದು ಚಿತ್ರದ ಟ್ಯಾಗ್ ಲೈನ್.

'ಕಾಫಿ ಶಾಪ್' ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದ ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡುತ್ತಾ, ಕನ್ನಡ ಚಿತ್ರೋದ್ಯಮಕ್ಕೆ ಸರಕಾರ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಿದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ ಎಂದು ಕರೆಕೊಟ್ಟರು.

ಈ ಚಿತ್ರಕ್ಕೆ ತೆಲುಗಿನಲ್ಲಿ 'ಕಾಫಿ ಬಾರ್' ಎಂದು ತಮಿಳಿನಲ್ಲಿ 'ನಿಮಿಡಂಗಳ್'ಎಂದು ಹೆಸರಿಡಲಾಗಿದೆ. ಸಂದೇಶಾತ್ಮಕ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಖಂಡಿತಾ ಮೆಚ್ಚುತ್ತಾರೆ ಎಂಬ ಉದ್ದೇಶದಿಂದ ಈ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾಗಿ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕರೂ ಆಗಿರುವ ಗೀತಾ ಕೃಷ್ಣ ತಿಳಿಸಿದರು.

'ಅಪರಿಚಿತ' ಹಾಗೂ "ಸೈನೈಡ್"ನಂತಹ ಚಿತ್ರಗಳು ನನಗೆ ಪ್ರೇರಣೆ ನೀಡಿದವು ಎಂದು ಇಂಗ್ಲಿಷ್ ಮಿಶ್ರಿತ ಕನ್ನಡದಲ್ಲಿ ಗೀತಾ ಕೃಷ್ಣ ಹೇಳಿದರು. ಧ್ವನಿಸುರುಳಿ ಬಿಡುಗಡೆಗೂ ತಾವು ಹೇಳಿದ ಮಾತಿಗೂ ಒಂದಕ್ಕೊಂದು ಸಂಬಂಧ ಇಲ್ಲದಂತೆ ಮಾತನಾಡಿದವರು ಡೆಕ್ಕನ್ ಏವಿಯೇಷನ್ ನ ಕ್ಯಾಫ್ಟನ್ ಗೋಪಿನಾಥ್. ವಿಮಾನಯಾನ, ರಾಜಕೀಯ, ಸಮಾಜದಲ್ಲಿನ ಏರುಪೇರುಗಳು...ಭಾರತದಲ್ಲಿರುವ ಅವಕಾಶಗಳು ಹೀಗೆ ಎತ್ತೆತ್ತಲೋ ಸಾಗಿತ್ತು ಅವರ ಭಾಷಣ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ, ರಾಕ್ ಲೈನ್ ವೆಂಕಟೇಶ್, ತಾರಾ, ನೆ.ಲ.ನರೇಂದ್ರ ಬಾಬು, ಚಿನ್ನೇಗೌಡ, ಚಿತ್ರದ ನಾಯಕ ಶಶಾಂಕ್ ಮತ್ತು ನಾಯಕಿ ಬಿಯಾಂಕ ದೇಸಾಯಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಒಟ್ಟು ಆರು ಹಾಡುಗಳುಳ್ಳ 'ಕಾಫಿ ಶಾಪ್' ಚಿತ್ರಕ್ಕೆ ಸಾಹಿತ್ಯ ವಿ ನಾಗೇಂದ್ರ ಪ್ರಸಾದ್. ಸಂಗೀತ ಗೀತಾ ಕೃಷ್ಣ. ಹೈದರಾಬಾದ್ ನ ಆದಿತ್ಯ ಮ್ಯೂಸಿಕ್ಸ್ ಧ್ವನಿಸುರುಳಿಯನ್ನು ಹೊರತಂದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada