»   »  ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇಗೆ ಫಾಲ್ಕೆ ಪ್ರಶಸ್ತಿ

ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇಗೆ ಫಾಲ್ಕೆ ಪ್ರಶಸ್ತಿ

Posted By:
Subscribe to Filmibeat Kannada
Manna Dey to get Dada Saheb Phalke award
2007ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇ ಅವರಿಗೆ ಲಭಿಸಿದೆ. ತೊಂಬತ್ತರ ಹರಯದ ಮನ್ನಾ ಡೇ ಅವರಿಗೆ ಈಗಾಗಲೇ ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟು ಗೌರವಿಸಲಾಗಿದೆ. ಕೋಲ್ಕತ್ತಾದಲ್ಲಿ ಹುಟ್ಟಿದ ಮನ್ನಾ ಅವರು ಕನ್ನಡ ಸೇರಿದಂತೆ ಹನ್ನೊಂದು ಭಾಷೆಗಳಲ್ಲಿ 3500 ಹಾಡುಗಳನ್ನು ಹಾಡಿದ್ದಾರೆ.

ಮನ್ನಾ ಡೇ ಅವರು ಖ್ಯಾತ ಹಿನ್ನೆಲೆ ಗಾಯಕರಾದ ಮಹಮದ್ ರಫಿ, ಕಿಶೋರ್ ಕುಮಾರ್, ಮುಖೇಶ್ ಅವರ ಸಮಕಾಲೀನರು. ಐವತ್ತು, ಅರವತ್ತು ಮತ್ತು ಎಪ್ಪತ್ತರ ದಶಕದಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ ಮಹಾನ್ ಗಾಯಕ. ತಮ್ಮ ಜೀವನದ ಸಂಧ್ಯಾಕಾಲವನ್ನು ಬೆಂಗಳೂರಿನ ಕಲ್ಯಾಣನಗರದಲ್ಲಿ ಕಳೆಯುತ್ತಿರುವ ಮನ್ನಾ ಡೇ ಕನ್ನಡಿಗರ ಪ್ರೀತಿ ಗಳಿಸಿದ್ದಾರೆ.

ಕನ್ನಡದಲ್ಲಿ ಉದಯ್ ಕುಮಾರ್ ನಟಿಸಿದ್ದ ಕಲಾವತಿ ಚಿತ್ರದಲ್ಲಿ ಕುಹೂ ಕುಹೂ ಎನ್ನುತ ಹಾಡುವಾ ಕೋಗಿಲೆ... ಜಯತೆ ಜಯತೆ ಸತ್ಯಮೇವ ಜಯತೆ...ಹಾಡುಗಳು ಅವರ ಕಂಠಸಿರಿಯಿಂದ ಹೊಮ್ಮಿವೆ. ಹಿಂದಿಯಲ್ಲಿ ವಖ್ತ್ ಚಿತ್ರದ ಏ ಮೇರೆ ಜೋಹೊರ್ ಜಭೀನ್... ಆನಂದ್ ಚಿತ್ರದ ಜಿಂದಗಿ ಕೈಸೆ ಹೈ ಪಹೇಲಿ ಹಾಯ್...ಮುಂತಾದ ಜನಪ್ರಿಯ ಗೀತೆಗಳಿಂದ ಜನಮನ ಸೂರೆಗೊಂಡಿದ್ದಾರೆ.

ಎಸ್ ಡಿ ಬರ್ಮನ್, ಶಂಕರ್ ಜೈ ಕಿಶನ್ , ರವಿ, ಲಕ್ಷ್ಮಿಕಾಂತ್ ಪ್ಯಾರೆಲಾಲ್ ಸೇರಿದಂತೆ ಎಲ್ಲಾ ಖ್ಯಾತ ಸಂಗೀತ ನಿರ್ದೇಶಕರ ರಾಗಸಂಯೋಜನೆಗೆ ತಮ್ಮ ಕಂಠ ಒದಗಿಸಿದ್ದಾರೆ. 1953ರ ಡಿಸೆಂಬರ್ 18ರಂದು ಕೇರಳ ಮೂಲದ ಸುಲೋಚನಾ ಕುಮಾರನ್ ಅವರೊಡನೆ ವಿವಾಹ. ಶೌರುಮಾ, ಸುಮಿತಾ ಇಬ್ಬರು ಪುತ್ರಿಯರು. ಮುಂಬೈನಲ್ಲಿ 50 ವರ್ಷಕಾಲ ವಾಸ. ಸದ್ಯ ಬೆಂಗಳೂರಿನ ಕಲ್ಯಾಣ ನಗರ ನಿವಾಸಿ.

ಮನ್ನಾ ಡೇ ಅವರಿಗೆ ತಡವಾಗಿಯಾದರೂ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮವನ್ನು ಉಂಟು ಮಾಡಿದೆ. ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿರುವ ಮನ್ನಾ ಡೇ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ಲಭ್ಯವಾಗಿಲ್ಲ. ಅಕ್ಟೋಬರ್ 21ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ವೃತ್ತಿ ಜೀವನ:
*ಮಾವ ಕೆಸಿ ಡೇ ಮೂಲಕ ಸಚಿನ್ ದೇವ್ ಬರ್ಮನ್ ಪರಿಚಯ. ಉಸ್ತಾದ್ ಅಮಾನ್ ಅಲಿಖಾನ್ ಹಾಗೂ ಉಸ್ತಾದ್ ಅಬ್ದುಲ್ ರಹಮಾನ್ ಖಾನ್ ಬಳಿ ಹಿಂದೂಸ್ತಾನಿ ಸಂಗೀತ ಪಾಠ.
*1943 ತಮನ್ನಾ ಚಿತ್ರದ ಮೂಲಕ ಹಿನ್ನೆಲೆ ಗಾಯಕರಾದರು. ನಂತರ ಸಂಗೀತ ನಿರ್ದೇಶಕರಾದ ಶಂಕರ್ ಜೈ ಕಿಷನ್, ಆರ್ ಡಿ ಬರ್ಮನ್, ಸಲೀಲ್ ಚೌಧರಿ, ರವಿ, ಜೈದೇವ್, ಲಕ್ಷ್ಮಿಕಾಂತ್ ಪ್ಯಾರೇಲಾಲ್, ಹೇಮಂತ್ ಕುಮಾರ್, ಕಲ್ಯಾಣ್ ಜಿ ಆನಂದ್ ಜಿ ಮುಂತಾದವರ ಸಂಯೋಜನೆಗೆ ಗಾಯನ.
* ಕಿಶೋರ್ ಕುಮಾರ್, ಮುಖೇಶ್, ಹೇಮಂತ್ ಕುಮಾರ್, ಮಹಮದ್ ರಫಿ, ಲತಾ ಮಂಗೇಷ್ಕರ್, ಸೈರೈಯಾ ಜತೆ ಗಾಯನ.

ಪ್ರಶಸ್ತಿ, ಗೌರವಗಳು:
*1971ರಲ್ಲಿ ಪದ್ಮಶ್ರೀ, 2005ರಲ್ಲಿ ಪದ್ಮ ಭೂಷಣ ಪ್ರಶಸ್ತಿ
*1969, 1971 ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ
* ಮಧ್ಯಪ್ರದೇಶ ಸರ್ಕಾರದಿಂದ ಲತಾ ಮಂಗೇಷ್ಕರ್ ಪ್ರಶಸ್ತಿ
* 2009ರಲ್ಲಿ 2007 ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
* ಜಾದವ್ ಪುರ್ ವಿವಿ, ಬುರ್ದ್ವನ್ ವಿವಿ, ರವೀಂದ್ರ ಭಾರತಿ ವಿವಿಗಳಿಂದ ಗೌರವ ಡಾಕ್ಟರೇಟ್
* ಒರಿಸ್ಸಾ, ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ್ ಸರ್ಕಾರಗಳಿಂದ ಗೌರವಾದರ.
* ಅನಂದ್ ಬಜಾರ್, ಕಮಲಾದೇವಿ ಗ್ರೂಪ್, ಪಿಸಿ ಚಂದ್ರ ಗ್ರೂಪ್, ಮಿಥುನ್ ಅಭಿಮಾನಿಗಳ ಸಂಘ, ಢಾಕಾ ಹಾಗೂ ಪುರಿಯ ಸಂಘಟನೆಗಳಿಂದ ಗೌರವ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada