twitter
    For Quick Alerts
    ALLOW NOTIFICATIONS  
    For Daily Alerts

    ಲೂಸಿಯಾ ಆಡಿಯೋ ವಿಮರ್ಶೆ:ಹಾಡುಗಳು ಮಸ್ತ್ ಶಿವಾ

    By ಪ್ರಶಾಂತ್ ಇಗ್ನೇಷಿಯಸ್
    |

    Rating:
    3.5/5

    ಪ್ರೇಕ್ಷಕರಿಂದ ಪ್ರೇಕ್ಷಕರಿಗಾಗಿಯೇ ಎಂಬ ಹೊಸ ಮಂತ್ರದಿಂದ ಪ್ರೇಕ್ಷಕರ ಹಣದಿಂದಲೇ ಪ್ರಾರಂಭವಾದ ಪವನ್ ಕುಮಾರ್ ರವರ ಹೊಸ ಕನಸು 'ಲೂಸಿಯಾ' ಕನ್ನಡ ಚಿತ್ರ ಪ್ರೇಮಿಗಳ ನಡುವೆ ಒಂದು ಹೊಸ ನಿರೀಕ್ಷೆಯನ್ನು ಸೃಷ್ಟಿಸಿದೆ. ಅದರಲ್ಲೂ ಅಂತರ್ಜಾಲ ಹಾಗೂ ಫೇಸ್ ಬುಕ್ಕಿನಲ್ಲಿ ಈ ಹೊಸ ಆಲೋಚನೆಯನ್ನು ಕನ್ನಡದ ಯುವ ಸಮುದಾಯ ಪ್ರೀತಿಯಿಂದ ಅಪ್ಪಿಕೊಂಡಿದೆ.

    ಲಂಡನ್ ಚಿತ್ರೋತ್ಸವದಲ್ಲಿ 'ಪ್ರೇಕ್ಷಕರ ಮೆಚ್ಚಿನ ಸಿನಿಮಾ' ಎನ್ನುವ ಪ್ರಶಸ್ತಿ ಪಡೆದಿದ್ದು ಪವನ್ ಕುಮಾರರ ಈ ಕನಸಿನ ರೆಕ್ಕೆ ಮತ್ತಷ್ಟು ಗರಿಗಳನ್ನು ಮೂಡಿಸಿದೆ. ಈಗ ಇದು ಕೇವಲ ಪವನ್ ಚಿತ್ರ ಮಾತ್ರವಲ್ಲದೆ ಲೂಸಿಯದಲ್ಲಿ ತೊಡಗಿಸಿಕೊಂಡ, ಕೇವಲ ರೂಪಾಯಿ 500 ರಷ್ಟು ಕಾಣಿಕೆ ನೀಡಿರುವ ಎಲ್ಲರದ್ದೂ ಎನ್ನುವಷ್ಟು ಬೆಳೆವಣಿಗೆ ಕಂಡಿದೆ.

    ಚಿತ್ರರಂಗ ಕೂಡ ವಾರೆ ಗಣ್ಣಿನಲ್ಲಿ ಇದನೆಲ್ಲಾ ಗಮನಿಸುತ್ತಿರಬಹುದು. ಮಾಧ್ಯಮಗಳ ಬೆಂಬಲ ಈಗಾಗಲೇ ಚಿತ್ರಕ್ಕೆ ಭಾರಿ ಎನ್ನುವ ಮಟ್ಟಿಗೇ ದೊರಕಿದೆ. ಹಾಡುಗಳನ್ನು ಕೇಳಿದಾಗ ಯಾವುದೇ ಚಿತ್ರಕ್ಕೆ ಇದುವರೆಗೆ ಸಂಗೀತ ನೀಡಿದ ಹಿನ್ನಲೆಯಿಲ್ಲದ ಹೊಸ ಸಂಗೀತ ನಿರ್ದೇಶಕ ಹಾಗೂ ಬಜೆಟಿನ ಇತಿಮಿತಿ ಇಲ್ಲಿನ ಹಾಡುಗಳಲ್ಲಿ ಎದ್ದು ಕಾಣುತ್ತದೆ.

    ಚಿತ್ರದ ಹಾಡುಗಳು ಹೇಗಿವೆ, ಸ್ಲೈಡಿನಲ್ಲಿ ನೋಡಿ..

    ಹೇಳು ಶಿವ

    ಹೇಳು ಶಿವ

    ಸಾಹಿತ್ಯ: ಯೋಗರಾಜ್ ಭಟ್
    ಹಾಡಿರುವವರು: ನವೀನ್ ಸಜ್ಜು, ರಕ್ಷಿತ್ ನಗರ್ಲೆ, ಯೋಗರಾಜ್ ಭಟ್


    ಪವನ್ ಸಿನಿಮಾ ಎಂದ ಮೇಲೆ ಯೋಗರಾಜ್ ಭಟ್ಟರ ಹಾಡು ಇಲ್ಲದಿರಲು ಸಾಧ್ಯವೇ ಹೇಳು ಶಿವಾ? ಹೇಳು ಶಿವಾ ಹಾಡಿಗೆ ಸಾಹಿತ್ಯ ಒದಗಿಸಿ ಧ್ವನಿಯನ್ನೂ ನೀಡಿರುವ ಭಟ್ಟರು ಮತ್ತೆ ತಮ್ಮ ತುಂಟತನ ಮೆರೆಯುತ್ತಾರೆ. ಹುಡುಗಿ, ಸೆಲ್ ಫೋನ್, ಹಾಸ್ಯ, ವೇದಾಂತ, 'ಗಳು' ಎಲ್ಲವೂ ಇದು ಅವರದೇ ಹಾಡು ಎಂಬುದನ್ನು ಧೃಢ ಪಡಿಸುತ್ತದೆ. ಹರಿಕೃಷ್ಣರ ಗೀತೆಯೇನೋ ಎನ್ನುವಷ್ಟು ಮಜವಾಗಿ ಶ್ರೀಮಂತವಾಗಿ ಹಾಡು ಮೂಡಿ ಬಂದಿದೆ. ನವೀನ ಹಾಗೂ ರಕ್ಷಿತ್ ನಗರ್ಲೆ ಉತ್ತಮವಾಗಿ ಹಾಡಿದ್ದಾರೆ.

    ಜಮ್ಮ ಜಮ್ಮಾ

    ಜಮ್ಮ ಜಮ್ಮಾ

    ಸಾಹಿತ್ಯ: ಪೂರ್ಣಚಂದ್ರ ತೇಜಸ್ವಿ
    ಹಾಡಿರುವವರು : ನವೀನ್ ಸಜ್ಜು


    ಮತ್ತೊಂದು ಮಾಸ್ ಹಾಡು. ನವ ಗಾಯಕ ನವೀನ್ ಸಜ್ಜುರವರ ಧ್ವನಿ ಹಾಗೂ ಉತ್ಸಾಹ ಎದ್ದು ಕಾಣುವಂತ ಈ ಹಾಡಿನ ಯಶಸ್ಸು ನವೀನ್, ನಿರ್ದೇಶಕ ಪವನ್ ಹಾಗೂ ತೇಜಸ್ವಿಯವರಿಗೆ ಸಲ್ಲಬೇಕು. ಆರ್ಕೇಷ್ಟ್ರಾ ಹಾಡುಗಾರನಿಗೆ ಅವಕಾಶಕೊಟ್ಟು ಹುರಿದುಂಬಿಸಿದ ಪರಿಣಾಮ ಈ ಹಾಡಿನಲ್ಲಿ ಕಾಣುತ್ತದೆ. ಉತ್ತಮ ವಾದ ಬೀಟ್ಸ್ ಹಾಗೂ ಉತ್ಸಾಹಭರಿತವಾದ ಗಾಯನದಿಂದ ಹಾಡು ಲವಲವಿಕೆಯಿಂದ ಕೂಡಿದೆ.

    ಜಮ್ಮ ಜಮ್ಮ (ದು:ಖ) - ಇದೇ ಹಾಡು ಮತ್ತೆ ದು:ಖದ ಸನ್ನಿವೇಶದಲ್ಲಿ ಬಂದಾಗಲೂ ನವೀನ್ ತಮ್ಮ ಗಾಯನದಿಂದ ಗಮನ ಸೆಳೆಯುತ್ತಾರೆ. ತೇಜಸ್ವಿಯವರ ಸಾಹಿತ್ಯ ಸಾಮಾನ್ಯ ವಾಗಿದೆಯಾದರೂ ರಾಗ ಹಾಗೂ ವಾದ್ಯ ಸಂಯೋಜನೆ ಹಾಡಿನ ಭಾವಲಹರಿಗೆ ತಕ್ಕ ಹಾಗೆ ಮೂಡಿ ಬಂದಿದೆ. ಮತ್ತೊಮ್ಮೆ ನವೀನ್ ಅಭಿನಂದನಾರ್ಹರು.

    ಯಾಕೋ ಬರಲಿಲ್ಲ

    ಯಾಕೋ ಬರಲಿಲ್ಲ

    ಸಾಹಿತ್ಯ: ಪೂರ್ಣಚಂದ್ರ ತೇಜಸ್ವಿ
    ಹಾಡಿರುವವರು: ನವೀನ್ ಸಜ್ಜು


    ಅನಂತಸ್ವಾಮಿಯವರ 'ನೀನ್ ನನ್ನಟ್ಟಿಗೆ ಬೆಳಕ್ ಕಿದ್ದೆ ನಂಜಿ' ಎಂಬ ಗೀತೆ ನೆನಪಿಸುವಂತೆ ಅದೇ ಧಾಟಿಯಲ್ಲಿ ಸಾಗುವ ಗೀತೆ. ವಿಭಿನ್ನವಾದ ರಾಗ ಸಂಯೋಜನೆ ಹಾಗೂ ಹಾಡುಗಾರಿಕೆ ಇದೆ ಎನ್ನುವುದು ಈ ಗೀತೆಯ ಹೆಗ್ಗಳಿಕೆ. ಕೇಳುತ್ತಾ ಕೇಳುತ್ತಾ ಇಷ್ಟವಾಗಬಹುದಾದ ಗುಣ ಇರುವುದರಿಂದ ಚಿತ್ರದಲ್ಲಿ ಈ ಹಾಡು ಹೇಗೆ ಬಳಕೆಯಾಗಿದೆ ಎನ್ನುವುದರ ಮೇಲೆ ಹಾಡಿನ ಯಶಸ್ಸು ನಿಲ್ಲಬಹುದು. ಮಿತವಾದ ವಾದ್ಯ, ಎಲ್ಲೂ ಅಬ್ಬರವಿಲ್ಲದಿರುವುದರಿಂದ ಸಾಹಿತ್ಯ ಎದ್ದು ಕೇಳುತ್ತದೆ.

    ತಿನ್ನ ಬೇಡ

    ತಿನ್ನ ಬೇಡ

    ಸಾಹಿತ್ಯ: ಪೂರ್ಣಚಂದ್ರ ತೇಜಸ್ವಿ
    ಹಾಡಿರುವವರು: ಬಪ್ಪಿ ಬ್ಲೂಸಂ, ಪೂರ್ಣಚಂದ್ರ ತೇಜಸ್ವಿ, ಅರುಣ್ ಎಂ ಸಿ


    ಕೊನೆಯಲ್ಲಿ ಸಂಗೀತ ರಾಜೀವ್, ನಿತಿನ್ ಹಾಗೂ ಸ್ಪರ್ಷರವರ ಧ್ವನಿಯಲ್ಲಿ ಮೂಡಿಬಂದಿರುವ ತಿನ್ನ ಬೇಡ ಹಾಡು ಮೊದಲಿನ ಗೀತೆಗಿಂತ ಲವಲವಿಕೆಯಾಗಿ ಮೂಡಿ ಬಂದಿದೆ. ಸಂಗೀತ ರಾಜೀವ ರವರ ಧ್ವನಿ ಗೀತೆಗೆ ಹೇಳಿ ಮಾಡಿಸಿದಂತಿದೆ. ಗ್ರಾಮೀಣ ಆಡು ಭಾಷೆಯ ಸಾಹಿತ್ಯವಿರುವುದು ನಿಜಕ್ಕೂ ಹಾಡಿಗೆ ಮೆರಗನ್ನು ನೀಡಿದೆ. ಕೊನೆಯಲ್ಲಿ ಸರ್ ಪ್ರೈಸ್ ಪ್ಯಾಕ್ ಎಂದೇ ಹೇಳಬಹುದಾದ ಹಾಡು ಗುನುಗುನಿಸುವಂತಿದೆ. ಮತ್ತಷ್ಟು ಅವಕಾಶ ಹಾಗೂ ಇತಿ ಮಿತಿಯ ಸಂಕೋಲೆ ಇಲ್ಲದಿದ್ದರೆ ಉತ್ತಮ ಸಂಗೀತ ನಿರ್ದೇಶಕರಾಗುವ ಭರವಸೆ ಮೂಡಿಸುತ್ತಾರೆ ಪೂರ್ಣ ಚಂದ್ರ ತೇಜಸ್ವಿ.

    ತಿನ್ನ ಬೇಡ ಕಮ್ಮಿ
    ಇಂದಿನ ಹಾಡುಗಳ ಧಾಟಿಯಲ್ಲೇ ಸಾಗುವ ಈ ಗೀತೆ ಯುವಕರಿಗೆ ಮೆಚ್ಚುಗೆಯಾಗಬಹುದಾದ ಸಾಧರಣ ಗೀತೆ. ಕನ್ನಡ ಬಾರದ ಹುಡುಗಿಯೊಬ್ಬಳಿಗೆ ಕನ್ನಡದ ಬಗ್ಗೆ ಹೇಳುತ್ತಾ ಛೇಡಿಸುವ ಸಾಹಿತ್ಯವಿರುವ ಗೀತೆಯಲ್ಲಿ ತಾಳ ವಾದ್ಯವೇ ಹೈಲೈಟ್. ತೇಜಸ್ವಿಯವರೇ ಬರೆದು ಧ್ವನಿಗೂಡಿಸಿರುವ ಹಾಡು ಒಳ್ಳೆಯ ನೃತ್ಯದಿಂದ ಪರದೆಯ ಮೇಲೆ ಇಷ್ಟವಾಗಬಹುದು.

    ನೀ ತೊರೆದ ಗಳಿಗಯಲ್ಲಿ

    ನೀ ತೊರೆದ ಗಳಿಗಯಲ್ಲಿ

    ಸಾಹಿತ್ಯ; ರಘು ಶಾಸ್ತ್ರಿ
    ಹಾಡಿರುವವರು : ಅನನ್ಯ ಭಟ್ ಹಾಗೂ ಉದಿತ್ ಹ್ಯಾರಿಸ್


    ಅನನ್ಯ ಭಟ್ ಹಾಗೂ ಉದಿತ್ ಹ್ಯಾರಿಸ್ ಹಾಡಿರುವ ಗೀತೆ ಈ ಆಲ್ಬಂ ನ ಅತ್ಯುತ್ತಮ ಗೀತೆ ಎನ್ನಲು ಅಡ್ಡಿಯಿಲ್ಲ. ರಘು ಶಾಸ್ತ್ರಿಯವರ ಉತ್ತಮವಾದ ಸಾಹಿತ್ಯವೂ ಇದಕ್ಕೆ ಕಾರಣ. ಕೇಳುತ್ತಾ ಇಷ್ಟವಾಗುವ ಇಂಪಾದ ಗೀತೆ ತನ್ನ ಮಾಧುರ್ಯದಿಂದಲೇ ಮನ ಸೆಳೆಯುತ್ತದೆ. ಈ ಹಾಡಿನಿಂದ ಸಂಗೀತ ನಿರ್ದೇಶಕ ತೇಜಸ್ವಿ ಭರವಸೆ ಮೂಡಿಸುತ್ತಾರೆ. ಹಾಡು ನಡುವೆಯಲ್ಲಿ ಸಾಮಾನ್ಯದ ಮಟ್ಟ ಮುಟ್ಟಿದರೂ ಗೀತೆಯ ಪ್ರಾರಂಭದಲ್ಲಿ ಬರುವ ಸಾಲುಗಳು ಸಾಹಿತ್ಯದಿಂದಲೂ ಸಂಗೀತ ಸಂಯೋಜನೆಯಿಂದಲೂ ಕೇಳುಗರನ್ನು ಅವರಿಸುತ್ತದೆ.

    English summary
    Audio review of Kannada movie Lucia. Pawan Kumar is directing this movie and song composed by Poornachandra Tejaswi
 .
    Wednesday, September 4, 2013, 16:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X