»   » ಗೀತಸಾಹಿತಿ ಗೀತಪ್ರಿಯ ಅನಾರೋಗ್ಯದಿಂದ ಚೇತರಿಕೆ

ಗೀತಸಾಹಿತಿ ಗೀತಪ್ರಿಯ ಅನಾರೋಗ್ಯದಿಂದ ಚೇತರಿಕೆ

Posted By:
Subscribe to Filmibeat Kannada
Geethapriya
ಹಿರಿಯ ಹಾಗೂ ಪ್ರಸಿದ್ಧ ಗೀತಸಾಹಿತಿ ಗೀತಪ್ರಿಯ ಅವರ ಅನಾರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಅವರು ಧ್ವನಿ ಹೊರಡಿಸಿ ಮಾತನಾಡಲು ಶಕ್ತರಾಗಿದ್ದಾರೆ. ಧ್ವನಿ ಹೊರಡಿಸಿ ಮಾತನಾಡಲಾಗದೇ ಮೂಕವೇದನೆ ಅನುಭವಿಸುತ್ತಿದ್ದ ಗೀತಪ್ರಿಯ, ತಾವು ಮಾತನಾಡುವಂತಾಗಿದ್ದು ಮರುಜನ್ಮ ಪಡೆದಷ್ಟೇ ದೊಡ್ಡದು ಎನ್ನುತ್ತಿದ್ದಾರೆ.

ಅವರು ತಮ್ಮ ಇಳಿವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವುದು ಬಹಳಷ್ಟು ಜನರಿಗೆ ಗೊತ್ತಿದೆ. ಅವರ ಧ್ವನಿಪೆಟ್ಟಿಗೆಗೆ ಪೆಟ್ಟುಬಿದ್ದು ಅವರು ಮಾತನಾಡಲು ಅಸಾಧ್ಯವಾಗಿತ್ತು. ಎಲ್ಲರೊಂದಿಗೆ ಬೆರೆತು ನಗುನಗುತ್ತಾ ಮಾತನಾಡುವ ಸ್ವಭಾವದ ಗೀತಪ್ರಿಯ ಅವರಿಗೆ ಮಾತುಬಾರದಿರುವುದು ಅವರ ಕುಟುಂಬ ಹಾಗೂ ಸ್ನೇಹಿತ ವಲಯಕ್ಕೆ ದೊಡ್ಡ ಆಘಾತವನ್ನೇ ಉಂಟುಮಾಡಿತ್ತು.

ಇನ್ನು ಗೀತಪ್ರಿಯ ಅವರ ಅಪಾರ ಅಭಿಮಾನಿವರ್ಗಕ್ಕಂತೂ ದಿಕ್ಕೇ ತೋಚದಂತಾಗಿತ್ತು. ಧ್ವನಿಪೆಟ್ಟಿಗೆಗೆ ಆದ ಅದೇನೋ ಯಡವಟ್ಟು ಅವರ ಮಾತನ್ನೇ ಕಸಿದುಕೊಂಡರೆ ಎಂಥವರಿಗೂ ಅದೆಂಥ ಆಘಾತವಾಗುತ್ತದೆಯೋ, ಅದು ಗೀತಪ್ರಿಯ ಹಾಗೂ ಅವರ ಕುಟುಂಬಕ್ಕಾಗಿತ್ತು. ಅಷ್ಟೇ ಅಲ್ಲ, ಆರ್ಥಿಕವಾಗಿ ಮುಗ್ಗಟ್ಟು ಅನುಭವಿಸುತ್ತಿದ್ದ ಆ ಕುಟುಂಬಕ್ಕೆ ಅದು ಬರಸಿಡಿಲು ಎಂಬಂತಾಗಿತ್ತು.

ಆದರೆ, ಸೂಕ್ತ ಸಮಯದಲ್ಲಿ ಸಿಕ್ಕ ಉತ್ತಮ ವೈದ್ಯಕೀಯ ಚಿಕಿತ್ಸೆ ಅವರು ಮರಳಿ ಮಾತು ಪಡೆಯುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದೆ. ಈಗ ವೈದ್ಯ ವೃಂದಕ್ಕೆ ಕೃತಜ್ಞತೆ ಹೇಳುವುದರೊಂದಿಗೆ ಚಿತ್ರರಂಗದ ಹಲವು ಜನರಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಗೀತಪ್ರಿಯ ಕುಟುಂಬ ಧನ್ಯವಾದ ಅರ್ಪಿಸಿದೆ.

ಕೇವಲ ಗಂಟಲು ಸಮಸ್ಯೆ ಮಾತ್ರವಲ್ಲದೇ ಹೃದಯ ಸಂಬಂಧಿ ಖಾಯಿಲೆಯಿಂದಲೂ ಬಳಲುತ್ತಿದ್ದರು ಗೀತಪ್ರಿಯ. ಜೊತೆಗೆ ಇಳಿವಯಸ್ಸಿನ ಮಾಮೂಲಿ ಖಾಯಿಲೆಗಳೂ ಅವರನ್ನು ಹಣ್ಣಾಗಿಸಿದ್ದವು. ಇವೆಲ್ಲವೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಚಿತ್ರರಂಗದ ಹಲವರು ಅವರಿಗೆ ತಮ್ಮ ಕೈಲಾದ ಆರ್ಥಿಕ ಸಹಾಯ ನೀಡಿದ್ದರು.

ನಟ ಶಿವರಾಜ್ ಕುಮಾರ್, ಜಗ್ಗೇಶ್, ಚಿಂಗಾರಿ ನಿರ್ಮಾಪಕರಾದ ಮಹಾದೇವ್, ಮನು ಗೌಡ ಹಾಗೂ ಇತರರು ಗೀತಪ್ರಿಯ ಅವರಿಗೆ ಧನ ಸಹಾಯ ನೀಡಿರುವ ಪ್ರಮುಖರು. ಅವರಲ್ಲದೇ, ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಕನ್ನಡದ ಕೋಟ್ಯಧಿಪತಿ ಮೂಲಕ ನಟಿ, ಲಕ್ಕಿ ಸ್ಟಾರ್ ರಮ್ಯಾ ಅವರೂ ಕೂಡ ಸಕಾಲದಲ್ಲಿ ನೆರವಾಗಿದ್ದರು.

ಇಂಥ ಹಿತೈಷಿಗಳು ಹಾಗೂ ಅಭಿಮಾನಿಗಳ ಸಕಾಲದ ಸಾಂತ್ವನ ಹಾಗೂ ಸಹಕಾರದಿಂದ ಗೀತಪ್ರಿಯ ಅನಾರೋಗ್ಯ ಬಹಳಷ್ಟು ಸುಧಾರಿಸಿದೆ. ಸ್ವಲ್ಪ ದಿನಗಳ ಹಿಂದೆ ಕೈಸನ್ನೆ ಮೂಲಕ ಸಂದೇಶ ನೀಡುತ್ತಿದ್ದ ಗೀತಪ್ರಿಯ ಈಗ ಮಾತಿನ ಮೂಲಕವೇ ಎಲ್ಲರಿಗೂ ಕೃತಜ್ಞತೆ ಹೇಳಿದ್ದಾರೆ.

ಕನ್ನಡಿಗರೆಲ್ಲರಿಗೂ ಸಂತೋಷದ ವಿಷಯವಾಗಿರುವ ಇದು ಗೀತಪ್ರಿಯರ ಜನಪ್ರಿಯತೆಗೆ ಸಾಕ್ಷಿಯಲ್ಲದಿದ್ದರೂ ಒಂದು ಉದಾಹರಣೆ ಕೊಟ್ಟಿದೆ. ಒಟ್ಟಿನಲ್ಲಿ ಗೀತಪ್ರಿಯಾ ಈಗ ಗೆಲುವಾಗಿದ್ದಾರೆ. ಇನ್ನು ಮುಂದೆ ಅವರು ಆರೋಗ್ಯವಾಗಿದ್ದು ನಗುನಗುತ್ತಾ ಮಾತನಾಡುತ್ತಾ ನೂರಕ್ಕೂ ಕಾಲ ಮೀರಿ ಬಾಳಲಿ ಎಂಬುದು ಆರು ಕೋಟಿಗೂ ಮೀರಿರುವ ಕನ್ನಡಿಗರೆಲ್ಲರ ಹಾರೈಕೆ. (ಒನ್ ಇಂಡಿಯಾ ಕನ್ನಡ)

English summary
Kannada lyricist Geethapriya's health problems are solved now. He is recovering now and feeling good. He thanked all who helped him timely for his treatment. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada