»   » ಚಿತ್ರಗೀತೆಗಳ ಮಹಾರಾಜ ಕವಿರಾಜ್ ಸಂದರ್ಶನ

ಚಿತ್ರಗೀತೆಗಳ ಮಹಾರಾಜ ಕವಿರಾಜ್ ಸಂದರ್ಶನ

By: ಶ್ರೀರಾಮ್ ಭಟ್
Subscribe to Filmibeat Kannada
Kaviraj
ಕನ್ನಡ ಚಿತ್ರರಂಗದ ಪ್ರಮುಖ ಗೀತ ಸಾಹಿತಿಯಾಗಿ ಗುರುತಿಸಿಕೊಂಡವರಲ್ಲಿ 'ಕವಿರಾಜ್' ಪ್ರಮುಖರು. ಇತ್ತೀಚಿನ ಗೀತಸಾಹಿತಿಗಳ ಸಾಲಿನಲ್ಲಿ ಅಗ್ರಸಾಲಿನಲ್ಲಿ ನಿಲ್ಲುವ ಇವರ ಹೆಸರನ್ನು ಕೇಳದ ಸಿನಿಪ್ರಿಯರಿಲ್ಲ. ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ 'ಕರಿಯ' ಚಿತ್ರದ 'ನನ್ನಲಿ ನಾನಿಲ್ಲ...' ಹಾಡಿನ ಮೂಲಕ ಮೂಲಕ ಚಿತ್ರಸಾಹಿತ್ಯದ ವೃತ್ತಿಜೀವನ ಪ್ರಾರಂಭಿಸಿದ ಇವರು ಇಂದು ಸುಮಾರು '450' ಚಿತ್ರಗಳಿಗೂ ಮೀರಿ '900' ಕ್ಕೂ ಹೆಚ್ಚು ಗೀತೆಗಳನ್ನು ಬರೆದಿದ್ದಾರೆ.

ಕವಿರಾಜ್, ಹೆಸರಿಗೆ ತಕ್ಕಂತೆ ಕವಿಗಳ ರಾಜನಾಗಿ ಮೆರೆಯುತ್ತಿರುವ (ಅಹಂಕಾರದಿಂದಲ್ಲ) ಇವರು ಕಳೆದ 2 ವರ್ಷಗಳಿಂದ ಸತತವಾಗಿ ಅತ್ಯುತ್ತಮ ಗೀತಸಾಹಿತಿ 'ಫಿಲಂ ಫೇರ್' ಪ್ರಶಸ್ತಿ ಪಡೆದಿದ್ದಾರೆ. ಇಷ್ಟೇ ಅಲ್ಲ, ಇತ್ತೀಚಿಗೆ ದುಬೈನಲ್ಲಿ ನಡೆದ 'ಸೈಮಾ (ಸೀಮಾ)' ಪ್ರಶಸ್ತಿ ಕೂಡ ಪಡೆದು ಕನ್ನಡದ ಅತ್ಯುತ್ತಮ ಗೀತಸಾಹಿತಿ ಎನಿಸಿದ್ದಾರೆ. ಇಂತಹ ಶ್ರೇಷ್ಠ, ವಿಶಿಷ್ಠ ಗೀತಸಾಹಿತಿ ಕವಿರಾಜ್ ನಮ್ಮ 'ಒನ್ ಇಂಡಿಯಾ ಕನ್ನಡ'ಕ್ಕದ ಶ್ರೀರಾಮ್ ಭಟ್ ಜೊತೆ ನಡೆಸಿದ ಸಂದರ್ಶನ ಇಲ್ಲಿದೆ, ಓದಿ...

*ನಿಮ್ಮ ಹುಟ್ಟೂರು, ಕುಟುಂಬ ಹಾಗೂ ವಿದ್ಯಾಭ್ಯಾಸದ ಬಗ್ಗೆ ಹೇಳಿ...

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಪುಟ್ಟ ಹಳ್ಳಿ 'ಯಡಿಯೂರು' ನನ್ನೂರು. ಕೆ.ಪಿ. ಹರಿಯಪ್ಪ ಹಾಗೂ ಜಾನಕಿ ನನ್ನ ತಂದೆ-ತಾಯಿ. ಕವಿತಾ ಮತ್ತು ಕಲ್ಪನಾ ಎಂಬಿಬ್ಬರು ಸಹೋದರಿಯರು. ಹುಟ್ಟೂರು ಯಡಿಯೂರಿನಲ್ಲಿ ಪ್ರೌಢಶಾಲೆಯವರೆಗಿನ ವಿದ್ಯಾಭ್ಯಾಸವನ್ನು ಮುಗಿಸಿ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದೆ. ನಂತರ ಶಿವಮೊಗ್ಗದ ಸೈಹಾದ್ರಿ ಕಾಲೇಜಿನಲ್ಲಿ 'ಬಿಎಸ್ಸಿ' ಪದವಿ ಮುಗಿಸಿದ್ದೇನೆ.

* ಗೀತಸಾಹಿತಿಯಾಗಿ ನಿಮ್ಮ 'ಜರ್ನಿ' ಎಂದು, ಹೇಗೆ ಪ್ರಾರಂಭವಾಯ್ತು?

ಚಿಕ್ಕಂದಿನಿಂದಲೂ ನನಗೆ ಸಾಹಿತ್ಯದ ಒಲವಿತ್ತು. ಕಾಲೇಜು ದಿನಗಳಿಂದಲೂ ನಾನು ಕಥೆ, ಕವನ ಬರೆಯುತ್ತಿದ್ದೆ. ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಬಂದ ನಾನು ಕೆಲ ಕಾಲ ಕಂಪನಿಯೊಂದರಲ್ಲಿ ರಿಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿದೆ. ಆದರೂ ಸಾಹಿತ್ಯದ ಮೇಲಿದ್ದ ನನ್ನ ಅಪಾರ ಒಲವು, ಸಂಗೀತ ನಿರ್ದೇಶಕರಾದ ಗುರುಕಿರಣ್ ಅವರನ್ನು ಭೇಟಿಯಾಗುವಂತೆ ಮಾಡಿತು. 2002 ರಲ್ಲಿ ಅವರ ಸಂಗೀತ ನಿರ್ದೇಶನದಲ್ಲಿ 'ಕರಿಯ' ಚಿತ್ರದ 'ನನ್ನಲಿ ನಾನಿಲ್ಲ...' ಹಾಡಿನ ಮೂಲಕ ನನ್ನ ಚಿತ್ರಸಾಹಿತ್ಯದ ಜೀವನ ಆರಂಭವಾಯ್ತು.

ಅಲ್ಲಿಂದ ಮುಂದೆ ಗುರುಕಿರಣ್ ಸಂಗೀತ ನೀಡಿರುವ ಬಹಳಷ್ಟು ಚಿತ್ರಗಳಿಗೆ ಸಾಹಿತ್ಯ ಬರೆಯುತ್ತಾ ಬಂದೆ. ಇಲ್ಲಿಯವರೆಗೆ ಸುಮಾರು 450 ಕ್ಕೂ ಚಿತ್ರಗಳೀಗೆ ಸುಮಾರು 900ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದೇನೆ. ಹೀಗಾಗಿ ನನ್ನ ಚಿತ್ರಜಗತ್ತಿನ ಸಾಹಿತ್ಯದ ಪ್ರಯಾಣದಲ್ಲಿ ಗುರುಕಿರಣ್ ಅವರೇ ನನ್ನ 'ಗಾಡ್ ಫಾದರ್'. ನಂತರ ಬೇರೆಯವರೂ ಹಾಡು ಬರೆಸಲು ಪ್ರಾರಂಭಿಸಿದರು. ಈಗ ಸಾಮಾನ್ಯ ಎಲ್ಲಾ ಸಂಗೀತ ನಿರ್ದೇಶಕರ ಟೂನ್ ಗಳಿಗೂ ಸಾಹಿತ್ಯ ಬರೆದಿದ್ದೇನೆ.

*ನಿಮ್ಮ ಹಾಡುಗಳಲ್ಲಿ ಯಾವುದಾದರೂ ಹಾಡಿನ ಹಿಂದೆ ನಿಮ್ಮ ನಿಜಜೀವನದ ನೆರಳೇನಾದರೂ ಇದೆಯೇ?

ಹೌದು, ಖಂಡಿತವಾಗಿಯೂ ಇದೆ. 'ಜಾಲಿಡೇಸ್' ಚಿತ್ರದಲ್ಲಿ ಬರೆದ "ಮರೆವುದೆಂತು...' ಹಾಡು ನನ್ನ ಜೀವನಾನುಭವಕ್ಕೆ ಅತಿ ಹತ್ತಿರವಾಗಿದೆ. ಆ ಹಾಡಿನಲ್ಲಿ ನನ್ನ ಬದುಕಿಗೆ ಹತ್ತಿರವಾದ ಅನೇಕ ಸಂಗತಿಗಳು ವ್ಯಕ್ತವಾಗಿವೆ. ನಾನು ಆ ಹಾಡನ್ನು ಯಾವತ್ತೇ ಕೇಳಿದರೂ ನನಗೆ ನನ್ನ ಕಳೆದ ಜೀವನ ನೆನಪಾಗುತ್ತದೆ. ಆ ಹಾಡಿನೊಂದಿಗೆ ನನ್ನ ಬದುಕಿನ ಮಹತ್ವದ ಭಾಗ ಬೆರೆತಿದೆ.

*ನಿಮ್ಮ ಹಾಡುಗಳಲ್ಲಿ ನಿಮಗಿಷ್ಟವಾದ 'ಟಾಪ್ ಟೆನ್' ಯಾವವು?

* (ನಗು...)ನಾನು ಬರೆದ ಎಲ್ಲಾ ಹಾಡುಗಳೂ ನನಗೆ ಇಷ್ಟವೇ. ಆದರೆ ಅವುಗಳಲ್ಲಿ ಕೆಲವನ್ನು ನಾನು ತಕ್ಷಣವೇ ನೆನಪು ಮಾಡಿಕೊಂಡು ಹೇಳಬಲ್ಲೆ... ಅಂಥವುಗಳಲ್ಲಿ ಕೆಲವು ಹಾಡುಗಳು...

* ಗಗನವೇ ಬಾಗಿ... (ಸಂಜು ವೆಡ್ಸ್ ಗೀತಾ)
* ಸಂಜು ಮತ್ತು ಗೀತಾ... (ಸಂಜು ವೆಡ್ಸ್ ಗೀತಾ)
* ಗರನೆ ಗರಗರನೆ ತಿರುಗಿದೆ ಧರಣಿ...(ಆಪ್ತರಕ್ಷಕ)
* ಕಣಕಣದೇ ಶಾರದೆ...(ಆಪ್ತಮಿತ್ರ)
* ಪತ್ರ ಬರೆಯಲಾ ಚಿತ್ರ ಬಿಡಿಸಲಾ...(ಅರಮನೆ)
* ಮೊದಮೊದಲು ಭುವಿಗಿಳಿದಾ ಮಳೆ ಹನಿಯು...(ಯಶವಂತ್)
* ಜಿನುಜಿನುಗೋ ಜೇನಾಹನಿ...(ಯಶವಂತ್)
* ಬಂಗಾರಿ ಯಾರೇ ನೀ ಬುಲ್ ಬುಲ್...(ಗಜ)
* ಹೊಸದೊಂದು ಹೆಸರಿಡು ನನಗೆ...(ಗಾನಾ ಬಜಾನಾ)
* ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ...(ಬಿಂದಾಸ್)
* ತಂಗಾಳಿ ತಂದೆಯಾ ನನ್ನ ಬಾಳಲಿ...(ಲವ್ ಗುರು)
* ಸುಮ್ಮನೆ ಯಾಕೆ ಬಂದೆ...(ಜೀವ)

*ಇತ್ತೀಚಿಗೆ ನೀವು ಬರೆದ ಹಾಡುಗಳೆಲ್ಲಾ 'ಹಿಟ್' ಆಗುತ್ತಿವೆ ಹೇಗೆ?

(ನಗು...) ಹಾಗೇನಿಲ್ಲ. ಇತ್ತೀಚಿಗೆ ಸಹಜವಾಗಿ ನನಗೆ ಮೊದಲಿಗಿಂತ ಹೆಚ್ಚು ಸಿನಿಮಾ ಕಥೆಗೆ ಹೊಂದಿಕೆಯಾಗುವ ಹಾಡು ಬರೆಯುವ ದಾರಿ ಸಿಕ್ಕಿದೆ. ಪದಭಂಡಾರವನ್ನು ಉಪಯೋಗಿಸುವ ಚಾಕಚಕ್ಯತೆಯೂ ಒಲಿದಿದೆ. ಹೀಗಾಗಿ, ನಾನು ಹಾಡನ್ನು ಮೊದಲು ನನ್ನ ಸಂಗೀತ ನಿರ್ದೇಶಕರಿಗೆ ಮೆಚ್ಚುಗೆಯಾಗುವಂತೆ ಮಾಡುತ್ತೇನೆ. ಜೊತೆಗೆ ಅದು ಪ್ರೇಕ್ಷಕರ ನಾಡಿಮಿಡಿತಕ್ಕೂ ಹೊಂದಾಣಿಕೆಯಾಗಿ ಹಿಟ್ ಆಗುತ್ತಿದೆ. ಒಂದೇ ಮಾತಿನಲ್ಲಿ- ಪ್ರತಿಭೆ, ಪರಿಶ್ರಮ ಹಾಗೂ ಅದೃಷ್ಟ ಜೊತೆಗೂಡಿದೆ ಎನ್ನಬಹುದೇನೋ!

*ಸಿನಿಮಾ ಸಾಹಿತ್ಯದ ಹೊರತಾಗಿ ನಿಮಗೆ ಬೇರೆ ಯಾವ ವಿಭಾಗದಲ್ಲಿ ಆಸಕ್ತಿಯಿದೆ?

ನಾನು ಇಲ್ಲಿಯವರೆಗೂ ಗೀತಸಾಹಿತಿಯಾಗೇ ಹೆಸರು ಮಾಡಿದ್ದರೂ ನನಗೆ ನಿರ್ದೇಶನ ಹಾಗೂ ನಿರ್ಮಾಣ ಈ ಎರಡರಲ್ಲೂ ಆಸಕ್ತಿಯಿದೆ. ಇದೀಗ ಚಿತ್ರೀಕರಣದಲ್ಲಿರುವ ದರ್ಶನ್ ನಾಯಕತ್ವದ 'ಬುಲ್ ಬುಲ್' ಚಿತ್ರದ ನಿರ್ಮಾಪಕರಲ್ಲಿ ನಾನೂ ಒಬ್ಬ. ಹೀಗೆ ಸದ್ಯಕ್ಕೆ ನಿರ್ಮಾಪಕನಾಗಿ ತೊಡಗಿಸಿಕೊಂಡಿರುವ ನಾನು ನಿಧಾನವಾಗಿ ನಿರ್ದೇಶನದತ್ತ ತೊಡಗಿಸಿಕೊಳ್ಳಲಿದ್ದೇನೆ.

*ನಿಮ್ಮ ಜೀವನದಲ್ಲಿ ಮರೆಯಲಾರದ ಘಟನೆ?

ಇದೆ, ಖಂಡಿತ. ಅದು 'ಡಾ ವಿಷ್ಣುವರ್ಧನ್' ಅವರಿಂದ ನನಗೆ ಸಿಕ್ಕ ಮೆಚ್ಚುಗೆ. ಅವರ ಅಭಿನಯದ 'ಆಪ್ತಮಿತ್ರ' ಚಿತ್ರಕ್ಕಾಗಿ ನಾನೊಂದು ಹಾಡು ಬರೆದಿದ್ದು ಎಲ್ಲರಿಗೂ ಗೊತ್ತು. ಅದು, 'ಕಣಕಣದೆ ಶಾರದೇ...' ಆ ಹಾಡನ್ನು ಮೊದಲಬಾರಿಗೆ ಕೇಳಿದ ತಕ್ಷಣವೇ ಡಾ ವಿಷ್ಣುವರ್ಧನ್ ಅವರು ಎಷ್ಟೊಂದು ಚೆನ್ನಾಗಿ ಈ ಹಾಡನ್ನು ಬರೆದಿದ್ದೀಯಾ!... ಹೆಸರಿಗೆ ತಕ್ಕಂತೆ ನೀನು 'ಕವಿರಾಜನೇ' ಅಂದರು. ಅವರ ಮಾತನ್ನು ಕೇಳಿದ ನನಗೆ ಅಚ್ಚರಿ, ಖುಷಿ ಎರಡೂ ಒಟ್ಟಿಗೆ ಆದ ಆ ಕ್ಷಣವನ್ನು ನಾನೆಂದಿಗೂ ಮರೆಯಲಾರೆ.
                                                                            ***

English summary
Kaviraj is the most popular Lyricist in Kannada Film Industry. He started work with Music Director Gurukiarn from the movie 'Kariya' in 2002. Then he continue this carrier and wrote more than 900 Songs for 450 movies. He won 2 Fimfare Award also. Here is 'Oneindia' Interview of Kaviraj, read for the more...
Please Wait while comments are loading...