ಬಳ್ಳಾರಿಯಲ್ಲಿ ಪುನೀತ್ 'ಪವರ್'ಗೆ ಮಹೇಶ್ ಕರೆಂಟ್
ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅಭಿನಯದ 'ಪವರ್' ಚಿತ್ರದ ಧ್ವನಿಮುದ್ರಿಕೆ ಬಿಡುಗಡೆಗೆ ಬಳ್ಳಾರಿಯ ಮುನ್ಸಿಪಲ್ ಮೈದಾನ ಸಕಲ ರೀತಿಯಲ್ಲೂ ಸಜ್ಜಾಗಿದೆ. ತೆಲುಗು ಚಿತ್ರನಟ ಮಹೇಶ್ ಬಾಬು ಮತ್ತು ಚಿತ್ರದ ಹೀರೋ ಪುನೀತ್ ಶನಿವಾರ (ಜೂ.28) ಸಂಜೆ ಬಳ್ಳಾರಿಗೆ ಆಗಮಿಸಲಿದ್ದಾರೆ.
ಈಗಾಗಲೆ ಬಿಡುಗಡೆಯಾಗಿರುವ ಚಿತ್ರ ಟೀಸರ್ ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲುಗಿನ ಯಶಸ್ವಿ ಚಿತ್ರ 'ದೂಕುಡು' ಚಿತ್ರದ ರೀಮೇಕ್ ಇದಾಗಿದ್ದು ಕೆ ಮಹೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಸ್ಪೈನ್, ಹೈದರಾಬಾದ್, ಮುಂಬೈ, ಸಂಡೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. [ದುಷ್ಮನ್ ಅಂದ್ರೆ ದೂಸ್ರಾ ಮಾತೇ ಇಲ್ಲ 'ಪವರ್' ಸ್ಟಾರ್]
ಮೂಲ ಚಿತ್ರದಲ್ಲಿ ಮಹೇಶ್ ಬಾಬು, ಸಮಂತಾ ಮುಖ್ಯಭೂಮಿಕೆಯಲ್ಲಿದ್ದಾರೆ. 14 ರೀಲ್ಸ್ ಎಂಟರ್ ಟೈನ್ ಮೆಂಟ್ ಪ್ರೈ ಲಿ ಹಾಗೂ ಕೊಲ್ಲ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಗೋಪಿ ಅಚಂಟ, ರಾಮ್ ಅಚಂಟ ಹಾಗೂ ಅನಿಲ್ ಸುಂಕರ ನಿರ್ಮಿಸುತ್ತಿದ್ದಾರೆ.ಆಡಿಯೋ ಬಿಡುಗಡೆಗೆ ನಾಯಕಿ ತ್ರಿಷಾ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ. ಅಂದಿನ ಸಮಾರಂಭಕ್ಕೆ ತೆಲುಗಿನ ಖ್ಯಾತ ನಟ ಸೂಪರ್ ಸ್ಟಾರ್ ಮಹೇಶ್ ಬಾಬು ಆಗಮಿಸುತ್ತಿರುವುದು ವಿಶೇಷ.
ಶ್ರೀನು ವೈಟ್ಲ ನಿರ್ದೇಶನದ 'ದೂಕುಡು' ಚಿತ್ರ ಬಾಕ್ಸ್ ಆಫೀಸಲ್ಲಿ ರು.100 ಕೋಟಿ ಗಳಿಸುವ ಮೂಲಕ ಟಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿತ್ತು. ಹಳಿತಪ್ಪಿದ್ದ ಮಹೇಶ್ ಬಾಬು ಅವರ ವೃತ್ತಿಜೀವನದಲ್ಲಿ ಮಹತ್ತರ ತಿರುವು ನೀಡಿದ ಚಿತ್ರವಿದು. ನಂದಿ ಪ್ರಶಸ್ತಿ ಸೇರಿದಂತೆ ಫಿಲಂಫೇರ್ ಪ್ರಶಸ್ತಿಗಳಿಗೆ ಚಿತ್ರ ಪಾತ್ರವಾಗಿದೆ.
ಈ ಹಿಂದೆ ಮಹೇಶ್ ಬಾಬು ಅಭಿನಯದ 'ಒಕ್ಕಡು' ಚಿತ್ರ 'ಅಜಯ್' ಆಗಿ ಕನ್ನಡಕ್ಕೆ ರೀಮೇಕ್ ಆಗಿತ್ತು. ತೆಲುಗಿನ ಮತ್ತೊಂದು ಚಿತ್ರ 'ರೆಡಿ' ಕನ್ನಡಕ್ಕೆ 'ರಾಮ್' ಆಗಿ ರೀಮೇಕ್ ಆಗಿತ್ತು. ಈಗ ದೂಕುಡು ಚಿತ್ರದ ಸರದಿ.
ಐದು ಹಾಡುಗಳಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡುತ್ತಿದ್ದಾರೆ. ಕನ್ನಡದಲ್ಲಿ ಇದು ಅವರ ಪ್ರಥಮ ಚಿತ್ರ. ಕೃಷ್ಣಕುಮಾರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಕೆ.ಎಸ್.ಚಂಪಕಧಾಮ (ಬಾಬು), ಎಸ್.ಕುಮಾರ್ ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












