»   » ಮುಂಬೈನ ಅಂಧೇರಿಯಲ್ಲಿ ಪುನೀತ್ 'ನಿನ್ನಿಂದಲೇ' ಹಾಡು

ಮುಂಬೈನ ಅಂಧೇರಿಯಲ್ಲಿ ಪುನೀತ್ 'ನಿನ್ನಿಂದಲೇ' ಹಾಡು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿನ್ನಿಂದಲೇ ಚಿತ್ರದ ಆಡಿಯೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಚಿತ್ರದ ಹಾಡೊಂದನ್ನು ಮುಂಬೈನಲ್ಲಿ ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಅಂಧೇರಿಯಲ್ಲಿರುವ ಪೋವೈ ಲಾಕ್ ಏರಿಯಾದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು.

ಈ ಹಾಡಿನ ಭಾಗದ ಚಿತ್ರೀಕರಣದಲ್ಲಿ ಪುನೀತ್ ಜೊತೆಗೆ 15 ವಿದೇಶಿ ನರ್ತಕಿಯರು ಸೇರಿದಂತೆ ಒಟ್ಟು 30 ಮಂದಿ ಹೆಜ್ಜೆ ಹಾಕಿದರು. ಬಾಲಿವುಡ್ ನ ಜನಪ್ರಿಯ ನೃತ್ಯ ನಿರ್ದೇಶಕ ಅಹ್ಮದ್ ಖಾನ್ ಕೊರಿಯೋಗ್ರಫಿಯಲ್ಲಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು. [ನಿನ್ನಿಂದಲೇ ಧ್ವನಿಸುರುಳಿ ವಿಮರ್ಶೆ]

Ninnindale movie still

ಘಜನಿ, ರೇಸ್ 2, ಜಬ್ ವೆ ಮೆಟ್, ಮೌಸಮ್, ಖಮೀನೆ ಚಿತ್ರಗಳಿಗೆ ಅಹ್ಮದ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಕವಿರಾಜ್ ಅವರ ಸಾಹಿತ್ಯ ಇರುವ ಹಾಡನ್ನು ವಿಶಾಲ್ ದದ್ಲಾನಿ ಸುಶ್ರಾವ್ಯವಾಗಿ ಹಾಡಿದ್ದಾರೆ. ತೆಲುಗಿನ ಜಯಂತ್ ಸಿ ಪರಾಂಜೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು.

ವಿಶಾಲ್ ದದ್ಲಾನಿ ಅವರು ಪರಾಂಜೆ ಅವರ ಆಪ್ತಮಿತ್ರರಂತೆ. ಹಾಗಾಗಿ ಅವರು ಈ ಹಾಡಿಗೆ ಯಾವುದೇ ಸಂಭಾವನೆಯನ್ನೂ ಪಡೆದೆಯದೆ ಹಾಡಿದ್ದಾರೆ. ಪುನೀತ್ ಅವರ ಡಾನ್ಸಿಂಗ್ ಸಾಮರ್ಥ್ಯಕ್ಕೆ ತಕ್ಕಂತೆ ಈ ಹಾಡನ್ನು ತೆರೆಗೆ ತರಲಾಗುತ್ತಿದೆ. ಈಗಾಗಲೆ ಹಾಡಿನ ಧ್ವನಿಸುರುಳಿ ಬಿಡುಗಡೆಯಾಗಿದ್ದು ಎಲ್ಲೆಡೆಯಿಂದ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ.

ಮೂಲಗಳ ಪ್ರಕಾರ 'ನಿನ್ನಿಂದಲೇ' ಚಿತ್ರ ಜನವರಿ 9, 2014ಕ್ಕೆ ರಿಲೀಸ್ ಆಗುತ್ತಿದೆ. 'ಯಾರೇ ಕೂಗಾಡಲಿ' ಚಿತ್ರದ ಬಳಿಕ ತೆರೆಕಾಣುತ್ತಿರುವ ಪುನೀತ್ ಚಿತ್ರ ಇದಾಗಿದೆ. ಸದ್ಯಕ್ಕೆ ಚಿತ್ರ ಸೆನ್ಸಾರ್ ನಲ್ಲಿ ಪಾಸಾಗಬೇಕಿದೆ. ಚಿತ್ರಕ್ಕೆ ಕ್ಲೀನ್ ಸರ್ಟಿಫಿಕೇಟ್ ಸಿಕ್ಕೇಸಿಗುತ್ತದೆ ಭರವಸೆಯಲ್ಲಿ ಚಿತ್ರತಂಡವಿದೆ. ಏಕೆಂದರೆ ಅಣ್ಣಾವ್ರ ಕುಟುಂಬದ ಚಿತ್ರಗಳು ಯಾವತ್ತೂ ಸದಭಿರುಚಿಯ ಚೌಕಟ್ಟನ್ನು ಮೀರಿಲ್ಲ.

ಮುಂಬೈ ಚೆಲುವೆ, ಮಾಜಿ ಮಿಸ್ ಇಂಡಿಯಾ ಎರಿಕಾ ಫರ್ನಾಂಡೀಸ್ ಚಿತ್ರದ ನಾಯಕಿ. ಇದೇ ಮೊಟ್ಟಮೊದಲ ಬಾರಿಗೆ ತೆಲುಗಿನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಚಿತ್ರದ ಪಾತ್ರವರ್ಗದಲ್ಲಿ ತಿಲಕ್ ಶೇಖರ್, ವಿನಾಯಕ ಜೋಶಿ, ಅವಿನಾಶ್ ಮುಂತಾದವರಿದ್ದಾರೆ.

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ವಿಜಯ್ ಕುಮಾರ್ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಭಾರಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಅಮೆರಿಕಾದಲ್ಲಿ ನೆಲೆನಿಂತ ಭಾರತೀಯ ಕುಟುಂಬ, ಅಲ್ಲಿಗೆ ಬರುವ ಮತ್ತೊಂದು ಕುಟುಂಬದ ನಡುವಿನ ಕಥಾಹಂದರವನ್ನು 'ನಿನ್ನಿಂದಲೇ' ಒಳಗೊಂಡಿದೆ. (ಏಜೆನ್ಸೀಸ್)

English summary
Power Star Puneeth Rajkumar and Erica Fernandes starer upcoming Kannada movie 'Ninnindale' song shooting is progressing in Mumbai. The shooting is taking place on the 13th floor of a building in the Powai Lakh area of Andheri in Mumbai. Music by Mani Sharma.
Please Wait while comments are loading...