»   » ಟ್ರೆಂಡ್ ಸೆಟ್ಟರ್ ಉಪೇಂದ್ರ ನಿರ್ದೇಶನದ ’ಉಪ್ಪಿ2’ ಆಡಿಯೋ ವಿಮರ್ಶೆ

ಟ್ರೆಂಡ್ ಸೆಟ್ಟರ್ ಉಪೇಂದ್ರ ನಿರ್ದೇಶನದ ’ಉಪ್ಪಿ2’ ಆಡಿಯೋ ವಿಮರ್ಶೆ

By: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada

'ಉಪೇಂದ್ರ' ಎನ್ನುವ ಹೆಸರಿಗೆ ಕನ್ನಡ ಚಿತ್ರರಂಗದಲ್ಲಿ ವಿಶೇಷ ಪರಿಚಯದ ಅವಶ್ಯಕತೆಯಿಲ್ಲ. ಇನ್ನು ಉಪ್ಪಿ ನಿರ್ದೇಶನದ ಚಿತ್ರವೆಂದಮೇಲೆ ಅಭಿಮಾನಿಗಳ ನಿರೀಕ್ಷೆ ತಪ್ಪಸ್ಸಿನ ರೂಪ ಪಡೆಯುತ್ತದೆ.

ಐದು ವರ್ಷಗಳ ನಂತರ ಉಪೇಂದ್ರ 'ಉಪ್ಪಿ2' ಮಾಡಿಕೊಂಡು ಬರುತ್ತಿರುವಾಗ, ಕಾತರದ ಹಸಿವು ಹೆಚ್ಚಾಗುತ್ತಲೇ ಇತ್ತು. ಉಪ್ಪಿ ನಿರ್ದೇಶನದ ಚಿತ್ರದ ಮೇಲೆ ಪ್ರತಿ ವಿಭಾಗದಲ್ಲೂ ವಿಶೇಷತೆಯನ್ನು ಅಭಿಮಾನಿಗಳು ಹುಡುಕುತ್ತಾರೆ. (ಟ್ವಿಟ್ಟರ್ ನಲ್ಲಿ ಜಗ್ಗೇಶ್ ವಿರುದ್ಧ ಉಪ್ಪಿ ಅಭಿಮಾನಿಗಳ ಯುದ್ಧ)

ಉಪ್ಪಿ ಸಹ ಈ ಕುತೂಹಲಕ್ಕೆ ಎಂದೂ ಮೋಸ ಮಾಡಿಲ್ಲ. ಈ ಹಿಂದೆ ಉಪ್ಪಿ, ಗುರುಕಿರಣ್ ಜೋಡಿ ನೀಡಿದ ಯಶಸ್ವಿ ಹಾಡುಗಳು ಕೇಳುಗರ ಮನದಿಂದ ಇನ್ನೂ ಮರೆಯಾಗಿಲ್ಲ. ಅಷ್ಟರಲ್ಲೇ ಮತ್ತೆ ಈ ಜೋಡಿ ಉಪ್ಪಿ 2 ಚಿತ್ರದ ಮೂಲಕ ಒಂದಾಗಿದೆ.

Expectation is injurious to health ಎಂದು ಉಪ್ಪಿ ಹೇಳಿಕೊಂಡಿದ್ದರೂ ಅಭಿಮಾನಿಗಳ ನಿರೀಕ್ಷೆಯಿಂದ ಅವರಿಗೆ ಬಿಡುಗಡೆ ಇಲ್ಲ. ತನ್ನದೇ ಆದ ಹೊಸ ಅರ್ಥಗಳನ್ನು ನೀಡುವ ಸಾಹಿತ್ಯದಲ್ಲಿ ಪಳಗಿರುವ ಉಪ್ಪಿ ಹಾಗೂ ಅದಕ್ಕೆ ತಕ್ಕ ಸಂಗೀತ ನೀಡುವುದರಲ್ಲಿ ಸಿದ್ಧ ಹಸ್ತರಾಗಿರುವ ಗುರುಕಿರಣ್ ಜೋಡಿಯ 'ಉಪ್ಪಿ2; ಚಿತ್ರದ ಹಾಡುಗಳು ಹೇಗಿವೆ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ

ಬೇಕೂ ಬೇಕೂ

ಹಾಡಿರುವವರು: ಗುರುಕಿರಣ್
ಸಾಹಿತ್ಯ: ಉಪೇಂದ್ರ


ದಶಕಗಳ ಹಿಂದೆ ತಮ್ಮ ಸಂಗೀತದಿಂದ ಹೊಸ ರೀತಿಯ ಸಂಚಲನ ಮೂಡಿಸಿದ್ದ ಗುರುಕಿರಣ್, ಸಂಗೀತ ಹಾಗೂ ಸಂಗೀತ ಪರಿಕರಗಳ ಬಳಕೆಯಲ್ಲಿ ಇನ್ನೂ ಅಲ್ಲೇ ಉಳಿದಿದ್ದಾರೇನೋ ಎಂಬ ಭಾವನೆ ಮೂಡಿಸುವ ಗೀತೆ. ಉಪೇಂದ್ರರ ಎಂದಿನ ಚಾಕಚಕ್ಯತೆಯ ಸಾಹಿತ್ಯ ಗಮನ ಸೆಳೆದರೂ, ಅಬ್ಬರದ ಸಂಗೀತದ ನಡುವೆ ಸ್ವಲ್ಪ ಕಷ್ಟಪಟ್ಟೇ ಕೇಳಬೇಕಾಗುತ್ತದೆ. ಕೇಳುತ್ತ ಕೇಳುತ್ತಾ ಹೋದಂತೆ ಹೊಸ ಅರ್ಥದ ಪದರಗಳನ್ನು ಕಳಚುತ್ತಾ ಸಾಗುವ ಉಪೇಂದ್ರರ ಸಾಹಿತ್ಯ ಎಂದಿನಂತೆ ಮೆಚ್ಚುಗೆಗೆ ಪಾತ್ರ.

ನೋ Excuse me ಪ್ಲೀಸ್

ಹಾಡಿರುವವರು : ಉಪೇಂದ್ರ
ಸಾಹಿತ್ಯ: ಉಪೇಂದ್ರ

ಅತ್ತ ಹಾಡು ಅಲ್ಲದ ಇತ್ತ ಸಂಭಾಷಣೆಯೂ ಅಲ್ಲದ ಹೊಸ ಸಂಚಲನ ಮೂಡಿಸುವ, ಅಂತರಂಗದ ಯೋಚನಾಲಹರಿಗೆ ಧ್ವನಿಯ ರೂಪದಂತಿದೆ ಈ ಹಾಡು(?). 'ಕಾಲ'ವನ್ನು ಮುಂದಿಟ್ಟುಕೊಂಡು ಇನ್ಯಾರದೋ 'ಕಾಲನ್ನು' ಎಳೆಯುವ ಭರದಲ್ಲಿ ತಮ್ಮದೇ ಅನುಭವ, ನೋವು, ಅಭದ್ರತೆ, ಹತಾಶೆಯನ್ನು ಹಾಡಾಗಿಸಿದ್ದಾರೆಯೇ ಉಪ್ಪಿ ಎಂಬ ಪ್ರಶ್ನೆಗಳು ಏಳುತ್ತವೆ. ಅದರೆ ಹಾಡು ಕಾಲು ಎಳೆಯಲು ಹೋಗಿ ಕಾಲ ಬಳಿಯೇ ಉಳಿದು ಹೋಗುವ ಸಂಭವವಿದೆ. ಹಾಡಿನಲ್ಲಿ ಬಳಕೆಯಾಗಿರುವ Valcano, ಕುಲುಮೆ, ಸಗಣಿ, ಭರಣಿ ಇತ್ಯಾದಿಗಳನ್ನು ಮೀರಿ 'ಉಪ್ಪಿ'ಗಿಂತ 'ಉಪ್ಪಿ2' ಪರಿಪಕ್ವವಾಗಲಿ ಎಂಬ ಅಶಾಭಾವನೆ ಸಾಮಾನ್ಯ ಅಭಿಮಾನಿಗಳದ್ದು.

ಇವನ್ಯಾರೋ ಡಿಫರೆಂಟು

ಹಾಡಿರುವವರು : ಚೈತ್ರ , ನಿತಿನ್ ರಾಜಾರಾಮ್ ಶಾಸ್ತ್ರಿ
ಸಾಹಿತ್ಯ: ಉಪೇಂದ್ರ

ಹಾಡಿನ ಟ್ಯೂನ್ ಹಾಗೂ ವಾದ್ಯ ಸಂಯೋಜನೆ ಗುರುಕಿರಣ್ ಅವರ ಎಂದಿನ ಶೈಲಿಯಲ್ಲಿದ್ದು ನಡುನಡುವೆ ಸಂಭಾಷಣೆಗಳ ತುಣುಕುಗಳಿವೆ. ಉಪ್ಪಿಯ ಪಂಚ್ ಗಳು ಅಲ್ಲಿವೆ. ಅದು ಬಿಟ್ಟರೆ ಚೈತ್ರರ ಉತ್ತಮ ಗಾಯನ ಹಾಗೂ ಕೋರಸ್‌ನಿಂದಾಗಿ ಹಾಡು ಕೇಳಿಸಿಕೊಂಡು ಹೋಗುತ್ತದೆ. ನಾಯಕನ ಗುಣಗಾನದ ಹಾಡಾಗಿದ್ದು, ಚಿತ್ರದಲ್ಲಿ ಎಲ್ಲಿ, ಹೇಗೆ ಬಳಕೆಯಾಗಿದೆ ಎಂಬ ಕುತೂಹಲವನ್ನು ಕೆರಳಿಸುವಂತಿದೆ.

ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿಟ್ಟು

ಹಾಡಿರುವವರು : ಪುನೀತ್ ರಾಜ್‌ಕುಮಾರ್
ಸಾಹಿತ್ಯ: ಉಪೇಂದ್ರ

ಒಂದು ಸಾಮಾನ್ಯ ಪದಕ್ಕೂ ತಮ್ಮದೇ ಆದ ಮಾಂತ್ರಿಕ ಸ್ಪರ್ಶ ನೀಡುವುದರಲ್ಲಿ ಉಪ್ಪಿ ಎಂದಿಗೂ ಎತ್ತಿದ ಕೈ. 'I Like it', 'OK ಯಾಕೆ', 'ಸೂಪರ್ರೋ ರಂಗ', 'ಚಿತ್ರಾನ್ನ ಚಿತ್ರಾನ್ನ' ಹಾಡುಗಳಂತೆಯೇ ಇಲ್ಲಿ 'ಉಪ್ಪಿಟ್ಟು ಹೊಸ ಅರ್ಥ ಪಡೆದುಕೊಂಡಿದೆ. ಈ ಉಪ್ಪಿ2 ಹಾಡು ಇನ್ನೊಂದಷ್ಟು ವರ್ಷಗಳ ಚಿತ್ರರಸಿಕರ ನೆನಪಿನಲ್ಲಿ ಚಲಾವಣೆಯಲ್ಲಿರುತ್ತದೆ. ಉಪ್ಪಿಯ ಸಾಹಿತ್ಯಕ್ಕೆ ಪೂರಕವಾಗಿ ಗುರುಕಿರಣರ ಸಂಗೀತ ಹಾಗೂ ಪುನೀತ್ ಗಾಯನ ಒದಗಿ ಬಂದಿದೆ. ತೆರೆ ಮೇಲೆ ಈ "ಉಪ್ಪಿ2" ಹಾಡು ಯಾವ ಯಾವ ಮಸಾಲೆ ತುಂಬಿಕೊಂಡು ಬರುತ್ತದೋ ನೋಡಬೇಕು. ಒಟ್ಟಿನಲ್ಲಿ "ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿಟ್ಟು" ಎನ್ನುವ ಕೋರಸ್ ಜನಪ್ರಿಯವಾಗಲಿದೆ.

ಯೋಚನೆ ಮಾಡ್ಬೇಡ

ಹಾಡಿರುವವರು : ವಿಜಯ್ ಪ್ರಕಾಶ್
ಸಾಹಿತ್ಯ: ಉಪೇಂದ್ರ

ಉಪೇಂದ್ರರ ಸಾಹಿತ್ಯದಲ್ಲಿ ಅಲ್ಲಲ್ಲಿ ಸಿಗುವ ಫಿಲಾಸಫಿ ಇಲ್ಲೂ ಸಿಗುತ್ತದೆ. ಯೋಚನೆ ಮಾಡ್ಬೇಡ, ತುಂಬಾ ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳಲು ಅನೇಕ ನಿದರ್ಶನಗಳನ್ನು ನೀಡುತ್ತಾ ಸಾಗುವ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಗಾಯನ ಚೆನ್ನಾಗಿದ್ದು ಗುರುಕಿರಣರ ಸಂಗೀತ ಎಂದಿನಂತೆ.

English summary
Real star Upendra directed cum acted Uppi 2 audio review. Gurukiran has composed the songs for this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada