»   » ಕನ್ನಡ ಗಾಯಕರಿಗೆ ಅವಕಾಶ ಕೊಡಿ: ಸುದೀಪ್

ಕನ್ನಡ ಗಾಯಕರಿಗೆ ಅವಕಾಶ ಕೊಡಿ: ಸುದೀಪ್

Subscribe to Filmibeat Kannada

ನಮ್ಮ ಸಂಗೀತ ನಿರ್ದೇಶಕರು ಚಿತ್ರದ ಹಾಡಿಗಾಗಿ ಪರಭಾಷಾ ಗಾಯಕರಿಗೆ ಮಣೆ ಹಾಕುತ್ತಿರುವುದು ನೋವಿನ ವಿಷಯ . ನಮ್ಮಲ್ಲಿ ಪ್ರತಿಭೆಗಳಿಲ್ಲವೇ? ಕನ್ನಡ ಚಿತ್ರಗಳು ಬೇಕು, ಕನ್ನಡಿಗರು ಸಾಹಿತ್ಯ ರಚಿಸಬೇಕು, ಸಂಗೀತ ನೀಡಬೇಕು ಆದರೆ ಗಾಯಕರು ಮಾತ್ರ ಕನ್ನಡಿಗರು ಬೇಡ ಎಂದರೆ ಏನು ಅರ್ಥ? ಅಥವಾ ನಮ್ಮ ಗಾಯಕ/ಗಾಯಕಿಯರು ಬಾಲಿವುಡ್ ಮಟ್ಟದಲ್ಲಿ ಸ್ಪರ್ಧೆ ನಿಡುತ್ತಿಲ್ಲವೇ? ಹೀಗಂತ ಗಟ್ಟಿಯಾಗಿ ಪ್ರಶ್ನಿಸಿದ್ದಾರೆ ಕಿಚ್ಚ ಸುದೀಪ್.

ಬಾಲಿವುಡ್ ಗಾಯಕರ ಕನ್ನಡ ಉಚ್ಛಾರಣೆ ಕೂಡ ಯೋಗ್ಯ ಮಟ್ಟದಲ್ಲಿರುವುದಿಲ್ಲ. ಪರಭಾಷಾ ಕಲಾವಿದರು ಹಾಡಿದರೆ ಮಾತ್ರ ಚಿತ್ರದ ಹಾಡು ಹಿಟ್ ಆಗುತ್ತದೆ ಎನ್ನುವ ಕ್ಯಾಸೆಟ್ ಕಂಪೆನಿಯ ಮಾಲೀಕರ ವಾದವನ್ನು ನಾನು ಒಪ್ಪುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಅವರು ಈ ಮಟ್ಟದಲ್ಲಿ ಬೆಳೆಯಲು ನಮ್ಮ ಕಲಾವಿದರೇ ಅವರಿಗೆ ದಾರಿ ಮಾಡಿ ಕೊಟ್ಟರು ಎಂದು ನನಗೆ ಅನಿಸುತ್ತಿದೆ.

ರಾಜೇಶ್, ನಂದಿತಾ, ಹೇಮಂತ್ ಬಾಲಿವುಡ್ ಗಾಯಕರಿಗೆ ಖಂಡಿತ ಸ್ಪರ್ಧೆ ನೀಡಬಲ್ಲರು ಎನ್ನುವ ನಂಬಿಕೆ ನನಗಿದೆ. ಸಂಪೂರ್ಣ ನಮ್ಮ ಗಾಯಕ/ಗಾಯಕಿಯರು ಹಾಡಿರುವ 'ಆಪ್ತ ರಕ್ಷಕ' ಚಿತ್ರದ ಕ್ಯಾಸೆಟ್ ಅದ್ಭುತ ರೀತಿಯಲ್ಲಿ ಬಿಕರಿಗೊಳ್ಳುತ್ತಿದೆ ಎಂದು ಸುದೀಪ್ ತನ್ನ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಪ್ರಚಾರಕ್ಕಾಗಿ ಟಿವಿ ವಾಹಿನಿಯೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ರಘು ದೀಕ್ಷಿತ್ ಸಂಗೀತ ನೀಡಿರುವ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದಲ್ಲಿ ಸ್ಥಳೀಯ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಬಾಲಿವುಡ್ ಅಂಗಳದಲ್ಲಿ ಈಗಾಗಲೇ ತಮ್ಮ ಪ್ರತಿಭೆಯನ್ನು ನಿರೂಪಿಸಿಕೊಂಡಿರುವ ಕಿಚ್ಚ ಸುದೀಪ್ ನಮ್ಮಲ್ಲೇ ಎಲೆಮರೆಯ ಕಾಯಿಗಳಂತಿರುವ ಉತ್ತಮ ಪ್ರತಿಭೆಗಳನ್ನು ಹೆಕ್ಕಿ ತೆಗೆಯಬೇಕು ಎನ್ನುತ್ತಾರೆ.

ಅವಕಾಶ ಸಿಕ್ಕರೆ ನಮ್ಮಲ್ಲೂ ಪ್ರತಿಭೆಗಳು ಬೆಳಕಿಗೆ ಬರುತ್ತವೆ ಎಂಬುದನ್ನು ಸುದೀಪ್ ಸಾಬೀತು ಪಡಿಸಿಯಾಗಿದೆ. ಸುದೀಪ್ ಒಳ್ಳೆಯ ಪ್ರಶ್ನೆಯನ್ನೇನೋ ಎತ್ತಿದ್ದಾರೆ...ಆದರೆ ಉತ್ತರಿಸುವವರು ಯಾರು? ಏತನ್ಮಧ್ಯೆ ಡಾ. ವಿಷ್ಣು ಅಭಿನಯದ ಕೊನೆಯ ಚಿತ್ರ 'ಆಪ್ತ ರಕ್ಷಕ' ಚಿತ್ರದ ಕ್ಯಾಸೆಟ್ ಗಳಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕ್ಯಾಸೆಟ್ ಗಳು ಕಾಳಸಂತೆ ಯಲ್ಲಿ ಮಾರಟಾವಾಗುತ್ತಿದೆ ಎಂದು ತಿಳಿದು ಬಂದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada