»   » ಭಟ್ಟರ ಜತೆ 'ಮನಸಾರೆ' ಸಂವಾದ

ಭಟ್ಟರ ಜತೆ 'ಮನಸಾರೆ' ಸಂವಾದ

Posted By: *ಶಾಮಿ
Subscribe to Filmibeat Kannada

ಇದೊಂದು ರಸಪ್ರಶ್ನೆ !ಈ ವರ್ಷ ನೂರು ದಿನ ಅಥವಾ ಐವತ್ತು ದಿನ ಪ್ರದರ್ಶನ ಕಂಡ ಕನ್ನಡ ಚಿತ್ರಗಳಾವುವು? 11 ತಿಂಗಳು ಮುಗಿದೇಹೋಯಿತು. ಕನ್ನಡ ಚಿತ್ರರಂಗದ ಬ್ಯಾಲೆನ್ಸ್ ಶೀಟ್ ಟ್ಯಾಲಿ ಮಾಡುವ ಸಮಯ ಹತ್ತಿರ ಬರ್ತಾಯಿದೆ. ಕಾಟಾಚಾರಕ್ಕೆ ತೆಗೆದು ಬಿಸಾಕಿದ ನೂರಾರು ಚಿತ್ರಗಳ ಹುಲ್ಲಿನಬಣವೆಯಲ್ಲಿ ಚೆಂದ ಎನ್ನುವ ಕೆಲವು ಚಿತ್ರಗಳಾದರೂ ಇರ್ಬೇಕು. ಗಲ್ಲಾಪೆಟ್ಟಿಗೆಯಲ್ಲಿ ನಾಕು ಕಾಸು ಮಾಡಿಕೊಂಡ ಕನಿಷ್ಠ ನಾಕಾರು ನಿರ್ಮಾಪಕರು ಮತ್ತವರ ಕುಟುಂಬಕ್ಕೆ ಚೂರಾದ್ರು ನಿದ್ದೆ ಬಂದಿರಬೇಕು.

ನಮ್ಮ ಸಿನಿಮಾ ವರದಿಗಾರ ಹೇಳುವರೀತ್ಯ ಅಡ್ರೆಸ್ ಗೇ ಇಲ್ಲ ಎನ್ನುವಂಥಹ ಚಿತ್ರಗಳ ಪಾಲು ಈ ಬಾರಿ ಶೇಕಡಾ 50. ಆರ್ಥಿಕ ಬಿಕ್ಕಟ್ಟು ಇಕ್ಕಟ್ಟುಗಳು ಆಗಾಗ ಬಂದುಹೋಗುತ್ತವೆ, ಏನ್ ಮಾಡಕ್ಕಾಗಲ್ಲ. ಇವತ್ತು ದುಬೈ ಅರ್ಥ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿದೆ. ಆದರೆ ಇದೇ ಮಾತನ್ನು ನಮ್ಮ ಚಿತ್ರರಂಗದ ಬಗೆಗೆ ಹೇಳುವಂತಿಲ್ಲ. ಏಕೆಂದರೆ, ಪ್ರತೀವರ್ಷ ನಿಟ್ಟುಸಿರು ಬಿಡುವವರಿಗೆ ಅಳುವವರಾರು? ಇದೇ ವೇಳೆ, ಏನೋ ಪರವಾಗಿಲ್ಲ ಎನ್ನುವಂಥ ಚಿತ್ರಗಳ ಪ್ರಮಾಣ ಶೇಕಡಾ ಒಂದಿಪ್ಪತ್ತಿವೆಯಂತೆ. ಗೆದ್ದವೋ ಸೋತವೋ ಭಗವಂತನಿಗೂ ಗೊತ್ತಿಲ್ಲ, ಗೊತ್ತಾಗುವುದೂ ಇಲ್ಲ ಎಂಬಂತಹ ಚಿತ್ರಗಳ ಪಾಲು 25. ಉಳಿದ ಶೇ 5ರ ಸಾಲಿನಲ್ಲಿ ನಿಲ್ಲುವ ಚಿತ್ರಗಳ ಹೆಸರೇನು?

ಸದ್ಯಕ್ಕೆ ಮನಸಾರೆ ಚಿತ್ರದ ವಿಷ್ಯಕ್ಕೆ ಬರೋಣ. ಮೊನ್ನಿನ ಶನಿವಾರಕ್ಕೆ ಮನಸಾರೆಗೆ 50 ದಿನ ತುಂಬಿದ ಸಂಭ್ರಮ. ಭಟ್ಟರು ಖುಷಿಯಾಗಿದ್ದರು, ಅವರಿಗಿಂತ ಖುಷಿಯಾಗಿದ್ದವರು ರಾಕ್ ಲೈನ್ ವೆಂಕಟೇಶ್. ಇವರಿಬ್ಬರಿಗಿಂತ ಉಲ್ಲಸಿತರಾಗಿದ್ದವರು ಕನ್ನಡ ಚಿತ್ರಗಳನ್ನು ಮತ್ತೆ ನೋಡುವ ಹವ್ಯಾಸ ಬೆಳೆಸಿಕೊಂಡ ಕನ್ನಡ ಚಿತ್ರರಸಿಕರು. ಹೊಸಪೀಳಿಗೆಯ ಕನ್ನಡಿಗ, ಕನ್ನಡತಿ ಕೇವಲ ಚಿತ್ರವನ್ನು ನೋಡುವುದೇ ಅಲ್ಲ, ಚಿತ್ರದ ಬಗೆಗೆ ಮಾತು,ಕತೆ, ಸಂವಾದ ಇದೆಯೆಂದರೆ ವಿಳಾಸ ಹುಡುಕಿಕೊಂಡು ಹೋಗುತ್ತಾರೆ, ಅದೂ ಭಾನುವಾರ, ಇಡೀ ಭಾನುವಾರ.

ಮನಸಾರೆ ಚಿತ್ರ ಕುರಿತ ನವೆಂಬರ್ 29ರ ಸಂವಾದ ಕಾರ್ಯಕ್ರಮಕ್ಕೆ ನೂರು ಪಾಸುಗಳನ್ನು ರೆಡಿಯಾಗಿಟ್ಟುಕೊಂಡಿದ್ದರೆ ಇನ್ನೂರು ಜನ ಬಂದಿದ್ದರು ಎಂದರು ಅರಳೇಹಳ್ಳಿ ರವಿ. ಸಾಗರ್ ಚಿತ್ರಮಂದಿರದಲ್ಲಿ ಪ್ರದರ್ಶನ ಮತ್ತು ಅಡಿಗ ಹೋಟೆಲಿನ ಸಭಾಂಗಣದಲ್ಲಿ ಸಂವಾದ ಇಟ್ಟುಕೊಳ್ಳಲಾಗಿತ್ತು. ಚಿತ್ರಕ್ಕಿಂತ ಸಂವಾದ ಚೆನ್ನಾಗಿತ್ತು,ಸಂವಾದಕ್ಕಿಂತ ಕಾರ್ಯಕ್ರಮದ ಅಚ್ಚುಕಟ್ಟುತನ ಇನ್ನೂ ಚೆನ್ನಾಗಿತ್ತು.ಸಂವಾದ ರೂಪಿಸಿದ samvaada.com ಗೆ ಹತ್ತರಲ್ಲಿ ಒಂಭತ್ತು ಅಂಕಗಳು.

ಕನ್ನಡ ಸಾಹಿತ್ಯ ಡಾಟ್ ಕಾಮಿನ ಶೇಖರ ಪೂರ್ಣ ಸಂವಾದಕ್ಕೆ ಚಾಲನೆಕೊಡುವ ಪ್ರಾಸ್ತಾವಿಕ ಭಾಷಣ ಮಾಡಿದರು. ಮಾನಸಿಕ ಕಾಯಿಲೆಗಳು ಮತ್ತು ರೋಗಿಗಳು ಹಾಗೂ ಚಿಕಿತ್ಸೆಯ ಸಾಧ್ಯತೆಗಳನ್ನು ಅನಾವರಣಗೊಳಿಸುವ ಚಿತ್ರಗಳು ನಮ್ಮಲ್ಲಿ ಕಡಿಮೆ. ಈ ವಸ್ತುವನ್ನು ಇಟ್ಟುಕೊಂಡು ತೆರೆಗೆ ಬಂದ ಚಿತ್ರಗಳು ಸಾಮಾನ್ಯವಾಗಿ ಮಾನಸಿಕ ಕಾಯಿಲೆಗಳನ್ನು ಧಾರ್ಮಿಕ ನೆಲೆಗಟ್ಟಿನಲ್ಲೆ ನೋಡುವ ಅಥವಾ ಕೌಟುಂಬಿಕ ಪರಿಸರದಲ್ಲೆ ಕಾಣುವ ಪ್ರಯತ್ನಗಳೆಂದು ಅಭಿಪ್ರಾಯಪಟ್ಟರು. ಚಂದ್ರು ಸಿನಿಮಾ ಪ್ರಿಯರು. ಸೆಲ್ಯುಲಾಯ್ಡ್ ವ್ಯಾಖ್ಯಾನ ಮಾಡುವುದಕ್ಕೆ ಅವರು ಸದಾಸಿದ್ಧ. ಚಂದ್ರು ಅವರು ಕೇಸಿ ಚಿತ್ರಿಸಿದ One Flew Over The Cuckoo's Nest ನೋಡದೇ ಬಿಟ್ಟಿರುವುದಿಲ್ಲ.

ಪ್ರಶ್ನೋತ್ತರ ಕಾರ್ಯಕ್ರಮವಿತ್ತು. ಸಹಜವಾಗಿಯೇ ಎಲ್ಲ ಪ್ರಶ್ನೆಗಳೂ ಭಟ್ಟರ ಶೇವು ಮಾಡದ ಮುಖಕ್ಕೆ ತಾಗುತ್ತಿದ್ದವು. ನಿಮಗಾಗಿ ಒಂದೆರಡು ಸ್ಯಾಂಪಲ್. ಒಬ್ಬರು : ಮನಸಾರೆಯಲ್ಲಿ ಪೋಷಕ ಪಾತ್ರಗಳಿಗೆ ಪ್ರಾಧಾನ್ಯತೆ ಕಡಿಮೆ. ಅವು ಹೆಚ್ಚು ಹೊಳೆಯುವುದಿಲ್ಲವಲ್ಲ, ಯಾಕೆ?
ಭಟ್ : ಪೋಷಕ ಪಾತ್ರಗಳು ಪೋಷಕ ಪಾತ್ರಗಳೇ. ಅವುಗಳ ಕೆಲಸ ಅಷ್ಟೆ. ನಿರ್ದೇಶಕರ ಗಮನ ಕಥಾವಸ್ತುವನ್ನು ಪ್ರಾಡಕ್ಟ್ ಮಾಡುವ ಕಥಾನಾಯಕನ ಅಥವಾ ನಾಯಕಿಯ ಕಡೆಗೆ ಕೇಂದ್ರಿತ.

ಇನ್ನೊಂದು : ನಿಮ್ಮ ಸಿನಿಮಾಗಳಲ್ಲಿ ನಾಯಕ ಸೆಲ್ಫ್ ಸೆಂಟರ್ಡ್ ಆಗಿರ್ತಾನೆ. ಬೇರೆಯವರ ಬಗೆಗೆ ಅವನಿಗ್ಯಾಕೆ ಕಾಳಜಿ ಇಲ್ಲ? ಭಟ್ : ಹೌದು, ಒಪ್ಪಿದೆ. ಎಷ್ಟೋ ವೇಳೆ ಚಿತ್ರದ ನಾಯಕ ನಿರ್ದೇಶಕನ (ನನ್ನ) ವ್ಯಕ್ತಿತ್ವದ ಪ್ರತಿಬಿಂಬವೇ ಆಗಿರುತ್ತಾನೆ. ನನ್ನ ಸ್ವಭಾವ, ನಂಬಿಕೆಗಳು ಅವನ ಮೂಲಕ ಹೊರಗೆ ಇಣಕುತ್ತದೆ. ಬಹುಶಃ ಬೇರೆಯವರ ಕಥೆ, ಸಂಭಾಷಣೆ ಬರೆದಾಗ ನಾನು ಈ ವರ್ತುಲದಿಂದ ಆಚೆ ಬರಬಹುದು. ನೆನಪಿರಲಿ, ನಾನು ನನ್ನ ಚಿತ್ರಗಳಲ್ಲಿ ಬುದ್ಧಿವಾದ ಹೇಳಲ್ಲ. ಯಾರನ್ನೂ ತಿದ್ದುವ ಗೋಜಿಗೆ ಹೋಗುವುದಿಲ್ಲ. ರಾಮಾಯಣ ಮಹಾಭಾರತಗಳು ತಿದ್ದಲಾಗದ ಮನುಷ್ಯ ಸ್ವಭಾವಗಳನ್ನು ಸಿನಿಮಾ ಎಲ್ಲಾದರೂ ತಿದ್ದುವುದುಂಟೆ?

ಮತ್ತೊಂದು ಪ್ರಶ್ನೆ : ಸಾರ್, ದಿಗಂತನ ಬಾಯಲ್ಲಿ ಗಂಡು ಹೆಣ್ಣಿನ ಸಂಬಂಧಗಳ ಬಗ್ಗೆ ಬೇಜಾನ್ ಡೈಲಾಗ್ ಹೊಡೆಸಿದ್ದೀರಿ. ಸಂಭಾಷಣೆಗಳಲ್ಲಿ ಲವಲವಿಕೆ, ಜಾಣತನ ಮತ್ತು ಚಾಟಿಯೇಟುಗಳಿವೆ ನಿಜ. ಆದರೆ, ಸಿನಿಮಾ ವಸ್ತು ಗಂಡಿನ ಮೂಗಿನ ನೇರಕ್ಕೇ ಇದೆ. ಮಮತೆ, ಕರುಣೆ, ತ್ಯಾಗ ಹೊರತುಪಡಿಸಿ ಪ್ರತಿಯೊಂದು ಹೆಣ್ಣಿಗೂ "ತನ್ನ ಮತ್ತು ಅವನ" ಸಂಬಂಧ ಬಗೆಗೆ ಹೇಳುವುದು ಬಹಳಷ್ಟಿರುತ್ತದೆ. ಅವನ್ನೆಲ್ಲ ಗಂಡು ಪ್ರಾಣಿಗಳು ಕೇಳಿಸಿಕೊಳ್ಳುವುದು ಯಾವಾಗ ಸಾರ್? ಅದನ್ನೆಲ್ಲ ತಾವು ಯಾಕೆ ಜಗಜ್ಜಾಹೀರು ಮಾಡುವುದಿಲ್ಲ? ನೀವು ಪುರುಷ ಪಕ್ಷಪಾತಿ, ಬಿಡಿ.

ಭಟ್ : ನಾನು ಪುರುಷ ಪಕ್ಷಪಾತಿ ಅಲ್ಲ. ಆದರೆ ಒಂದು ಮಾತು ತಿಳಿದಿರಲಿ, ಗಂಡಸರು ಚಂಡಮಾರುತ, ಹೆಣ್ಣು ಬಿಸಿನೀರು, ಕಾಯುವುದು ನಿಧಾನ. ಆ ಕಥೆಗಳನ್ನೆಲ್ಲ ಹೇಳುವುದಕ್ಕೆ ಕೇವಲ ಒಬ್ಬ ನಿರ್ದೇಶಕ ಸಾಲದು, ಇಡೀ ಉದ್ಯಮ ತಂತ್ರಜ್ಞ ನಿರ್ಮಾಪಕ ಎಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕು. ಅದು ಸ್ವಲ್ಪ ಕಷ್ಟನೇ. ಕೊನೆ ಸಿಡಿ : ಸಾರ್, ಕೊನೆಯ ದೃಶ್ಯದಲ್ಲಿ ದಿಗಂತ್ ಮತ್ತು ಐಂದ್ರಿತ ಕೈಯಲ್ಲಿ ಕೈ ಹಿಡ್ಕೊಂಡು ಪ್ರೇಕ್ಷಕರಿಗೆ ಬೆನ್ನು ತೋರಿಸಿಕೊಂಡು ಹೋಗ್ತಾರೆ. ಅವರು ಎಲ್ಲಿಗೆ ಹೋದರು ಸಾರ್? ಯೋಗರಾಜ್ ಭಟ್ : ಗೊತ್ತಿಲ್ಲ ! ಮನಸಾರೆ 2 ಅಥವಾ ಮನಸಾರೆ 3 ರಲ್ಲಿ ಗೊತ್ತಾಗಬಹುದೇನೋ..ಗೊತ್ತಿಲ್ಲ.

ಮನಸಾರೆ ಸಂವಾದ ಗ್ಯಾಲರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada