»   » 'ತಮಸ್ಸು' ಚಿತ್ರದ ತಪಸ್ವಿ ಅಗ್ನಿ ಶ್ರೀಧರ್ ಸಂದರ್ಶನ

'ತಮಸ್ಸು' ಚಿತ್ರದ ತಪಸ್ವಿ ಅಗ್ನಿ ಶ್ರೀಧರ್ ಸಂದರ್ಶನ

By: *ರಾಜೇಂದ್ರ ಚಿಂತಾಮಣಿ
Subscribe to Filmibeat Kannada

ಅಗ್ನಿ ಶ್ರೀಧರ್ ಆಸಕ್ತಿ ಕ್ಷೇತ್ರಗಳು ಹತ್ತು ಹಲವು. ಪತ್ರಿಕೋದ್ಯಮ, ಸಿನಿಮಾ, ಅಧ್ಯಾತ್ಮ, ಸಮಾಜ ಸೇವೆ ಹೀಗೆ ಅವರು ವಿಭಿನ್ನ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು.ಆಕರ್ಷಕ ವ್ಯಕ್ತಿತ್ವದ ಅಗ್ನಿ ಶ್ರೀಧರ್ ಚಟುವಟಿಕೆಯಿಂದ ಪುಟಿಯುವ, ನೇರ ನಿಷ್ಠುರ ಮಾತುಗಾರ. ಅವರೊಂದಿಗೆ ಮಾತುಕತೆ ಅಂದರೆ ಪೂರ್ಣ ವಿರಾಮ ಹಾಕುವುದು ಕಷ್ಟ. ವಿಚಾರಧಾರೆ ಗಹನವಾಗುತ್ತಲೇ ಹೋಗುತ್ತದೆ. ಅವರ ಚೊಚ್ಚಲ ನಿರ್ದೇಶನದ 'ತಮಸ್ಸು' ಚಿತ್ರ ಇದೇ ಜೂನ್ 11ರಂದು ತೆರೆಕಾಣುತ್ತಿದೆ. 'ತಮಸ್ಸು' ಚಿತ್ರಕ್ಕಾಗಿ ತಪಸ್ವಿಯಂತೆ ಅವರು ಧ್ಯಾನಿಸಿದ್ದಾರೆ. ಈ ನೆ ಪದಲ್ಲಿ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

*ಒಂದು ಕಡೆ ಪತ್ರಿಕೋದ್ಯನ ಮತ್ತೊಂದೆಡೆ ಸಿನಿಮಾ ಕಷ್ಟ ಅನ್ನಿಸುವುದಿಲ್ಲವೆ?
ಇವೆಲ್ಲಾ ದೊಡ್ಡ ಸವಾಲುಗಳು ಅಂಥ ನನಗೆ ಅನ್ನಿಸಿಲ್ಲ. ಎಲ್ಲವೂ ಪರಸ್ಪರ ಸಂಬಂಧವುಳ್ಳ ಕ್ಷೇತ್ರಗಳೇ ಆದ್ದರಿಂದ ಆ ರೀತಿಯ ಸಮಸ್ಯೆಯೇನು ಆಗಿಲ್ಲ. ಇವೆಲ್ಲವೂ ನನ್ನ ಆಸಕ್ತಿಯ ಕ್ಷೇತ್ರಗಳು. ಕಲಾವಿದನಾಗಲಿ, ಗಾಯಕನಾಗಲಿ ಮತ್ತೊಂದು ಕಲಾ ಪ್ರಕಾರದ ಬಗ್ಗೆ ಅವನಿಗೆ ಅರಿವಿರಬೇಕಾಗುತ್ತದೆ. ಒಂದು ಮಾಧ್ಯಮದಿಂದ ಮತ್ತೊಂದಕ್ಕೆ ಬಂದಾಗ ಅಂತಹ ಸಮಸ್ಯೆಗಳು ಉದ್ಭವವಾಗುವುದಿಲ್ಲ. ಚಿತ್ರರಂಗದೊಂದಿಗೆ ನನಗೆ 30 ವರ್ಷಗಳಿಂದ ಸಂಬಂಧವಿದೆ. ಚಿತ್ರರಂಗ ನನಗೆ ದೊಡ್ಡ ಸವಾಲು ಅನ್ನಿಸಲಿಲ್ಲ.

*'ತಮಸ್ಸು' ಪದದ ಒಳಾರ್ಥವೇನು?
ತಾಮಸಿಕ ಗುಣವುಳ್ಳವನು. ಹಿಂಸೆಯನ್ನು ಮೀರಿದವನು. ಎದೆಗೂಡಲ್ಲಿ ಕತ್ತಲನ್ನು ತುಂಬಿಕೊಂಡ ತಮೋಗುಣದವನು. ಸಂಸ್ಕೃತದಲ್ಲಿ ತಾಮಸಿಕ ಗುಣ ಎನ್ನುತ್ತಾರೆ. ನಾಯಕ ಮತ್ತು ಪ್ರತಿನಾಯಕ ಎಂಬಎರಡು ಮುಖ್ಯ ಗುಣಗಳು ಸದಾ ದುಷ್ಟ ಆಲೋಚನೆಗಳೊಂದಿಗೆ ಹೋರಾಡುತ್ತಿರುತ್ತವೆ. ನಾಯಕ ಉತ್ತಮ ಜೀವನ ಪಥ ಆರಿಸಿಕೊಂಡರೆ ಪ್ರತಿನಾಯಕ ಉಗ್ರ ಹಾದಿಯಲ್ಲಿ ಮುನ್ನುಗ್ಗುತ್ತಾನೆ. ಹಾಗಂತ ತಮಸ್ಸು ಚಿತ್ರವನ್ನು ರೌಡಿಸಂ ಚಿತ್ರ ಎಂದು ಭಾವಿಸಬಾರದು. ಸಭ್ಯತೆಯ ಚೌಕಟ್ಟಿನ ಚಿತ್ರವಿದು.

*ಇದು ಮತ್ತೊಂದು ಲಾಂಗ್ ಮಚ್ಚಿನ ಚಿತ್ರವೇ?
ಹಾಗೇಕೆ ಭಾವಿಸುತ್ತೀರಾ. ಯೋಧರ ಬಳಿಯೂ ಲಾಂಗ್ ಇರುತ್ತದೆ ಹಾಗೆಯೇ ಸಮುರಾಯ್ ಗಳ ಬಳಿಯೂ ಇರುತ್ತದೆ. ಅವರೆಲ್ಲರನ್ನೂ ತಪ್ಪಾಗಿ ಭಾವಿಸಲು ಸಾಧ್ಯವೆ?

*ತಮಸ್ಸು ನಿಮ್ಮ ಚೊಚ್ಚಲ ಚಿತ್ರ, ನಿರ್ದೇಶಕನಾಗಿ ನಿಮಗೆ ತೃಪ್ತಿ ಸಿಕ್ಕಿದೆಯೇ?
ತಮಸ್ಸು ಚಿತ್ರದ ಚಿತ್ರೀಕರಣ ಮರೆಯಲಾಗದ ಅನುಭವ ನೀಡಿದೆ. ಲೈಟ್ ಬಾಯ್ ನಿಂದ ಹಿಡಿದು ಪ್ರತಿಯೊಬ್ಬರು ಚಿತ್ರ ವಿಭಿನ್ನವಾಗಿ ಮೂಡಿಬರಲು ವಿಶೇಷವಾಗಿ ಶ್ರಮಿಸಿದ್ದಾರೆ. ಅಷ್ಟರ ಮಟ್ಟಿಗೆ ಚಿತ್ರತಂಡ ನನ್ನ ಮೇಲೆ ಪ್ರಭಾವ ಬೀರಿದೆ. ನಿಜಕ್ಕೂ ಅದೊಂದು ಅಪೂರ್ವ ಕ್ಷಣಗಳು.

ಪ್ರೇಮ್, ತಾಜ್ ಮಹಲ್ ಚಂದ್ರು, ಯೋಗರಾಜ್ ಭಟ್, ಸೂರಿ ಯಂತಹ ಪ್ರತಿಭಾವಂತ ನಿರ್ದೇಶಕರನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು.
*ಚಿತ್ರದಲ್ಲಿ ಭಿನ್ನ ಭಾಷೆಯ ತಾರಾಗಣವಿದೆ, ಹೇಗೆ ಸಂಭಾಳಿಸಿದಿರಿ?
ರಾಜ್ ಕುಮಾರ್ ಕುಟುಂಬ ಜೊತೆಗೆ ನನಗೆ ಮುಂಚಿನಿಂದಲೂ ಅವಿನಾಭಾವ ಸಂಬಂಧವಿದೆ. ಮುಖ್ಯವಾಗಿ ರಾಜ್ ಕುಮಾರ್ ಅಪಹರಣ ಸಮಯದಲ್ಲಿ ಪಾರ್ವತಮ್ಮನವರಿಗೆ ನಾನು ಮತ್ತಷ್ಟು ಹತ್ತಿರದವನಾಗಿದ್ದೆ. ನಮ್ಮದು ತಾಯಿ ಮಗನ ಸಂಬಂಧ. ಶಿವರಾಜ್ ಕುಮಾರ್ ನನಗೆ ಸಹೋದರನಿದ್ದಂತೆ. ಶಿವರಾಜ್ ಕುಮಾರ್ ನನಗೆ ಚಿಕ್ಕ ಹುಡುಗನಿದ್ದಾಗಿನಿಂದಲೂ ಗೊತ್ತು. ಇನ್ನು ಚಿತ್ರದ ನಾಯಕಿ ಪದ್ಮಪ್ರಿಯಾ ಸುಸಂಸ್ಕೃತ ಕುಟುಂಬದಿಂದ ಬಂದವರು. ಆಕೆ ಪ್ರತಿಭಾವಂತೆ. ಆಕೆಯ ತಂದೆ ಮಿಲಿಟರಿ ಅಧಿಕಾರಿ, ಮಗಳು ಐಎಎಸ್ ಅಧಿಕಾರಿಯಾಗಬೇಕು ಎಂದು ಬಯಸಿದ್ದರು. ಅಕೆ ಟಿ ಎನ್ ಶೇಷನ್ ಗೆ ಹತ್ತಿರದ ಸಂಬಂಧಿ. ಮೋಹನ್ ಲಾಲ್ ಹಾಗೂ ಮಮ್ಮುಟ್ಟಿಯಂತಹ ಪ್ರತಿಭಾವಂತ ನಟರೊಂದಿಗೆ ಆಕೆ ಅಭಿನಯಿಸಿದ್ದಾರೆ.

*ಶಿವಣ್ಣ ಮತ್ತು ಪದ್ಮಪ್ರಿಯಾ ಬೆಳ್ಳಿತೆರೆಯ ಕಾಂಬಿನೇಷನ್ ಹೇಗಿದೆ?
ಇಬ್ಬರೂ ಪ್ರಬುದ್ಧ ನಟರು. ತಮಸ್ಸು ಚಿತ್ರಕ್ಕೆ ತಮ್ಮ ನಟನೆಯನ್ನು ಧಾರೆ ಎರೆದಿದ್ದಾರೆ. ಶಿವಣ್ಣ ಪೊಲೀಸ್ ಅಧಿಕಾರಿಯಾಗಿ ಪದ್ಮಪ್ರಿಯಾ ಮಾನವ ಹಕ್ಕುಗಳ ಕಾರ್ಯಕರ್ತೆಯಾಗಿ ಕಾಣಿಸಲಿದ್ದಾರೆ. ಚಿತ್ರದಲ್ಲಿ ಅವರಿಬ್ಬರೂ ಸ್ಪರ್ಧೆಗೆ ಬಿದ್ದಂತೆ ಅಭಿನಯಿಸಿದ್ದಾರೆ. ರಾಜ್ ಕುಮಾರ್ ಮತ್ತು ಲಕ್ಷ್ಕಿ ಅಭಿನಯದ ಚಿತ್ರದಲ್ಲಿನ ಸೈದ್ಧಾಂತಿಕ ಸಂಘರ್ಷದ ರೀತಿಯಲ್ಲಿ ಇವರಿಬ್ಬರ ನಡುವೆ ಸಂಭಾಷಣೆ ಇರುತ್ತದೆ. ಸಂಘರ್ಷದ ಸನ್ನಿವೇಶಗಳಲ್ಲಿ ಇಬ್ಬರ ನಟನೆ ಮೈನವಿರೇಳಿಸುವಂತಿದೆ. ಈ ಸನ್ನಿವೇಶಗಳು ಚಿತ್ರದಲ್ಲಿ ರಸನಿಮಿಷಗಳಾಗಿ ನಿಲ್ಲುತ್ತವೆ.

*ಚಿತ್ರದ ತಾಂತ್ರಿಕ ಬಳಗದ ಬಗ್ಗೆ ನಿಮ್ಮ ಅಭಿಪ್ರಾಯ?
ಕಲಾ ನಿರ್ದೇಶನದಲ್ಲಿ ಶಶಿಧರ ಅಡಪ ಅವರದು ಎತ್ತಿದ ಕೈ. ಖ್ಯಾತನಾಮರೊಂದಿಗೆ ಕೆಲಸ ಮಾಡಿದ ಅನುಭವ ಅವರಿಗಿದೆ. ಚಿತ್ರೀಕರಣ ಸ್ಥಳದ ಆಯ್ಕೆಯಿಂದ ಹಿಡಿದು ಅಲ್ಲಿನ ಎನರ್ಜಿಯನ್ನು ಗ್ರಹಿಸುವಷ್ಟು ತಾಕತ್ತು ಅವರಿಗಿದೆ. ಇನ್ನು ಸುಂದರನಾಥ ಸುವರ್ಣ ಅವರ ಬಗ್ಗೆ ಹೇಳಬೇಕೆಂದರೆ ಸಾಹಿತ್ಯ ದೊಂದಿಗೆ ಒಡನಾಟವಿರುವ ಕಲಾವಿದ. ಕಲಾತ್ಮಕ ಹಾಗೂ ಕಮರ್ಷಿಯ ಚಿತ್ರಗಳೆರಡರಲ್ಲೂ ಪಳಗಿದ ಕೈ ಅವರದು.

*ಚಿತ್ರದಲ್ಲಿ ನಿಮ್ಮ ಮಗಳು ರಮ್ಯಾ ಹಾಡು ಬರೆದಿದ್ದಾರಲ್ಲಾ?
ಹೌದು. ನನ್ನ ಮಗಳು ಎಂಬ ಕಾರಣಕ್ಕೆ ಆಕೆಯ ಬಗ್ಗೆ ಕನಿಕರ ತೋರಿಸಬೇಡಿ ಎಂದು ಚಿತ್ರದ ತಂತ್ರಜ್ಞರಿಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದೆ. ಆಕೆಯಿಂದ ಒಳ್ಳೆ ಕೆಲಸ ತೆಗೆಸುವಂತೆ ಸೂಚಿಸಿದ್ದೆ. ಗೀತ ಸಾಹಿತಿಯಾಗಿ ಆಕೆಯ ಕೆಲಸ ಮೆಚ್ಚುವಂತಿದೆ. ಇನ್ನು ಸಂದೀಪ್ ಚೌಟ ಬಗ್ಗೆ ಹೇಳಬೇಕೆಂದರೆ ಅವರ ತಂದೆ ಸಾಮಾಜಿಕ ಕಾರ್ಯಕರ್ತ ಡಿ ಕೆ ಚೌಟ ನನಗೆ ಆತ್ಮೀಯರು. ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್ ನಲ್ಲಿ ಸಂದೀಪ್ ಹೆಸರು ಮಾಡಿದ್ದಾರೆ. ಪ್ರತಿಭಾವಂತ ಸಂಗೀತ ನಿರ್ದೇಶಕ ಎಂಬುದರಲ್ಲಿ ಎರಡು ಮಾತಿಲ್ಲ. ಚಿತ್ರದ ಹಾಡುಗಳು ಬಹಳ ಚೆನ್ನಾಗಿ ಮೂಡಿಬಂದಿದ್ದು ಹಿನ್ನೆಲೆ ಸಂಗೀತವಂತು ಅದ್ಭುತ. ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಧ್ವನಿಸುರುಳಿಗಳಿಗೂ ಬೇಡಿಕೆ ಚೆನ್ನಾಗಿದೆ.

*ತಮಸ್ಸು ಚಿತ್ರದ ಸಂದೇಶವೇನು?
ಪ್ರೇಕ್ಷಕರಿಗೆ ಈ ಚಿತ್ರ ತಪ್ಪದೆ ಒಂದು ಉತ್ತಮ ಸಂದೇಶ ನೀಡಲಿದೆ . ಹಿಂಸೆಯ ದಾರಿಯಲ್ಲೂ ಅನುರಾಗ, ಪ್ರೀತಿಗಳು ಅರಳುತ್ತವೆ ಎಂಬುದೇ ಚಿತ್ರದ ಸಂದೇಶ.

*ಚಿತ್ರ ಬಿಡುಗಡೆ ಯಾವಾಗ? ಎಷ್ಟು ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ?
ಚಿತ್ರ ಜೂನ್ 4ಕ್ಕೆ ಬಿಡುಗಡೆಯಾಗಬೇಕಿತ್ತು. ಚಿತ್ರಕ್ಕೆ ಇನ್ನೂ ಸೆನ್ಸಾರ್ ಆಗದಿರುವ ಕಾರಣ ಚಿತ್ರ ಜೂನ್ 11ಕ್ಕೆ ಬಿಡುಗಡೆಯಾಗಲಿದೆ. ಚಿತ್ರದಲ್ಲಿನ ಒಂದು ಹಾಡು "ಹೊಡಿ ರಾಮ ಹೊಡಿ, ಅಲ್ಲಾ ಮಾರ್ ಅಲ್ಲಾ ಸೈತಾನ್..." ಹಾಗೂ "ಅಲ್ಲಾ ಸೈತಾನ್ ... ರಾಮ ಸೈತಾನ್ " ಎಂಬ ಸಂಭಾಷಣೆಗೆ ಕತ್ತರಿಹಾಕುವಂತೆ ಸೆನ್ಸಾರ್ ಸೂಚಿಸಿದೆ. ಚಿತ್ರಕ್ಕೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಒಟ್ಟು 58 ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

* ಇಂಟರ್ ನೆಟ್ ನಲ್ಲಿ ಎಷ್ಟು ಸಮಯ ಕಳೆಯುತ್ತೀರಾ? ಟ್ವಿಟ್ಟರ್ ನಲ್ಲಿ ಖಾತೆ ತೆರೆದಿದ್ದೀರಾ?
ಇಂಟರ್ ನೆಟ್ ನಲ್ಲಿ ನನಗೆ ಅಷ್ಟಾಗಿ ಆಸಕ್ತಿಯಿಲ್ಲ. ಹಾಗೆಯೇ ಯಾವುದೇ ಸಾಮಾಜಿಕ ತಾಣಗಳಲ್ಲೂ ಅಕೌಂಟಿಲ್ಲ. ನನಗೆ ಏನಿದ್ದರೂ ಪುಸ್ತಕ ಓದುವುದು, ನಿಯತಕಾಲಿಕೆಗಳನ್ನು ಓದುವುದರಲ್ಲೇ ತೃಪ್ತಿ. ನನ್ನ ಸಹಾಯಕರಾದ ರಮ್ಯಾ, ಸುಮನಾ ಮತ್ತು ಹರ್ಷಿಕಾ ಅವರಿಗೆ ಅಂತರ್ಜಾಲದ ಬಗ್ಗೆ ಹೆಚ್ಚಿನ ತಿಳುವಳಿಕೆಯಿದೆ. ಚಿತ್ರದ ಪ್ರಚಾರಕ್ಕೆ ಸಂಬಂಧಿಸಿದ ವ್ಯವಹಾರಗಳೆಲ್ಲವನ್ನು ಅವರೇ ನಿಭಾಯಿಸುತ್ತಾರೆ.

*ಕನ್ನಡದಲ್ಲಿ ರೀಮೇಕ್, ರೌಡಿಯಿಸಂ ಚಿತ್ರಗಳು ಅತಿಯಾದವು ಅನ್ನಿಸುವುದಿಲ್ಲವೆ?
ನಾನು ಮೊದಲಿಂದಲೂ ರೀಮೇಕ್ ಬದ್ಧವಿರೋಧಿ. ಈಗೀಗ ಆ ರೀತಿಯ ಚಿತ್ರಗಳು ಕಡಿಮೆಯಾಗುತ್ತಿವೆ. ಆ ರೀತಿಯ ನಿರ್ದೇಶಕರೂ ಕಾಣೆಯಾಗುತ್ತಿದ್ದಾರೆ. ಯೋಗರಾಜ ಭಟ್, ನಾಗತಿಹಳ್ಳಿ ಚಂದ್ರಶೇಖರ್, ಪ್ರೇಮ್, ತಾಜ್ ಮಹಲ್ ಚಂದ್ರು, ಸೂರಿ ಯಂತಹ ಹೊಸಬರು ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇಂತಹ ಪ್ರತಿಭಾವಂತ ನಿರ್ದೇಶಕರನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು.

*ಇತ್ತೀಚೆಗೆ ನಿಮ್ಮಕನ್ನಡ ಸೇನೆ ಸದ್ದು ಕಡಿಮೆಯಾಗಿದೆಯಲ್ಲಾ?
ಜೈಲಿನಿಂದ ನಾನು ಹೊರಬಂದ ಬಳಿಕ ಕಟ್ಟಿದ ಸಂಘನೆಯಿದು. ಮಾಧ್ಯಮಗಳಲ್ಲಿ ಇದು ಮತ್ತೊಂದು ಶಿವಸೇನೆ ಆಗಲಿದೆ ಎಂಬ ವರದಿಗಳು ಬಂದವು. ಆದರೆ ನನಗೆ ಮತ್ತೊಂದು ಶಿವಸೇನೆ ಅನ್ನಿಸಿಕೊಳ್ಳಲು ಇಷ್ಟವಿರಲಿಲ್ಲ. ಹಾಗಾಗಿ ಸಂಘಟನೆಯ ಕಾರ್ಯಚಟುವಟಿಕೆಗಳು ಸೀಮಿತ ಚೌಕಟ್ಟಿನಲ್ಲಿ ನಡೆಯುತ್ತಿವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವುದೇ ಕನ್ನಡ ಸೇನೆಯ ಧ್ಯೇಯೋದ್ದೇಶ. ನಾಡು, ನುಡಿಯ ಬಗ್ಗೆ ಅನ್ಯಾಯವಾದಗಲೆಲ್ಲಾ ನಮ್ಮ ಸಂಘಟನೆ ಧ್ವನಿಯೆತ್ತುತ್ತದೆ.

*ನಿಮ್ಮ ಮುಂದಿನ ಚಿತ್ರಗಳ ಬಗ್ಗೆ?
ಶಿವಣ್ಣನ ಜೊತೆಗೆ ಮತ್ತೊಂದು ಚಿತ್ರವನ್ನು ಮಾಡಲಿದ್ದೇನೆ. ಟಿಪ್ಪು ಸುಲ್ತಾನ್ ಕುರಿತು ಐತಿಹಾಸಿಕ ಚಿತ್ರವೊಂದನ್ನು ಮಾಡಬೇಕು ಎಂಬ ಯೋಜನೆಯಿದೆ. ಇದಕ್ಕೆ ಬಜೆಟ್ ದೊಡ್ಡ ಮಟ್ಟದಲ್ಲಿ ಬೇಕಾಗುತ್ತದೆ. ನೆಪೋಲಿಯನ್ ತರಹದ ಹೀರೋ ಟಿಪ್ಪು ಸುಲ್ತಾನ್. ಬ್ರಿಟೀಷರೊಂದಿಗೆ ರಾಜಿಯಾಗದೆ ಕಡೆಯವರೆಗೂ ಹೋರಾಡಿದ ಕೆಚ್ಚೆದೆಯ ನಾಯಕ. ಪ್ರತಿಯೊಬ್ಬ ಮನುಷ್ಯನಲ್ಲೂ ಕೆಟ್ಟ ಹಾಗೂ ಒಳ್ಳೆಯ ಗುಣಗಳಿರುತ್ತವೆ. ಹಾಗೆಯೆ ಟಿಪ್ಪುನಲ್ಲೂ ಇದ್ದವು. ನಾವು ಅವನಲ್ಲಿನ ಒಳ್ಳೆಯ ಅಂಶಗಳನ್ನಷ್ಟೇ ತೆಗೆದುಕೊಳ್ಳೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada