»   » 'ಮಳೆ' ಅಬ್ಬರದ ನಡುವೆ ಬಂದಿದೆ ಬಣ್ಣದ ಕೊಡೆ

'ಮಳೆ' ಅಬ್ಬರದ ನಡುವೆ ಬಂದಿದೆ ಬಣ್ಣದ ಕೊಡೆ

Posted By:
Subscribe to Filmibeat Kannada

ಒಂದು ಸಿನಿಮಾ ಎಂದರೆ ಇಂತಿಷ್ಟೆ ಬಂಡವಾಳದಲ್ಲಿ ನಿರ್ಮಿಸಬೇಕು ಎಂಬುದು ಗಾಂಧಿನಗರದ ಲೆಕ್ಕಾಚಾರ. ಈ ಲೆಕ್ಕಾಚಾರವನ್ನು ಸ್ವಲ್ಪ ತಲೆಕೆಳಗೆ ಮಾಡಿದ್ದಾರೆ ಇಬ್ಬರು ಪತ್ರಕರ್ತರು. ಅವರು ರು.50 ಲಕ್ಷದಲ್ಲಿ ಚಿತ್ರವನ್ನು ನಿರ್ಮಿಸಿ ಕೇವಲ 18 ದಿನಗಳಲ್ಲಿ ಚಿತ್ರೀಕರಿಸಿದ್ದಾರೆ. ಚಿತ್ರದ ಹೆಸರು 'ಬಣ್ಣದ ಕೊಡೆ'.

ಕನ್ನಡ ಚಿತ್ರೋದ್ಯಮದಲ್ಲಿ ಒಂದು 'ಮಳೆ' ಯಶಸ್ವಿಯಾಗಿದ್ದೆ ತಡ ಮಳೆಯ ಭೋರ್ಗರೆತ ಶುರುವಾಯಿತು. ರಾಡಿ ಎಬ್ಬಿಸಿದ್ದು ಬಿಟ್ಟರೆ ಕನ್ನಡ ಚಿತ್ರೋದ್ಯಮಕ್ಕೆ ಹೇಳಿಕೊಳ್ಳುವಂತಹ ಫಾಯಿದೆ ಏನು ಆಗಲಿಲ್ಲ.ಏನಾಶ್ಚರ್ಯವೋ ಏನೋ 'ಮಳೆ' ಅಬ್ಬರದ ನಡುವೆ ಈಗ ಬಣ್ಣದ ಕೊಡೆ ಸಹ ಬಂದಿದೆ!

ಈ ಚಿತ್ರಕ್ಕೆ ಪತ್ರಕರ್ತ ಜಿ ಕೃಷ್ಣ ಆಕ್ಷನ್, ಕಟ್ ಹೇಳಿದ್ದಾರೆ. ಇದು ಅವರ ಚೊಚ್ಚಲ ಕಾಣಿಕೆ. ಮತ್ತೊಬ್ಬ ಪತ್ರಕರ್ತ ಯತಿರಾಜ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಏಷ್ಯಾ ಮಟ್ಟದ್ದಲ್ಲಿ ಹೆಸರು ಮಾಡಿದ ಹೈಜಂಪ್ ಪಟು ರೋಹಿತ್ ಕುಮಾರ್ ಕಟೀಲ್ ಚಿತ್ರದ ಪ್ರಮುಖ ಆಕರ್ಷಣೆ.

ಚಿತ್ರದ ನಿರ್ದೇಶಕ ಜಿ ಕೃಷ್ಣ ಅವರಿಗೆ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮದಲ್ಲಿ ಸುದೀರ್ಘ ಹತ್ತು ವರ್ಷಗಳ ಅನುಭವಿದೆ. ಹಾಗಾಗಿ ಈ ಚಿತ್ರ ಸಂಭಾಷಣಾ ಪ್ರಧಾನ ಎನ್ನುವುದಕ್ಕಿಂತ ದೃಶ್ಯ ಪ್ರಧಾನ ಎನ್ನಬಹುದು. ಇಷ್ಟಕ್ಕು ಚಿತ್ರದ ಕತೆ ಏನೆಂದರೆ, ಬಡತನದಲ್ಲಿ ಬಳಲುತ್ತಿರುವ ಬಾಲಕಿಯೊಬ್ಬಳು ಬಣ್ಣದ ಕೊಡೆ ತೆಗೆದುಕೊಳ್ಳಬೇಕೆಂದು ಕನಸು ಕಾಣುತ್ತಾಳೆ. ಆಕೆಯ ಕನಸು ನೆರವೇರುತ್ತದೆಯೇ ಎಂಬುದೇ ಚಿತ್ರದಕಥಾವಸ್ತುಎನ್ನುತ್ತಾರೆ ಜಿ ಕೃಷ್ಣ.

ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು ಮುಂಬೈನ ನಾವೆಲ್ ಎಂಬುವರು ಸಂಗೀತ ಸಂಯೋಜಿಸಿದ್ದಾರೆ. ರಾಮನಾಥ್ ವಿ ಕಾಮತ್, ಸಿದ್ಧೇಶ್ವರ ಹಾಗೂ ಇನ್ನೂ ಇಬ್ಬರು ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ. ಮಾಸ್ಟರ್ ಚಿರಂಜೀವಿ, ಶರಣ್ಯ, ಶಿಲ್ಪಾ, ಮೋಹಿನಿ, ದೀಪಕ್ ಪಿಲಾರ್, ಮನೋಹರ್ ಸುವರ್ಣ, ರಮೇಶ್ ಕಾಮತ್ ತಾರಾಗಣವಿದೆ. ಛಾಯಾಗ್ರಹಣ ವಿಷ್ಣುಪ್ರಸಾದ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada