»   »  ಪೈರಸಿ ತಡೆಗೆ ಶೀಘ್ರ ಕಾನೂನು: ಯಡಿಯೂರಪ್ಪ

ಪೈರಸಿ ತಡೆಗೆ ಶೀಘ್ರ ಕಾನೂನು: ಯಡಿಯೂರಪ್ಪ

Subscribe to Filmibeat Kannada
Amrutha Mahotsava celebrations
ಚಿತ್ರರಸಿಕರ ನೂಕು ನುಗ್ಗಲು, ಕಲಾವಿದರ ಸಡಗರ ಸಂಭ್ರಮದ ನಡುವೆ ಮೂರು ದಿನಗಳ ಅದ್ದೂರಿ 'ಕನ್ನಡ ವಾಕ್ಚಿತ್ರದ ಅಮೃತ ಮಹೋತ್ಸವ' ಭಾನುವಾರ ಸಂಜೆ ಶುಭಾರಂಭವಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸರ್ಕಾರ ನೀಡುವ ಸೌಲಭ್ಯಗಳನ್ನು ಕನ್ನಡ ಚಿತ್ರೋದ್ಯಮ ಸದುಪಯೋಗಪಡಿಸಿಕೊಂಡು ಮತ್ತಷ್ಟು ಅಭಿವೃದ್ಧಿ ಸಾಧಿಸಬೇಕು ಎಂದು ಅಭಿಪ್ರಾಯ ಪಟ್ಟರು.

ಬೆಂಗಳೂರಿನಲ್ಲಿ ಅಮೃತ ಮಹೋತ್ಸವ ಭವನ ನಿರ್ಮಾಣಕ್ಕೆ ರು.5 ಕೋಟಿ ಹಾಗೂ ಸದಭಿರುಚಿಯ ಕನ್ನಡ ಚಲನಚಿತ್ರಗಳಿಗೆ ತಲಾ ರು.10 ಲಕ್ಷ ಸಹಾಯಧನ ನೀಡಲು ರು.2 ಕೋಟಿ ಅನುದಾನ ಒದಗಿಸಿದೆ. ಪೈರಸಿ ತಡೆಗೆ ಸರ್ಕಾರ ಅಗತ್ಯ ಕಾನೂನು ರೂಪಿಸಲಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಚಿತ್ರರಂಗ ಸಾಮಾನ್ಯ ಜನತೆಯನ್ನು ತಲುಪಬಲ್ಲ ಪ್ರಭಾವಿ ಮಾದ್ಯಮವಾಗಿದೆ. ಅಮೃತ ಮಹೋತ್ಸವ ಆಚರಿಸುತ್ತಿರುವ ಶುಭಸಂದರ್ಭದಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವುದು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದೆ ಎಂದರು. 75 ವರ್ಷಗಳ ಕಾಲ ಕನ್ನಡ ಚಿತ್ರೋದ್ಯಮಕ್ಕೆ ಶ್ರಮಿಸಿದ ಸಮಸ್ತ ಕಲಾವಿದರು ಮತ್ತು ಅವರ ಕುಟುಂಬಕ್ಕೆ ಅಭಿನಂದನೆಗಳನ್ನು ತಿಳಿಸಿದರು. ಗುಬ್ಬಿ ವೀರಣ್ಣ, ಡಾ.ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್ ಸೇರಿದಂತೆ ಹಲವರ ಸೇವೆಯನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ವಾರ್ತಾ ಮತ್ತು ಅಬಕಾರಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡುತ್ತಾ, ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನಾ ನಿರ್ಮಿಸಿದ ಚಮನಲಾಲ್ ಡೊಂಗಾಜಿ ಕುಟುಂಬದವರನ್ನು ಆಕಸ್ಮಿಕವಾಗಿ ಮರೆತಿದ್ದಕ್ಕೆ ಚಿತ್ರೋದ್ಯಮದ ಪರವಾಗಿ ಕ್ಷಮೆಯಾಚಿಸಿದರು.ಕನ್ನಡ ಚಿತ್ರರಂಗ ಕೇವಲ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ದೇಶಕ್ಕೆ ಅತ್ಯುತ್ತಮ ಚಿತ್ರಗಳನ್ನು ನೀಡಿ ಹಲವಾರು ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದೆ. ಕನ್ನಡ ಚಿತ್ರರಂಗದ ಗತವೈಭವ ಮತ್ತೆ ಮರಳಿಬರಬಾರದೇ ಎಂದು ಸಚಿವ ಕಟ್ಟಾ ಹಂಬಲಿಸಿದರು.

ಭಾರತೀಯ ಚಲನಚಿತ್ರದ ಒಕ್ಕೂಟದ ಅಧ್ಯಕ್ಷ ಜಿತೇಂದ್ರ ಜೈನ್, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ರಾಜಗೋಪಾಲ್, ಕೇರಳ ಚಲನಚಿತ್ರ ಮಂಡಳಿ ಅಧ್ಯಕ್ಷ ಫಾಜಲ್ ಗಪೂರ್, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಕೆಸಿಎನ್ ಚಂದ್ರಶೇಖರ್, ನಿರ್ದೇಶಕರ ಸಂಘದ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕಾರ್ಮಿಕರ, ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಅಶೋಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಪ್ರಾಸ್ತಾವಿಕ ಭಾಷಣ ಮಾಡಿದರು. ಸಾ.ರಾ.ಗೋವಿಂದು ಸ್ವಾಗತಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಾಜ್ ಪುಣ್ಯಭೂಮಿಯಲ್ಲಿ ಅಮೃತ ಮಹೋತ್ಸವ
ಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ
ರವಿಚಂದ್ರನ್ ಗರಡಿಯಲ್ಲಿ ಸುಂದರ ಸುಂದರಿಯರು!
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada