»   »  ಘಾ ನಿರ್ಮಾಪಕರಿಗೆ ಗುಂಡು ಪಾರ್ಟಿ ನಿಷೇಧ!

ಘಾ ನಿರ್ಮಾಪಕರಿಗೆ ಗುಂಡು ಪಾರ್ಟಿ ನಿಷೇಧ!

By: *ಜಯಂತಿ
Subscribe to Filmibeat Kannada
KCN Chandrashekar
ಘಾ(GHA)= ಗುಂಡು ಹಾಕುವ ಆಸಾಮಿ ಅಥವಾ ಗುಂಡು ಹಾಕದ ಆಸಾಮಿ ಅನ್ನುತ್ತಿದ್ದರು ವೈಎನ್ಕೆ. ಆದರೆ, ಕನ್ನಡ ಸಿನಿಮಾ ನಿರ್ಮಾಪಕನಿಗೆ ಈಗ ಗುಂಡು ಹಾಕಿಸದ ಆಸಾಮಿ ಅನ್ನುವ ಮಾತು ಅನ್ವಯವಾಗುತ್ತದೆ.

ವಿಷಯವಿಷ್ಟೆ- ಸಿನಿಮಾ ಸಮಾರಂಭಗಳು ಇತ್ತೀಚೆಗೆ ಸಾಯಂಕಾಲದ ನಂತರವೇ ಹೆಚ್ಚಾಗಿ ನಡೆಯುತ್ತಿದ್ದುದು. ಸಂಜೆ ಸಮಾರಂಭ ಅಂದಮೇಲೆ ಗುಂಡು ಸೇವೆ ಮಾಮೂಲು. ಆದರೆ, ಹೀಗೆ ಗುಂಡು ಕುಡಿಸಿ ಕುಡಿಸಿ ನಾವು ಹಾಳಾಗುತ್ತಿದ್ದೇವೆ ಅಂತ ಕೆಲವು ನಿರ್ಮಾಪಕರು ತಮ್ಮ ಸಂಘಕ್ಕೆ ಅಹವಾಲು ಸಲ್ಲಿಸಿದ್ದಾರೆ. ಪರಿಣಾಮ ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್.ಚಂದ್ರು ಹೊಸವರ್ಷದಿಂದ ರಾತ್ರಿ ಪಾರ್ಟಿ ರದ್ದು ಅಂತ ಫರ್ಮಾನು ಹೊರಡಿಸಿದ್ದಾರೆ (ಸದ್ಯಕ್ಕೆ ಈ ಫರ್ಮಾನು ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ. ಫೆಬ್ರುವರಿ15ರೊಳಗೆ ಒಂದು ಸ್ಪಷ್ಟ ತೀರ್ಮಾನಕ್ಕೆ ಬರೋದು ಖಂಡಿತ ಅಂತ ಚಂದ್ರು ಗುಟುರು ಹಾಕಿದ್ದಾರೆ).

ಘಾ ಅರ್ಥಾತ್ ಗುಂಡು ಹಾಕುವ ಪತ್ರಕರ್ತರಿಗೆ ಈ ಸಂಗತಿ ಕಿರಿಕಿರಿ ಉಂಟು ಮಾಡಿರುವುದರಲ್ಲಿ ಅನುಮಾನವೇ ಇಲ್ಲ. ಪುಟ್ಟಣ್ಣ ಕಣಗಾಲ್ ತರಹದವರಿಂದ ಹಿಡಿದು ತೀರಾ ಇತ್ತೀಚೆಗೆ ಕಣ್ಣುಬಿಟ್ಟವರವರೆಗೆ ಲೋಟಕ್ಕೆ ಮದ್ಯ ಸುರಿದು ಕೊಟ್ಟವರಿಂದ ಇಸಿದುಕೊಂಡು ಕುಡಿದು ಚಿಂತಿಸಿರುವ ಜೀವಗಳು ಇಲ್ಲಿವೆ.

ಸುದ್ದಿಗೋಷ್ಠಿಯ ಮಧ್ಯೆ ಮದ್ಯ ಅನ್ನೋದು ಲಾಗಾಯ್ತಿನಿಂದ ಬೆಳೆದುಕೊಂಡು ಬಂದಿರುವಂಥದ್ದು. ಇಷ್ಟಕ್ಕೂ ಕುಡಿಯುವ ಸಿನಿಮಾ ಪತ್ರಕರ್ತರ ಸಂಖ್ಯೆಯಾದರೂ ಎಷ್ಟು? ಅಬ್ಬಬ್ಬಾ ಅಂದರೆ ಒಂದು ಡಜನ್. ಎಲ್ಲಾ ಖರ್ಚು ಸೇರಿಸಿದರೆ ಹತ್ತು ಸಾವಿರವನ್ನೂ ಮುಟ್ಟೋದಿಲ್ಲ. ನಿರ್ಮಾಪಕರು ಅವರ ಕಡೆಯವರನ್ನೆಲ್ಲಾ ಸಮಾರಂಭಗಳಿಗೆ ಕರೆದು ವೃಥಾ ಖರ್ಚು ಮಾಡಿಕೊಂಡು, ಈಗ ಪತ್ರಕರ್ತರ ಮೇಲೆ ಗೂಬೆ ಕೂಡಿಸುವುದು ಯಾವ ನ್ಯಾಯ ಅನ್ನೋದು ಘಾ ಪತ್ರಕರ್ತರ ಪಾಯಿಂಟು.

ಗುಂಡು ಬಂದಾಗುವ ದಿನ ಅಂದುಕೊಂಡಂತೆ ಒಂದನೇ ತಾರೀಖು ಜಾರಿಗೆ ಬಂದಿಲ್ಲ. ಕೆಸಿಎನ್ ಚಂದ್ರು ಅನುಮತಿ ಪಡೆದ ನಂತರ ವರ್ಷದ ಮೊದಲ ದಿನವೇ ಎರಡೆರಡು ಗುಂಡು ಪಾರ್ಟಿಗಳು ನಡೆದವು. ರಾಮು ನಿರ್ಮಾಣದ 'ಗುಲಾಮ" ಚಿತ್ರದ ಸುದ್ದಿಗೋಷ್ಠಿ ಒಂದು. 'ವೀರ ಮದಕರಿ" ಚಿತ್ರದ ಕ್ಯಾಸೆಟ್ ಬಿಡುಗಡೆ ಸಮಾರಂಭ ಇನ್ನೊಂದು.

ಇನ್ನುಮುಂದೆ ಗುಂಡಿನ ಲೋಟ ಮುಟ್ಟುವ ಮುನ್ನ ಸಿನಿಮಾ ಪತ್ರಕರ್ತರು ಎದೆಮುಟ್ಟಿಕೊಳ್ಳುವುದು ಒಳ್ಳೆಯದು! ಯಾಕೆಂದರೆ, ಇದು ರಿಸೆಷನ್ನಿನ ಕಾಲ! ಅಂತೆಯೇ ಫರ್ಮಾನು ಹೊರಡಿಸುವ ನಿರ್ಮಾಪಕರು ಆತ್ಮಾವಲೋಕನಕ್ಕೆ ಇಳಿಯುವುದು ಲೇಸು. ಯಾಕೆಂದರೆ, ಡಬ್ಬಾ ಚಿತ್ರಗಳ ಸಂಖ್ಯೆ ಏರುತ್ತಲೇ ಇದೆ! ಹಣ ಉಳಿಸಬೇಕಿರುವುದು ಅಲ್ಲಿ, ಘಾ ಆಗುವ ಮೂಲಕ ಅಲ್ಲ!

ವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada