»   »  ಉಪೇಂದ್ರ ಸೂಪರ್ ಎಲ್ಲಿಗೆ ಬಂತು?

ಉಪೇಂದ್ರ ಸೂಪರ್ ಎಲ್ಲಿಗೆ ಬಂತು?

Posted By: *ಜಯಂತಿ
Subscribe to Filmibeat Kannada

ಉಪೇಂದ್ರ ನಿರ್ದೇಶನದ ಸೂಪರ್ ಸಿಂಬಲ್‌ನ ಚಿತ್ರದ ಜಾಹೀರಾತು ಬಂದದ್ದೇ ಗಾಂಧೀನಗರದ ಗಲ್ಲಿಗಳಲ್ಲಿ ಸಂಚಲನೆ. "ರಾಜ್" ಜ್ವರ ಠುಸ್ಸಂತು; ಇನ್ನೇನಿದ್ದರೂ "ಸೂಪರ್ ಜ್ವರ" ಎಂದು ಕೆಲವರು ಪಂಚಾಂಗ ಬಿಡಿಸಿದ್ದರು. ಅಂದಹಾಗೆ, ಉಪ್ಪಿ ಚಿತ್ರ ಯಾವಾಗ ಸೆಟ್ಟೇರುವುದೋ ಎಂದು ಕುತೂಹಲಿಗಳಾಗಿರುವವರಲ್ಲಿ ವಿತರಕರು, ಚಿತ್ರ ಮಂದಿರದ ಮಾಲೀಕರು, ಹೊಸ ಹಳೆಯ ನಿರ್ದೇಶಕರೂ ಸೇರಿದ್ದಾರೆ. ಅಷ್ಟೊಂದು ಭಾಷೆಗಳಲ್ಲಿ ಸಿನಿಮಾ ಮಾಡಬೇಕಾದರೆ ಬೇಕಿರುವ ದೊಡ್ಡ ಬಜೆಟ್ಟನ್ನು ಒದಗಿಸುವ ನಿರ್ಮಾಪಕ ಯಾರು ಎಂಬುದು ಇನ್ನೊಂದು ಪ್ರಶ್ನೆ.

"ಸೂಪರ್" ಬಗ್ಗೆ ಗಾಂಧಿನಗರದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮುಹೂರ್ತ ಇದೇ ತಿಂಗಳಲ್ಲಂತೆ; ಇಲ್ಲ ಮುಂದಿನ ತಿಂಗಳಂತೆ ಎನ್ನುವ ಊಹಾಪೋಹಗಳೂ ಇವೆ. ಆದರೆ, ನಿಜ ಯಾವುದೆಂದು ಸ್ಪಷ್ಟಪಡಿಸಲು ಉಪೇಂದ್ರ ಮುಂದಾಗುತ್ತಿಲ್ಲ!

ಉಪ್ಪಿ ಹೀಗೇಕೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸುಲಭವಾದುದು- ಅಂತೆಕಂತೆಗಳ ಬೊಂತೆ ಗಾಂಧಿನಗರದ ಓಣಿಗಳಲ್ಲಿ ಇರಬೇಕು ಎಂದೇ ಉಪ್ಪಿ ಹೀಗೆ ಮಾಡುತ್ತಾರೆ. ಅದು ಅವರ ಸ್ಟ್ರಾಟಜಿ. ಮಾರುಕಟ್ಟೆಯ ಸ್ವೀಕೃತ ತಂತ್ರ. ಫೋನಾಯಿಸಿ ಕೇಳಿದರೆ, ಇನ್ನೂ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಸ್ವಲ್ಪ ಕಾಯಬೇಕು ಎಂದಷ್ಟೇ ಹೇಳಿ ಅವರು ವಿಷಯಾಂತರ ಮಾಡುತ್ತಾರೆ. ಮುಂದಿನ ತಿಂಗಳೇ ಸಿನಿಮಾ ಸೆಟ್ಟೇರುತ್ತದಂತೆ; ಹೌದಾ ಎಂದರೆ, ಅವರು ಸುಮ್ಮನೆ ನಗುತ್ತಾ, ನನಗೂ ಗೊತ್ತಿಲ್ಲ ಎಂದು ತಾರಮ್ಮಯ್ಯ ಮಾಡುತ್ತಾರೆ.

ಇಷ್ಟಕ್ಕೂ ಉಪ್ಪಿಯ ಚಿತ್ರದ ಸಿಂಬಲ್ ಹೆಸರು "ಸೂಪರ್" ಎಂಬ ಅರ್ಥವನ್ನು ಹೊರಡಿಸುತ್ತದೆಯಾ? ಉಪ್ಪಿ ಪ್ರಕಾರ ಅದು ಒಬ್ಬೊಬ್ಬರಿಗೆ ಒಂದೊಂದು ತರಹ ಕಾಣುತ್ತದೆ. ಕೆಲವರಿಗೆ ಸೂಪರ್, ಕೆಲವರಿಗೆ ಸೊನ್ನೆ, ಇನ್ನು ಕೆಲವರಿಗೆ ನಾಟ್ಯದ ಮುದ್ರೆ, ಧ್ಯಾನಪ್ರಿಯರಿಗೆ ಅಧ್ಯಾತ್ಮ ಹೀಗೆ ಏನೇನೋ. ಚಿತ್ರದ ಕಥೆಯ ಎಳೆಯನ್ನು ಮಾತ್ರ ಉಪೇಂದ್ರ ಎಲ್ಲೂ ಬಿಟ್ಟುಕೊಟ್ಟಿಲ್ಲ. ದೊಡ್ಡ ಕಾರ್ಪೊರೇಟ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಲಿದೆ ಎಂಬ ಗುಸುಗುಸು ಇದೆ.

ಉಪ್ಪಿಯ ಚಿತ್ರ ಬೇಗನೆ ಪ್ರಾರಂಭವಾಗುವುದಿಲ್ಲ ಎಂಬ ಇನ್ನೊಂದು ಅಭಿಪ್ರಾಯವೂ ಇದೆ. ಇದಕ್ಕೆ ಕಾರಣ ಖುದ್ದು ಉಪ್ಪಿಗೇ ಇರುವ ಗೊಂದಲಗಳು. ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗೆ "ಲಂಡನ್ ಗೌಡ" ಚಿತ್ರ ಸಿದ್ಧವಾಗಬೇಕಿತ್ತು. ಅದನ್ನು ಉಪೇಂದ್ರ ಅವರೇ ನಿರ್ದೇಶಿಸುವುದಾಗಿ ಸುದ್ದಿ ಹೊಮ್ಮಿತ್ತು. "ಸಲಾಂ ನಮಸ್ತೆ" ಹಿಂದಿ ಚಿತ್ರದ ಆಶಯವನ್ನು ಇಟ್ಟುಕೊಂಡು ಆ ಚಿತ್ರ ಮಾಡಬೇಕೆಂಬುದು ಉದ್ದೇಶ. ಅದಕ್ಕಾಗಿ ಅವರದ್ದೇ ರುಪ್ಪೀಸ್ ರೆಸಾರ್ಟ್‌ನಲ್ಲಿ ಸುತ್ತುಗಟ್ಟಲೆ ಚರ್ಚೆಗಳೂ ನಡೆದವು. ಆಮೇಲೆ ಸ್ಕ್ರಿಪ್ಟ್‌ಗೆ ಸೂಕ್ತ ಆಕಾರ ಕೊಡಲಾಗದೆ ಚಿತ್ರವನ್ನೇ ಕೈಬಿಡಲಾಯಿತು. ಹಿಂದೆ "ದೇವದಾಸ್" ಚಿತ್ರವನ್ನು ಉಪ್ಪಿ ಮಾಡುತ್ತಾರೆ ಎಂಬ ಸುದ್ದಿಗೆ ಆದದ್ದೂ ಇದೇ ಗತಿ. ಆ ಚಿತ್ರ ಮಾಡಿದರೆ ಶಾರುಖ್ ಖಾನ್ ಜೊತೆ ಜನ ಹೋಲಿಸಿ ನೋಡುತ್ತಾರೆ ಎಂಬ ಅಳುಕು ಉಪೇಂದ್ರ ಅವರಿಗೆ ಇತ್ತು ಎಂಬುದು ಅವರ ಆಪ್ತರೊಬ್ಬರ ಅಭಿಪ್ರಾಯ.

"ಸಾಮಾನ್ಯರಂತೆ ಕೂತು, ಚರ್ಚಿಸಿ ಸ್ಕ್ರಿಪ್ಟ್ ಮಾಡುವುದು ನನಗೆ ಕಷ್ಟ. ಹಿಂದೆ ನಾನು ಎರಡು ಮೂರು ತಿಂಗಳು ಮನೆಗೇ ಸೇರುತ್ತಿರಲಿಲ್ಲ. ನನಗೆ ಪ್ರಿಯವಾದ ಜಾಗದಲ್ಲಿ ಕೂತು ಸ್ಕ್ರಿಪ್ಟ್ ಬರೆಯುತ್ತಿದ್ದೆ. ಈಗ ಹಾಗೆ ಮಾಡಲು ಸಾಧ್ಯವಿಲ್ಲ. ಹೆಂಡತಿ ಮಕ್ಕಳು ಇದ್ದಾರೆ. ಮೇಲಾಗಿ ನನ್ನ ಬಗ್ಗೆ ನನಗೇ ಭಯವಿದೆ. ನಾನು ನಿರ್ದೇಶಿಸುತ್ತೇನೆ ಎಂದಾಕ್ಷಣ ನಿರೀಕ್ಷೆಯ ಭಾರ ಹೆಗಲೇರುತ್ತದೆ. ಕೊಟ್ಟರೆ ಅದ್ಭುತವಾದ ಚಿತ್ರ ಕೊಡಬೇಕು. ಇಲ್ಲದಿದ್ದರೆ ಸುಮ್ಮನಿರಬೇಕು. ದೊಡ್ಡ ಕನಸನ್ನೇನೋ ಕಾಣುತ್ತಿದ್ದೇನೆ. ಸರ್‌ಪ್ರೈಸ್ ಕೊಡುವ ಉದ್ದೇಶ ನನ್ನದು. ಮಿಕ್ಕ ವಿವರಗಳೆಲ್ಲಾ ಆಮೇಲೆ" ಉಪ್ಪಿ ಮಾತು ಸೀಮಿತವಾಗುವುದು ಇಷ್ಟಕ್ಕೇ.

ಅವರು ಯಾವಾಗ ಸರ್‌ಪ್ರೈಸ್ ಕೊಡುತ್ತಾರೋ ಎಂಬ ನಿರೀಕ್ಷೆ ಅಭಿಮಾನಿಗಳಿಗಂತೂ ಇದೆ. ಯಾಕೆಂದರೆ, ನಿರ್ದೇಶಕನಾಗಿ ಉಪ್ಪಿಯ ಯಾವ ಗಿಮಿಕ್ಕೂ ಇಲ್ಲಿಯವರೆಗೆ ಸೋತಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada