»   » ಬಳ್ಳಾರಿ ತೆಲುಗು ಚಿತ್ರಗಳ ವಿತರಣೆ ಹಕ್ಕು ಕನ್ನಡಿಗರಿಗೆ!

ಬಳ್ಳಾರಿ ತೆಲುಗು ಚಿತ್ರಗಳ ವಿತರಣೆ ಹಕ್ಕು ಕನ್ನಡಿಗರಿಗೆ!

Posted By:
Subscribe to Filmibeat Kannada

ಅಖಿಲ ಕರ್ನಾಟಕ ಚಲನಚಿತ್ರ ವಿತರಕರ ಸಂಘ ಅಸ್ತಿತ್ವಕ್ಕೆ ಬಂದಿದೆ. ಶುಕ್ರವಾರ (ಏ.2) ಬೆಂಗಳೂರು ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಚಲನಚಿತ್ರ ವಿತರಕರ ಸಂಘಕ್ಕೆ ಚಾಲನೆ ನೀಡಲಾಯಿತು. ಇನ್ನು ಮುಂದೆ ಚಲನಚಿತ್ರ ವಿತರಕರ ಸಮಸ್ಯೆಗಳ ಪರಿಹಾರಕ್ಕೆ ಸಂಘಟನಾತ್ಮಕ ಶಕ್ತಿ ಜೊತೆಯಾಗಲಿದೆ.

ಈ ಸಂದರ್ಭದಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಿ ಕಲ್ಯಾಣ್ ಮಾತನಾಡುತ್ತಾ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತೆಲುಗು ಚಿತ್ರಗಳ ವಿತರಣೆ ಹಕ್ಕುಗಳನ್ನು ಕನ್ನಡಿಗರಿಗೆ ನೀಡಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಚಿತ್ರದ ವಿತರಣೆ ಹಕ್ಕುಗಳನ್ನು ಪಡೆಯಲು ಕನ್ನಡಿಗರಿ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಂಧ್ರ ವಾಣಿಜ್ಯ ಮಂಡಳಿ ಜೊತೆ ಚರ್ಚಿಸಿ ಎಲ್ಲ ಜಿಲ್ಲೆಗಳ ವಿತರಣೆ ಹಕ್ಕುಗಳನ್ನು ಕನ್ನಡಿಗರಿಗೆ ಕೊಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಕಲ್ಯಾಣ್ ತಿಳಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಮಾತನಾಡುತ್ತಾ, ಚಲನಚಿತ್ರ ವಿತರಕರ ಸಮಸ್ಯೆಗಳನ್ನು ಸಂಘಟನಾತ್ಮಕವಾಗಿ ಪರಿಹರಿಸಲು ಪ್ರತ್ಯೇಕ ಸಂಘ ಹುಟ್ಟುಹಾಕಿದ್ದು ಸ್ವಾಗತಾರ್ಹ ಎಂದರು. ಚಿತ್ರೋದ್ಯಮದಲ್ಲಿರುವ ಪ್ರತಿಯೊಬ್ಬರು ಮಾಡಿದ ಸ್ವಯಂಕೃತ ತಪ್ಪುಗಳಿಂದ ಕನ್ನಡ ಚಿತ್ರರಂಗ ದುಸ್ಥಿತಿಗೆ ಬಂದಿದೆ. ಚಿತ್ರೋದ್ಯಮದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಕೆ ಸಿ ಎನ್ ಚಂದ್ರಶೇಖರ್, ಟಿ ಎಸ್ ನಾಗಾಭರಣ, ನಟ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಸಾ ರಾ ಗೋವಿಂದು, ಕೆ ವಿ ಗುಪ್ತ, ಚಿನ್ನೇಗೌಡ, ಸಂದೇಶ್ ನಾಗರಾಜ್, ಸುರೇಶ್, ವಿನೋದ್ ರಾಜ್, ಎನ್ ಎಂ ಸುರೇಶ್, ಬಸಂತಕುಮಾರ್ ಪಾಟೀಲ್, ಮಧುಸೂಧನ್ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada