»   » ನಿರುದ್ಯೋಗಿ ಯುವಕರ ಜೀವನದಲ್ಲಿ 'ಶ್ರಾವಣ'

ನಿರುದ್ಯೋಗಿ ಯುವಕರ ಜೀವನದಲ್ಲಿ 'ಶ್ರಾವಣ'

Posted By:
Subscribe to Filmibeat Kannada

ಆರ್.ಟಿ.ಓ. ಶಿವಣ್ಣ ಎಂದೇ ಹೆಸರಾದ ಆರ್. ಮಲ್ಲಿಕಾರ್ಜುನಯ್ಯ ಹಾಗೂ ಕೆ.ಎನ್. ವೆಂಕಟೇಶ ಸೇರಿ ನಿರ್ಮಿಸುತ್ತಿರುವ 'ಶ್ರಾವಣ' ಚಿತ್ರದ ಚಿತ್ರೀಕರಣ ತುಮಕೂರಿನ ಕ್ಯಾತಸಂದ್ರದಲ್ಲಿ ನಡೆಯುತ್ತಿದೆ. ಇದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಚಿತ್ರದ ನಾಯಕ ವಿಜಯರಾಘವೇಂದ್ರ ಹಾಗೂ ಆತನ ಸ್ನೇಹಿತರಾದ ಭುವನ, ಸಂದೀಪ ಮೂವರೂ ನಿರುದ್ಯೋಗಿಗಳು, ಸಿದ್ದಗಂಗಾ ಮಠದ ಯಾತ್ರಿನಿವಾಸ ದ ರೂಮೊಂದನ್ನು ಈ ಯುವಕರು ವಾಸಿಸುವ ಮನೆಯನ್ನಾಗಿ ಮಾರ್ಪಡಿಸಿ, ಅಂದು ಶೂಟಿಂಗ್ ಮಾಡಲಾಗುತ್ತಿತ್ತು.

ಜೀವನವನ್ನು ತುಂಬಾ ಹಗುರವಾಗಿ ತೆಗೆದುಕೊಂಡ ಆ ಮೂವರು ಯುವಕರ ಬದುಕಿನಲ್ಲಿ ಕನಸುಗಳಿಗೆ ಕೊರತೆಯಿರುವುದಿಲ್ಲ. ನೂರಾರು ಸುಂದರ ವೈಭವದ ಕನಸುಗಳನ್ನು ಕಂಡಿರುತ್ತಾರೆ. ಅವರ ಕನಸುಗಳಿಗೆ ನಿಜವಾದ ಅರ್ಥವನ್ನು ಕೊಡುವವಳೇ ಚಿತ್ರದ ನಾಯಕಿ. ಪ್ರಾರಂಭದಲ್ಲಿ ನಾಯಕಿಯ ಬಗ್ಗೆ ಪ್ರೇಕ್ಷಕರು ಏನು ಅಂದು ಕೊಂಡಿರುತ್ತಾರೋ ಅದು ಆಗಿರುವುದಿಲ್ಲ. ಆ ಯುವಕರಿಗೆ ನಾಯಕಿ ದಾರಿ ದೀಪವಾಗುತ್ತಾಳೆ. ಆಶಾಡದ ಅಂಧಕಾರದಲ್ಲಿದ್ದ ಆ ಯುವಕರ ಜೀವನದಲ್ಲಿ ಶ್ರಾವಣದ ತಂಗಾಳಿ ಬೀಸುತ್ತಾಳೆ.

ತುಂಬಾ ಪ್ರಬುದ್ಧವಾದ ಆ ನಾಯಕಿ ಪಾತ್ರವನ್ನು ನವನಟಿ ಗಾಯತ್ರಿ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಸಂಕಷ್ಟದಲ್ಲಿದ್ದ ನಾಯಕಿಯನ್ನು ಈ ಯುವಕರು ಕಾಪಾಡಿರುತ್ತಾರೆ. ಕೊನೆಯಲ್ಲಿ ಆಕೆಯೇ ಈ ಯುವಕರನ್ನು ಸಂರಕ್ಷಿಸಿ ಅವರ ಜೀವನದಲ್ಲಿ ಶ್ರಾವಣ ಮೂಡಿಸುತ್ತಾಳೆ. ನಿರ್ದೇಶಕ ಬಿ.ಎಸ್. ರಾಜಶೇಖರ ತಮ್ಮ ಚಿತ್ರದ ಕಥೆಯನ್ನು ಹೀಗೆ ಸಂಕ್ಷಿಪ್ತವಾಗಿ ವಿವರಿಸಿದರು.

ತಮಿಳಿನಲ್ಲಿ ಸೀತಾಪತಿ ಅವರು ಬರೆದ ಕಥೆಯನ್ನು ಕನ್ನಡಕ್ಕೆ ಭಾಷಾಂತರಿಸಿಕೊಂಡು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಬಿ.ಎಸ್. ರಾಜಶೇಖರ್ ಕಳೆದ 30 ರಿಂದ ಶೂಟಿಂಗ್ ಪ್ರಾರಂಭಿಸಿದ್ದು, ತುಮಕೂರು ಸುತ್ತಮುತ್ತಲ ಪ್ರದೇಶಗಳಲ್ಲಿ 40 ದಿನಗಳ ಕಾಲ ಇದೇ ಚಿತ್ರವನ್ನು ಚಿತ್ರೀಕರಿಸಲಿದ್ದಾರೆ. ಹಾಡುಗಳಿಗೆ ದೊಡ್ದರಂಗೇಗೌಡ, ಬಿ.ಎಸ್. ರಾಜಶೇಖರ್ ಸಾಹಿತ್ಯ ಬರೆದಿದ್ದಾರೆ.

ಕಾರ್ತಿಕ್ ಭೂಪತಿ ಸಂಗೀತ ಸಂಯೋಜನೆ ಮಾಡಿದ್ದು ಕೆ.ವಾಸುದೇವ್ ರವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ರವಿಕಿಶೋರ್ ಹಾಗೂ ಸುರೇಶ್ ಚಗಚಗೆರೆ ಸಂಭಾಷಣೆ ಬರೆದಿದ್ದಾರೆ. ತಾರಾಗಣದಲ್ಲಿ, ವಿಜಯರಾಘವೇಂದ್ರ, ಗಾಯತ್ರಿ, ಭುವನ್, ಸಂದೀಪ್, ಬ್ಯಾಂಕ್ ಜನಾರ್ಧನ್, ಚಿದಾನಂದ್, ಮೈಕಲ್ ಮಧು, ಬಿ.ಕೆ. ಶಂಕರ್, ನಿ.ನಾ.ಸಂ. ಅಶ್ವತ್, ಸತ್ಯಜಿತ್, ರವಿಕುಮಾರ್, ಮಾಲತಿ ಮೈಸೂರು ಮೊದಲಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada