»   » ಸಿನಿಮಾ ಒಂದು ರೀತಿ ಜೂಜಾಟ ಇದ್ದಂತೆ: ಗಣೇಶ್

ಸಿನಿಮಾ ಒಂದು ರೀತಿ ಜೂಜಾಟ ಇದ್ದಂತೆ: ಗಣೇಶ್

Posted By: *ರಾಜೇಂದ್ರ ಚಿಂತಾಮಣಿ
Subscribe to Filmibeat Kannada

ಹೊಸ ಉಲ್ಲಾಸ ಉತ್ಸಾಹದಲ್ಲಿ ತೇಲುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಈಗ ಮದುವೆ ಮನೆ ಹುಡುಗ. ಸಖತ್ ಹಾಟ್ ಬಾನುಲಿ ಕೇಂದ್ರ ರೇಡಿಯೋ ಮಿರ್ಚಿಯಲ್ಲಿ ಅಚಾನಕ್ ಆಗಿ ಮಾತಿಗೆ ಸಿಕ್ಕಿದ್ದರು. ಉಲ್ಲಾಸ ಉತ್ಸಾಹ ಸಿನಿಮಾ ನೋಡುದ್ರಾ...ಹೇಗಿದೆ? ಎಂದರು. ಉತ್ತರಕ್ಕೂ ಕಾಯದೆ ಜನಕ್ಕೆ ಬೇಕಾಗಿರುವುದು ಮನರಂಜನೆ ಬಾಸ್. ಸಂದೇಶ ಅದೂ ಇದೂ ಅಂತ ಹೇಳಕ್ಕೋದರೆ ಪ್ರೇಕ್ಷಕ ಒಪ್ಪಲ್ಲ. ಎರಡೂವರೆ ಗಂಟೆಯಲ್ಲಿ ನಕ್ಕು ನಲಿಯುವ ಕತೆ ಬೇಕು. ಚಿತ್ರನೋಡಿ ಖುಷಿಪಟ್ಟುಕೊಂಡು ಬರಬೇಕು ಅಷ್ಟೆ ಎಂದರು. ಸಿಕ್ಕ ಅರ್ಧ ಗಂಟೆಯಲ್ಲಿ ಗಣೇಶ್ ಜೊತೆ ಹೊಡೆದ ಪಟ್ಟಾಂಗ ಸಂದರ್ಶನ ರೂಪದಲ್ಲಿ ನಿಮ್ಮ ಮುಂದೆ.

ಉಲ್ಲಾಸ ಉತ್ಸಾಹ ಚಿತ್ರಕ್ಕೆ ಪ್ರತಿಕ್ರಿಯೆ ಹೇಗಿದೆ?
ಚಿತ್ರಕ್ಕೆ ಉತ್ತಮ ಆರಂಭ ಸಿಕ್ಕಿದೆ. ಮೊದಲ ದಿನದ ಎರಡು ಪ್ರದರ್ಶನಗಳು ಬೆಂಗಳೂರಿನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ ಎಂದು ನಿರ್ಮಾಪಕರು ಹೇಳಿದರು. ಕಾಮಿಡಿ ಜೊತೆಗೆ ಒಳ್ಳೆ ಲವ್ ಸಬ್ಜೆಕ್ಟ್ ಇರುವ ಚಿತ್ರ. ಪ್ರೇಕ್ಷಕರಿಗೆ ಚಿತ್ರ ಖಂಡಿತವಾಗಿಯೂ ಇಷ್ಟವಾಗುತ್ತದೆ.ಬಾಕ್ಸಾಫೀಸ್ ಗಳಿಕೆಯಲ್ಲೂ ಗೆಲ್ಲುತ್ತೆ.

ಮಳೆಯಲಿ ಜೊತೆಯಲಿಗಿಂತಲೂ ಮುನ್ನ ಉಉ ಬಿಡುಗಡೆಯಾಗಬೇಕಿತ್ತಲ್ಲಾ?
ಡಿಟಿಎಸ್ ಮಿಕ್ಸಿಂಗ್ ಬಿಟ್ಟು ಉಉ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದವು. ಅಷ್ಟೊತ್ತಿಗೆ ಮಳೆಯಲಿ ಜೊತೆಯಲಿ ಸಿದ್ಧವಾಗಿತ್ತು. ಹಾಗಾಗಿ ಆ ಚಿತ್ರವನ್ನು ಮುಂಚಿತವಾಗಿ ಬಿಡುಗಡೆ ಮಾಡಬೇಕಾಯಿತು. ಚಿತ್ರ ಶತಕ ಬಾರಿಸಿದ ನಂತರ ಉಉ ಬಿಡುಗಡೆ ಮಾಡೋಣ ಎಂದುಕೊಂಡೆವು. ಬಳಿಕ ಐಪಿಎಲ್ ಶುರುವಾಯಿತು. ಟಿವಿಯಲ್ಲಿ ಸಿಗುವ ಬಿಟ್ಟಿ ಮನರಂಜನೆ ಬಿಟ್ಟು ಚಿತ್ರಮಂದಿರಕ್ಕೆ ಯಾರ್ರಿ ಬರ್ತಾರೆ. ಹಾಗಾಗಿ ಉಉ ಚಿತ್ರದ ಬಿಡುಗಡೆ ತಡವಾಯಿತು.

ಮದುವೆ ಮನೆ ಚಿತ್ರದ ವಿಶೇಷಗಳೇನು?
ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಬೆಂಗಳೂರು, ತಲಕಾಡು ಮತ್ತು ತಿರುಪತಿಯಲ್ಲಿ ಚಿತ್ರೀಕರಣ ನಡೆದಿದೆ. ಈಚಿತ್ರದ ವಿಶೇಷ ಎಂದರೆ, ಯಡಕುರ್ಕಿ ಎಂಬ ಹಳ್ಳಿಯಲ್ಲಿ ಚಿತ್ರೀಕರಿಸಿರುವುದು. ಈ ಹಳ್ಳಿಯ ಸುತ್ತಲೂ ನೀರು. ಶಿಂಶಾ ನದಿಯ ಹಿನ್ನೀರು ಈ ಹಳ್ಳಿಯನ್ನು ದ್ವೀಪ ಮಾಡಿದೆ. ದೋಣಿ ಇಲ್ಲ ಅಂದ್ರೆ ಅಲ್ಲಿ ಜೀವನ ಅಸಾಧ್ಯ. ಶಿವಾಜಿ ಗಣೇಶ್ ರ ಮುಗಲ್ ಮರ್ಯಾದ ಚಿತ್ರ ಬಿಟ್ಟರೆ ಮದುವೆ ಮನೆ ಇಲ್ಲಿ ಚಿತ್ರೀಕರಣವಾಗುತ್ತಿರುವ ಎರಡನೇ ಚಿತ್ರ. ಇಪ್ಪತ್ತೈದು ವರ್ಷಗಳ ಬಳಿಕ ಯಡಕುರ್ಕಿಯಲ್ಲಿ ತೆಗೆಯುತ್ತಿರುವ ಚಿತ್ರ.

ಮದುವೆ ಮನೆ ಹಿಂದಿಯ ರೀಮೇಕ್ ಎನ್ನಲಾಗಿತ್ತು?
ಇಲ್ಲ ರೀ ಅದೆಲ್ಲಾ ಸುಳ್ಳು. ಮದುವೆ ಮನೆ ಅಪ್ಪಟ ಕನ್ನಡ ಚಿತ್ರ. ಯಾವುದೇ ಚಿತ್ರದ ರೀಮೇಕ್ ಅಲ್ಲ. ಸುನಿಲ್ ಕುಮಾರ್ ಸಿಂಗ್ ಅವರ ಸಂಭಾಷಣೆ ಅಧ್ಬುತವಾಗಿದೆ. ಕತೆ, ಚಿತ್ರಕತೆ ಅದ್ಭುತ.

ಗೋಲ್ಡನ್ ಮೂವೀಸ್ ಮುಂದಿನ ಚಿತ್ರಗಳು?
ಎರಡು ಚಿತ್ರಕತೆಗಳು ಸಿದ್ದ್ಧವಾಗಿವೆ. ಒಂದನ್ನು ಅಂತಿಮ ಮಾಡಿದ್ದೇನೆ. ಇದೇ ವರ್ಷ ಚಿತ್ರ ಸೆಟ್ಟೇರಲಿದೆ. ಇನ್ನೆರಡು ಚಿತ್ರಕತೆಗಳು ಸಿದ್ಧವಾಗುತ್ತಿವೆ. ಬಹುಶಃ ಮುಂದಿನ ವರ್ಷದ ವೇಳೆಗೆ ಸೆಟ್ಟೇರಬಹುದು.

ಕನ್ನಡದಲ್ಲಿ ಬಹಳಷ್ಟು ಚಿತ್ರಗಳು ಸೋಲುತ್ತಿವೆ ಕಾರಣ?
ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಸೋಲಬೇಕು ಅಂತ ಯಾರು ಚಿತ್ರ ತೆಗೆಯುವುದಿಲ್ಲ. ಆದರೆ ಎಲ್ಲಾ ಅಂದುಕೊಂಡಂತೆ ನಡೆಯುವುದಿಲ್ಲ. ತೆಲುಗು, ತಮಿಳು ಚಿತ್ರರಂಗಲ್ಲೆ ಎಷ್ಟು ಚಿತ್ರಗಳು ಹಿಟ್ ಆಗಿವೆ ಹೇಳಿ? ಇದೊಂದು ರೀತಿ ಜೂಜಾಟ ಇದ್ದಂತೆ. ನನ್ನ ಕೆಲಸವನ್ನು ನಾನು ನಿಯತ್ತಾಗಿ ಮಾಡ್ತೇನೆ. ಉಳಿದದ್ದು ಪ್ರೇಕ್ಷಕರಿಗೆ ಬಿಟ್ಟ ವಿಚಾರ.

ಚಿತ್ರಗಳ ಸೋಲಿಗೆ ರೀಮೇಕ್ ಕಾರಣವೆ?
ಸೋಲಿಗೆ ರೀಮೇಕ್ ಚಿತ್ರಗಳೇ ಕಾರಣ ಅಂತ ಹೇಳಲಿಕ್ಕಾಗದು. ಸಾಕಷ್ಟು ಸ್ವಮೇಕ್ ಚಿತ್ರಗಳು ಸೋತಿವೆ. ಉತ್ತಮ ಚಿತ್ರಗಳು ಗೆದ್ದೇ ಗೆಲ್ಲುತ್ತವೆ. ಆದರೆ ಪ್ರೇಕ್ಷಕರ ನಾಡಿಮಿಡಿತ ಅರಿಯುವುದು ಕಷ್ಟ. ಚಿತ್ರದಲ್ಲಿ ಫೈಟ್ಸ್, ಪಂಚಿಂಗ್ ಡೈಲಾಗ್ಸ್ ಒಳ್ಳೆ ಲವ್ ಸಬ್ಜೆಕ್ಟ್ ಇರಬೇಕು. ಪ್ರೇಕ್ಷಕ ಬಯಸುವುದು ಇದನ್ನೆ. ವೈಯಕ್ತಿಕವಾಗಿ ರೀಮೇಕ್ ಚಿತ್ರಗಳೆಂದರೆ ನನಗೂ ಅಷ್ಟಕ್ಕಷ್ಟೆ.

ನಿಮ್ಮ ಸ್ವಂತ ನಿರ್ಮಾಣದಲ್ಲಿ ರೀಮೇಕ್ ಚಿತ್ರಗಳು ಬರಲಿವೆಯೇ?
ಸ್ವಂತ ನಿರ್ಮಾಣದಲ್ಲಿ ಆದಷ್ಟು ಸ್ವಮೇಕ್ ಚಿತ್ರಗಳನ್ನೇ ಮಾಡಲು ಪ್ರಯತ್ನಿಸುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ನಾನೊಬ್ಬ ನಟ. ಉತ್ತಮ ಕತೆ, ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಳುಳ್ಳ ರೀಮೇಕ್ ಚಿತ್ರದಲ್ಲಿ ನಟಿಸುವ ಅವಕಾಶ ಬಂದರೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಸನ್ ಫೀಸ್ಟ್ ಕನ್ನಡ ಚಿತ್ರ ಪ್ರಶಸ್ತಿಗಳ ರಾಯಭಾರಿಯಾಗಿ ಏನನ್ನಿಸುತ್ತದೆ?
ಹೆಮ್ಮೆ ಅನ್ನಿಸುತ್ತಿದೆ. ಇದರಿಂದ ನನಗೆ ಎಷ್ಟು ಸಂಭಾವನೆ ಬರುತ್ತದೆ ಎಂಬುದು ಮುಖ್ಯವಲ್ಲ. ಅಷ್ಟು ಹಣವನ್ನು ಬಡಮಕ್ಕಳ ಕಲ್ಯಾಣಕ್ಕಾಗಿ ನೀಡಲು ತೀರ್ಮಾನಿಸಿದ್ದೇನೆ. ಈ ಹಿಂದೆ ಎರಡು ಮ್ಯಾರಥಾನ್ ಓಟಗಳಿಂದ ಬಂದ ಹಣವನ್ನು ವೃದ್ಧಾಶ್ರಮಗಳಿಗೆ ದಾನವಾಗಿ ಕೊಟ್ಟಿದ್ದೆ.

ಮುದ್ದಾದ ಮಗುವಿನ ತಂದೆಯಾಗಿ ಏನು ಹೇಳಲು ಇಚ್ಛಿಸುತ್ತೀರಾ?
ನನ್ನ ಮಗಳಿಗೆ ಈಗ 18 ತಿಂಗಳು. ಮನೆ ಬಿಡಬೇಕಾದರೆ ಹೆಂಡತಿ ಮಕ್ಕಳು ನಗುನಗುತ್ತಾ ಕೈಬೀಸಿ ಕಳಿಸಿದರೆ ಆ ಮಜಾನೇ ಬೇರೆ ರೀ. ಅದೇ ಅವರು ಮುಖ ಗಂಟಿಕ್ಕಿ, ಬೈಬಾರದ್ದನ್ನು ಬೈದು ಕಳಿಸಿದರೆ ಆ ದಿನವೆಲ್ಲಾ ಹೆಂಗಿರುತ್ತೆ ಅಂತ ಯೋಚಿಸಿ. ಒಟ್ಟಲ್ನಿ ನಾನು ಹ್ಯಾಪಿಯಾಗಿದ್ದೇನೆ ಎಂದು ಹೇಳಿ ರೇಡಿಯೋ ಮಿರ್ಚಿ ಶ್ರೋತ್ರುಗಳ ಪ್ರಶ್ನೆಗಳಿಗೆ ಕಿವಿಯಾಗಲು ಎದ್ದು ನಿಂತರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada