For Quick Alerts
  ALLOW NOTIFICATIONS  
  For Daily Alerts

  ಕಂಠೀರವ ಸ್ಟುಡಿಯೋದಲ್ಲಿ ಕರಿಬಸವಯ್ಯನನ್ನು ಕಂಡಿದ್ದೆ

  By * ಮೋಹನ್ ವಂಜೇರಿ
  |

  ಬೆಂಗಳೂರಿಗೆ ಆಗ ನಾನಿನ್ನೂ ಹೊಸಬ. ಬೆಳಗಾವಿಯಿಂದ ಇಲ್ಲಿಗೆ ಬಂದಾಗ ಸಾಮಾನು ಸರಂಜಾಮುಗಳ ಜೊತೆಗೆ ಏನೇನೋ ಆಸೆಗಳ, ಕುತೂಹಲಗಳ ಮೂಟೆಯನ್ನು ಹೊತ್ತುಕೊಂಡೇ ಬಂದಿದ್ದೆ. ಅದರಲ್ಲಿ ಕನ್ನಡ ಸಿನೆಮಾ ನಟರನ್ನು ಸಾಕ್ಷಾತ್ ನೋಡಬೇಕು, ಅವರು ಅಭಿನಯಿಸುವುದನ್ನು ಕಣ್ಣಾರೆ ನೋಡಿ ಆನಂದಿಸಬೇಕು ಎಂಬ ಆಸೆಯನ್ನೂ ತುರುಕಿದ್ದೆ.

  ಹೀಗೆ ಒಂದು ಭಾನುವಾರದ ಬೆಳಿಗ್ಗೆ ಗೆಳೆಯನ ಜೊತೆಗೂಡಿ ಗೊರಗುಂಟೆ ಪಾಳ್ಯದಲ್ಲಿರುವ ಕಂಠೀರವ ಸ್ಟುಡಿಯೋಗೆ ಹೋಗಿದ್ದೆ. ಅಲ್ಲಲ್ಲಿ ಮೇಕಪ್ ಮಾಡಿಕೊಳ್ಳುತ್ತ ನಿಂತಿದ್ದ ಕಲಾವಿದರನ್ನು ನೋಡಿ ಪುಳಕಿತನಾಗಿದ್ದೆ. ಖ್ಯಾತನಾಮರ ಮುಖ ಕಾಣದ್ದರಿಂದ ಸ್ವಲ್ಪ ನಿರಾಶೆಯೂ ಮುಖದಲ್ಲಿ ಮನೆ ಮಾಡಿತ್ತು. ಬಂದಿದ್ದಾಗಿದೆ, ಯಾರಿರ್ತಾರೋ ಅವರ ನಟನೆ ನೋಡಿ ಹೋಗೋಣ ಅಂತ ಕಾದು ಕುಳಿತೆ.

  ಸರಿಯಾಗಿ ಅರ್ಧ ಗಂಟೆಯ ನಂತರ ತೋಟದಲ್ಲಿ ಶೂಟಿಂಗ್ ಶುರುವಾಯಿತು. ಧಾರಾವಾಹಿಯದ್ದೋ, ಸಿನೆಮಾದ್ದೋ ಶೂಟಿಂಗ್ ಗೊತ್ತಾಗಲಿಲ್ಲ. ಒಂದಿಷ್ಟು ಕಾಲೇಜು ಹುಡುಗಿಯರು ಇರುವಂಥ ದೃಶ್ಯವದು. ಒಂದು ಟೇಕ್, ಎರಡು, ಮೂರು, ನಾಲ್ಕು... ಹತ್ತು ದಾಟಿದರೂ ಸುಂದರ ವದನ ಹೊಂದಿದ್ದ ಮಿಟುಕಲಾಡಿಗಳಿಂದ ಒಂದು ಸಣ್ಣ ಡೈಲಾಗ್ ಸರಿಯಾಗಿ ಹೇಳಿಸಲು ನಿರ್ದೇಶಕರಿಗೆ ಸಾಧ್ಯವಾಗಿರಲಿಲ್ಲ.

  ಆದರೆ, ಆ ಪ್ರತಿ ಟೇಕ್ ನಲ್ಲಿಯೂ ಒಬ್ಬರು ಕಪ್ಪಗಿರುವ, ಸ್ವಲ್ಪ ಹಿರಿಯ ವ್ಯಕ್ತಿ ತಮ್ಮ ಪಾಲಿನ ಮಾತನ್ನು ಒಪ್ಪಿಸಿ ಹೋಗುತ್ತಿದ್ದರು. ಹುಡುಗಿಯರು ಎಷ್ಟೇ ಮಿಸ್ಟೇಕ್ ಮಾಡಿದರೂ, ಎಷ್ಟೇ ರಿಟೇಕ್ ಗಳನ್ನು ತೆಗೆದುಕೊಂಡರೂ ಸ್ವಲ್ಪವೂ ಬೇಸರಿಸಿಕೊಳ್ಳದೆ ತಮ್ಮ ಡೈಲಾಗನ್ನು ಪ್ರತಿಬಾರಿ ಚೂರು ತಪ್ಪದಂತೆ ಹೇಳಿ ಹೋಗುತ್ತಿದ್ದರು. ಅವರ ಸಂಯಮತೆಗೆ, ನಟನಾ ಕೌಶಲ್ಯಕ್ಕೆ ನಿಜಕ್ಕೂ ಬೆರಗಾಗಿದ್ದೆ.

  ಕೆಲ ದಿನಗಳ ನಂತರ, ಯಾವುದೋ ಸಿನೆಮಾದಲ್ಲಿ ಆ ದೃಶ್ಯ ನೋಡಿದಾಗ, ತಾಳ್ಮೆಯ ಸಾಕಾರಮೂರ್ತಿಯಾಗಿದ್ದ ಆ ನಟ ಕರಿಬಸವಯ್ಯ ಅಂತ ಗೊತ್ತಾಯಿತು. ನಂತರ, ಉಂಡೂ ಹೋದ ಕೊಂಡೂ ಹೋದ ಚಿತ್ರದಲ್ಲಿ, 'ಸಾ... ನನ್ನ ಹಸಾ' ಅಂತ ವಿಕಾರವಾಗಿ ಧ್ವನಿ ತೆಗೆಯುತ್ತಾ ಮೋಡಿ ಮಾಡಿದ್ದ ಕರಿಬಸವಯ್ಯ ಅವರ ನಟನಾ ಚಾತುರ್ಯಕ್ಕೆ ಮರುಳಾಗಿದ್ದೆ.

  ಇಂದು ಆ ಅಪ್ರತಿಮ ಕಲಾವಿದನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ. ವ್ಯಕ್ತಿ ಎಷ್ಟೇ ದೊಡ್ಡವನಾದರೂ ಆತನಲ್ಲಿನ ಮಾನವೀಯತೆ, ಎಷ್ಟೇ ಕಷ್ಟ ಬಂದರೂ ಎದುರಿಸುವ ಧೈರ್ಯ, ಕಲೆಗಾಗಿ ನೂರಕ್ಕೆ ನೂರರಷ್ಟು ಸಮರ್ಪಿಸಿಕೊಳ್ಳುವ ಗುಣ, ವಿನಮ್ರತೆ ಕಲಾವಿದನಿಗೆ ಎಂತಹ ಪಟ್ಟ ದೊರಕಿಸಿಕೊಡುತ್ತದೆಂದು ತೋರಿಸಿಕೊಟ್ಟವರು ಕರಿಬಸವಯ್ಯ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬದವರಿಗೆ ದುಃಖ ಭರಿಸುವಂಥ ಧೈರ್ಯ ನೀಡಲಿ.

  English summary
  It is very difficult to see an actor like Karibasavaiah. Absolutely dedicated, humility personified, down to earth person Karibasavaiah is such a person, very difficult to remove from ones memory. Mohan Vanjeri, Oneindia-Kannada reader, goes down the memory lane.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X