»   »  ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬ

ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬ

Posted By:
Subscribe to Filmibeat Kannada
ಇಂದು (ಏ.24) ಕನ್ನಡಿಗರ ಕಣ್ಮಣಿ, ವರನಟ ಡಾ.ರಾಜ್ ಕುಮಾರ್ ಅವರ 81ನೇ ಹುಟ್ಟುಹಬ್ಬ. ಡಾ.ರಾಜ್ ಎಂದರೆ ಸರಳತೆ, ವಿನಯ ಮತ್ತು ನಡವಳಿಕೆಗಳಿಗೆ ಹೆಸರಾದವರು. ಈ ಗುಣಗಳಿಂದಲೇ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ ನಟ. ಕಲಾವಿದನೊಬ್ಬ ಹೇಗೆ ಮಣ್ಣಿನ ಋಣ ತೀರಿಸಬಹುದು ಎಂಬುದನ್ನು ತೋರಿಸಿಕೊಟ್ಟಂತಹ ಗಾನ ಗಂಧರ್ವ ಡಾ.ರಾಜ್.

ಕಂಠೀರವ ಸ್ಟುಡಿಯೋದಲ್ಲಿನ ಡಾ.ರಾಜ್ ಸಮಾಧಿ ಬಳಿ ಅಭಿಮಾನಿ ದೇವರುಗಳು ಕೇಕ್ ಕತ್ತರಿಸಿ ಏಪ್ರಿಲ್ 23ರ ಮಧ್ಯರಾತ್ರಿ ಅಣ್ಣಾವ್ರ ಹುಟ್ಟು ಹಬ್ಬ ಆಚರಿಸಿದರು. ರಾಜ್ಯದ ನಾನಾ ಕಡೆಗಳಿಂದ ಅಭಿಮಾನಿ ದೇವರುಗಳು ಮಹಾಪೂರವೇ ಅಣ್ಣಾವ್ರ ಸಮಾಧಿ ಬಳಿಗೆ ಹರಿದುಬಂದಿದೆ. ಅಭಿಮಾನಿ ದೇವರುಗಳ ಭಕ್ತ ಡಾ.ರಾಜ್ ನಮ್ಮೊಂದಿಗೇ ಇದ್ದಾರೆ ಎಂಬ ಭಾವ ಅವರಲ್ಲಿ ತುಂಬಿತ್ತು. ರಾಜ್ ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನೂ ಹಮ್ಮಿಕೊಂಡಿದ್ದರು.

ಹಾಸ್ಯ ನಟ ಹೊನ್ನವಳ್ಳಿ ಕೃಷ್ಣ ಮಾತನಾಡುತ್ತಾ, ಅಣ್ಣಾವ್ರು ನಮ್ಮನ್ನ್ನು ಅಗಲಿಲ್ಲ, ಅವರು ಇಲ್ಲೇ ಎಲ್ಲೋ ನಮ್ಮ ನಡುವೆಯೇ ಇದ್ದಾರೆ ಎಂದರು. ಬಹಳಷ್ಟು ರಾಜ್ ಅಭಿಮಾನಿಗಳ ಅಭಿಪ್ರಾಯ ಸಹ ಇದೇ ಆಗಿತ್ತು. ಕಂಠೀರವ ಸ್ಟುಡಿಯೋದ 2.5 ಎಕರೆ ಪ್ರದೇಶದಲ್ಲಿ ಡಾ.ರಾಜ್ ಸ್ಮಾರಕ ಕೆಲಸಗಳು ಆಮೆ ವೇಗದಲ್ಲಿ ಚಾಲನೆ ಪಡೆದುಕೊಂಡಿವೆ.

ಮೂಲಗಳ ಪ್ರಕಾರ ಸುಮಾರು ರು.15 ಕೋಟಿ ಬೆಲೆ ಬಾಳುವ 2.5 ಎಕರೆ ಪ್ರದೇಶದಲ್ಲಿ 'ಡಾ.ರಾಜ್ ಕುಮಾರ್ ಸ್ಮಾರಕ' ನಿರ್ಮಾಣ ಕಾರ್ಯಕ್ಕೆ ರು.10 ಕೋಟಿ ಖರ್ಚಾಗಲಿದೆ ಯಂತೆ. ''ಸ್ಮಾರಕದ ಭಾಗವಾಗಿ ನೀರಿನ ಕಾರಂಜಿ, ಉದ್ಯಾನ, ಹುಲ್ಲುಹಾಸು, ಚಿತ್ರ ಮಂದಿರ, ವಸ್ತು ಸಂಗ್ರಹಾಲಯ, ಗ್ರಂಥಾಲಯ ನಿರ್ಮಾಣವಾಗಲಿದೆ. ಇವೆಲ್ಲ ಕಾರ್ಯಗಳು ಪೂರ್ಣವಾಗಬೇಕಾದರೆ ಸಾಕಷ್ಟು ಸಮಯ ಬೇಕಾಗುತ್ತದೆ'' ಎನ್ನುತ್ತಾರೆ ಪುನೀತ್ ರಾಜ್ ಕುಮಾರ್.

ಡಾ.ರಾಜ್ ಸ್ಮಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವೆಂಬರ್ 12, 2008ರಂದು ಶಿಲಾನ್ಯಾಸ ಮಾಡಿದ್ದರು. ಸುತ್ತಲೂ ಗೋಡೆ ನಿರ್ಮಿಸುವ ಕಾರ್ಯ ಬಿಟ್ಟರೆ ಉಳಿದ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಅಣ್ಣಾವ್ರ ಸಮಾಧಿಯನ್ನು ಮಾರ್ಬಲ್ ಗಳಿಂದ ಅಲಂಕರಿಸಿರುವುದನ್ನು ಬಿಟ್ಟರೆ ಇನ್ಯಾವ ಅಭಿವೃದ್ಧಿ ಕೆಲಸಗಳು ಡಾ.ರಾಜ್ ಸಮಾಧಿ ಬಳಿ ಕಾಣಿಸುವುದಿಲ್ಲ. ಸ್ಮಾರಕದ ಕೆಲಸಗಳುಈಗ ನಿಧಾನಕ್ಕೆ ಒಂದೊಂದೇ ಆರಂಭವಾಗಿವೆ. ಆದಷ್ಟು ಶೀಘ್ರ ಅಣ್ಣಾವ್ರ ಸ್ಮಾರಕ ನಿರ್ಮಾಣವಾಗಲಿ ಎಂಬುದು ಅಭಿಮಾನಿ ದೇವರುಗಳ ಬಯಕೆ. ಈ ಬಯಕೆ ಯಾವಾಗ ನೆರವೇರುತ್ತದೋ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada