»   » ಶ್ರೀಮುರಳಿ ದಾಖಲೆ ಅಳಿಸಿ ಹಾಕಿದ ರಮೇಶ್

ಶ್ರೀಮುರಳಿ ದಾಖಲೆ ಅಳಿಸಿ ಹಾಕಿದ ರಮೇಶ್

Posted By:
Subscribe to Filmibeat Kannada

ನಟ ಶ್ರೀಮುರಳಿ ಹೆಸರಿನಲ್ಲಿದ್ದ ದಾಖಲೆಯನ್ನು ಮತ್ತೊಬ್ಬ ನಟ ರಮೇಶ್ ಅರವಿಂದ್ ಅಳಿಸಿಹಾಕಿದ್ದಾರೆ! ಇದ್ಯಾವ ದಾಖಲೆ ಎಂಬುದು ತಾನೆ ನಿಮ್ಮ ಅನುಮಾನ. ಮಾರ್ಚ್ 12ರಂದು ನಟ ಶ್ರೀಮುರಳಿಯ ಎರಡು ಚಿತ್ರಗಳು ಒಂದೇ ದಿನ ತೆರೆಗೆ ಅಪ್ಪಳಿಸಿದ್ದವು. ಇದೀಗ ರಮೇಶ್ ಅರವಿಂದರ ಎರಡು ಚಿತ್ರಗಳು ಒಂದೇ ದಿನ ತೆರೆಕಾಣಲು ಸಿದ್ಧವಾಗಿವೆ!

ಬಾಕ್ಸಾಫೀಸಲ್ಲಿ ಚಿತ್ರಗಳು ಗೆದ್ದವೆ? ಸೋತವೆ? ಎಂಬ ಪ್ರಶ್ನೆಗಳನ್ನು ಬದಿಗಿಟ್ಟು ನೋಡಿದರೆ ಒಬ್ಬನೆ ನಾಯಕನ ನಟನ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗಿದ್ದು ಕನ್ನಡ ಮಟ್ಟಿಗೆ ದಾಖಲೆ ಎಂದೆ ಹೇಳಬೇಕು! ಶ್ರೀಮುರಳಿಯ 'ಶ್ರೀಹರಿಕಥೆ' ಮತ್ತು 'ಸಿಹಿಗಾಳಿ' ಒಂದೇ ದಿನ ಬಿಡುಗಡೆಯಾಗಿ ದಾಖಲೆ ನಿರ್ಮಿಸಿದ್ದವು.

ಇದೀಗ ರಮೇಶ್ ಅರವಿಂದ್ ನಾಯಕ ನಟನಾಗಿ ಅಭಿನಯಿಸಿರುವ 'ಕೃಷ್ಣ ನೀ ಲೇಟಾಗಿ ಬಾರೋ' ಮತ್ತು 'ಪ್ರೀತಿಯಿಂದ ರಮೇಶ್' ಚಿತ್ರಗಳು ಏಪ್ರಿಲ್ 9ರಂದು ತೆರೆಕಾಣುತ್ತಿವೆ. 'ಕೃಷ್ಣ ನೀ ಲೇಟಾಗಿ ಬಾರೋ' ಚಿತ್ರಕ್ಕೆ 'ಪ್ರೀತಿಯಿಂದ ರಮೇಶ್' ಸ್ವಾಗತಕೋರುತ್ತಿದ್ದಾರೆ. ಪ್ರೇಕ್ಷಕ ಯಾವ ಸಿನಿಮಾಗೆ ಜೈ ಎನ್ನುತ್ತಾನೊ ನೋಡಬೇಕು.

ಕೃಷ್ಣ ನೀ ಲೇಟಾಗಿ ಬಾರೋ ಚಿತ್ರಕ್ಕೆ ಆಕ್ಷನ್, ಕಟ್ ಹೇಳಿದವರು ಮೋಹನ್. ಪ್ರೀತಿಯಿಂದ ರಮೇಶ್ ಚಿತ್ರವನ್ನು ಗುಣಕುಮಾರ್ ನಿರ್ದೇಶಿಸಿದ್ದಾರೆ. 'ಕೃನೀಲೇಬಾ' ಚಿತ್ರ 'ಪ್ರೀತಿಯಿಂದ ರಮೇಶ್' ಚಿತ್ರಕ್ಕೂ ಮೊದಲೆ ಆರಂಭವಾಗಿತ್ತು. ಆದರೆ ಕಾರಣಾಂತರಗಳಿಂದ ಹಾಗೂ ಹೆಸರಿಗೆ ತಕ್ಕಂತೆ 'ಕೃನೀಲೇಬಾ' ಲೇಟಾಗಿ ಬರುತ್ತಿದ್ದಾನೆ.

ಶ್ರೀಮುರಳಿಯ 'ಶ್ರೀಹರಿಕಥೆ' ಚಿತ್ರ ಹಾಕಿದ ಬಂಡವಾಳಕ್ಕೆ ಮೋಸ ಮಾಡಲಿಲ್ಲ. ಆದರೆ 'ಸಿಹಿಗಾಳಿ' ಚಿತ್ರ ಬಾಕ್ಸಾಫೀಸಲ್ಲಿ ನೆಲಕಚ್ಚಿತು. ಈ ರೀತಿಯ ಬೆಳವಣಿಗೆಯಿಂದ ಕನ್ನಡ ಚಿತ್ರೋದ್ಯಮಕ್ಕೆ ಬಾರಿ ಹೊಡೆತ ಬಿದ್ದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಬ್ಬನೆ ನಾಯಕ ನಟನ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada