twitter
    For Quick Alerts
    ALLOW NOTIFICATIONS  
    For Daily Alerts

    ಬಸಂತಕುಮಾರ್ ಪಾಟೀಲ್ V/sವಿಜಯಕುಮಾರ್

    By Rajendra
    |

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗಳ ಹಿನ್ನೆಲೆಯಲ್ಲಿ ಗಾಂಧಿನಗರ ಬಿರುಸಿನ ಚಟುವಟಿಕೆಗಳ ತಾಣವಾಗಿದೆ. ಶನಿವಾರ(ಮೇ.8) ಚುನಾವಣೆ ನಡೆಯಲಿದ್ದು ಅಧ್ಯಕ್ಷ ಸ್ಥಾನ ಸೇರಿದಂತೆ ಮಂಡಳಿಯ ವಿವಿಧ ಸ್ಥಾನಗಳಿಗೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಿಸ್ತುಬದ್ಧ ಹಾಗೂ ನಿಯಮಾವಳಿಗಳ ಪ್ರಕಾರ ಚುನಾವಣೆ ನಡೆಯುತ್ತಿದೆ.

    ಬಿಜೆಪಿಯ ವಿಜಯಕುಮಾರ್ ಕಣಕ್ಕಿಳಿದಿರುವ ಕಾರಣ ಫಿಲ್ಮ್ ಚೇಂಬರ್ ಚುನಾವಣೆಗೆ ರಾಜಕೀಯ ತಿರುವು ಸಿಕ್ಕಿದೆ. ಹಿರಿಯ ನಿರ್ಮಾಪಕರಾದ ವಿಜಯಕುಮಾರ್ ಕೆಲ ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಬಿಜೆಪಿಯ ಜಗ್ಗೇಶ್, ತಾರಾ, ಶ್ರೀನಾಥ್ ಹಾಗೂ ಮುಖ್ಯಮಂತ್ರಿ ಚಂದ್ರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ.

    ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಾವಳಿಗಳಿಗೆ ತಿದ್ದುಪಡಿ ತಂದಿರುವ ಕಾರಣ ಪಟ್ಟಭದ್ರ ಹಿತಾಸಕ್ತಿಗಳ ಸದ್ದಡಗಿಸಲಾಗಿದೆ. ಮಾರ್ಚ್ 13ಕ್ಕೆ ಸದಸ್ಯತ್ವ ನವೀಕರಣ ಮುಗಿದಿದೆ. ಈ ಹಿಂದೆ ಚುನಾವಣೆ ದಿನದ ತನಕವೂ ಸದಸ್ಯತ್ವ ನವೀಕರಣ ನಡೆದ ಉದಾಹರಣೆಗಳಿವೆ. ಈ ಎಲ್ಲಾ ಕಾರಣಗಳಿಂದ ಈ ಬಾರಿಯ ಚುನಾವಣೆಗೆ ಹೆಚ್ಚಿನ ಮಹತ್ವವಿದೆ.

    ಈ ಹಿಂದೆ ನಿರ್ಮಾಪಕರ ವಲಯದಿಂದ ಸ್ಪರ್ಧಿಸಿ ಮುಂದಿನ ಚುನಾವಣೆ ವೇಳೆಗೆ ಆತ ಪ್ರದರ್ಶಕನಾಗಿದ್ದರೆ ಆ ವಲಯದಿಂದಲೂ ಚುನಾವಣಾ ಕಣಕ್ಕೆ ಇಳಿಯಬಹುದಿತ್ತು. ಹೀಗೆ ನಿರಂತರವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅವಕಾಶವಿತ್ತು. ಆದರೆ ಬದಲಾದ ನಿಯಮಗಳ ಪ್ರಕಾರ ಈ ಆಟ ಈಗ ನಡೆಯುವುದಿಲ್ಲ.

    ಒಂದು ವಲಯದಿಂದ ಸ್ಪರ್ಧಿಸಿ ಗೆದ್ದರೆ ಮುಂದಿನ ಅವಧಿಗೆ ಯಾವುದೇ ವಲಯದಿಂದ ಸ್ಪರ್ಧಿಸುವಂತಿಲ್ಲ ಎಂಬ ಹೊಸ ನಿಯಮ ಪಟ್ಟಭದ್ರ ಹಿತಾಸಕ್ತಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ಮಂಡಳಿಯಂತಹ ಆಯಕಟ್ಟಿನ ಜಾಗದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದೆ.

    ಫಿಲ್ಮ್ ಚೇಂಬರ್ ಗೆ ವಾರ್ಷಿಕವಾಗಿ ಒಂದು ಕೋಟಿ ರೂ.ಗಳಿಗೂ ಅಧಿಕ ಆದಾಯವಿದೆ. ಬ್ಯಾನರ್ ನೋಂದಣಿ ಶುಲ್ಕ ರು.50 ಸಾವಿರವಾಗಿದೆ. ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಸ್ಥಾನಗಳಿಗೆ ರಂಗೇರಿದೆ. ಹಣ, ಪ್ರತಿಷ್ಠೆ, ವ್ಯಾಪಾರ, ಲೆಕ್ಕಾಚಾರ, ವಶೀಲಿಬಾಜಿ ಜೋರಾಗಿದೆ. ಯಾರಿಗೆ ವಿಜಯ ಮಾಲೆ ಬೀಳಲಿದೆ ಎಂಬುದು ಚಿತ್ರೋದ್ಯಮದಲ್ಲಿ ಕುತೂಹಲ ಕೆರಳಿಸಿದೆ.

    ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರಾದ ಬಸಂತಕುಮಾರ್ ಪಾಟೀಲ್, ಬಿ ವಿಜಯಕುಮಾರ್ ಹಾಗೂ ಜಾನಕಿರಾಮ್ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ. ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ವಲಯಗಳಲ್ಲಿ ಚುನಾವಣೆ ನಡೆಯಲಿದೆ.

    ಬಿ ಎನ್ ಗಂಗಾಧರ್, ಬಾ ಮಾ ಹರೀಶ್, ಕೆ ಮಂಜು, ವಿ ಕುಪ್ಪುಸ್ವಾಮಿ, ಆರ್ ಎಫ್ ಮಾಣಿಕ್ ಚಂದ್, ಎಚ್ ಅನಂತಮೂರ್ತಿ, ವಿ ಹನುಮಂತರಾಯ, ಎ ಗಣೇಶ್, ಮಧುಸೂಧನ ರೆಡ್ಡಿ, ಜೋಸೈಮನ್, ನರಸಿಂಹಲು, ಜಿ ಕೆ ಕುಟ್ಟಿ, ಬಿ ಎಸ್ ನಾಗರಾಜ್, ಎನ್ ಕೆ ವೆಂಕಟೇಶಮೂರ್ತಿ ಎಂ ಎಸ್ ಶಂಕರಯ್ಯ ನಡುವೆ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ವಲಯಗಳಿಗೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

    ಇನ್ನು ಖಜಾಂಚಿ ಸ್ಥಾನಕ್ಕೆ ನಿರ್ಮಾಪಕರಾದ ಚಿನ್ನೇಗೌಡ ಹಾಗೂ ಕೆವಿ ವೆಂಕಟೇಶ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ವೆಂಕಟೇಶ್ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡ ಕಾರಣ ಚಿನ್ನೇಗೌಡರ ಹಾದಿ ಸುಗಮವಾಗಿದೆ. ಚುನಾವಣೆ ದಿನವೇ ಮತಎಣಿಕೆ ನಡೆದು ಶನಿವಾರ ಸಂಜೆ ಗೋಧೂಳಿ ಸಮಯದ ಹೊತ್ತಿಗೆ ಫಲಿತಾಂಶಗಳು ಹೊರಬೀಳಲಿವೆ.

    Friday, May 7, 2010, 18:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X