»   »  ನೆಲಮಂಗಲದಲ್ಲಿ ಕಿಟ್ಟಿಯ ಅಹೋರಾತ್ರಿ ಪಾರ್ಟಿ

ನೆಲಮಂಗಲದಲ್ಲಿ ಕಿಟ್ಟಿಯ ಅಹೋರಾತ್ರಿ ಪಾರ್ಟಿ

Subscribe to Filmibeat Kannada

'ಸವಾರಿ'ಯ ಬೆನ್ನೇರಿ ಯಶಸ್ಸಿನ 'ಗಿರಿ' ಮುಟ್ಟಿರುವ 'ಇಂತಿ ನಿನ್ನ ಪ್ರೀತಿಯ' ಶ್ರೀನಗರ ಕಿಟ್ಟಿ ಭಾರೀ 'ಲೆಕ್ಕಾಚಾರ' ಮಾಡಿ ಜುಲೈ 8ರಂದು ಬುಧವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಚಿತ್ರ ಎಡವಲಿ, ಗೆಲ್ಲಲಿ, ಸೋಲಲಿ ತಮ್ಮ ಹುಟ್ಟು ಹಬ್ಬದ ದಿನದಂದು ಚಿತ್ರರಂಗದ ತಾರೆಗಳು ಕೇಕು ಕಟ್ ಮಾಡಿ ಪಾರ್ಟಿ ಮಾಡಿ, ಚಲಾವಣೆಯಲ್ಲಿ ಇಲ್ಲದಿದ್ದರೂ ತಾವಿನ್ನೂ ಚಲಾವಣೆಯಲ್ಲಿದ್ದೇವೆ ಎಂದು ತೋರಿಸಿಕೊಳ್ಳುವುದು ಸರ್ವೇಸಾಮಾನ್ಯ. ಅಂಥದರಲ್ಲಿ ಶ್ರೀನಗರ ಕಿಟ್ಟಿ ಕಟ್ಟಾ ಸ್ನೇಹಿತರು, ಕೆಲ ಬಂಧುಗಳು ಮತ್ತು ಜಾಗರೂಕತೆಯಿಂದ ಆಯ್ದ ಬೆರಳೆಣಿಯಷ್ಟು ಪತ್ರಕರ್ತರ ಸಮ್ಮುಖದಲ್ಲಿ ನೆಲಮಂಗಲದ ಬಳಿಯಿರುವ ಹಾಲಿಡೇ ಪಾಮ್ಸ್ ರೆಸಾರ್ಟ್ ನಲ್ಲಿ ವಿಭಿನ್ನವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

ವಿಶೇಷ ಏನೆಂದರೆ, ಜುಲೈ 8ರಂದು ರವಿ ತೂಕಡಿಸುವ ಸಮಯ ಸಾಯಂಕಾಲ 8ರಿಂದ ಮರುದಿನ ರವಿ ಕಣ್ಣುಜ್ಜುವ ಸಮಯ ಬೆಳಿಗ್ಗೆ 8ವರೆಗೆ ಬರೀ ಗುಂಡು ಗುಂಡು ಗುಂಡು! ಗುಂಡಿನ ದಾಸನಾಗಿ ಕಿಟ್ಟಿ 'ಇಂತಿ ನಿನ್ನ ಪ್ರೀತಿಯ' ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದರು. ಅದ್ಭುತ ಹಾಡುಗಳಿದ್ದರೂ ದುನಿಯಾ ಸೂರಿ ಪ್ರೇಕ್ಷಕರ ನಾಡಿ ಮಿಡಿತ ಅರಿಯದೇ ಸೋತಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ಕೆ. ಮಂಜು ಹಳೆ ಲೆಕ್ಕ ಚುಕ್ತ ಮಾಡಲು ಒಲವೆ ಜೀವನ ಲೆಕ್ಕಾಚಾರದಲ್ಲಿ ಕಿಟ್ಟಿಯನ್ನು ಹಾಕಿಕೊಂಡರೂ ಪ್ರೇಕ್ಷಕನ ಲೆಕ್ಕಾಚಾರ ತಿಳಿಯದೆ ಚಿತ್ರ ಮುಗ್ಗರಿಸಿತು. ಪ್ರೇಕ್ಷಕರು ಮೇಷ್ಟ್ರು ಚಂದ್ರುವಿಗೇ ಪಾಠ ಕಲಿಸಿದ್ದಾರೆ.

ಮರಳಿ ಮರೆಯಾಗಿ ಮತ್ತು ಸಂಜು ವೆಡ್ಸ್ ಗೀತಾ ಇನ್ ಹೆವೆನ್ ಎಂಬ ಹೆಸರಿನ ಎರಡು ಇನ್ನೂ ಸೆಟ್ಟೇರಿರದ ಚಿತ್ರಗಳಲ್ಲಿ ಕಿಟ್ಟಿ ಪಾರ್ಟು ಗಿಟ್ಟಿಸಿದ್ದಾರಾದರೂ ಪ್ರೇಕ್ಷಕರು ಅವರನ್ನು ಇನ್ನೂ ಪೂರ್ತಿಯಾಗಿ ಒಪ್ಪಿಕೊಂಡಿಲ್ಲ. ಸದ್ಯಕ್ಕಂತೂ ಕಿಟ್ಟಿ ಸವಾರಿಯ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಸವಾರಿಯ ಸಾಧಾರಣ ಯಶಸ್ಸಿನಿಂದ ಒಂಬತ್ತನೇ ಹೆವೆನ್ ನಲ್ಲಿ ತೇಲಾಡುತ್ತಿರುವ ಕಿಟ್ಟಿಗೆ ಏರಿರುವ ಪಿತ್ತ ಎಂಟರಿಂದ ಎಂಟರವರೆಗಿನ ಜುಲೈ 8ರ ಗುಂಡಿನ ಪಾರ್ಟಿಯಲ್ಲಿ ಇಳಿಯಲಿದೆ! ಹ್ಯಾಪಿ ಬರ್ತ್ ಡೇ ಕಿಟ್ಟೂ!

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada