»   »  ಆಂಧ್ರ ಬಾಕ್ಸಾಫೀಸಲ್ಲಿ ಖಾತೆ ಆರಂಭಿಸಿದ ಶಾಮಿಲಿ!

ಆಂಧ್ರ ಬಾಕ್ಸಾಫೀಸಲ್ಲಿ ಖಾತೆ ಆರಂಭಿಸಿದ ಶಾಮಿಲಿ!

Posted By:
Subscribe to Filmibeat Kannada

'ಮತ್ತೆ ಹಾಡಿತು ಕೋಗಿಲೆ' ಕನ್ನಡ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದ ಬೇಬಿ ಶಾಮಿಲಿ 'ಓಯ್ ' ಎಂಬ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಭರ್ಜರಿ ಖಾತೆ ಆರಂಭಿಸಿದ್ದಾರೆ. ತಮ್ಮ ಚಿತ್ರಕ್ಕೆ ಆಂಧ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶಾಮಿಲಿ ಖುಷಿಯಾಗಿದ್ದಾರೆ.

ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಲು ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳನ್ನು ಬಿಟ್ಟು ತೆಲುಗು ಚಿತ್ರರಂಗವನ್ನೇ ಶಾಮಿಲಿ ಏಕೆ ಆಯ್ಕೆ ಮಾಡಿಕೊಂಡರು? ಉಳಿದ ಚಿತ್ರೋದ್ಯಮಗಳಿಗಿಂತ ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಸಂಭಾವನೆ ಉಂಟು. ಈ ಕಾರಣಕ್ಕಾಗಿ ತೆಲುಗಿನಲ್ಲಿ ನಟಿಸಿದ್ದಾರೆ ಎನ್ನುತ್ತವೆ ಮೂಲಗಳು. ದಕ್ಷಿಣದ ಖ್ಯಾತ ನಿರ್ದೇಶಕ ಮಣಿರತ್ನಂರ ತಮಿಳು ಚಿತ್ರ 'ಅಂಜಲಿ'ಯಲ್ಲಿ ಬೇಬಿ ಶಾಮಿಲಿ ಅಮೋಘವಾಗಿ ಅಭಿನಯಿಸಿದ್ದರು. ಈಗ 'ಓಯ್' ಚಿತ್ರದ ಮೂಲಕ ಆಂಧ್ರ ಬಾಕ್ಸಾಫೀಸ್ ನಲ್ಲಿ ಖಾತೆ ತೆರೆದಿದ್ದಾರೆ.

ಈಗ ತಮಿಳು ಮತ್ತು ಮಲಯಾಳಂ ಚಿತ್ರರಂಗಗಳಿಂದ ಸಾಕಷ್ಟು ಅವಕಾಶಗಳು ಈಗ ಹುಡುಕಿಕೊಂಡು ಬಂದಿವೆಯಂತೆ. ಆದರೆ ಸೂಕ್ತ ಪಾತ್ರಕ್ಕಾಗಿ ಶಾಮಿಲಿ ಎದುರು ನೋಡುತ್ತಿದ್ದಾರೆ. ಇಷ್ಟಕ್ಕೂ ಓಯ್ ಚಿತ್ರದಲ್ಲಿ ಆಕೆ ವಾಸಿಯಾಗದ ಖಾಯಿಲೆಯ ಸಂಧ್ಯಾ ಪಾತ್ರದಲ್ಲಿ ಕಾಣಿಸಿದ್ದಾರೆ. ಗ್ಲಾಮರಸ್ ಪಾತ್ರಗಳಿಂದ ಆದಷ್ಟು ದೂರವಿರುತ್ತೇನೆ ಎನ್ನುತ್ತಾರೆ ಶಾಮಿಲಿ.

ಬೇಬಿ ಶಾಮಿಲಿಯಾಗಿ ಕನ್ನಡದಲ್ಲಿ ಮತ್ತೆ ಹಾಡಿತು ಕೋಗಿಲೆ, ಭೈರವಿ, ಶ್ವೇತಾಗ್ನಿ, ಪೊಲೀಸ್ ಲಾಕಪ್, ಮಕ್ಕಳ ಸಾಕ್ಷಿ, ಸಿಡಿದೆದ್ದ ಪಾಂಡವರು, ಕರುಳಿನ ಕುಡಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅಂದ ಹಾಗೆ, ಜುಲೈ 10 ಶಾಮಿಲಿ ಹುಟ್ಟುಹಬ್ಬ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada