ಕಿಚ್ಚ ಸುದೀಪ್ ಜತೆ ಕೈಜೋಡಿಸಿದ ಹ್ಯಾಟ್ರಿಕ್ ಹೀರೋ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಂದೇ ಚಿತ್ರದಲ್ಲಿ ಅಭಿನಯಿಸಿದರೆ ಹೇಗಿರುತ್ತದೆ. ಇವರಿಬ್ಬರನ್ನು ತೆರೆಯ ಮೇಲೆ ನೋಡಿ ನಲಿಯಲು ಅಭಿಮಾನಿಗಳಿಗೆ ಇನ್ನೇನು ಬೇಕು. ಇದೇ ಮೊದಲ ಬಾರಿಗೆ ತಾವಿಬ್ಬರೂ ಒಂದೇ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಶಿವಣ್ಣ ತಿಳಿಸಿದರು.
ಹೋಟೆಲ್ ಅಶೋಕದಲ್ಲಿ ಸೋಮವಾರ(ಫೆ.7) ಸಂಜೆ ನಡೆದ 'ಕೆಂಪೇಗೌಡ' ಧ್ವನಿಸುರುಳಿ ಮತ್ತು ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಶಿವಣ್ಣ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿದ್ದ ಸುದ್ದಿಯನ್ನು ಹೊರಹಾಕಿದರು.
ಸುದೀಪ್ ಮತ್ತು ತಾನು ಒಂದೇ ಚಿತ್ರದಲ್ಲಿ ನಟಿಸುತ್ತಿದ್ದೇವೆ. ಚಿತ್ರದಲ್ಲಿ ಮೂವರು ನಾಯಕರು. ಇನ್ನೊಬ್ಬರು ಲೂಸ್ ಮಾದ ಇರಬಹುದು ಎಂದರು. ಈ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಶಿವಣ್ಣ ನೀಡುತ್ತಿದ್ದರೋ ಏನೋ. ಅಷ್ಟರಲ್ಲಾಗಲೆ ಗುಟ್ಟನ್ನು ಬಿಟ್ಟುಕೊಡದ ಸುದೀಪ್, ಶಿವಣ್ಣನಿಗೆ ಕಣ್ಸನ್ನೆಯಲ್ಲೇ ತಡೆದರು. ಶೀಘ್ರ ಚಿತ್ರದ ವಿವರಗಳನ್ನು ನೀಡುವುದಾಗಿ ಹೇಳಿದ ಶಿವಣ್ಣ ಮಾತು ಮುಗಿಸಿದರು.
ಈ ಹಿಂದೆ 'ನಂ.73 ಶಾಂತಿ ನಿವಾಸ' ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ಅಭಿನಯಿಸಿದ್ದರು. ಆದರೆ ಆ ಚಿತ್ರದಲ್ಲಿ ಶಿವಣ್ಣ ಕೇವಲ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಈಗ ಬರಲಿರುವ ಚಿತ್ರದಲ್ಲಿ ಇಬ್ಬರೂ ಪೂರ್ಣಪ್ರಮಾಣದ ನಾಯಕ ನಟರಾಗಿ ಕಾಣಿಸಲಿದ್ದಾರೆ. ಆದರೆ ಸುದೀಪ್ ಮಾತ್ರ ಈ ಚಿತ್ರದ ಬಗ್ಗೆ ತುಟಿಪಿಟಕ್ ಎನ್ನಲಿಲ್ಲ.


Click it and Unblock the Notifications











