»   »  ಗಾಂಧಿನಗರದ ಶಿಸ್ತಿಗೆ ಮರುಳಾದ ಸೆಲೀನಾ

ಗಾಂಧಿನಗರದ ಶಿಸ್ತಿಗೆ ಮರುಳಾದ ಸೆಲೀನಾ

Posted By: *ಜಯಂತಿ
Subscribe to Filmibeat Kannada

ಎಲ್ಲಿಯೋ ಅವಿತುಕೊಳ್ಳುವವರಂತೆ ಬಾಲಿವುಡ್ ತಾರೆ ಸೆಲೀನಾ ಜೇಟ್ಲಿ ಚಡಪಡಿಸುತ್ತಿದ್ದರು. ಉಪೇಂದ್ರ ನಾಯಕರಾಗಿ ಅಭಿನಯಿಸುತ್ತಿರುವ "ಶ್ರೀಮತಿ" ಚಿತ್ರದ ಸೆಟ್‌ನಲ್ಲಿ ಸಹಜ ಎನ್ನುವಂತಿದ್ದ ಉಟ್ಟ ಬಟ್ಟೆ ಬಯಲಿನಲ್ಲಿ ಕಿರಿಕಿರಿ ಅನ್ನಿಸತೊಡಗಿತ್ತು. ಒಳಗೆ ಹೋಗಿ ಮುಸುಕೊಂದನ್ನು ಹೊದ್ದುಕೊಂಡ ನಂತರವೇ ಅವರು ಪತ್ರಕರ್ತರ ಎದುರು ಕೂತಿದ್ದು. ಆದರೂ, ಬಟ್ಟೆ ಹೊಲೆಸಿಕೊಟ್ಟ ಡಿಸೈನರ್ ಜೊತೆಯಲ್ಲೇ ಬಳುಕುತ್ತಾ, ಓಡಾಡಲೂ ಮುಜುಗರ ಎಂಬಂತಿದ್ದ ಸೆಲೀನಾ ಜೇಟ್ಲಿಗೆ ಎಲ್ಲರೊಳಗೆ ಒಂದಾಗಲು ಸಾಧ್ಯವಾಗಲೇ ಇಲ್ಲ.

ಬಿಳಿ ಗ್ಲಾಮರಸ್ ಬಟ್ಟೆ ಬದಲಾದದ್ದು ಛಾಯಾಗ್ರಾಹಕರನ್ನು ನಿರಾಶೆಗೊಳಿಸಿತು. ಅಲ್ಲದೆ ಅವರು ತಡವಾಗಿ ಆಗಮಿಸಿದ್ದು ಕೂಡ ಕೆಲವರ ಕಿರಿಕಿರಿಗೆ ಕಾರಣವಾಯಿತು. ಬೆಂಗಳೂರಿನಲ್ಲಿ ತಮ್ಮ ತಂದೆ ಕೆಲಸಕ್ಕಿದ್ದಾಗಲೇ ಮಿಸ್ ಇಂಡಿಯಾ ಕಿರೀಟ ತಮ್ಮ ಮುಡಿಗೇರಿದ ಗಳಿಗೆಯನ್ನು ಸೆಲೀನಾ ನೆನಪಿಸಿಕೊಂಡರು. ದಕ್ಷಿಣ ಭಾರತದ ಚಿತ್ರವೊಂದಕ್ಕೆ ಇದೇ ಮೊದಲು ಬಣ್ಣ ಹಚ್ಚಿರುವ ಅವರಿಗೆ ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಸಿಕ್ಕಿರುವ ಅದ್ಭುತ ಪಾತ್ರ ಇದಂತೆ.

ಹಟಮಾರಿ ಎನ್‌ಆರ್‌ಐ ಹುಡುಗಿಯಾಗಿ ನಟಿಸುವುದು ಸುಲಭವಲ್ಲ ಎನ್ನುವ ಅವರಿಗೆ ಕನ್ನಡ ಚಿತ್ರರಂಗದಲ್ಲಿರುವ ಶಿಸ್ತಿನ ಬಗ್ಗೆ ಅಭಿಮಾನ. ಶೂಟಿಂಗ್‌ಗೆ ಇಲ್ಲಿ ಎಲ್ಲರೂ ಸರಿಯಾದ ಸಮಯಕ್ಕೆ ಬರುತ್ತಾರೆ. ಮುಂಬೈನಲ್ಲಿ ಪರಿಸ್ಥಿತಿ ಹೀಗಿಲ್ಲ ಎನ್ನುವ ಸೆಲೀನಾ ಕನ್ನಡದ ಉದ್ದುದ್ದ ಸಂಭಾಷಣೆಯನ್ನು ಉರುಹೊಡೆದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡದ್ದೂ ಉಂಟಂತೆ. ತಮ್ಮ ಬಗ್ಗೆಯಷ್ಟೇ ಹೇಳಿಕೊಂಡು ನಗುವಿನಲ್ಲೂ ಜುಗ್ಗತನ ಇರುವಂತೆ ಕಂಡ ಸೆಲೀನಾ ಟಿವಿ ಕ್ಯಾಮೆರಾಗಳಿಗೂ ಹೆಚ್ಚು ಹೊತ್ತು ಮುಖತೋರಲಿಲ್ಲ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada