»   » ಎಚ್ಡಿಕೆಗೆ ಸಿಕ್ಕಾಪಟ್ಟೆ 'ಹಸಿವು'; ಕಥೆ ಕೇಳು ದೊರೆಯೇ

ಎಚ್ಡಿಕೆಗೆ ಸಿಕ್ಕಾಪಟ್ಟೆ 'ಹಸಿವು'; ಕಥೆ ಕೇಳು ದೊರೆಯೇ

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಲೋಕಸಭಾ ಸದಸ್ಯ ಎಚ್ ಡಿ ಕುಮಾರಸ್ವಾಮಿ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಚಿತ್ರ ನಿರ್ಮಾಪಕರಾಗಿ ಹಾಗೂ ಹಂಚಿಕೆದಾರರಾಗಿ ಗುರುತಿಸಿಕೊಂಡಿದ್ದ ಅವರು ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದು ಬಲು ಅಪರೂಪ. 'ಶಿವಕಾಶಿ' ಎಂಬ ಚಿತ್ರದಲ್ಲಿ ಅವರು ಮುಖ್ಯಮಂತ್ರಿಯಾಗಿ ದರ್ಶನ ನೀಡಲಿದ್ದಾರೆ. ಆ ಚಿತ್ರ ತೆರೆಕಾಣಬೇಕಾಗಿದೆ.

ಇದೀಗ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ಎಚ್ಡಿಕೆ ಅವರನ್ನು ಹುಡುಕಿಕೊಂಡು ಬಂದಿದೆ. ಚಿತ್ರದ ಹೆಸರು 'ಹಸಿವು', ಅಡಿಬರಹ 'ಕಥೆ ಕೇಳು ದೊರೆಯೇ'. ಈ ಚಿತ್ರಕ್ಕೆ ಮಂಜು ದೈವಜ್ಞ ಎಂಬುವವರು ಆಕ್ಷನ್, ಕಟ್ ಹೇಳುತ್ತಿದ್ದಾರೆ. ಶ್ರೀ ತಿರುಮಲ ಸಿನಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

ಮಂಜು ದೈವಜ್ಞರ 'ನಾರದ ವಿಜಯ' ಚಿತ್ರವೂ ತೆರೆಕಾಣಬೇಕಾಗಿದೆ. ಚಿತ್ರದ ಕಥೆ, ಸಂಭಾಷಣೆ ಮತ್ತು ಗೀತ ರಚನೆ ಕಳವಾಸ ರಘು ಅವರದು. ಛಾಯಾಗ್ರಹಣ ಶ್ರೀಶಿವು ಹಾಗೂ ಗೋವರ್ಧನ್ ಅವರ ಸಂಕಲನ ಚಿತ್ರಕ್ಕಿದೆ. ಸಂಗೀತ ನಿರ್ದೇಶಕರ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಶ್ರಾವಣ ಮಾಸದಲ್ಲಿ ಚಿತ್ರದ ಮುಹೂರ್ತ ನೆರವೇರಲಿದೆ.

ರಾಮನಗರ, ಚಿಕ್ಕಮಗಳೂರು, ಬಿಜಾಪುರ, ಹಾಸನ, ಉತ್ತರ ಕರ್ನಾಟಕದ ಪ್ರಮುಖ ತಾಣಗಳಲ್ಲಿ ಒಟ್ಟು 60 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಅಂದಹಾಗೆ ಚಿತ್ರದಲ್ಲಿ ಎಚ್ಡಿಕೆ ಪಾತ್ರ ಯಾವ ರೀತಿಯದು ಎಂಬ ವಿವರಗಳನ್ನು ನಿರ್ದೇಶಕರು ಬಹಿರಂಗಪಡಿಸಿಲ್ಲ. ಅತಿಥಿ ಪಾತ್ರವೂ ಅಲ್ಲ ಹಾಗಂತ ಮುಖ್ಯಪಾತ್ರವೂ ಅಲ್ಲ ಎಂದು ಹೇಳಿ ಕುತೂಹಲ ಕಾದಿರಿಸಿದ್ದಾರೆ.

ಇದೊಂದು ಹಸಿವಿನ ಸಿನಿಮಾ ಎಂದು ಹೇಳಿ ಮತ್ತಷ್ಟು ಗೊಂದಲ ಮೂಡಿಸಿದ್ದಾರೆ. ರಾಜಕೀಯ ಹಸಿವೋ, ಹಣದ ಹಸಿವೋ ಅಥವಾ ಹೊಟ್ಟೆ ಪಾಡಿನ ಚಿತ್ರವೋ ಎಂಬುದು ತಿಳಿಯುತ್ತಿಲ್ಲ. ಚಿತ್ರದ ನಾಯಕ, ನಾಯಕಿಯರ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕನ್ನಡದವರೇ ಆದ ತಮಿಳಿನ ಮುರಳಿ ಅವರನ್ನು ಕರೆತರುವ ಸಾಧ್ಯತೆಗಳಿವೆ ಎನ್ನುತ್ತವೆ ಮೂಲಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada