»   » 'ಎಜ್ಯುಕೇಷನ್ 2029' ಬುದ್ಧಿವಂತರಿಗೆ ಮಾತ್ರ

'ಎಜ್ಯುಕೇಷನ್ 2029' ಬುದ್ಧಿವಂತರಿಗೆ ಮಾತ್ರ

Posted By:
Subscribe to Filmibeat Kannada

ಇಂದಿನ ಆಧುನಿಕ ಜೀವನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ವಿದ್ಯೆಕಲಿಯದಿದ್ದರೆ ಜೀವನದಲ್ಲಿ ಎಂತಹ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬುದನ್ನು ನಿರ್ದೇಶಕ ಬಿ. ಸೆಲ್ವಂ ತಮ್ಮ 'ಎಜ್ಯುಕೇಷನ್ 2020' ಎಂಬ ಕಿರು ಚಿತ್ರದ ಮೂಲಕ ಹೇಳ ಹೊರಟಿದ್ದಾರೆ. ಮಾಣಿಕ್ ಗ್ರೂಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಓ. ಸುರೇಶ್ ಕುಮಾರ್ ನಿರ್ಮಿಸಿರುವ ಈ ಕಿರು ಚಿತ್ರದ ವಿಶೇಷ ಪ್ರದರ್ಶನವನ್ನು ರೇಣುಕಾಂಬ ಪ್ರೀವ್ಯೂ ಥಿಯೇಟರ್‌ನಲ್ಲಿ ಕಳೆದವಾರ ಏರ್ಪಡಿಸಲಾಗಿತ್ತು.

ಮಕ್ಕಳು ಚಿಕ್ಕವಯಸ್ಸಿನಲ್ಲಿ ಸರಿಯಾಗಿ ವಿದ್ಯೆ ಕಲಿಯದಿದ್ದರೆ ದೊಡ್ಡವರಾದ ಮೇಲೆ ಜೀವನದಲ್ಲಿ ಎದುರಿಸಬೇಕಾದ ಅವಮಾನ ಅನಾದರಣೆಗಳನ್ನು ನಮ್ಮ ಚಿತ್ರದಲ್ಲಿ ತೋರಿಸಲಾಗಿದ್ದು ಪ್ರತಿಯೊಬ್ಬರೂ ವಿದ್ಯೆ ಕಲಿಯಬೇಕು. ವಿದ್ಯಾವಂತರಾಗಬೇಕು ಎಂಬ ಮೆಸೇಜನ್ನು ಸಮಾಜಕ್ಕೆ ನೀಡುವ ಪ್ರಯತ್ನವನ್ನು ಮಾಡಿದ್ದೇವೆ ಎಂದು ನಿರ್ಮಾಪಕರಾದ ಡಿ.ಓ. ಸುರೇಶ್‌ಕುಮಾರ್ ಹೇಳಿದರು.

45 ನಿಮಿಷಗಳ ಈ ಕಿರುಚಿತ್ರದಲ್ಲಿ ವಿದ್ಯಾವಂತನಾದ ವ್ಯಕ್ತಿ ಹಾಗೂ ಅವಿದ್ಯಾವಂತನಾದ ವ್ಯಕ್ತಿ ಈ ಇಬ್ಬರ ಜೀವನವನ್ನೂ ತೋರಿಸಿದ್ದೇವೆ. ಈ ಚಿತ್ರವನ್ನು ಕರ್ನಾಟಕದ ಪ್ರತಿ ಜಿಲ್ಲೆಯ ಪ್ರತಿ ನಗರ ಹಾಗೂ ಹಳ್ಳಿಯ ಪ್ರತಿ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ತೋರಿಸುತ್ತೇವೆ. ಸಾಕ್ಷರತಾ ಆಂದೋಲನದ ಯೋಜನೆಗೆ ನಮ್ಮದೊಂದು ಕೊಡುಗೆಯಾಗಿ ಈ ಕಿರು ಚಿತ್ರವನ್ನು ನೀಡಿದ್ದೇವೆ ಎಂದುನಿರ್ಮಾಪಕರು ಹೇಳಿಕೊಂಡರು.

ನಿರ್ದೇಶಕ ಬಿ. ಸೆಲ್ವಂ ಮಾತನಾಡುತ್ತ ನಾನು ಹುಟ್ಟಿದ್ದು ಚೆನೈನಲ್ಲಾದರು ಬೆಳೆದಿದ್ದು ಬೆಂಗಳೂರಿನಲ್ಲಿ. ಮೂರು ಹಂತದಲ್ಲಿ ಪ್ರಪಂಚದ ಜೀವನ ಶೈಲಿ ಹೇಗಿರುತ್ತದೆ ಎಂಬುದನ್ನು ನನ್ನ ಚಿತ್ರದಲ್ಲಿ ನಿರೂಪಿಸಿದ್ದೇನೆ. 1979, 2010 ಹಾಗೂ 2029 ರಲ್ಲಿ ವಿದ್ಯೆ ಕಲಿತ ವ್ಯಕ್ತಿ ಹಾಗೂ ಅವಿದ್ಯಾವಂತ ವ್ಯಕ್ತಿ ಇವರಿಬ್ಬರ ಜೀವನ ಶೈಲಿ ಹೇಗಿರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ನಿರೂಪಿಸಿದ್ದೇನೆ. ಮುಂದಿನ ದಿನಗಳಲ್ಲಿ ವಿದ್ಯೆ ಇಲ್ಲದಿದ್ದರೆ ಕಸ ಗುಡಿಸುವ ಕೆಲಸವೂ ಸಿಗುವುದಿಲ್ಲ ಎಂಬ ಸತ್ಯವನ್ನು ಈ ಚಿತ್ರದಲ್ಲಿ ತೋರಿಸಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿಬಾಬ ರವರ ಭಕ್ತಿಗೀತೆಗಳ ಕ್ಯಾಸೆಟ್‌ಗಳನ್ನು ಪತ್ರಕರ್ತರಾದ ಎ.ಎಸ್. ಮೂರ್ತಿರವರು ಬಿಡುಗಡೆ ಗೊಳಿಸಿದರು. ನಿರ್ಮಾಪಕರ ಸ್ನೇಹಿತರಾದ ಸಿ.ಪಿ. ವಿನೋದ್‌ಕುಮಾರ್ ಡಾ.ಸಂಜೀವಮೂರ್ತಿ ಸಮಾರಂಭದಲ್ಲಿ ಹಾಜರಿದ್ದು ನಿರ್ಮಾಪಕರ ಈ ಪ್ರಯತ್ನವನ್ನು ಶ್ಲಾಘಿಸಿದರು. ಈ ಚಿತ್ರಕ್ಕೆ ಮುತ್ತುರಾಜ್‌ರ ಛಾಯಾಗ್ರಹಣ, ವಿಜಯಭಾರತಿ ರವರ ಸಂಗೀತ ಸಂಯೋಜನೆ, ಸುರೇಶ್ ರವರ ಸಂಕಲನ, ಹರಿವಿಜಯರ ಸಾಹಿತ್ಯವಿದ್ದು ನಿರ್ದೇಶಕ ಬಿ. ಸೆಲ್ವಂ ಕಥೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಬೆಂಗಳೂರಿನ ಹೆಬ್ಬಾಳ ಆರ್.ಟಿ ನಗರ ಹಾಗೂ ಸುತ್ತ ಮುತ್ತಲ ಗ್ರಾಮಾಂತರ ಪ್ರದೇಶಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada