»   »  ಶ್ರೀಮತಿ ಮತ್ತು ಶ್ರೀ ಉಪೇಂದ್ರರೂ

ಶ್ರೀಮತಿ ಮತ್ತು ಶ್ರೀ ಉಪೇಂದ್ರರೂ

By: *ಜಯಂತಿ
Subscribe to Filmibeat Kannada

ಕ್ಲೀನ್ ಶೇವ್ ಮಾಡಿದ ಉಪೇಂದ್ರ. ಪಕ್ಕದಲ್ಲಿ ಅವರ ಶ್ರೀಮತಿ. ಅಲ್ಲೆಲ್ಲೋ ಸಹಾಯಕನೊಬ್ಬನ ಜೊತೆ ಅವರ ಪುಟ್ಟ ಮಗು ಕೂಡ ಓಡಾಡಿಕೊಂಡಿತ್ತು. ಇದು ಶ್ರೀಮತಿ ಸಿನಿಮಾ ಚಿತ್ರೀಕರಣದ ಜಾಗದಲ್ಲಿ ಕಂಡ ಚಿತ್ರ. ಸ್ಥಳ, ಏರ್‌ಪೋರ್ಟ್ ಹತ್ತಿರದ ಜೇಡ್ ಗಾರ್ಡನ್.

ಶಂಕರೇಗೌಡ ನಿರ್ಮಿಸಿರುವ ಈ ಚಿತ್ರ ಡಿಸ್‌ಕ್ಲೋಸರ್ ಇಂಗ್ಲಿಷ್ ಚಿತ್ರದ ಅಳವಡಿಕೆ. ಹಾಗಂತ ನಿರ್ಮಾಪಕರು ನೇರವಾಗಿ ಹೇಳಿಕೊಂಡರು. ಐತ್‌ರಾಜ್ ಹಿಂದಿ ಚಿತ್ರದ ಕೆಲವು ಅಂಶಗಳನ್ನೂ ಬಳಸಿಕೊಂಡಿರುವುದಾಗಿ ಮಾತು ಸೇರಿಸಿದ್ದು ನಿರ್ದೇಶಕ ಸಂಪತ್. ತೆಲುಗಿನಲ್ಲಿ ಎನ್.ಸಂಪತ್, ಗುಣಶೇಖರ್ ಮೊದಲಾದ ನಿರ್ದೇಶಕರಲ್ಲಿ ಸಹಾಯಕರಾಗಿ ಕೆಲಸ ಮಾಡಿರುವ ಸಂಪತ್‌ಗೆ ಕನ್ನಡ ಇನ್ನೂ ತೊದಲು. ಹೀಗಿರುವಾಗ ಕನ್ನಡದ ಜಾಯಮಾನ ಹೇಗೆ ಗೊತ್ತಾದೀತು ಅಂದರೆ, ಹೇಳಿಕೊಡಲು ಉಪ್ಪಿ ಸರ್ ಇದ್ದಾರಲ್ಲ ಎನ್ನುತ್ತಾರವರು.

ನಾಲ್ಕು ಹಾಡುಗಳು ಹಾಗೂ ಒಂದಿಷ್ಟು ಟಾಕಿ ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದೆ. ನಿಜ ಬದುಕಿನ ಶ್ರೀಮತಿಯೇ ಚಿತ್ರದಲ್ಲೂ ಉಪ್ಪಿ ಶ್ರೀಮತಿ ಆಗಿರುವುದು ವಿಶೇಷ. ಇದೇ ಮೊದಲ ಬಾರಿಗೆ ತೆರೆಮೇಲೆ ಇಬ್ಬರೂ ಗಂಡ ಹೆಂಡತಿಯಾಗಿ ನಟಿಸುತ್ತಿದ್ದಾರೆ.

ಬದುಕು ಹಾಗೂ ಸಿನಿಮಾ ಎರಡರಲ್ಲೂ ಉಪ್ಪಿ ಪತ್ನಿ ಪ್ರಿಯಾಂಕಾ ಸ್ಟ್ರಿಕ್ಟ್ ಅಲ್ಲವಂತೆ. ಗಂಡ, ಹೆಂಡತಿ ಇಬ್ಬರೂ ಅಳೆದು ತೂಗಿ ಎರಡೇ ಮಾತಾಡಿದರು. ಹೇಳಲು ಇನ್ನೇನೂ ಉಳಿದಿಲ್ಲ ಎಂದು ಉಪೇಂದ್ರ ಕಣ್ಣು ಗುಡ್ಡೆಗಳನ್ನು ಅತ್ತಿಂದಿತ್ತ ಇತ್ತಿಂದತ್ತ ಆಡಿಸಿದರು.

ಅಂದಹಾಗೆ, "ಸೂಪರ್" ಚಿತ್ರದ ಸ್ಕ್ರಿಪ್ಟ್ ಎಲ್ಲಿಗೆ ಬಂತು? "ಎರಡು ತಿಂಗಳಾಗಬಹುದು. ಮೂರು ತಿಂಗಳಾಗಬಹುದು. ಸದ್ಯಕ್ಕೆ ಯಾವುದೂ ನಿಶ್ಚಿತವಾಗಿಲ್ಲ. ಕಾಲ ಬರುತ್ತೆ. ಆಗ ಹೇಳ್ತೇನೆ". ಉಪೇಂದ್ರರ ನಾಳೆಗಳನ್ನೇ ತೋರುತ್ತ ಮಾತು ಬದಲಿಸಿದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada