»   » ಚಿತ್ರನಟಿ ಅಮೂಲ್ಯಾಗೆ ಕೊಲೆ ಬೆದರಿಕೆ

ಚಿತ್ರನಟಿ ಅಮೂಲ್ಯಾಗೆ ಕೊಲೆ ಬೆದರಿಕೆ

Posted By:
Subscribe to Filmibeat Kannada

'ಚೆಲುವಿನ ಚಿತ್ತಾರ'ದ ಬೆಡಗಿ ಅಮೂಲ್ಯರಿಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಆಟೋಗ್ರಾಫ್ ಪಡೆಯುವ ನೆಪದಲ್ಲಿ ಆಯುಧದಿಂದ ಚುಚ್ಚಿ ಕೊಲೆ ಮಾಡುತ್ತೇನೆ ಎಂದು ಅಪರಿಚಿತ ವ್ಯಕ್ತಿಯೊಬ್ಬ ನಟಿ ಅಮೂಲ್ಯರಿಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದಾನೆ. ಈ ಸಂಬಂಧ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಅಮೂಲ್ಯ ದೂರು ದಾಖಲಿಸಿದ್ದಾರೆ.

ಕೇವಲ ಅಮೂಲ್ಯರಿಗಷ್ಟೇ ಅಲ್ಲದೆ ಅವರ ಅಣ್ಣ ಕೆ ದೀಪಕ್ ಅವರಿಗೂ ಪ್ರಾಣ ಬೆದರಿಕೆ ಹಾಕಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರನ್ನು ಭೇಟಿ ಮಾಡಿದ ಅಮೂಲ್ಯ ಹಾಗೂ ದೀಪಕ್ ವಿಷಯವನ್ನು ತಿಳಿಸಿದ್ದಾರೆ. ಆದಷ್ಟು ಬೇಗ ತನಿಖೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಕಿಡಿಗೇಡಿಯನ್ನು ಬಂಧಿಸುವಂತೆ ವೈಯಾಲಿ ಕಾವಲ್ ಪೊಲೀಸ್ ಠಾಣೆಗೆ ಬಿದರಿ ಆದೇಶಿಸಿದ್ದಾರೆ.

ನವೆಂಬರ್ 9ರ ಮುಂಜಾನೆ ಅಮೂಲ್ಯ ಹಾಗೂ ದೀಪಕ್ ಅವರ ಹೆಸರುಗಳನ್ನು ತೆಂಗಿನ ಚಿಪ್ಪು, ಕಲ್ಲು ಮತ್ತು ಇಟ್ಟಿಗೆಗಳ ಮೇಲೆ ಬರೆದು ಅವರ ಮನೆಯ ಬಳಿ ಹಾಕಲಾಗಿತ್ತು. ಇದನ್ನು ಕಂಡ ಅಮೂಲ್ಯ ಅವರ ತಂದೆ ಯಾರೋ ಹುಚ್ಚು ಅಭಿಮಾನಿಗಳು ಈ ರೀತಿ ಮಾಡಿರಬೇಕು ಎಂದು ಸುಮ್ಮನಾದರು.

ಆದರೆ ಡಿಸೆಂಬರ್ 6ರಂದು ಬಂದ ದೂರವಾಣಿ ಕರೆಯಲ್ಲಿ ಜಯರಾಂ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ. ಸ್ವತಃ ದೀಪಕ್ ದೂರವಾಣಿ ಕರೆಯನ್ನು ಸ್ವೀಕರಿಸಿದ್ದರು. ನವೆಂಬರ್ 9ರಂದು ನಡೆದ ಘಟನೆಯನ್ನು ಜಯರಾಂನ ಗೆಳೆಯ ಬ್ರಹ್ಮ ಮಾಡಿದ್ದಾನೆ ಎಂದು ತಿಳಿಸಿದ್ದ.

ಮಲ್ಲೇಶ್ವರಂನ ಕೃಷ್ಣಪ್ಪ ಬ್ಲಾಕ್ ನಲ್ಲಿರುವ ಅಮೂಲ್ಯರ ಮನೆಯ ಟೆರೇಶ್ ಮೇಲೆ ಕಳೆದ ನವೆಂಬರ್ 9ರಂದು ಆಕೆಯ ಫೋಟೋ ಇಟ್ಟು ಸಿಗರೇಟು ತುಂಡುಗಳನ್ನು ಬಿಸಾಡಿದ ಘಟನೆಯೂ ನಡೆದಿತ್ತು. ಇತ್ತೀಚೆಗೆ ದೀಪಕ್ ರ ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿ ಮಹಡಿ ಮೇಲೆ ನಡೆದಿದ್ದ ಘಟನೆಯನ್ನು ಪ್ರಸ್ತಾಪಿಸಿ ಇದು ತನ್ನ ಸ್ನೇಹಿತನ ಕೆಲಸವಾಗಿದೆ. ಬ್ರಹ್ಮ ಎಂಬ ಈತ ಸೈಕೋಪಾತ್ ಆಗಿದ್ದಾನೆ ಎಂದು ಹೇಳಿದ್ದ.

ಅಮೂಲ್ಯರನ್ನು ಕಾಲೇಜಿನ ಬಳಿಯೆ ಕೊಲ್ಲುವುದಾಗಿ ನಂತರ ನಾಲ್ಕು ಕರೆಗಳು ದೀಪಕ್ ಗೆ ಬಂದಿವೆ. ವಿವಿಧ ಕಾಯಿನ್ ಬಾಕ್ಸ್ ಗಳಿಂದ ಕರೆ ಮಾಡಿ ತಮ್ಮನ್ನು ಹಾಗೂ ಸಹೋದರಿ ಅಮೂಲ್ಯರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೀಪಕ್ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ಪ್ರಕಾಶ್ ರೈ ಅವರ 'ನಾನು ನನ್ನ ಕನಸು' ಚಿತ್ರದಲ್ಲಿ ಅಮೂಲ್ಯ ತೊಡಗಿಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada