»   »  ಕನ್ನಡಕ್ಕೆ ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ

ಕನ್ನಡಕ್ಕೆ ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ

Subscribe to Filmibeat Kannada

ಬಾಲಿವುಡ್ ನಲ್ಲಿ ಅತ್ಯಧ್ಬುತ ಯಶಸ್ಸು ದಾಖಲಿಸಿದ ಚಿತ್ರ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' (ಡಿಡಿಎಲ್ ಜೆ) ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಕನ್ನಡದಲ್ಲಿ ಈ ಚಿತ್ರಕ್ಕೆ 'ಮದುವೆ ಮನೆ'ಎಂದು ಹೆಸರಿಡಲಾಗಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಪಾತ್ರದಲ್ಲಿ ಕಾಣಿಸಲಿದ್ದಾರೆ.

1995ರಲ್ಲಿ ತೆರೆಕಂಡ ಈ ಚಿತ್ರ ಮುಂಬೈನ ಮರಾಠಾ ಮಂದಿರ ಚಿತ್ರಮಂದಿರದಲ್ಲಿ 700 ವಾರಗಳ ಪ್ರದರ್ಶನ ಕಂಡಿದೆ. ಶಾರುಖ್ ಖಾನ್ ಮತ್ತು ಕಾಜೊಲ್ ಅಭಿನಯದ ಈ ಚಿತ್ರ ಇಂದಿಗೂ ಚಿತ್ರರಸಿಕರನ್ನು ಸೆಳೆಯುತ್ತಿದೆ. ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿರುವವರು ನಿರ್ಮಾಪಕ ಎಚ್ ಎ ರಹಮಾನ್.

ಈ ಬಗ್ಗೆ ವಿವರ ನೀಡಿರುವ ಎಚ್ ಎ ರಹಮಾನ್, ಚಿತ್ರ ಇನ್ನೂ ಆರಂಭ ಹಂತದಲ್ಲಿದ್ದು ಚರ್ಚೆ ನಡೆಯುತ್ತಿದೆ. ಕಾಜೋಲ್ ತಂಗಿ ತನಿಷಾ ಅವರನ್ನು ನಾಯಕಿಯಾಗಿ ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಇನ್ನೂ ಯಾವುದೂ ಅಂತಿಮವಾಗಿಲ್ಲ ಎಂದು ತಿಳಿಸಿದ್ದಾರೆ.

'ಮದುವೆ ಮನೆ'ಜನವರಿ ತಿಂಗಳಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಈ ಹಿಂದೆ ರಹಮಾನ್ ಅವರು 'ಯಜಮಾನ' ಮತ್ತು 'ಹುಚ್ಚ' ಚಿತ್ರಗಳನ್ನು ನಿರ್ಮಿಸಿದ್ದರು. ಬಾಲಿವುಡ್ ನಲ್ಲಿ ಅದ್ಭುತ ಯಶಸ್ಸು ದಾಖಲಿಸಿರುವ ಈ ಚಿತ್ರವನ್ನು ಕನ್ನಡಕ್ಕೆ ತರಬೇಕು ಎಂಬುದು ರಹಮಾನ್ ಅವರ ಮಹದಾಸೆ. ಕನ್ನಡದಲ್ಲೂ ಈ ಚಿತ್ರ ಖಂಡಿತ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ರಹಮಾನ್ ಇದ್ದಾರೆ.

ನಿರ್ದೇಶಕ ಆಯ್ಕೆ ನಡೆಯುತ್ತಿದ್ದು, ಕತೆಯನ್ನು ಅಲ್ಪಸ್ವಲ್ಪ ಬದಲಾಯಿಸಿಕೊಂಡು ಕನ್ನಡದ ಜಾಯಮಾನಕ್ಕೆ ತಕ್ಕಂತೆ ತೆರೆಗೆ ತರಲಾಗುತ್ತದೆ. ಹಿಂದಿ ಚಿತ್ರದಲ್ಲಿ ಮದುವೆ ವಾತಾವರಣವೇ ಬೇರೆ ರೀತಿ ಇದೆ. ಕರ್ನಾಟಕದ ಸಾಂಪ್ರಾದಾಯಿಕ ಮದುವೆ ರೀತಿಯಲ್ಲಿ ಚಿತ್ರ ತೆರೆಗೆ ತರುತ್ತೇವೆ ಎನ್ನುತ್ತಾರೆ ರಹಮಾನ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada