»   » ಚಂದ್ರಲೇಔಟ್ ನಲ್ಲಿ ದರ್ಶನ್ 'ಸಾರಥಿ' ಚೇಸಿಂಗ್

ಚಂದ್ರಲೇಔಟ್ ನಲ್ಲಿ ದರ್ಶನ್ 'ಸಾರಥಿ' ಚೇಸಿಂಗ್

Posted By:
Subscribe to Filmibeat Kannada

ರಾಜ್‌ಕಮಲ್ ಆರ್ಟ್ಸ್ ಲಾಂಛನದಲ್ಲಿ ಕೆ.ಸಿ.ಎನ್ ಚಂದ್ರಶೇಖರ್ ಅವರು ನಿರ್ಮಿಸುತ್ತಿರುವ ಚಿತ್ರ 'ಸಾರಥಿ'. ಛಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕ ಆಟೋಚಾಲಕನ ಪಾತ್ರಧಾರಿ.

ಸುಂದರ ಹುಡುಗಿಯ ಮೇಲೆ ನಾಯಕನ ಪ್ರೀತಿ. ಹುಡುಗಿಗೂ ಈತನೆಂದರೆ ಪ್ರಾಣ. ಆದರೆ ಇವರಿಬ್ಬರ ಅನ್ಯೋನ್ಯತೆ ಕಂಡು ಹುಡುಗಿಯ ಅತ್ತೆಯ ಮಗನಿಗೆ ಕೋಪ ಬರುತ್ತದೆ. ತಕ್ಷಣವೇ ತನ ಸಹಚರರನ್ನು ಕರೆದ ಆತ ನಾಯಕನನ್ನು ಮುಗಿಸಿಬಿಡಲು ಸೂಚಿಸುತ್ತಾನೆ. ನಾಯಕ ಆಟೋದಲ್ಲಿ ಚಾಲಿಸುತ್ತಿದ್ದಾಗ ಆತನ ಹಿಂದೆ ಸಾಕಷ್ಟು ಆಟೋಗಳು ಹಿಂಬಾಲಿಸಿ ಬರುತ್ತವೆ. ಸ್ವಲ್ಪ ಹೊತ್ತು ವಾಹನಗಳೊಡನೆ ಚೇಸಿಂಗ್ ನಡೆಸಿದ ನಾಯಕ ನಂತರ ಅವರೊಂದಿಗೆ ಫೈಟ್ ಕೂಡ ಮಾಡುತ್ತಾನೆ.

ಈ ಸನ್ನಿವೇಶವನ್ನು 'ಸಾರಥಿ' ಚಿತ್ರಕ್ಕಾಗಿ ಚಂದ್ರ ಲೇಔಟ್ ಬಳಿಯ ರಿಂಗ್ ರೋಡಿನಲ್ಲಿ ನಿರ್ದೇಶಕ ದಿನಕರ್ ತೂಗುದೀಪ ಚಿತ್ರೀಕರಿಸಿಕೊಂಡರು. ದರ್ಶನ್, ದೀಪು, ಅಜಯ್ ಹಾಗೂ ಸಹಕಲಾವಿದರು ಪಾಲ್ಗೊಂಡ ಈ ಸನ್ನಿವೇಶದ ಚಿತ್ರೀಕರಣದೊಂದಿಗೆ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ದ್ವಿತೀಯ ಹಂತದ ಚಿತ್ರೀಕರಣ ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದೆ.

ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಕೆ.ಕೃಷ್ಣಕುಮಾರ್ ಛಾಯಾಗ್ರಹಣ, ರವಿವರ್ಮ, ಪಳನಿರಾಜ್ ಸಾಹಸ, ಮದನ್ ಹರಿಣಿ, ಹರ್ಷ ಹಾಗೂ ರಾಮು ನೃತ್ಯ, ದಿನಕರ್ ತೂಗುದೀಪ ಮತ್ತು ಚಿಂತನ್ ಕಥೆ ಹಾಗೂ ಮೂರ್ತಿ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ದರ್ಶನ್, ದೀಪು, ರಂಗಾಯಣರಘು, ಲೋಹಿತಾಶ್ವ, ಅಜಯ್, ಬುಲೆಟ್ ಪ್ರಕಾಶ್, ಸಿತಾರ, ಶರತ್‌ಕುಮಾರ್, ಶರತ್ ಲೋಹಿತಾಶ್ವ, ಮುನಿ, ಕೋಟೆ ಪ್ರಭಾಕರ್ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada