»   »  ಆತ್ಮಕತೆ ಬರೆಯಲು ಹೊರಟ ಅಭಿನಯ ಶಾರದೆ

ಆತ್ಮಕತೆ ಬರೆಯಲು ಹೊರಟ ಅಭಿನಯ ಶಾರದೆ

Subscribe to Filmibeat Kannada

ಅಭಿನಯ ಶಾರದೆ ಜಯಂತಿ ಆತ್ಮಕಥೆ ಬರೆಯಲು ಹೊರಟಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಐದು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಘನತೆ ನಟಿ ಜಯಂತಿ ಅವರದು. ಬಳ್ಳಾರಿ ಮೂಲದ ಕಮಲಾ ಕುಮಾರಿ ಚಿತ್ರರಂಗಕ್ಕೆ ಅಡಿಯಿಟ್ಟ ಮೇಲೆ ಜಯಂತಿ ಎಂದೇ ಖ್ಯಾತರಾದರು.

ಕನ್ನಡ ಸಿನಿಮಾ ಪತ್ರಕರ್ತರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ 'ಅಮೃತ ಮಾತು ಮಂಥನ'ದಲ್ಲಿ ಹಿರಿಯ ನಟಿ ಜಯಂತಿ ಮಾತನಾಡುತ್ತ್ತಿದ್ದರು. ''ನನ್ನ ಜೀವನ ಚರಿತ್ರೆಯನ್ನು ಬರೆಯಲು ಇದೇ ಸೂಕ್ತ ಸಮಯ ಎಂದು ಭಾವಿಸಿದ್ದೇನೆ. ಹಾಗಾಗಿ ಆತ್ಮಕಥೆ ಬರೆಯಲು ಹೊರಟಿದ್ದೇನೆ ಎಂದರು.

ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ನಡೆಸಿದ ಹೋರಾಟ. ನನ್ನನ್ನು ವಂಚಸಿ ವ್ಯಕ್ತಿಗಳು, ನನ್ನ ಕುಟುಂಬ, ನಾನು ಅನುಭವಿಸಿದ ಅಪಮಾನ...ಹೀಗೆ ನನ್ನ ಜೀವನದ ಅಂಶಗಳು ಆತ್ಮಕತೆಯಲ್ಲಿ ಸ್ಥಾನಪಡೆಯಲಿವೆ'' ಎಂದರು. ಪತ್ರಕರ್ತರೊಂದಿಗೆ ಸರಿಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜಯಂತಿ ಹರಟಿದರು.

''ನನ್ನನ್ನು ಕಷ್ಟಕ್ಕೆ ದೂಡಿದ ಮೂವರು ವ್ಯಕ್ತಿಗಳ ಬಗ್ಗೆ ಸೇಡಿತೀರಿಸಿಕೊಳ್ಳಲು ಈ ಆತ್ಮಕಥೆಯನ್ನು ಬರೆಯುತ್ತಿಲ್ಲ'' ಎಂದು ಜಯಂತಿ ಸ್ಪಷ್ಟಪಡಿಸಿದರು. ಜೀವನದ ಒಂದು ಹಂತದಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಳ್ಳಲೂ ನಿರ್ಧರಿಸಿದ್ದೆ. ಆದರೆ ನನ್ನ ಮಗನ ನೆನಪಾಗಿ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು ಎಂದು ದೃಢ ನಿರ್ಧಾರ ಕೈಗೊಂಡೆ ಎಂದರು.

ಕನ್ನಡ ಚಿತ್ರರಂಗಕ್ಕೆ ಮೊದಲು ಈಜುಡುಗೆ ಪರಿಚಯಿಸಿದ ನಟಿ (ಮಿಸ್ ಲೀಲಾವತಿಚಿತ್ರದಲ್ಲಿ) ಎಂಬ ಖ್ಯಾತಿ ಜಯಂತಿ ಅವರದು. ಒಟ್ಟಿನಲ್ಲಿ 'ತುಂಬಿದ ಕೊಡ'ದಂತಿರುವ ಜಯಂತಿ ಅವರ ಚಂದವಳ್ಳಿಯ ತೋಟದಂತಹ ಆತ್ಮಕಥೆ ಶೀಘ್ರ ಬರಲಿ ಎಂಬುದು ಚಿತ್ರರಸಿಕರ ಕೋರಿಕೆ. ಅವರ ಜೀವನದಲ್ಲಿ 'ಸಿಂಹ ಸ್ವಪ್ನ'ರಾದವರು, 'ಬಹದ್ದೂರ್ ಗಂಡು'ಗಳು, 'ಜೇಡರ ಬಲೆ' ಹೆಣೆದವರು ರೌಡಿ ರಂಗಣ್ಣ, ಚೂರಿ ಚಿಕ್ಕಣ್ಣಗಳ ಬಗ್ಗೆ ಓದಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇದೆ!

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada