»   »  ಧನೂರಾಶಿಯ ಮಾಯಾಂಗನೆ ನಿಶಾ ಕೊಠಾರಿ!

ಧನೂರಾಶಿಯ ಮಾಯಾಂಗನೆ ನಿಶಾ ಕೊಠಾರಿ!

Posted By:
Subscribe to Filmibeat Kannada

'ರಾಜ್' ಚಿತ್ರದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ನಿಶಾ ಕೊಠಾರಿ ಎಂಬ ಮಾಯಾಂಗನೆ ಅಡಿಯಿಟ್ಟಿದ್ದಾರೆ. ಭಯಾನಕ ಚಿತ್ರಗಳ ನಿರ್ದೇಶಕ ಎಂದೇ ಖ್ಯಾತರಾಗಿರುವ ರಾಮ್ ಗೋಪಾಲ್ ವರ್ಮಾ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಈಕೆ ಚಿರಪರಿಚಿತ! ಪ್ರಿಯಾಂಕ ಕೊಠಾರಿ ಎಂದು ಹೆಸರು ಬದಲಾಯಿಸಿಕೊಂಡಿರುವ ಈಕೆ ಬರೀ ಸುಂದರಿ ಅಷ್ಟೇ ಅಲ್ಲ ಜಾಣೆಯೂ ಹೌದು!

ಕೊಲ್ಕತ್ತಾದಲ್ಲಿ ಹುಟ್ಟಿದ ಪ್ರಿಯಾಂಕ ನೆಲೆಕಂಡುಕೊಂಡಿದ್ದು ಮಾಡೆಲಿಂಗ್ ಮತ್ತು ನಟಿಯಾಗಿ. ಇಪ್ಪತ್ತಾರರ ಹರೆಯದ ಈ ಸ್ನಿಗ್ಧ ಸುಂದರಿ ಹಲವು ಭಾಷೆಗಳಲ್ಲಿ ವಿಶಾರದೆ. ಇಂಗ್ಲಿಷ್ ಸೇರಿದಂತೆ ಗುಜರಾತಿ, ಬಂಗಾಳಿ ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.

ಹತ್ತನೇ ತರಗತಿಯಲ್ಲಿದ್ದಾಗಲೇ ದೆಹಲಿಗೆ ಇವರ ಕುಟುಂಬ ವರ್ಗವಾಯಿತು. ಪ್ರತಿಷ್ಠಿತ ದೆಹಲಿ ವಿಶ್ವವಿದ್ಯಾಲಯದಿಂದ ರಸಾಯನ ಶಾಸ್ತ್ರದಲ್ಲಿ ಬಿ.ಎಸ್ಸಿ ಪದವಿ ಪಡೆದ ಜಾಣೆ.ಹಾಗಾಗಿ ಬರೀ ಆಮ್ಲ, ಪ್ರತ್ಯಾಮ್ಲಗಳ ಬಗ್ಗೆ ಅಷ್ಟೇ ಅಲ್ಲ ಬಣ್ಣದ ಜಗತ್ತಿನ ಕೆಮಿಸ್ಟ್ರಿಯ ಬಗ್ಗೆಯೂ ಸಾಕಷ್ಟು ಅರಿವಿದೆ.

ಕೊಠಾರಿ ಅವರ ತಂದೆ ವೃತ್ತಿಯಲ್ಲಿ ರಸಾಯನಿಕಗಳ ವಣಿಕ. ತಾಯಿ ಗೃಹಿಣಿ. ಒಡಹುಟ್ಟಿದ ಅಕ್ಕನಿಗೆ ಮದುವೆಯಾಗಿದೆ. ಶಿಕ್ಷಣ ಮುಗಿದ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಡಬೇಕು ಎಂದುಕೊಂಡರು. ಹಾಗಾಗಿ ಕೆಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡರು. ಆದರೆ ಬೆಳ್ಳಿತೆರೆಯಲ್ಲಿ ತಾರೆಯಾಗಬೇಕೆಂಬ ಆಕಾಂಕ್ಷೆ ಮಾತ್ರ ಬೆಟ್ಟದಷ್ಟಿತ್ತು.

'ಜೆ ಜೆ' ಎಂಬ ತಮಿಳು ಚಿತ್ರದ ಮೂಲಕ ಆ ಆಸೆ ಈಡೇರಿತು. ಆಕೆಯ ಛಾಯಾಚಿತ್ರಗಳನ್ನು ನೋಡಿ ಬೆರಗಾಗಿ ತಮಿಳಿನ ಮಾಧವನ್ ತಮ್ಮ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿಕೊಂಡ. ಅಲ್ಲಿಂದ ಆಕೆಯ ವೃತ್ತಿ ಜೀವನ ಹೊಸ ತಿರುವು ಪಡೆದುಕೊಂಡಿತು. ಅಂದಹಾಗೆ ಈಕೆ ಹುಟ್ಟಿದ್ದು ಧನೂ ರಾಶಿಯಲ್ಲಂತೆ! ಹಾಗಾಗಿ ಶೀರ್ಷಿಕೆಗೆ ವಿಶೇಷ ಅರ್ಥವೇನ್ನೇನು ಕಲ್ಪಿಸಬೇಕಾಗಿಲ್ಲ!

ಅನತಿಕಾಲದಲ್ಲೇ ಈಕೆ ರಾಮ್ ಗೋಪಾಲ್ ವರ್ಮಾ ಕಣ್ಣಿಗೆ ಬಿದ್ದು ಬಾಲಿವುಡ್ ಚಿತ್ರರಂಗಕ್ಕೆ ಜಿಗಿಯುವಂತಾಯಿತು. ಜೇಮ್ಸ್, ಸರ್ಕಾರ್ ಚಿತ್ರಗಳಲ್ಲಿ ನಟಿಸಿದ ಬಳಿಕ ಮಹೇಶ್ ಭಟ್, ಇಮ್ರಾನ್ ಹಶ್ಮಿ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಗ್ಲಾಮರಸ್ ಪಾತ್ರಗಳಿಗೆ ಹೆಚ್ಚು ಒತ್ತು ಕೊಡುತ್ತಿರುವ ಕೊಠಾರಿ ಮುಂದೊಂದು ದಿನ ಬಾಲಿವುಡ್ ನ ಖ್ಯಾತ ನಾಮರನ್ನೂ ಹಿಂದಿಕ್ಕಿದರೆ ಅಚ್ಚರಿ ಪಡಬೇಕಾಗಿಲ್ಲ! ಸದ್ಯಕ್ಕೆ ಆಕೆ ಅಭಿನಯಿಸಿದ ಅಗ್ಯಾತ್ ಚಿತ್ರ ಪಡ್ಡೆಗಳನ್ನೂ ಇನ್ನಿಲ್ಲದಂತೆ ಭಯಭೀತಗೊಳಿಸಿದೆ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada