»   » ಹ್ಯಾಟ್ರಿಕ್ ಹೀರೋಗೆ ಜನುಮದಿನ ಶುಭಾಶಯಗಳು

ಹ್ಯಾಟ್ರಿಕ್ ಹೀರೋಗೆ ಜನುಮದಿನ ಶುಭಾಶಯಗಳು

Posted By:
Subscribe to Filmibeat Kannada

ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರ ಮೆಚ್ಚಿನ ಡಾರ್ಲಿಂಗ್ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. 49ನೇ ಹರೆಯಕ್ಕೆ ಅಡಿಯಿಟ್ಟಿರುವ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಬೆಂಗಳೂರು ನಾಗಾವರದ ತಮ್ಮ ಮನೆಯಲ್ಲಿ ಭಾನುವಾರ ಮಧ್ಯರಾತ್ರಿ ಸಡಗರ, ಸಂಭ್ರಮದಿಂದ ಆಚರಿಸಿಕೊಂಡರು. ಮಣ್ಣೆತ್ತಿನ ಅಮಾವಾಸ್ಯೆಯ ಕತ್ತಲಲ್ಲಿ ಹುಣ್ಣಿಮೆಯ ಚಂದಿರನಂತೆ ಶಿವಣ್ಣ ಕಂಗೊಳಿಸಿದರು.

ಬಾಳ ಬದುಕಿನಲ್ಲಿ ಶಿವಣ್ಣ ಅರ್ಧ ಶತಕಕ್ಕೆ ಸನಿಹವಾಗಿದ್ದರೆ ವೃತ್ತಿ ಬದುಕಿನಲ್ಲಿ ಸೆಂಚುರಿ ದಾಖಲಿದ್ದಾರೆ. ಈ ಮೂಲಕ ಶಿವಣ್ಣ ಸೆಂಚುರಿ ಹೀರೋ ಆಗಿ ಹೊಸ ಪಟ್ಟವನ್ನು ಅಲಂಕರಿಸಿದ್ದಾರೆ. ವಯಸ್ಸು ಐವತ್ತರ ಗಡಿ ಮುಟ್ಟಿದರೂ ಶಿವಣ್ಣನ ನಟನೆ ಇಂದಿಗೂ ಲವಲವಿಕೆಯಿಂದ ಕೂಡಿದೆ. ಪಾದರಸದಂತಹ ನೃತ್ಯ ಮುಂದುವರೆದಿದೆ.

ಈ ಶುಭ ಸಂದರ್ಭದಲ್ಲಿ ಶಿವಣ್ಣನ ನೂರನೇ ಚಿತ್ರ 'ಜೋಗಯ್ಯ'ನ ಮುಹೂರ್ತ ಇಂದು ನೆರವೇರಲಿದೆ. ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡುವ ಪಣವನ್ನು ನಿರ್ದೇಶಕ ಪ್ರೇಮ್ ತೊಟ್ಟಿದ್ದಾರೆ. ಹಾಗಾಗಿ 'ಜೋಗಯ್ಯ'ನ ಮುಹೂರ್ತಕ್ಕೆ ನೆರೆಯ ತಾರೆಗಳನ್ನು ಕರೆತರುತ್ತಿದ್ದಾರೆ.

ಜೋಗಯ್ಯನ ಮುಹೂರ್ತಕ್ಕೆ ಮೆಗಾಸ್ಟಾರ್ ಚಿರಂಜೀವಿ, ಸೂರ್ಯ, ವಿಜಯ್ ಆಗಮಿಸಿ ಶುಭ ಕೋರಲಿದ್ದಾರೆ. ರಥಸಪ್ತಮಿ, ಮನಮೆಚ್ಚಿದ ಹುಡುಗಿ, ಓಂ, ಜನುಮದ ಜೋಡಿ, ಹಗಲು ವೇಷ, ಜೋಗಿ ಯಂತಹ ವೈವಿಧ್ಯಮಯ ಪಾತ್ರಗಳ ಮೂಲಕ ಕನ್ನಡ ಚಿತ್ರರಸಿಕರ ಮನತಣಿಸಿದ ನಟನಿಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada