»   » ತೆರೆಯ ಹಿಂದೆಯೂ ರಮ್ಯಾ ಅತಿ ರಮ್ಯ ನಟನೆ!

ತೆರೆಯ ಹಿಂದೆಯೂ ರಮ್ಯಾ ಅತಿ ರಮ್ಯ ನಟನೆ!

By: * ಮಂಡಕ್ಕಿ ರಾಜ
Subscribe to Filmibeat Kannada

ಜಸ್ಟ್ ಮಾತ್ ಮಾತಲ್ಲಿ ಚಿತ್ರ ಶುರುವಾಗಲು ಕೆಲವೇ ನಿಮಿಷಗಳಿದ್ದವು. ಸಂತೋಷ್ ಚಿತ್ರಮಂದಿರದಲ್ಲಿ ಸೇರಿದ್ದ ದಂಡಿನಲ್ಲಿ ಅನಿಲ್ ಕುಂಬ್ಳೆ ಹಾಗೂ ಅವರ ಪತ್ನಿ ಪ್ರಮುಖ ಆಕರ್ಷಣೆ. ರಾಮ್‌ಗೋಪಾಲ್ ವರ್ಮಾ ಸಾದಾ ಪ್ರೇಕ್ಷಕನಷ್ಟೆ ಸಲೀಸಾಗಿ ಕೂತಿದ್ದರು. ರವಿಚಂದ್ರನ್ ಠೀವಿಯಿಂದ ಬಂದರು. ದರ್ಶನ್ ಒಂದು ಸಲ ಸುದೀಪ್ ಅವರನ್ನು ತಬ್ಬಿಕೊಂಡರು. ಇಬ್ಬರ ನಡುವೆ ಏಕವಚನದಲ್ಲೇ ಕುಶಲೋಪರಿ ನಡೆಯಿತು. ಜಸ್ಟ್ ಮಾತ್ ಮಾತಲ್ಲಿ' ತೆರೆಮೇಲೆ ಮೂಡುವ ಮೊದಲು ಸುದೀಪ್ ಮಾತನ್ನೂ ಆಡಿದರು. ಅದನ್ನು ಕೇಳಿಸಿಕೊಳ್ಳದೆ ಇಂಗ್ಲಿಷ್ ಜರ್ನಲಿಸ್ಟುಗಳಿಗೆ ಪಾಪ್‌ಕಾರ್ನ್ ಹಂಚುತ್ತಿದ್ದ ಹೊಸ ನಟಿಯರೂ ಅಲ್ಲಿದ್ದರು.

ಇಷ್ಟೆಲ್ಲಾ ಆಗುತ್ತಿರುವಾಗಲೇ ಇಂಗ್ಲಿಷ್ ಪತ್ರಕರ್ತರ ಮೊಬೈಲ್‌ನಲ್ಲಿ ಮೆಸೇಜೊಂದು ಕಿಂಕಿಣಿಸಿತು. ಅದು ರಮ್ಯಾ ಕಳಿಸಿದ್ದು. ಅರ್ಥಾತ್ ಜಸ್ಟ್ ಮಾತ್ ಮಾತಲ್ಲಿ' ನಾಯಕಿ ರಮ್ಯಾ ಕಳಿಸಿದ್ದು. ಕೆಲವು ಕ್ಷಣಗಳಲ್ಲಿ ತೆರೆಯ ಮೇಲೆ ಕಾಣಿಸಬೇಕಿದ್ದ ರಮ್ಯಾ, ಎಲ್ಲೋ ತೆರೆಯ ಹಿಂದೆ ಕೂತು ಮೇಸೇಜು ಕಳಿಸಿದ್ದರು. ಜಸ್ಟ್ ಮಾತ್ ಮಾತಲ್ಲಿ ಈಸ್ ಎ ರೀಮೇಕ್ ಆಫ್ ಜಬ್ ವಿ ಮೆಟ್' ಎಂಬುದೇ ಆ ಸಾಲು.

ಮರುದಿನ ಟಿವಿ ವಾಹಿನಿಗಳಲ್ಲಿ ಇದೇ ರಮ್ಯಾ ಕೂತು ಜಸ್ಟ್ ಮಾತ್ ಮಾತಲ್ಲಿ ಹಾಗಿದೆ... ಹೀಗಿದೆ' ಎಂದೆಲ್ಲಾ ಮಾತಾಡುತ್ತಾ, ಕೃತಕ ನಗು ತುಳುಕಿಸಿದರು. ಎದುರು ಕೂತಿದ್ದ ಸುದೀಪ್ ಮುಖದಲ್ಲೂ ನಗುವಿತ್ತು. ಇಬ್ಬರೂ ಹಿಂದೆ ಜಗಳವಾಡಿಕೊಂಡಿದ್ದನ್ನು ಮರೆತಂತೆ ಮಾತಾಡಿದರು ಅಥವಾ ಮರೆತವರಂತೆ ನಟಿಸಿದರು. ಅದಾದ ಮೇಲೆ ಇಂಗ್ಲಿಷ್ ಪತ್ರಕರ್ತರಿಗೆ ರಮ್ಯಾ ಅದೇನೆಂದು ಮೆಸೇಜ್ ಕಳುಹಿಸಿದರೋ, ಗೊತ್ತಿಲ್ಲ.

ನಟನೆ ತೆರೆಮೇಲಷ್ಟೇ ಅಲ್ಲ, ತೆರೆಯ ಹಿಂದೆಯೂ ನಡೆಯುತ್ತಿರುತ್ತದೆ ಅನ್ನುವ ದೊಡ್ಡವರ ಮಾತನ್ನು ಸಾಕಾರ ಮಾಡಿದ ರಮ್ಯಾ ಆಮೇಲೆ ಮತ್ತೆ ನಕ್ಕಿದ್ದು ಗಣೇಶ ಕಾಸರಗೋಡು ಶಂಕರ್‌ನಾಗ್ ಬಗ್ಗೆ ಬರೆದ ಪುಸ್ತಕ ಬಿಡುಗಡೆ ಮಾಡುವಾಗ. ಇದೇ ಗಣೇಶ್‌ಗೆ ಸುದ್ದಿಗೋಷ್ಠಿಯಿಂದ ಎದ್ದು ಆಚೆಹೋಗಿ ಎಂದು ಕೆಲವೇ ತಿಂಗಳ ಹಿಂದೆ ಹೇಳಿದ್ದೂ ಇದೇ ರಮ್ಯಾ.

ನಟನೆ ಎಷ್ಟು ರಮ್ಯವಾಗಿದೆಯಲ್ಲವೇ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada